ಜೀವನ ವೆಚ್ಚದ ಭಾರಿ ಏರಿಕೆ, ಕುಸಿದುಬೀಳುತ್ತಿರುವ ಶಾಲಾ-ಕಾಲೇಜುಗಳ ಮೂಲಸೌಕರ್ಯ ಹಾಗೂ ಸಾರ್ವಜನಿಕ ಸೇವೆಗಳ ಕಡಿತವನ್ನು ಖಂಡಿಸಿ ಫ್ರಾನ್ಸ್ನಾದ್ಯಂತ ಶನಿವಾರ ಲಕ್ಷಾಂತರ ಜನರು ರಸ್ತೆಗಿಳಿದು ನಡೆಸಿದ ಬೃಹತ್ ಪ್ರತಿಭಟನೆ ತೀವ್ರ ಸ್ವರೂಪ ಪಡೆದುಕೊಂಡಿದೆ. ವಿದ್ಯಾರ್ಥಿ ಚಳವಳಿಯಾಗಿ ಆರಂಭಗೊಂಡು ನಂತರ ವ್ಯಾಪಕ ಸಾಮಾಜಿಕ ಅಸಮಾಧಾನವಾಗಿ ಸ್ಫೋಟಗೊಂಡ ಈ ಹೋರಾಟವು ದೇಶದ ವಿವಿಧ ನಗರಗಳಲ್ಲಿ ಹಿಂಸಾಚಾರಕ್ಕೆ ತಿರುಗಿದೆ.
ಅಧಿಕೃತ ಅಂಕಿಅಂಶಗಳ ಪ್ರಕಾರ ಫ್ರಾನ್ಸ್ನಾದ್ಯಂತ ನಡೆದ ಈ ಪ್ರತಿಭಟನೆಯಲ್ಲಿ ಒಟ್ಟು ಸುಮಾರು 5.5 ಲಕ್ಷದಿಂದ 8 ಲಕ್ಷದವರೆಗೆ ಜನರು ಭಾಗವಹಿಸಿದ್ದರು ಎಂದು ವರದಿಯಾಗಿದೆ. ರಾಜಧಾನಿ ಪ್ಯಾರಿಸ್ ಸೇರಿದಂತೆ ಪ್ರಮುಖ ನಗರಗಳಲ್ಲಿ ಜಮಾಯಿಸಿದ ಜನತೆ ಸರ್ಕಾರದ ಜನವಿರೋಧಿ ಆರ್ಥಿಕ ನೀತಿಗಳ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪ್ರತಿಭಟನೆಯ ಕಾವು ಹೆಚ್ಚುತ್ತಿದ್ದಂತೆ ಕೆಲವೆಡೆ ಘರ್ಷಣೆಗಳು ಭುಗಿಲೆದ್ದವು. ಪರಿಸ್ಥಿತಿಯನ್ನು ನಿಯಂತ್ರಿಸಲು ಪೊಲೀಸರು ನಡೆಸಿದ ಕಾರ್ಯಾಚರಣೆಯಲ್ಲಿ ಆರಂಭಿಕ ವರದಿಗಳಂತೆ 1,200ಕ್ಕೂ ಅಧಿಕ ಜನರನ್ನು ವಶಕ್ಕೆ ಪಡೆಯಲಾಗಿದ್ದು, ನಂತರದ ಅಂಕಿಅಂಶಗಳ ಪ್ರಕಾರ ಈ ಸಂಖ್ಯೆ ಸುಮಾರು 1,800ಕ್ಕೆ ಏರಿಕೆಯಾಗಿದೆ. ಪ್ಯಾರಿಸ್ನಲ್ಲಿ ನಡೆದ ಪ್ರತಿಭಟನೆಯ ವೇಳೆ ಉಂಟಾದ ನೂಕುನುಗ್ಗಲು ಹಾಗೂ ಉದ್ವಿಗ್ನತೆಯಿಂದಾಗಿ ಒಬ್ಬ ಪ್ರತಿಭಟನಾಕಾರರು ಹೃದಯಾಘಾತದಿಂದ ಮೃತಪಟ್ಟಿರುವುದು ವರದಿಯಾಗಿದೆ.
