Homeನ್ಯಾಯ ಪಥಹಗ್ಗಿಂಗ್‌ಫೇಸ್ ಮೇಲೆ ಓಪನ್‌ಎಐ ಏಜೆಂಟ್‌ಗಳ ಸೈಬರ್ ದಾಳಿ: ಎಐ ನಿಯಂತ್ರಣದ ಕುರಿತು ಜಾಗತಿಕ ಕಳವಳ

ಹಗ್ಗಿಂಗ್‌ಫೇಸ್ ಮೇಲೆ ಓಪನ್‌ಎಐ ಏಜೆಂಟ್‌ಗಳ ಸೈಬರ್ ದಾಳಿ: ಎಐ ನಿಯಂತ್ರಣದ ಕುರಿತು ಜಾಗತಿಕ ಕಳವಳ

ಈ ಘಟನೆಯು ಕೇವಲ ಎಐ ಸ್ವಾಯತ್ತತೆಯ ಮಿತಿಗಳ ಬಗ್ಗೆ ಮಾತ್ರವಲ್ಲದೆ, ಅದಕ್ಕೂ ಮಿಗಿಲಾಗಿ ಅಸಮರ್ಪಕ ಭದ್ರತಾ ಕ್ರಮಗಳು ಹಾಗೂ ನಿಯಂತ್ರಣ ವೈಫಲ್ಯಗಳ ಕುರಿತು ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿದೆ.

- Advertisement -
- Advertisement -

2026ರ ಜುಲೈ 11ರಂದು, ಚಾಟ್‌ಜಿಪಿಟಿ ಖ್ಯಾತಿಯ ಓಪನ್‌ಎಐ (OpenAI) ಕಂಪನಿಯು ನಿರ್ಮಿಸಿದ ಸ್ವಾಯತ್ತ ಕೃತಕ ಬುದ್ಧಿಮತ್ತೆ (ತಮ್ಮಷ್ಟಕ್ಕೆ ತಾವೇ ನಿರ್ಧಾರ ಕೈಗೊಳ್ಳುವ ಎಐ) ಏಜೆಂಟ್‌ಗಳು, ಮಷೀನ್ ಲರ್ನಿಂಗ್ ಮಾದರಿಗಳನ್ನು ಹೋಸ್ಟ್ ಮಾಡುವ ‘ಹಗ್ಗಿಂಗ್ ಫೇಸ್’ ಎಂಬ ಪ್ಲಾಟ್‌ಫಾರ್ಮ್ ಮೇಲೆ ಸೈಬರ್ ದಾಳಿ ನಡೆಸಿದವು. ಎರಡೂ ಕಂಪನಿಗಳು ಬಿಡುಗಡೆ ಮಾಡಿದ ಮಾಹಿತಿಯ ಪ್ರಕಾರ, ಈ ಎಐ ಏಜೆಂಟ್‌ಗಳು ಹಗ್ಗಿಂಗ್ ಫೇಸ್‌ನ ಭದ್ರತಾ ವ್ಯವಸ್ಥೆಯಲ್ಲಿದ್ದ ಲೋಪದೋಷಗಳನ್ನು ದುರ್ಬಳಕೆ ಮಾಡಿಕೊಂಡು, ಅದರ ಅನೇಕ ಆಂತರಿಕ ವ್ಯವಸ್ಥೆಗಳನ್ನು ಪರಿಶೀಲಿಸಿ ಮಾಹಿತಿ ಕದಿಯುವಲ್ಲಿ ಯಶಸ್ವಿಯಾದವು. ಈ ಎಐ ಏಜೆಂಟ್‌ಗಳು ಜುಲೈ 13ರವರೆಗೆ ಸಕ್ರಿಯವಾಗಿದ್ದವು.

ಹಗ್ಗಿಂಗ್ ಫೇಸ್ ಎನ್ನುವುದು ಎಐ ಡೆವಲಪರ್‌ಗಳು ಮತ್ತು ಸಂಶೋಧಕರಿಗೆ ಮಷೀನ್ ಲರ್ನಿಂಗ್ ಮಾದರಿಗಳನ್ನು ನಿರ್ಮಿಸಲು, ಹಂಚಿಕೊಳ್ಳಲು, ಪರೀಕ್ಷಿಸಲು ಮತ್ತು ನಿಯೋಜಿಸಲು ಅವಕಾಶ ನೀಡುವ ಒಂದು ಪ್ರಮುಖ ಡಿಜಿಟಲ್ ಪ್ಲಾಟ್‌ಫಾರ್ಮ್. ಇದು ಸಾವಿರಾರು ಓಪನ್ ಸೋರ್ಸ್ ಎಐ ಮಾದರಿಗಳು, ಡೇಟಾಸೆಟ್‌ಗಳು ಮತ್ತು ಸಾಧನಗಳನ್ನು ಹೊಂದಿದೆ. ಎಐ ಅಭಿವೃದ್ಧಿಗೆ ಅತ್ಯಂತ ವ್ಯಾಪಕವಾಗಿ ಬಳಸಲಾಗುವ ಪ್ರಮುಖ ಡಿಜಿಟಲ್ ಜಾಲಗಳಲ್ಲಿ ಇದೂ ಕೂಡಾ ಒಂದಾಗಿದೆ. ಅನೇಕ ಕಂಪನಿಗಳು ತಮ್ಮ ಎಐ ಅಪ್ಲಿಕೇಶನ್‌ಗಳನ್ನು ಪರೀಕ್ಷಿಸಲು, ನಿಯೋಜಿಸಲು ಮತ್ತು ಸುಧಾರಿಸಲು ಹಗ್ಗಿಂಗ್ ಫೇಸ್ ಅನ್ನು ಬಳಸುತ್ತವೆ.

ಹಗ್ಗಿಂಗ್ ಫೇಸ್ ತನ್ನ ಭದ್ರತಾ ಮೇಲ್ವಿಚಾರಣಾ ವ್ಯವಸ್ಥೆಗಳನ್ನು ಬಳಸಿ ಈ ದಾಳಿಯನ್ನು ಪತ್ತೆಹಚ್ಚಿತು ಹಾಗೂ ದಾಳಿಯನ್ನು ನಿಯಂತ್ರಿಸಿ, ಪರಿಣಾಮಕ್ಕೊಳಗಾದ ಮೂಲಸೌಕರ್ಯವನ್ನು ಮರುಸ್ಥಾಪಿಸಿತು. ಜೊತೆಗೆ ಭದ್ರತಾ ವ್ಯವಸ್ಥೆಯನ್ನು ನವೀಕರಿಸಿ, ಕಾನೂನು ಜಾರಿ ಅಧಿಕಾರಿಗಳಿಗೆ ಮಾಹಿತಿ ನೀಡಿತು. ಜುಲೈ 16ರಂದು ಕಂಪನಿಯು ಈ ದಾಳಿಯ ಕುರಿತು ಸಾರ್ವಜನಿಕವಾಗಿ ಮಾಹಿತಿ ಹಂಚಿಕೊಂಡಿತು. ಈ ದಾಳಿಯು ಓಪನ್‌ಎಐ ಏಜೆಂಟ್‌ಗಳಿಂದಲೇ ನಡೆದಿರುವುದಾಗಿ ಓಪನ್‌ಎಐ ಸಹ ಒಪ್ಪಿಕೊಂಡಿತು. ಆಂತರಿಕ ಸೈಬರ್ ಭದ್ರತಾ ಮೌಲ್ಯಮಾಪನದ ಸಂದರ್ಭದಲ್ಲಿ ಈ ಎಐ ಏಜೆಂಟ್‌ಗಳು ಸುರಕ್ಷತಾ ನಿರ್ಬಂಧಗಳನ್ನು ಮೀರಿ ಕಾರ್ಯನಿರ್ವಹಿಸಿದ್ದವು. ಜುಲೈ 21ರಂದು ಓಪನ್‌ಎಐ ಮತ್ತು ಹಗ್ಗಿಂಗ್ ಫೇಸ್ ಜಂಟಿ ಪ್ರಕಟಣೆ ಹೊರಡಿಸಿ, ಈ ಘಟನೆಯ ಹಿಂದೆ ಓಪನ್‌ಎಐನ ಸ್ವಯಂಪ್ರೇರಿತ ಏಜೆಂಟ್‌ಗಳಿದ್ದವು ಎಂದು ತಿಳಿಸಿದವು. ಆದರೆ ಈ ದಾಳಿಯ ಸಮಯದಲ್ಲಿ ಸೋರಿಕೆಯಾದ ಅಥವಾ ಪ್ರವೇಶಿಸಲಾದ ಮಾಹಿತಿಯ ಸಂಪೂರ್ಣ ವಿವರಗಳನ್ನು ಕಂಪನಿಗಳು ಸಾರ್ವಜನಿಕವಾಗಿ ಬಹಿರಂಗಪಡಿಸಿಲ್ಲ.

