2002ರ ಗೋಧ್ರಾ ರೈಲು ದಹನ ಪ್ರಕರಣದ ಅಪರಾಧಿಗಳಲ್ಲಿ ಒಬ್ಬರಾದ ಇರ್ಫಾನ್ ಸಿರಾಜ್ ಪಾಡಾ ಅವರಿಗೆ ವಿಧಿಸಲಾಗಿದ್ದ ಶಿಕ್ಷೆಯನ್ನು ಸುಪ್ರೀಂ ಕೋರ್ಟ್ ಸೋಮವಾರ (ನ.23) ಅಮಾನತುಗೊಳಿಸಿದ್ದು, ವೈದ್ಯಕೀಯ ಕಾರಣಗಳ ಆಧಾರದ ಮೇಲೆ ಜಾಮೀನು ಮಂಜೂರು ಮಾಡಿದೆ ಎಂದು livelaw.in ವರದಿ ಮಾಡಿದೆ.
ನ್ಯಾಯಮೂರ್ತಿ ಎಂ.ಎಂ. ಸುಂದರೇಶ್ ಮತ್ತು ನ್ಯಾಯಮೂರ್ತಿ ಪಿ.ಬಿ. ವರಾಳೆ ಅವರನ್ನೊಳಗೊಂಡ ದ್ವಿಸದಸ್ಯ ಪೀಠವು, ಇರ್ಫಾನ್ ಗಂಭೀರ ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿರುವುದನ್ನು ಮತ್ತು ಈಗಾಗಲೇ 17 ವರ್ಷಗಳಿಗೂ ಹೆಚ್ಚು ಕಾಲ ಜೈಲು ಶಿಕ್ಷೆ ಅನುಭವಿಸಿರುವುದನ್ನು ಪರಿಗಣಿಸಿ ಈ ಆದೇಶ ಹೊರಡಿಸಿದೆ. ಅಪರಾಧಿಯ ವೈದ್ಯಕೀಯ ಸ್ಥಿತಿಯನ್ನು ರಾಜ್ಯ ಸರ್ಕಾರವು ನ್ಯಾಯಾಲಯದಲ್ಲಿ ಆಕ್ಷೇಪಿಸಿಲ್ಲ ಎಂದು ವರದಿ ಹೇಳಿದೆ.
2002ರ ಫೆಬ್ರವರಿ 27ರಂದು ಅಯೋಧ್ಯೆಯಿಂದ ಕರಸೇವಕರನ್ನು ಕರೆತರುತ್ತಿದ್ದ ಸಾಬರಮತಿ ಎಕ್ಸ್ಪ್ರೆಸ್ ರೈಲಿನ ಎಸ್-6 ಬೋಗಿಗೆ ಬೆಂಕಿ ಹಚ್ಚಿದ ಪರಿಣಾಮ 58 ಮಂದಿ ಸಜೀವ ದಹನವಾಗಿದ್ದರು. ಈ ಘಟನೆಯು ಗುಜರಾತ್ನಲ್ಲಿ ಕೋಮು ಗಲಭೆಗಳಿಗೆ ಕಾರಣವಾಗಿತ್ತು.
ಗುಜರಾತ್ ಹೈಕೋರ್ಟ್ 11 ಮಂದಿಯ ಮರಣದಂಡನೆಯನ್ನು ಜೀವಾವಧಿ ಶಿಕ್ಷೆಗೆ ಇಳಿಸಿ, ಉಳಿದ 20 ಮಂದಿಯ ಜೀವಾವಧಿ ಶಿಕ್ಷೆಯನ್ನು ಎತ್ತಿಹಿಡಿದಿತ್ತು.
ಈ ತೀರ್ಪನ್ನು ಪ್ರಶ್ನಿಸಿ ಅಪರಾಧಿಗಳು ಸಲ್ಲಿಸಿರುವ ಮೇಲ್ಮನವಿಗಳು 2018ರಿಂದ ಸುಪ್ರೀಂ ಕೋರ್ಟ್ನಲ್ಲಿ ಬಾಕಿ ಉಳಿದಿವೆ. ಇದಕ್ಕೂ ಮುನ್ನ, 2025ರಲ್ಲಿ ಇರ್ಫಾನ್ ಅವರಿಗೆ ಅವಧಿಪೂರ್ವ ಬಿಡುಗಡೆಯ ಮನವಿಯನ್ನು ರಾಜ್ಯ ಸರ್ಕಾರ ಪರಿಗಣಿಸಲು ಮಧ್ಯಂತರ ಪೆರೋಲ್ ನೀಡಲಾಗಿತ್ತು. ಅಲ್ಲದೆ, 2022 ಮತ್ತು 2023ರ ಅವಧಿಯಲ್ಲಿ ಈ ಪ್ರಕರಣದ ಇತರ ಹಲವು ಅಪರಾಧಿಗಳಿಗೂ ಸುಪ್ರೀಂ ಕೋರ್ಟ್ ಜಾಮೀನು ಮಂಜೂರು ಮಾಡಿದೆ.