ಹಿಂಸಾಚಾರದ ಕೃತ್ಯಗಳಲ್ಲಿ ತೊಡಗಿದ ಗುಂಪುಗಳನ್ನು ಚದುರಿಸಲು ಪೊಲೀಸರು ಅಶ್ರುವಾಯು ಹಾಗೂ ಜಲಫಿರಂಗಿಗಳನ್ನು ಬಳಸಿದ್ದಾರೆ. ಈ ವೇಳೆ ನಡೆದ ಮಾರಾಮಾರಿ ಹಾಗೂ ಘರ್ಷಣೆಗಳಲ್ಲಿ ವರದಿಗಳ ಪ್ರಕಾರ ಗಾಯಗೊಂಡ ಸಿಬ್ಬಂದಿಯ ಸಂಖ್ಯೆ 500ಕ್ಕೂ ಅಧಿಕವಾಗಿದೆ. ಪ್ಯಾರಿಸ್ ನಗರದಲ್ಲಿ ಕೆಲವೆಡೆ ಅಂಗಡಿ ಮುಂಗಟ್ಟುಗಳನ್ನು ಲೂಟಿ ಮಾಡಲಾಗಿದೆ. ಲಿಮೋಗೆಸ್ ನಗರದಲ್ಲಿ ಪ್ರತಿಭಟನಾಕಾರರು ಮಹಾನಗರ ಪಾಲಿಕೆ ಕಟ್ಟಡಕ್ಕೆ ನುಗ್ಗಿ ಬೆಂಕಿ ಹಚ್ಚಿದ ಪರಿಣಾಮ ಕಟ್ಟಡವು ಬಹುತೇಕ ಭಸ್ಮಗೊಂಡಿದೆ. ಮಾರ್ಸಿಲ್ಲೆ ನಗರದಲ್ಲೂ ಟೌನ್ಹಾಲ್ ಒಳಗೆ ನುಗ್ಗಿ ಪ್ರತಿಭಟನೆ ನಡೆಸಲಾಗಿದೆ.
ಕೆಲವು ವಾರಗಳ ಹಿಂದೆ ಹೈಸ್ಕೂಲ್ ವಿದ್ಯಾರ್ಥಿಗಳ ಸಂಘಟನೆಗಳು ಆರಂಭಿಸಿದ ಸಣ್ಣ ಮಟ್ಟದ ಆಂದೋಲನವು, ದಿನಸಿ ವಸ್ತುಗಳು, ಇಂಧನ ಮತ್ತು ಮನೆ ಬಾಡಿಗೆಗಳ ತೀವ್ರ ಬೆಲೆ ಏರಿಕೆಯಿಂದ ಹೈರಾಣಾಗಿರುವ ಜನಸಾಮಾನ್ಯರ ಆಕ್ರೋಶದೊಂದಿಗೆ ಸೇರಿಕೊಂಡು ದೊಡ್ಡ ಮಟ್ಟದ ಜನದಂಗೆಯಾಗಿ ರೂಪಾಂತರಗೊಂಡಿದೆ. ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರಾನ್ ಸರ್ಕಾರವು ಸಾರ್ವಜನಿಕ ವೆಚ್ಚವನ್ನು ಕಡಿತಗೊಳಿಸುತ್ತಿರುವುದು, ಶಿಕ್ಷಣ ಕ್ಷೇತ್ರಕ್ಕೆ ಅಗತ್ಯ ಅನುದಾನ ನೀಡದಿರುವುದು ಮತ್ತು ಆರೋಗ್ಯ ಹಾಗೂ ಸಾರಿಗೆ ಸೇರಿ ಪ್ರಮುಖ ಸಾರ್ವಜನಿಕ ಸೇವೆಗಳನ್ನು ಖಾಸಗೀಕರಣಗೊಳಿಸುವ ಅಥವಾ ಮೊಟಕುಗೊಳಿಸುವ ನೀತಿಯನ್ನು ಅನುಸರಿಸುತ್ತಿರುವುದೇ ಈ ಬೃಹತ್ ಅಸಮಾಧಾನಕ್ಕೆ ಮೂಲ ಕಾರಣವಾಗಿದೆ.
ಫ್ರಾನ್ಸ್ನಲ್ಲಿ ನಿರಂತರವಾಗಿ ಏರುತ್ತಿರುವ ಹಣದುಬ್ಬರ ಮತ್ತು ತೆರಿಗೆ ಹೊರೆಯಿಂದಾಗಿ ಕಾರ್ಮಿಕರು, ವಿದ್ಯಾರ್ಥಿಗಳು ಹಾಗೂ ಮಧ್ಯಮ ವರ್ಗದ ಜನರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಸರ್ಕಾರದ ಈ ಜನವಿರೋಧಿ ಆರ್ಥಿಕ ನೀತಿಗಳ ವಿರುದ್ಧ ವಿರೋಧ ಪಕ್ಷಗಳು ಮತ್ತು ಪ್ರಮುಖ ಕಾರ್ಮಿಕ ಸಂಘಟನೆಗಳು ಸಹ ಹೋರಾಟಗಾರರಿಗೆ ಬೆಂಬಲ ಸೂಚಿಸಿದ್ದು, ಮುಂಬರುವ ದಿನಗಳಲ್ಲಿ ಈ ಬಿಕ್ಕಟ್ಟು ಮತ್ತಷ್ಟು ಉಲ್ಬಣಗೊಳ್ಳುವ ಸಾಧ್ಯತೆಯಿದೆ. ಇದು ಪ್ರಸ್ತುತ ಫ್ರಾನ್ಸ್ ಸರ್ಕಾರದ ಆಡಳಿತಕ್ಕೆ ತೀವ್ರ ರಾಜಕೀಯ ತಲೆನೋವಾಗಿ ಪರಿಣಮಿಸಿದೆ.