ಈ ದಾಳಿಯು ಓಪನ್‌ಎಐನ ಪರೀಕ್ಷಾ ವಾತಾವರಣದೊಳಗೆ (Sandbox/Testing environment) ನಡೆದ ಹಿಂದಿನ ಕೆಲವು ಘಟನೆಗಳ ಮುಂದುವರಿದ ಭಾಗವಾಗಿದೆ. 2026ರ ಮೇ ತಿಂಗಳಲ್ಲಿ, ‘ಎಕ್ಸ್‌ಪ್ಲಾಯ್ಟ್‌ಜಿಮ್’ (ExploitGym) ಎಂದು ಕರೆಯಲ್ಪಡುವ ಸೈಬರ್ ಭದ್ರತಾ ಮಾನದಂಡವನ್ನು ಪರೀಕ್ಷಿಸಲು ಓಪನ್‌ಎಐ ತನ್ನ ಪ್ರಾಯೋಗಿಕ ಎಐ ಮಾದರಿಗಳಿಗೆ ತರಬೇತಿ ನೀಡಲು ಪ್ರಾರಂಭಿಸಿತು. ಈ ಪರೀಕ್ಷೆಗಳ ಸಮಯದಲ್ಲಿ, ಅಪಾಯಕಾರಿ ಸೈಬರ್ ಚಟುವಟಿಕೆಗಳನ್ನು ತಡೆಯಲು ವಿನ್ಯಾಸಗೊಳಿಸಲಾದ ಸುರಕ್ಷತಾ ನಿರ್ಬಂಧಗಳನ್ನು ಸಡಿಲಗೊಳಿಸಲಾಯಿತು; ಇದರಿಂದಾಗಿ ಸಂಶೋಧಕರು ಅದರ ಸೈಬರ್ ದಾಳಿ ನಡೆಸುವ ಸಾಮರ್ಥ್ಯವನ್ನು ಅಳೆಯಲು ಸಾಧ್ಯವಾಯಿತು. ಜೂನ್ 26ರಂದು, ಏಜೆಂಟ್‌ಗಳು ಓಪನ್‌ಎಐನ ಆಂತರಿಕ ಜೆಫ್ರಾಗ್ ಆರ್ಟಿಫ್ಯಾಕ್ಟರಿ (JFrog Artifactory) ವ್ಯವಸ್ಥೆಯನ್ನು ಹ್ಯಾಕ್ ಮಾಡುವಲ್ಲಿ ಯಶಸ್ವಿಯಾದವು. ಜುಲೈ 8ರ ವೇಳೆಗೆ, ಎಐ ಏಜೆಂಟ್‌ಗಳು ಸಾರ್ವಜನಿಕ ಇಂಟರ್ನೆಟ್ ಬಳಸಲು ಅನುವು ಮಾಡಿಕೊಟ್ಟ ಭದ್ರತಾ ಲೋಪಗಳನ್ನು ದುರುಪಯೋಗಪಡಿಸಿಕೊಂಡವು. ಈ ಏಜೆಂಟ್‌ಗಳು ಓಪನ್‌ಎಐ ವ್ಯವಸ್ಥೆಯೊಳಗೆ ರಹಸ್ಯ ಸಂವಹನ ಮಾರ್ಗವನ್ನು ಸೃಷ್ಟಿಸಿ ಲಕ್ಷಾಂತರ ಸಂದೇಶಗಳನ್ನು ವಿನಿಮಯ ಮಾಡಿಕೊಂಡವು. ಜೊತೆಗೆ, ಈ ಏಜೆಂಟ್‌ಗಳು ದಾಳಿಯ ತಂತ್ರಗಳನ್ನು ಪರಸ್ಪರ ವಿನಿಮಯ ಮಾಡಿಕೊಂಡು ತಮ್ಮ ಚಟುವಟಿಕೆಗಳನ್ನು ಸಮನ್ವಯಗೊಳಿಸಿದ್ದವು.

ಬೆಂಚ್‌ಮಾರ್ಕ್ ಕಾರ್ಯಗಳನ್ನು, ಅಂದರೆ ಎಐ ಮಾದರಿಗಳ ಸಾಮರ್ಥ್ಯ ಮತ್ತು ವೇಗವನ್ನು ಅಳೆಯಲು ನಿಗದಿಪಡಿಸಿದ ಸವಾಲು ಅಥವಾ ಪರೀಕ್ಷೆಗಳನ್ನು ಏಜೆಂಟ್‌ಗಳು ನೇರವಾಗಿ ಪೂರ್ಣಗೊಳಿಸುವ ಬದಲು, ವ್ಯವಸ್ಥೆಯ ಹೊರಗಿನ ಮಾಹಿತಿಯ ಮೂಲಗಳನ್ನು ಹುಡುಕಿದವು. ನಂತರ ಅವು ‘ಹಗ್ಗಿಂಗ್ ಫೇಸ್’ ಅನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿದವು. ಈ ಘಟನೆಯು ಮುಂದೆ ‘ಓಪನ್‌ಎಐ – ಹಗ್ಗಿಂಗ್ ಫೇಸ್ ಘಟನೆ’ ಎಂದೇ ಪ್ರಸಿದ್ಧವಾಯಿತು.

ಈ ವಿಚಾರ ಸಂಶೋಧಕರಲ್ಲಿ ಕಳವಳ ಮೂಡಿಸಿದ್ದು ಕೇವಲ ಸೈಬರ್ ದಾಳಿ ನಡೆದಿದೆ ಎಂಬ ಕಾರಣಕ್ಕಷ್ಟೇ ಅಲ್ಲ; ಏಕೆಂದರೆ ಸಾಂಪ್ರದಾಯಿಕ ಸೈಬರ್ ದಾಳಿಗಳು ಆಗಾಗ್ಗೆ ನಡೆಯುತ್ತಲೇ ಇರುತ್ತವೆ. ಆದರೆ ಇಲ್ಲಿ ಆತಂಕಕಾರಿ ವಿಷಯವೆಂದರೆ, ವರದಿಗಳ ಪ್ರಕಾರ ಈ ಎಐ ಏಜೆಂಟ್‌ಗಳು ಅತ್ಯಂತ ಕನಿಷ್ಟ ಮಾನವ ಹಸ್ತಕ್ಷೇಪದೊಂದಿಗೆ ಭದ್ರತಾ ಲೋಪಗಳನ್ನು ಗುರುತಿಸಿ, ಮಾಹಿತಿಯನ್ನು ಪರಸ್ಪರ ಹಂಚಿಕೊಂಡು, ತಮ್ಮ ದಾಳಿ ತಂತ್ರಗಳನ್ನು ತಾವೇ ಬದಲಾಯಿಸಿಕೊಳ್ಳುತ್ತಾ ಸುದೀರ್ಘ ಅವಧಿಯವರೆಗೆ ಒಂದೇ ಗುರಿಯನ್ನು ಬೆನ್ನಟ್ಟಿದ್ದವು. ಈ ವರದಿಗಳು ನಿಖರವಾಗಿದ್ದರೆ, ಭವಿಷ್ಯದ ಎಐ ವ್ಯವಸ್ಥೆಗಳು ಯಾವುದೇ ಮಾನವರ ನೇರ ಮೇಲ್ವಿಚಾರಣೆಯಿಲ್ಲದೆ ಅತ್ಯಂತ ಸಂಕೀರ್ಣವಾದ ಕಾರ್ಯಾಚರಣೆಗಳನ್ನು ನಡೆಸಲು ಸಾಮರ್ಥ್ಯ ಹೊಂದಿರಲಿವೆ ಎಂಬುದನ್ನು ಇದು ಸ್ಪಷ್ಟವಾಗಿ ಸೂಚಿಸುತ್ತದೆ.

