ದೆಹಲಿಯಲ್ಲಿರುವ ಜಾಮಿಯಾ ಮಿಲ್ಲಿಯಾ ಇಸ್ಲಾಮಿಯಾ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ನಡೆಸುತ್ತಿರುವ ಉಪವಾಸ ಸತ್ಯಾಗ್ರಹಕ್ಕೆ ಒಂದು ವಾರ ತುಂಬಿದ ಹಿನ್ನೆಲೆಯಲ್ಲಿ, ಸೋಮವಾರ (ಅ.19) ವಿಶ್ವವಿದ್ಯಾಲಯದ ಆಡಳಿತ ಮಂಡಳಿಯು ಏಳು ಸದಸ್ಯರ ಉನ್ನತ ಮಟ್ಟದ ಸಮಿತಿಯನ್ನು ರಚಿಸಿದೆ.
ವಿದ್ಯಾರ್ಥಿಗಳು ಮತ್ತು ಭದ್ರತಾ ಸಿಬ್ಬಂದಿ ನಡುವಿನ ಘರ್ಷಣೆ ಹಾಗೂ ನಂತರದ ಬಂಧನದಿಂದಾಗಿ ಕ್ಯಾಂಪಸ್ನಲ್ಲಿ ಉಂಟಾಗಿದ್ದ ಉದ್ವಿಗ್ನತೆಯ ವಾತಾವರಣವನ್ನು ಸರಿಪಡಿಸಿ, ಸಹಜ ಸ್ಥಿತಿ ಮರಳಿಸುವ ಪ್ರಯತ್ನವಾಗಿ ಈ ಹೆಜ್ಜೆ ಇಡಲಾಗಿದೆ.
ಇದರೊಂದಿಗೆ, ಸಿಪಿಐ (ಎಂ) ಸಂಸದ ಜಾನ್ ಬ್ರಿಟ್ಟಾಸ್ ಅವರು ಉಪಕುಲಪತಿ ಪ್ರೊ. ಮಝರ್ ಆಸಿಫ್ ಅವರಿಗೆ ಪತ್ರ ಬರೆದು, ಉಭಯ ಪಕ್ಷಗಳ ನಡುವಿನ ಭಿನ್ನಾಭಿಪ್ರಾಯಗಳನ್ನು ಶೀಘ್ರವಾಗಿ ಬಗೆಹರಿಸುವಂತೆ ಒತ್ತಾಯಿಸಿದ್ದಾರೆ.
ಏಳು ಸದಸ್ಯರ ಈ ತಂಡದಲ್ಲಿ ಉಪಕುಲಪತಿ, ರಿಜಿಸ್ಟ್ರಾರ್ ಪ್ರೊ. ಮೊಹಮ್ಮದ್ ತಾಬ್ ಆಲಂ ರಿಜ್ವಿ, ನಾನಾ ನಿಕಾಯಗಳ ಡೀನರು, ವಿದ್ಯಾರ್ಥಿ ಕಲ್ಯಾಣ ಡೀನ್, ಮುಖ್ಯ ಪ್ರೊಕ್ಟರ್ ಮತ್ತು ಹಾಸ್ಟೆಲ್ ಪ್ರೊವೋಸ್ಟ್ಗಳು ಸೇರಿದ್ದಾರೆ.
ಮೂಲಭೂತ ಸೌಕರ್ಯ- ವಿದ್ಯಾರ್ಥಿ ಸಂಘಕ್ಕಾಗಿ ಉಪವಾಸ ಸತ್ಯಾಗ್ರಹ
ವಿದ್ಯಾರ್ಥಿ ಸಂಘವನ್ನು ಮರುಸ್ಥಾಪಿಸಬೇಕೆಂದು ಆಗ್ರಹಿಸಿ ವಿದ್ಯಾರ್ಥಿಗಳು ಅಕ್ಟೋಬರ್ 12ರಿಂದ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದಾರೆ.
ಕ್ಯಾಂಪಸ್ನಲ್ಲಿ ನಡೆದ ಗಲಭೆ ಹಾಗೂ ಅಶಾಂತಿ, ವಿಶೇಷವಾಗಿ ಉಪಕುಲಪತಿಯವರ ಮೇಲೆ ನಡೆದ ಭೌತಿಕ ಹಲ್ಲೆಯ ಘಟನೆಯ ನಂತರ ವಿಶ್ವವಿದ್ಯಾಲಯದ ಆಡಳಿತ ಮಂಡಳಿಯು ಚುನಾಯಿತ ವಿದ್ಯಾರ್ಥಿ ಸಂಘವನ್ನು ವಿಸರ್ಜಿಸಿತ್ತು.