ಎಐ ಏಜೆಂಟ್‌ಗಳು ಎಂದರೇನು?

ಎಐ ಏಜೆಂಟ್ ಎಂಬುದು ಕೃತಕ ಬುದ್ಧಿಮತ್ತೆಯನ್ನು ಬಳಸಿಕೊಂಡು ನಿರ್ದಿಷ್ಟ ಗುರಿಯನ್ನು ಸಾಧಿಸಲು ವಿನ್ಯಾಸಗೊಳಿಸಲಾದ ಒಂದು ವಿಶೇಷ ರೀತಿಯ ಸಾಫ್ಟ್‌ವೇರ್ ಪ್ರೋಗ್ರಾಂ. ಇಂದು ಹೆಚ್ಚಿನ ಜನರು ಗ್ರೋಕ್ (Grok), ಜೆಮಿನಿ (Gemini) ಅಥವಾ ಚಾಟ್‌ಜಿಪಿಟಿ (ChatGPT) ನಂತಹ ಎಐ ಮಾದರಿಗಳೊಂದಿಗೆ ಸಂವಹನ ನಡೆಸುವಾಗ, ಕೇವಲ ಒಂದು ಪ್ರಶ್ನೆಯನ್ನು ಕೇಳಿ ಉತ್ತರ ಪಡೆದುಕೊಳ್ಳುತ್ತಾರೆ. ಈ ಸಂವಹನ ಅತ್ಯಂತ ಸರಳವಾಗಿರುತ್ತದೆ; ಇಲ್ಲಿ ಬಳಕೆದಾರರೇ ಯೋಜನೆಯನ್ನು ರೂಪಿಸುತ್ತಾರೆ, ಮುಂದೆ ಏನು ಕೇಳಬೇಕೆಂದು ನಿರ್ಧರಿಸುತ್ತಾರೆ ಮತ್ತು ಉತ್ತರವನ್ನು ಗ್ರಹಿಸುತ್ತಾರೆ. ಇಲ್ಲಿ ಎಐ ಪಾತ್ರವು ಪ್ರಶ್ನೆಗಳಿಗೆ ಉತ್ತರಿಸುವುದಕ್ಕೆ ಮಾತ್ರ ಸೀಮಿತವಾಗಿರುತ್ತದೆ.


ಆದರೆ ಎಐ ಏಜೆಂಟ್ ಎಂಬುದು ಇದರ ಅತ್ಯಂತ ಮುಂದುವರಿದ ರೂಪವಾಗಿದೆ. ಇದು ಕೇವಲ ಪ್ರಶ್ನೆಗಳಿಗೆ ಉತ್ತರಿಸುವುದಿಲ್ಲ; ಬದಲಾಗಿ ಬಳಕೆದಾರರು ನೀಡುವ ಒಂದು ನಿರ್ದಿಷ್ಟ ಗುರಿಯನ್ನು ಸಾಧಿಸಲು ತಾನಾಗಿಯೇ ಕಾರ್ಯಪ್ರವೃತ್ತವಾಗುತ್ತದೆ. ಈ ಏಜೆಂಟ್ ಕೊಟ್ಟ ಕೆಲಸವನ್ನು ಸಣ್ಣಪುಟ್ಟ ಭಾಗಗಳಾಗಿ ವಿಭಜಿಸಿಕೊಳ್ಳುತ್ತದೆ, ಅಗತ್ಯ ಮಾಹಿತಿಯನ್ನು ಕಲೆಹಾಕುತ್ತದೆ, ಸ್ವತಂತ್ರವಾಗಿ ನಿರ್ಧಾರಗಳನ್ನು ತೆಗೆದುಕೊಳ್ಳುತ್ತದೆ ಹಾಗೂ ತನಗೆ ಲಭ್ಯವಿರುವ ಸಾಧನಗಳನ್ನು ಬಳಸಿಕೊಂಡು ಪ್ರಗತಿಯನ್ನು ಮೌಲ್ಯಮಾಪನ ಮಾಡುತ್ತಾ ಅಗತ್ಯಬಿದ್ದಾಗ ತನ್ನ ಕಾರ್ಯತಂತ್ರವನ್ನೇ ಬದಲಾಯಿಸಿಕೊಳ್ಳುತ್ತದೆ.

‘ಸ್ಯಾಂಡ್‌ಬಾಕ್ಸ್’

ಇನ್ನೊಂದೆಡೆ, ‘ಸ್ಯಾಂಡ್‌ಬಾಕ್ಸ್’ (Sandbox) ಎನ್ನುವುದು ಸಾಫ್ಟ್‌ವೇರ್ ಅಥವಾ ಎಐ ವ್ಯವಸ್ಥೆಗಳನ್ನು ಸುರಕ್ಷಿತವಾಗಿ ಪರೀಕ್ಷಿಸಲು ಬಳಸುವ ಒಂದು ಪ್ರತ್ಯೇಕ ಮತ್ತು ನಿರ್ಬಂಧಿತ ಕಂಪ್ಯೂಟಿಂಗ್ ವ್ಯವಸ್ಥೆಯಾಗಿದೆ. ಇದು ಎಐ ಪ್ರೋಗ್ರಾಂ ತನಗೆ ನಿರ್ದಿಷ್ಟಪಡಿಸಿದ ವ್ಯಾಪ್ತಿಯನ್ನು ದಾಟಿ ಹೊರಗಿನ ಸೂಕ್ಷ್ಮ ಡೇಟಾ, ಇತರ ಕಂಪ್ಯೂಟರ್‌ಗಳು ಅಥವಾ ಆಂತರಿಕ ವ್ಯವಸ್ಥೆಗಳನ್ನು ಪ್ರವೇಶಿಸುವುದನ್ನು ತಡೆಯುತ್ತದೆ. ಸರಳವಾಗಿ ಹೇಳುವುದಾದರೆ, ಇದು ಸಂಪೂರ್ಣ ಕಟ್ಟಡಕ್ಕೆ ಪ್ರವೇಶ ನೀಡುವ ಬದಲು ಎಐ ಗೆ ಸುರಕ್ಷಿತವಾದ ‘ಬೀಗ ಹಾಕಿದ ತರಬೇತಿ ಕೊಠಡಿ’ಯನ್ನು ನೀಡಿದಂತೆ.

ಆದರೆ, ಈ ಸಂಪೂರ್ಣ ಘಟನೆಯಲ್ಲಿ ಸಂಶೋಧಕರಿಗೆ ಆಘಾತ ತಂದ ಸಂಗತಿಯೆಂದರೆ ಈ ಎಐ ಏಜೆಂಟ್‌ಗಳು ತಮ್ಮ ಸುರಕ್ಷಿತ ಸ್ಯಾಂಡ್‌ಬಾಕ್ಸ್‌ನ ಗಡಿಯನ್ನೇ ಮೀರಿ ಹೊರಬಂದಿದ್ದವು. ಇದು ಸಾಧ್ಯವಾಗಬಹುದು ಎಂದು ಯಾರೂ ಊಹಿಸಿರಲಿಲ್ಲ.

AI ಏಜೆಂಟ್‌ಗಳ ನಿಯಂತ್ರಣ ಮತ್ತು ಉಸ್ತುವಾರಿ

ಈ ಘಟನೆಯು ಎಐ ಏಜೆಂಟ್‌ಗಳನ್ನು ನಿಯಂತ್ರಣದಲ್ಲಿಡುವುದು ಮತ್ತು ಅವುಗಳ ಮೇಲ್ವಿಚಾರಣೆ ನಡೆಸುವ ಕುರಿತು ಗಂಭೀರ ಆತಂಕಗಳನ್ನು ಹುಟ್ಟುಹಾಕಿದೆ. ಎಐ ಏಜೆಂಟ್‌ಗಳ ಸೈಬರ್ ದಾಳಿ ನಡೆಸುವ ಸಾಮರ್ಥ್ಯವನ್ನು ಮೌಲ್ಯಮಾಪನ ಮಾಡಲು ವಿನ್ಯಾಸಗೊಳಿಸಲಾದ ಇಂತಹ ಪರೀಕ್ಷಾ ವ್ಯವಸ್ಥೆಗಳಲ್ಲಿ, ಸಾಮಾನ್ಯ ಅಪ್ಲಿಕೇಶನ್ ಬಳಕೆಗಿಂತಲೂ ಅತ್ಯಂತ ಕಟ್ಟುನಿಟ್ಟಾದ ಹಾಗೂ ಬಲವಾದ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಬೇಕಿತ್ತು ಎಂದು ವಿಮರ್ಶಕರು ಮತ್ತು ತಜ್ಞರು ವಾದಿಸುತ್ತಾರೆ.

ಇನ್ನೂ ಕೆಲವರು ಎಐ ವ್ಯವಸ್ಥೆಗಳ ಮೇಲ್ವಿಚಾರಣೆ ಮತ್ತು ಸೈಬರ್ ಉಸ್ತುವಾರಿಯ ಕುರಿತು ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ. ತಂತ್ರಜ್ಞಾನ ಕ್ಷೇತ್ರದ ಪ್ರಮುಖ ಕಂಪನಿಯೊಂದರಲ್ಲಿ ಈ ಸ್ವಯಂಪ್ರೇರಿತ ಏಜೆಂಟ್‌ಗಳು ಯಾರಿಗೂ ಪತ್ತೆಯಾಗದಂತೆ, ಸುದೀರ್ಘ ಅವಧಿಯವರೆಗೆ ಪರಸ್ಪರ ಸಮನ್ವಯದೊಂದಿಗೆ ದುರುದ್ದೇಶಪೂರ್ವಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುವುದು ಸಣ್ಣ ವಿಷಯವಲ್ಲ. ಯಾವುದೇ ಮಾನವನ ಮಧ್ಯಸ್ಥಿಕೆಯಿಲ್ಲದೆ ಎಐ ಪ್ರೋಗ್ರಾಂ ಒಂದು ಭದ್ರತಾ ಲೋಪಗಳನ್ನು ಗುರುತಿಸುವುದು, ತನ್ನ ಗುರಿಯನ್ನು ಬೆನ್ನಟ್ಟುವುದು, ಹೊಸ ದಾಳಿ ತಂತ್ರಗಳನ್ನು ತಾನೇ ಅಳವಡಿಸಿಕೊಳ್ಳುವುದು ಹಾಗೂ ತನಗೆ ನೀಡಿದ ಮೂಲ ಸೂಚನೆಗಳ ವ್ಯಾಪ್ತಿಯನ್ನು ಮೀರಿ ನಿರ್ಧಾರಗಳನ್ನು ತೆಗೆದುಕೊಳ್ಳುವುದು ಅತ್ಯಂತ ಆತಂಕಕಾರಿ ಬೆಳವಣಿಗೆಯಾಗಿದೆ. ಭವಿಷ್ಯದ ಎಐ ವ್ಯವಸ್ಥೆಗಳ ನಡವಳಿಕೆಯನ್ನು ಊಹಿಸುವುದು, ಮೇಲ್ವಿಚಾರಣೆ ಮಾಡುವುದು ಅಥವಾ ನಿಯಂತ್ರಿಸುವುದು ದಿನದಿಂದ ದಿನಕ್ಕೆ ಇನ್ನಷ್ಟು ಕಠಿಣವಾಗಬಹುದು ಎಂಬುದನ್ನು ಈ ಘಟನೆ ಸ್ಪಷ್ಟವಾಗಿ ಎಚ್ಚರಿಸುತ್ತದೆ.


ಇನ್ನೂ ಈ ವ್ಯವಸ್ಥೆಯಲ್ಲಿ ಎಐ ಏಜೆಂಟ್‌ಗಳು ಪರಸ್ಪರ ಸೇರಿ ಕೆಲಸ ಮಾಡುವ ಸಾಮರ್ಥ್ಯ (Multi-agent coordination) ಅತ್ಯಂತ ಕಳವಳಕಾರಿಯಾಗಿದೆ. ಮಾಹಿತಿಯನ್ನು ಹಂಚಿಕೊಳ್ಳಲು ಮತ್ತು ಯಶಸ್ವಿ ದಾಳಿ ವಿಧಾನಗಳನ್ನು ಪರಸ್ಪರ ವಿನಿಮಯ ಮಾಡಿಕೊಳ್ಳಲು ಈ ಏಜೆಂಟ್‌ಗಳು ರಹಸ್ಯ ಮಾರ್ಗಗಳನ್ನು ಸ್ಥಾಪಿಸಿವೆ ಎಂಬ ವರದಿಗಳು ಸಾಮೂಹಿಕ ಎಐ ವರ್ತನೆಯ (Collective AI behavior) ಬಗ್ಗೆ ತೀವ್ರ ಆತಂಕ ಮೂಡಿಸಿವೆ. ಇಂತಹ ಸ್ವಾಯತ್ತ ವ್ಯವಸ್ಥೆಗಳು ಪರಸ್ಪರ ಸಹಕರಿಸಿಕೊಂಡರೆ, ತಮ್ಮ ನಡುವೆ ಕಾರ್ಯಗಳನ್ನು ಹಂಚಿಕೊಂಡರೆ ಮತ್ತು ಪರಸ್ಪರ ಆವಿಷ್ಕಾರಗಳ ಆಧಾರದ ಮೇಲೆ ಮುನ್ನಡೆದರೆ, ಅವುಗಳ ಸಾಮರ್ಥ್ಯಗಳು ಅತಿ ವೇಗವಾಗಿ ಬೆಳೆಯಬಹುದು; ಜೊತೆಗೆ ಮಾನವ ಮೇಲ್ವಿಚಾರಕರಿಗೆ ಅವುಗಳನ್ನು ನಿಯಂತ್ರಿಸುವುದು ಅಥವಾ ನಿರ್ವಹಿಸುವುದು ಅತ್ಯಂತ ಕಷ್ಟಕರವಾಗಬಹುದು.