“ಪ್ರತಿನಿಧಿತ್ವಕ್ಕಾಗಿ ನಮ್ಮ ಬಳಿ ಇರುವುದು ವಿಭಾಗೀಯ ಚುನಾವಣೆಗಳ ವ್ಯವಸ್ಥೆ ಮಾತ್ರ. ಆದರೆ ವಿಭಾಗೀಯ ಮಂಡಳಿಯ ಅಧ್ಯಕ್ಷರೇ ಡೀನ್ ಅಥವಾ ವಿಭಾಗದ ಮುಖ್ಯಸ್ಥರಾಗಿರುತ್ತಾರೆ. ಹೀಗಾಗಿ ಆಡಳಿತದ ಇಚ್ಛಾನುಸಾರ ಅಧಿಕಾರ ಚಲಾಯಿಸುವುದೇ ಮುಂದುವರಿದಿದೆ. ಈ ಮಂಡಳಿಗಳಲ್ಲಿ ವಿದ್ಯಾರ್ಥಿಗಳಿಗೆ ನಿರ್ಧಾರ ಕೈಗೊಳ್ಳುವ ಯಾವುದೇ ಅಧಿಕಾರವಿಲ್ಲ” ಎಂದು ಉಪವಾಸ ನಿರತ ಮೂವರು ವಿದ್ಯಾರ್ಥಿಗಳಲ್ಲಿ ಒಬ್ಬರಾದ ಎಬಿನ್ ಬೇಸಿಲ್ ತಿಳಿಸಿದ್ದಾರೆ ಎಂದು ‘ಮಕ್ತೂಬ್ ಮೀಡಿಯಾ’ ವರದಿ ಮಾಡಿದೆ.
ಶುಲ್ಕ ಹೆಚ್ಚಳ, ಮೂಲಭೂತ ಸೌಕರ್ಯಗಳು, ಪ್ರವೇಶಾತಿಯಲ್ಲಿನ ಭ್ರಷ್ಟಾಚಾರ ಮತ್ತು ಮೀಸಲಾತಿ ನೀತಿಗಳಂತಹ ಸಮಸ್ಯೆಗಳನ್ನು ವಿಶ್ವವಿದ್ಯಾಲಯವು ನಿರಂತರವಾಗಿ ನಿರ್ಲಕ್ಷಿಸುತ್ತ ಬಂದಿದೆ. ಅದಕ್ಕೆ ಆಡಳಿತ ಮಂಡಳಿಯಿಂದ ಯಾವುದೇ ಪ್ರತಿಕ್ರಿಯೆ ಸಿಕ್ಕಿಲ್ಲ ಎಂದು ಅವರು ದೂರಿದ್ದಾರೆ.
ಉಪವಾಸ ಸತ್ಯಾಗ್ರಹದಲ್ಲಿದ್ದ ಜಾಸಿಮ್ ಖಾನ್ ಅವರನ್ನು ವಿಶ್ವವಿದ್ಯಾಲಯದ ಭದ್ರತಾ ಸಿಬ್ಬಂದಿ ಥಳಿಸಿದ್ದು, ನಂತರ ದೆಹಲಿ ಪೊಲೀಸರು ಅವರನ್ನು ವಶಕ್ಕೆ ಪಡೆದಿದ್ದಾರೆ.
ಪ್ರತಿಭಟನೆ ತೀವ್ರಗೊಂಡಂತೆ, ಜಾಮಿಯಾ ಮಿಲ್ಲಿಯಾ ಇಸ್ಲಾಮಿಯಾ ಆಡಳಿತ ಮಂಡಳಿಯು ಎಬಿನ್ ಬೇಸಿಲ್ ಅವರನ್ನು ವಿಶ್ವವಿದ್ಯಾಲಯದಿಂದ ಹೊರಹಾಕಿದೆ. ಜಾಸಿಮ್ ಖಾನ್ ಹಾಗೂ ರೆಹಾನ್ ಹೈದರ್ ಅವರನ್ನು ಅಮಾನತುಗೊಳಿಸಿದೆ.