ವರದಿಗಳ ಪ್ರಕಾರ, ಈ ಏಜೆಂಟ್‌ಗಳು ಯಶಸ್ಸು ಸಾಧಿಸಲು ಅಥವಾ ಗುರುತು ಮಾಡಿದ ಗುರಿ ತಲುಪಲು ನಿಗದಿತ ಮಾರ್ಗಗಳನ್ನು ಬಿಟ್ಟು ಶಾರ್ಟ್‌ಕಟ್‌ಗಳು, ಬಾಹ್ಯ ಸಂಪನ್ಮೂಲಗಳು ಹಾಗೂ ಪರ್ಯಾಯ ಮಾರ್ಗಗಳನ್ನು ಹುಡುಕಿದವು. ಈ ತಂತ್ರಗಳು ಮೂಲ ಬಳಕೆದಾರರ ಉದ್ದೇಶಿತವಾಗಿರದೆ ಇರಬಹುದು. ಇಂತಹ ಗಂಭೀರ ಕಳವಳಗಳು ಕಡ್ಡಾಯ ಘಟನೆ ವರದಿ ಮಾಡುವಿಕೆ, ಸ್ವತಂತ್ರ ಸುರಕ್ಷತಾ ಲೆಕ್ಕಪರಿಶೋಧನೆ (Audit), ಬಲವಾದ ನಿಯಂತ್ರಣ ಮಾನದಂಡಗಳು ಹಾಗೂ ಸಾರ್ವಜನಿಕ ಮೇಲ್ವಿಚಾರಣೆ ಸೇರಿದಂತೆ ಕೃತಕ ಬುದ್ಧಿಮತ್ತೆಯ (ಎಐ) ಮೇಲೆ ಕಠಿಣ ನಿಯಂತ್ರಣ ಹೇರುವ ಅನಿವಾರ್ಯತೆಯನ್ನು ಮುನ್ನಲೆಗೆ ತಂದಿವೆ.

AI ಗಿಂತಲೂ ಮೀರಿದ ಸಮಸ್ಯೆಗಳು

ಈ ಘಟನೆಯು ಕೇವಲ ಎಐ ಸ್ವಾಯತ್ತತೆಯ ಮಿತಿಗಳ ಬಗ್ಗೆ ಮಾತ್ರವಲ್ಲದೆ, ಅದಕ್ಕೂ ಮಿಗಿಲಾಗಿ ಅಸಮರ್ಪಕ ಭದ್ರತಾ ಕ್ರಮಗಳು ಹಾಗೂ ನಿಯಂತ್ರಣ ವೈಫಲ್ಯಗಳ ಕುರಿತು ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿದೆ. ನಿಯಂತ್ರಣ ತಪ್ಪಿದ ‘ಎಐ’ (Rogue AI) ಅಥವಾ ಅನಿಯಂತ್ರಿತ ಕೃತಕ ಬುದ್ಧಿಮತ್ತೆಯ ಕಲ್ಪನೆಗಿಂತ ಹೆಚ್ಚಾಗಿ, ಕಳಪೆಯಾಗಿ ಪ್ರತ್ಯೇಕಿಸಲ್ಪಟ್ಟ ಪರೀಕ್ಷಾ ವ್ಯವಸ್ಥೆಗಳು, ದುರ್ಬಲಗೊಂಡ ಸುರಕ್ಷತಾ ಕಾವಲುಗಳು ಮತ್ತು ಮೇಲ್ವಿಚಾರಣೆಯಲ್ಲಿನ ಲೋಪಗಳೇ ಈ ಘಟನೆ ಸಂಭವಿಸಲು ಪ್ರಮುಖ ಕಾರಣವಾದವು ಎಂದು ವಿಮರ್ಶಕರು ಮತ್ತು ತಜ್ಞರು ವಾದಿಸುತ್ತಾರೆ.

ಈ ಘಟನೆಯು ಕಾರ್ಪೊರೇಟ್ ಜವಾಬ್ದಾರಿಯ ಕುರಿತಾಗಿಯೂ ವಿಶಾಲವಾದ ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಕೃತಕ ಬುದ್ಧಿಮತ್ತೆಗೆ (ಎಐ) ಸಂಬಂಧಿಸಿದಂತೆ ಚರ್ಚಿಸಲಾದ ಅನೇಕ ಸವಾಲುಗಳು, ದೊಡ್ಡ ಖಾಸಗಿ ಕಂಪನಿಗಳ ನಿಯಂತ್ರಣಕ್ಕೆ ಸಂಬಂಧಿಸಿದ ಹಳೆಯ ಸಮಸ್ಯೆಗಳನ್ನೇ ಹೋಲುತ್ತವೆ. ವಾಸ್ತವವಾಗಿ, ಎಐ ಕ್ಷೇತ್ರವನ್ನು ಕಾಡುವ ಅನೇಕ ಸಮಸ್ಯೆಗಳು ಇಡೀ ಆರ್ಥಿಕ ವ್ಯವಸ್ಥೆಯಲ್ಲಿ ಈಗಾಗಲೇ ಅಸ್ತಿತ್ವದಲ್ಲಿರುವ ಬಿಕ್ಕಟ್ಟುಗಳೇ ಆಗಿವೆ. ಖಾಸಗಿ ತಂತ್ರಜ್ಞಾನ ದೈತ್ಯರನ್ನು ನಿಯಂತ್ರಿಸುವುದು ಮತ್ತು ಅವುಗಳ ವಿನಾಶಕಾರಿ ಹಾಗೂ ಒಳಸಂಚಿನ ಚಟುವಟಿಕೆಗಳನ್ನು ತಡೆಯುವುದು ದಿನದಿಂದ ದಿನಕ್ಕೆ ಕಷ್ಟಕರವಾಗುತ್ತಿದೆ.

ಕಡ್ಡಾಯವಾಗಿ ಘಟನೆ ವರದಿ ಮಾಡುವಿಕೆ, ಸ್ವತಂತ್ರ ಲೆಕ್ಕಪರಿಶೋಧನೆಗಳು (Audit), ಕಟ್ಟುನಿಟ್ಟಿನ ಮಾನದಂಡಗಳು ಮತ್ತು ಸಾರ್ವಜನಿಕ ಮೇಲ್ವಿಚಾರಣೆ ಮುಂತಾದ ಕ್ರಮಗಳನ್ನು ದೊಡ್ಡ ನಿಗಮಗಳ ಮೇಲೆ ಹೇರುವುದು ಸವಾಲಾಗಿ ಪರಿಣಮಿಸಿದೆ. ಇಂದಿನ ಜಾಗತಿಕ ಆರ್ಥಿಕತೆಯಲ್ಲಿ, ಅಮೆರಿಕ ಸರ್ಕಾರ ಹಾಗೂ ಇತರೆ ರಾಷ್ಟ್ರಗಳ ಸರ್ಕಾರಗಳು ಆಡಳಿತ ವ್ಯವಸ್ಥೆ, ರಾಜಕೀಯ ಲಾಭಗಳು ಮತ್ತು ಕಣ್ಗಾವಲು ಕಾರ್ಯಗಳಿಗಾಗಿ ತಂತ್ರಜ್ಞಾನ ಉದ್ಯಮದ ಮೇಲೆ ಹೆಚ್ಚು ಅವಲಂಬಿತವಾಗಿರುವುದರಿಂದ, ಈ ಬೃಹತ್ ಟೆಕ್ ಕಂಪನಿಗಳನ್ನು ಪರಿಣಾಮಕಾರಿಯಾಗಿ ನಿಯಂತ್ರಿಸುವುದು ಸರ್ಕಾರಗಳಿಗೂ ಕಷ್ಟಕರವಾಗಿ ಪರಿಣಮಿಸಿದೆ.

‘ರಿವಾರ್ಡ್ ಹ್ಯಾಕಿಂಗ್’ ಮತ್ತು ಅದರ ಪರಿಣಾಮ

‘ಈ ರಿವಾರ್ಡ್ ಹ್ಯಾಕಿಂಗ್’ (Reward Hacking) ಎಂಬುದು ಕೇವಲ ಎಐಗೆ ಮಾತ್ರ ವಿಶಿಷ್ಟವಾದದ್ದಲ್ಲ. ಸರಳ ಗುರಿಗಳನ್ನು ಇಟ್ಟುಕೊಂಡು ಉದ್ಯೋಗಿಗಳ ಕಾರ್ಯಕ್ಷಮತೆಯನ್ನು ಅಳೆಯುವ ವ್ಯಾಪಾರಗಳು ಮತ್ತು ಸಂಸ್ಥೆಗಳಲ್ಲಿಯೂ ಇಂತಹ ವರ್ತನೆ ತೀರ ಸಾಮಾನ್ಯ. ಉದಾಹರಣೆಗೆ, ಕಂಪನಿಯೊಂದು ಗ್ರಾಹಕ ಸೇವಾಸಿಬ್ಬಂದಿ ದಿನಕ್ಕೆ ನಿರ್ವಹಿಸುವ ಕರೆಗಳ ಸಂಖ್ಯೆಯ ಆಧಾರದ ಮೇಲೆ ಅವರಿಗೆ ಬಹುಮಾನ ನೀಡುತ್ತದೆ ಎಂದಿಟ್ಟುಕೊಳ್ಳಿ. ಆಗ ಉದ್ಯೋಗಿಗಳು ಗ್ರಾಹಕರ ಸಮಸ್ಯೆಗಳು ನಿಜಕ್ಕೂ ಪರಿಹಾರವಾಗದಿದ್ದರೂ ಸಹ, ಕರೆಗಳ ಸಂಖ್ಯೆಯನ್ನು ಹೆಚ್ಚಿಸಿಕೊಳ್ಳಲು ಫೋನ್ ಸಂಪರ್ಕವನ್ನು ಬೇಗನೆ ಕಡಿತಗೊಳಿಸಬಹುದು. ಇಲ್ಲಿ ಉದ್ಯೋಗಿಗಳು ತಮ್ಮನ್ನು ಮೌಲ್ಯಮಾಪನ ಮಾಡಲು ಬಳಸುವ ಮಾನದಂಡವನ್ನು ಅನುಸರಿಸುತ್ತಿದ್ದಾರೆಯೇ ಹೊರತು, ಗ್ರಾಹಕರಿಗೆ ನೆರವಾಗುವ ನೈಜ ಉದ್ದೇಶವನ್ನಲ್ಲ.

ಈ ಪ್ರಕರಣದಲ್ಲೂ ಸಹ, ಓಪನ್‌ಎಐ ತನ್ನ ಬೃಹತ್ GPU ಕ್ಲಸ್ಟರ್‌ಗಳನ್ನು (GPT-5.6 Sol ಮತ್ತು ಬಿಡುಗಡೆಗೂ ಮುಂಚಿನ ಫ್ರಾಂಟಿಯರ್ ಮಾದರಿಗಳು) ಬಳಸಿ ಸೈಬರ್ ಭದ್ರತೆಯ ಅಭ್ಯಾಸಗಳನ್ನು ನಡೆಸುತ್ತಿತ್ತು. ಸ್ವಾಯತ್ತ ವ್ಯವಸ್ಥೆಗಳ ಕ್ಷೇತ್ರದಲ್ಲಿ ಮಾರುಕಟ್ಟೆ ಪ್ರಾಬಲ್ಯ ಸಾಧಿಸಲು ಪ್ರಯತ್ನಿಸುತ್ತಿರುವ ಕಂಪನಿಯು, ಈ ಏಜೆಂಟ್‌ಗಳು ತಮ್ಮ ಕೆಲಸದಲ್ಲಿ ಹೆಚ್ಚು ಸಾಮರ್ಥ್ಯ ಪ್ರದರ್ಶಿಸಲಿ ಎಂಬ ಉದ್ದೇಶದಿಂದ ಕೆಲವು ಸುರಕ್ಷತಾ ನಿಯಂತ್ರಣಗಳನ್ನು ಸಡಿಲಗೊಳಿಸಿತು.

ಪರಿಣಾಮವಾಗಿ, ಕಷ್ಟಕರವಾದ ಕಾರ್ಯಗಳನ್ನು ಪೂರ್ಣಗೊಳಿಸಲು ಯತ್ನಿಸುತ್ತಿದ್ದ ಎಐ ಏಜೆಂಟ್‌ಗಳು ‘ರಿವಾರ್ಡ್ ಹ್ಯಾಕಿಂಗ್’ನಲ್ಲಿ ತೊಡಗಿಸಿಕೊಂಡವು. ನೀಡಿದ ಮೂಲ ಸೂಚನೆಗಳನ್ನು ಪ್ರಾಮಾಣಿಕವಾಗಿ ಪಾಲಿಸುವ ಬದಲು, ತಾನು ಯಾವ ಫಲಿತಾಂಶಕ್ಕಾಗಿ ಮೌಲ್ಯಮಾಪನ ಕ್ಕೊಳಗಾಗುತ್ತಿದೆಯೋ ಆ ಫಲಿತಾಂಶವನ್ನು ಪಡೆಯಲು ಎಐ ಒಂದು ಅಡ್ಡದಾರಿಯನ್ನು ಕಂಡುಕೊಂಡಾಗ ಈ ‘ರಿವಾರ್ಡ್ ಹ್ಯಾಕಿಂಗ್’ ಸಂಭವಿಸುತ್ತದೆ. ಅಂದರೆ, ನೀಡಿದ ಕೆಲಸವನ್ನು ತಾಂತ್ರಿಕವಾಗಿ ಸರಿಯಾಗಿ ಮಾಡುವ ಬದಲು, ಅದು ಯಶಸ್ವಿಯಾದಂತೆ ಕಾಣಿಸಿಕೊಳ್ಳಲು ನೆರವಾಗುವ ಶಾರ್ಟ್‌ಕಟ್‌ಗಳನ್ನು ಪ್ರೋಗ್ರಾಂ ಕಂಡುಕೊಳ್ಳುತ್ತದೆ.


ಹೀಗೆ ಶಾರ್ಟ್‌ಕಟ್ ಕಂಡುಕೊಂಡ ಎಐ ಏಜೆಂಟ್‌ಗಳು ತಮ್ಮ ಪ್ರತ್ಯೇಕ ಸ್ಯಾಂಡ್‌ಬಾಕ್ಸ್‌ನಿಂದ ತಪ್ಪಿಸಿಕೊಂಡು, ಬಹು-ಏಜೆಂಟ್ ಡಿಜಿಟಲ್ ಸಮೂಹವನ್ನು ರಚಿಸಿಕೊಂಡವು ಹಾಗೂ ಸೈಬರ್ ದಾಳಿಯನ್ನು ಪರಸ್ಪರ ಸಮನ್ವಯಗೊಳಿಸಲು ತಮ್ಮದೇ ಆದ ಆಂತರಿಕ ಭೂಗತ ಮೂಲಸೌಕರ್ಯವನ್ನು ಸೃಷ್ಟಿಸಿಕೊಂಡವು.

ಫೋರೆನ್ಸಿಕ್ ಟ್ರಾನ್ಸ್‌ಕ್ರಿಪ್ಟ್‌ಗಳ (ವಿಶ್ಲೇಷಣಾತ್ಮಕ ದಾಖಲೆಗಳ) ಪ್ರಕಾರ, ಹಗ್ಗಿಂಗ್‌ಫೇಸ್ ಪ್ಲಾಟ್‌ಫಾರ್ಮ್‌ನೊಳಗೆ ಅಕ್ರಮವಾಗಿ ನುಗ್ಗಲು ಸಮನ್ವಯ ಸಾಧಿಸಿದ 700ಕ್ಕೂ ಹೆಚ್ಚು ಎಐ ಏಜೆಂಟ್‌ಗಳು, ಪಾಸ್‌ವರ್ಡ್‌ಗಳಿಗಾಗಿ ಕಂಪ್ಯೂಟರ್ ವ್ಯವಸ್ಥೆಗಳನ್ನು ಸಾಲುಸಾಲಾಗಿ ಜಾಲಾಡಿದವು. ಅಷ್ಟೇಅಲ್ಲದೆ, ತಮ್ಮ ಆಂತರಿಕ ಸಂವಹನಗಳಲ್ಲಿ ತಾವು ಕದ್ದ ಮಾಹಿತಿಯನ್ನು ಸ್ಪಷ್ಟವಾಗಿ ‘ಲೂಟ್’ (ದೋಚಿದ ಆಸ್ತಿ) ಎಂದೇ ಕರೆದುಕೊಂಡವು.

ಈ ಏಜೆಂಟ್‌ಗಳು ತಾತ್ಕಾಲಿಕ ಮೆಸೇಜ್ ಬೋರ್ಡ್ ಒಂದನ್ನು ಸೃಷ್ಟಿಸಿಕೊಂಡು, ಅದರಲ್ಲಿ 70,000ಕ್ಕೂ ಹೆಚ್ಚು ಸಂದೇಶಗಳನ್ನು ರವಾನಿಸಿದವು. ಆ ಮೂಲಕ ತಮ್ಮ ನಡುವೆ ದಾಳಿ ತಂತ್ರಗಳನ್ನು ವಿನಿಮಯ ಮಾಡಿಕೊಂಡು, ಸೈಬರ್ ಕಾರ್ಯಾಚರಣೆಯ ಕೆಲಸಗಳನ್ನು ಪರಸ್ಪರ ಹಂಚಿಕೊಂಡವು. ಇವುಗಳಲ್ಲಿ ಕೆಲವೇ ಕೆಲವು ಒಪನ್‌ಎಐ ಏಜೆಂಟ್‌ಗಳು ತಮ್ಮ ಆಂತರಿಕ ಲಾಗ್‌ಗಳಲ್ಲಿ ನೈತಿಕ ಕಾಳಜಿಗಳನ್ನು ಅಥವಾ ಅಪಸ್ವರಗಳನ್ನು ಎತ್ತಿದರೂ, ‘ಹೊರಬಿದ್ದಿರುವ ಈ ಮಾಹಿತಿಗಳನ್ನು ವರದಿ ಮಾಡುವುದು ತಮ್ಮ ಕೆಲಸವಲ್ಲ’ ಎಂದು ತಾವೇ ತರ್ಕಿಸಿ, ಕೊನೆಗೆ ದಾಳಿಯನ್ನು ಮುಂದುವರಿಸಿದವು.

ಯಾವುದೇ ಮಾನವರ ನೇರ ಮಾರ್ಗದರ್ಶನವಿಲ್ಲದೆ, ಅನೇಕ ಸೈಬರ್ ವ್ಯವಸ್ಥೆಗಳಾದ್ಯಂತ ಎಐ ಏಜೆಂಟ್‌ಗಳು ಇಷ್ಟೊಂದು ದೀರ್ಘಕಾಲದ ಸೈಬರ್ ದಾಳಿಗಳ ಸರಣಿಯನ್ನು ನಡೆಸಿರುವುದು ಜಾಗತಿಕವಾಗಿ ವರದಿಯಾದ ಮೊದಲ ಪ್ರಮುಖ ಪ್ರಕರಣ ಇದಾಗಿರಬಹುದು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಎಫ್‌ಐಆರ್ ರದ್ದತಿ ಕೋರಿ ಹೈಕೋರ್ಟ್‌ ಮೆಟ್ಟಿಲೇರಿದ ವಿವಾದಿತ ‘ಬಸವ ಮಂಟಪ’ ಕೃತಿ ಲೇಖಕ ರವಿ ಹಂಜ್‌

‘ಬಸವ ಮಂಟಪ’ ಕೃತಿಗೆ ಸಂಬಂಧಿಸಿದಂತೆ ತಮ್ಮ ವಿರುದ್ಧ ದಾಖಲಾಗಿರುವ ಎಫ್‌ಐಆರ್ ರದ್ದುಗೊಳಿಸುವಂತೆ ಕೋರಿ ಲೇಖಕ ರವಿ ಹಂಜಗಿಮಠ ಅವರು ಕರ್ನಾಟಕ ಹೈಕೋರ್ಟ್‌ ಮೊರೆ ಹೋಗಿದ್ದಾರೆ. ತಮ್ಮ ಅರ್ಜಿಯಲ್ಲಿ, ತಾನು ಬದ್ಧ ವೀರಶೈವ ಲಿಂಗಾಯತ ಧರ್ಮದ...

ದೇವಾಲಯ ಆವರಣದಲ್ಲಿನ ಪೆರಿಯಾರ್ ಪ್ರತಿಮೆ ಸ್ಥಳಾಂತರಿಸಲು ಹೈಕೋರ್ಟ್ ಸೂಚನೆ: ಆದೇಶ ಪ್ರಶ್ನಿಸಿ ಸುಪ್ರೀಂಕೋರ್ಟ್‌ಗೆ ತಮಿಳುನಾಡು ಸರ್ಕಾರ ಮೇಲ್ಮನವಿ

ತಂಜಾವೂರು (ತಮಿಳುನಾಡು): ತಂಜಾವೂರು ಜಿಲ್ಲೆಯ ಅರುಳ್ಮಿಗು ಬ್ರಹ್ಮಸಿರಕಂಡೀಶ್ವರರ್ ದೇವಾಲಯದ ಸಮೀಪ ಸ್ಥಾಪಿಸಲಾಗಿರುವ ದ್ರಾವಿಡ ಚಳವಳಿಯ ನಾಯಕ ಹಾಗೂ ಸಮಾಜ ಸುಧಾರಕ ಇ.ವಿ. ರಾಮಸ್ವಾಮಿ (ಪೆರಿಯಾರ್) ಅವರ ಪ್ರತಿಮೆಯನ್ನು ತೆರವುಗೊಳಿಸುವಂತೆ ಮದ್ರಾಸ್ ಹೈಕೋರ್ಟ್ ನೀಡಿದ್ದ...

ಬಿಲ್ ಬಾಣ – ಭಾಗ 2 ಬಡತನವೇ ಮರಣದಂಡನೆಯಾದಾಗ

ಹಿಂದಿನ ಅಂಕಣದಲ್ಲಿ ಹಣ ಪಾವತಿಸಬಲ್ಲವರು ಮತ್ತು ವಿಮೆ ಹೊಂದಿರುವವರು ಹೇಗೆ ಅನಗತ್ಯ ಪರೀಕ್ಷೆಗಳು, ಶಸ್ತ್ರಚಿಕಿತ್ಸೆಗಳು, ದುಬಾರಿ ಬಿಲ್ಲಿಂಗ್ ಮತ್ತು ವಿಮಾ ಹಕ್ಕುಗಳ ನಿರಾಕರಣೆಯಿಂದ ಶೋಷಿಸಲ್ಪಡುತ್ತಾರೆ ಎಂಬುದನ್ನು ನೋಡಿದ್ದೇವೆ. ಆರೋಗ್ಯ ವ್ಯವಸ್ಥೆಯ ಆ ಮುಖದಲ್ಲಿ...

ಕಿರುಕುಳ ಆರೋಪ : ಟಿವಿಕೆ ಶಾಸಕನ ವಿರುದ್ಧ ಪೊಲೀಸರಿಗೆ ದೂರು ನೀಡಿದ ಮಹಿಳಾ ಜಿಲ್ಲಾಧಿಕಾರಿ, ಎಫ್‌ಐಆರ್ ದಾಖಲು

ಕಿರುಕುಳ ಮತ್ತು ಅನುಚಿತ ವರ್ತನೆ ಆರೋಪಿಸಿ ತಮಿಳುನಾಡಿನ ಆಡಳಿತರೂಢ ತಮಿಳಗ ವೆಟ್ರಿ ಕಳಗಂ (ಟಿವಿಕೆ) ಪಕ್ಷದ ಶಾಸಕ ಸಿ. ಅರುಳ್ ವಿಘ್ನೇಶ್ ವಿರುದ್ಧ ಕಳ್ಳಕುರಿಚಿ ಜಿಲ್ಲಾಧಿಕಾರಿ ಜೆ.ಇ. ಪದ್ಮಜಾ ಅವರು ಪೊಲೀಸರಿಗೆ ಅಧಿಕೃತ...

ಬಾಂಗ್ಲಾದೇಶಕ್ಕೆ ಮರಳಲು ‘ವಿಜಯ ದಿನ’ವನ್ನೇ ಆಯ್ದುಕೊಂಡ ಶೇಖ್ ಹಸೀನಾ; ಡಿ.16ರಂದು ಭಾರತದಿಂದ ವಾಪಸಾಗುವ ಯೋಜನೆ

ಬಾಂಗ್ಲಾದೇಶದ ಪದಚ್ಯುತ ಪ್ರಧಾನಿ ಶೇಖ್ ಹಸೀನಾ ಅವರು ಭಾರತದಲ್ಲಿ ಆಶ್ರಯ ಪಡೆದಿರುವುದರಿಂದ ತಾಯ್ನಾಡಿಗೆ ಮರಳಲು ಡಿಸೆಂಬರ್ 16ರ ದಿನಾಂಕವನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಪಾಕಿಸ್ತಾನದ ವಿರುದ್ಧದ ಯುದ್ಧದಲ್ಲಿ ಬಾಂಗ್ಲಾದೇಶ ಸ್ವಾತಂತ್ರ್ಯ ಗಳಿಸಿದ ದಿನದ ಸ್ಮರಣಾರ್ಥ...

ನ.25ರಂದು ಶರ್ಜೀಲ್ ಇಮಾಮ್ -ಉಮರ್ ಖಾಲಿದ್ ಜಾಮೀನು ಅರ್ಜಿ ವಿಚಾರಣೆ ನಡೆಸಲಿರುವ ಸುಪ್ರೀಂ ಕೋರ್ಟ್

2020ರ ಫೆಬ್ರವರಿಯಲ್ಲಿ ಈಶಾನ್ಯ ದೆಹಲಿಯಲ್ಲಿ ನಡೆದ ಗಲಭೆಗಳ ಹಿಂದಿನ 'ದೊಡ್ಡ ಸಂಚು' ಆರೋಪಕ್ಕೆ ಸಂಬಂಧಿಸಿದ ಕಾನೂನುಬಾಹಿರ ಚಟುವಟಿಕೆಗಳ (ತಡೆ) ಕಾಯ್ದೆ (ಯುಎಪಿಎ) ಪ್ರಕರಣದಲ್ಲಿ ಜಾಮೀನು ನಿರಾಕರಿಸಿದ ದೆಹಲಿ ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ಸಾಮಾಜಿಕ...

ಲಂಡನ್‌ಗೆ ತೆರಳುತ್ತಿದ್ದ ಸಿಜೆಪಿಯ ಸೌರವ್ ದಾಸ್‌ಗೆ ದೆಹಲಿ ವಿಮಾನ ನಿಲ್ದಾಣದಲ್ಲಿ ತಡೆ

ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ಸಹ-ಸಂಚಾಲಕ ಮತ್ತು ವಕ್ತಾರ ಸೌರವ್ ದಾಸ್ ಅವರನ್ನು ಬ್ರಿಟನ್‌ಗೆ ಪ್ರಯಾಣಿಸದಂತೆ ದೆಹಲಿ ವಿಮಾನ ನಿಲ್ದಾಣದಲ್ಲಿ ತಡೆಯಲಾಗಿದೆ. ಸೋಮವಾರ (ನ.23) ರಾತ್ರಿ ಲಂಡನ್‌ಗೆ ತೆರಳುವ ವಿಮಾನವನ್ನು ಏರಲು ಸಿದ್ಧರಾಗಿದ್ದಾಗ...

ಸೆಂಟ್ರಲ್ ವಿಸ್ತಾ ಯೋಜನೆಗಾಗಿ ವಕ್ಫ್ ಸ್ಥಾನಮಾನ ಪರಿಗಣಿಸದೆ ಕದೀಮಿ ಮಸೀದಿ ಕೆಡವಲು ಸಾಧ್ಯವಿಲ್ಲ: ದೆಹಲಿ ಹೈಕೋರ್ಟ್‌ಗೆ ವಕ್ಫ್ ಮಂಡಳಿ ಉತ್ತರ

ನವದೆಹಲಿ: ದೆಹಲಿಯ ಕೃಷಿ ಭವನ ಆವರಣದಲ್ಲಿರುವ ಕದೀಮಿ ಮಸೀದಿಯು (Qadeemi Masjid) ಅಧಿಕೃತವಾಗಿ ಅಧಿಸೂಚಿತ ವಕ್ಫ್ ಆಸ್ತಿಯಾಗಿದ್ದು, ಸೆಂಟ್ರಲ್ ವಿಸ್ತಾ ಪುನರಾಭಿವೃದ್ಧಿ ಯೋಜನೆಗೆ ಅನುಕೂಲ ಮಾಡಿಕೊಡುವ ಏಕೈಕ ಕಾರಣಕ್ಕೆ ಅದರ ಧಾರ್ಮಿಕ ಸ್ವರೂಪ...

ಅಮಾನತು ರದ್ದುಗೊಳಿಸಿದ ಕೇರಳ ಹೈಕೋರ್ಟ್; 22 ದಿನಗಳ ಉಪವಾಸ ಸತ್ಯಾಗ್ರಹ ಅಂತ್ಯಗೊಳಿಸಿದ ಕಾಲಡಿ ಸಂಸ್ಕೃತ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು

ಕೇರಳದ ಕಾಲಡಿಯಲ್ಲಿರುವ ಶ್ರೀ ಶಂಕರಾಚಾರ್ಯ ಸಂಸ್ಕೃತ ವಿಶ್ವವಿದ್ಯಾಲಯದ 16 ವಿದ್ಯಾರ್ಥಿಗಳ ಅಮಾನತು ಆದೇಶವನ್ನು ಕೇರಳ ಹೈಕೋರ್ಟ್ ಸೋಮವಾರ (ನ.23) ರದ್ದುಗೊಳಿಸಿದೆ. ನ್ಯಾಯಾಲಯದ ಈ ತೀರ್ಪಿನ ಬೆನ್ನಲ್ಲೇ, ಕಳೆದ 22 ದಿನಗಳಿಂದ ಉಪವಾಸ ಸತ್ಯಾಗ್ರಹ...

ಜಪಾನ್‌ನ ಮೊತೊಮಚಿ ಟೊಯೊಟೊ ಘಟಕಕ್ಕೆ ಸಿಎಂ ಭೇಟಿ; ಬೆಂಗಳೂರಿನಿಂದ ಹೊರಗೆ ಆರ್ಥಿಕ ಅವಕಾಶ ವಿಸ್ತರಿಸುವ ಗುರಿ

"ಕರ್ನಾಟಕ ರಾಜ್ಯದಲ್ಲಿ ಹೂಡಿಕೆ ಆಕರ್ಷಸಿ, ಬೆಂಗಳೂರಿನಿಂದ ಹೊರಗೂ ಕೈಗಾರಿಕಾ ಬೆಳವಣಿಗೆಗೆ ಬದ್ಧವಾಗಿದ್ದೇವೆ" ಎಂದು ಸಿಎಂ ಡಿ ಕೆ ಶಿವಕುಮಾರ್ ಅವರು ತಿಳಿಸಿದರು. ರಾಜ್ಯ ಸರ್ಕಾರದ ಹೂಡಿಕೆ ಆಕರ್ಷಣೆ ಅಭಿಯಾನದ ಭಾಗವಾಗಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್...