ಮಾಹಿತಿ ಹಕ್ಕು ಕಾಯ್ದೆಯಡಿ ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಮಾಜಿ ಪ್ರಧಾನಿ ಡಾ. ಮನ್ಮೋಹನ್ ಸಿಂಗ್ ಅವರು ಭಾರತೀಯ ವಾಯುಪಡೆಯ (IAF) ವಿಮಾನಗಳಲ್ಲಿ ನಡೆಸಿದ್ದ ವಿದೇಶಿ ಪ್ರವಾಸಗಳಿಗೆ ಸಂಬಂಧಿಸಿದ ವಿವರವಾದ ದಾಖಲೆಗಳನ್ನು ಬಹಿರಂಗಪಡಿಸುವಂತೆ ಕೇಂದ್ರ ಮಾಹಿತಿ ಆಯೋಗ (CIC) ನೀಡಿದ್ದ ಆದೇಶವನ್ನು ದೆಹಲಿ ಹೈಕೋರ್ಟ್ ರದ್ದುಗೊಳಿಸಿದೆ ಎಂದು ‘ಬಾರ್ & ಬೆಂಚ್’ ವರದಿ ಮಾಡಿದೆ. ಅಕ್ಟೋಬರ್ 15, 2026 ರಂದು ಈ ಮಹತ್ವದ ತೀರ್ಪು ಹೊರಬಿದ್ದಿದೆ.
ನಿವೃತ್ತ ಕಮೋಡೋರ್ ಲೋಕೇಶ್ ಬತ್ರಾ ಅವರು ಮಾಹಿತಿ ಹಕ್ಕು ಕಾಯ್ದೆಯಡಿ ಅರ್ಜಿ ಸಲ್ಲಿಸಿ, ಏಪ್ರಿಲ್ 2013 ರಿಂದ ಜೂನ್ 2018 ರ ನಡುವೆ ಪ್ರಧಾನಮಂತ್ರಿಗಳು ವಾಯುಪಡೆ ವಿಮಾನಗಳಲ್ಲಿ ಕೈಗೊಂಡಿದ್ದ ವಿದೇಶಿ ಪ್ರವಾಸಗಳ ‘ಸ್ಪೆಷಲ್ ಫ್ಲೈಟ್ ರಿಟರ್ನ್ಸ್’ (SFR) ಭಾಗ-1 ಮತ್ತು ಭಾಗ-2 ರ ವಿವರಗಳನ್ನು ಕೋರಿದ್ದರು. ಇದರಲ್ಲಿ ಪ್ರಧಾನಿಯವರ ಜೊತೆ ಪ್ರಯಾಣಿಸಿದ ವಿಶೇಷ ರಕ್ಷಣಾ ಪಡೆ (SPG) ಸಿಬ್ಬಂದಿ ಹಾಗೂ ಇತರ ನಿಯೋಗದ ವಿವರವಾದ ಪಟ್ಟಿ ಒಳಗೊಂಡಿತ್ತು. ಆದರೆ ಈ ಮಾಹಿತಿಯನ್ನು ಬಹಿರಂಗಪಡಿಸುವುದರಿಂದ ರಾಷ್ಟ್ರೀಯ ಭದ್ರತೆ ಹಾಗೂ ಪ್ರಧಾನಿಯವರ ಜೀವ ಮತ್ತು ಸುರಕ್ಷತೆಗೆ ಧಕ್ಕೆಯಾಗುವ ಸಾಧ್ಯತೆಯಿದೆ ಎಂದು ಅಭಿಪ್ರಾಯಪಟ್ಟಿರುವ ಹೈಕೋರ್ಟ್ ನ್ಯಾಯಮೂರ್ತಿ ಅಮಿತ್ ಮಹಾಜನ್ ಅವರು ಈ ಆದೇಶ ನೀಡಿದ್ದಾರೆ ಎಂದು ವರದಿಯಾಗಿದೆ.
ವಿಚಾರಣೆ ವೇಳೆ ನ್ಯಾಯಾಲಯವು, “ನಿರ್ದಿಷ್ಟ ಮಾಹಿತಿಯನ್ನು ಬಹಿರಂಗಪಡಿಸುವುದರಿಂದ ರಾಷ್ಟ್ರೀಯ ಭದ್ರತೆಗೆ ಅಥವಾ ಪ್ರಧಾನಮಂತ್ರಿಯವರ ಜೀವ ಮತ್ತು ಭೌತಿಕ ಸುರಕ್ಷತೆಗೆ ಧಕ್ಕೆಯಾಗುತ್ತದೆಯೇ ಎಂಬ ಕುರಿತು ಭದ್ರತಾ ಸಂಸ್ಥೆಗಳ ನಿರ್ಧಾರವೇ ಅಂತಿಮ. ಭದ್ರತಾ ಸಂಸ್ಥೆಗಳ ನಿರ್ಧಾರದ ಮೇಲೆ ಹೈಕೋರ್ಟ್ ಅಥವಾ ಸಿಐಸಿ ಮೇಲ್ಮನವಿ ಪ್ರಾಧಿಕಾರದಂತೆ ತೀರ್ಪು ನೀಡಲು ಸಾಧ್ಯವಿಲ್ಲ. ಪ್ರಧಾನಿಯವರ ರಕ್ಷಣೆಯ ಜವಾಬ್ದಾರಿಯನ್ನು ಹೊತ್ತಿರುವ ಸಂಸ್ಥೆಗಳ ಮೌಲ್ಯಮಾಪನಕ್ಕೆ ಬದಲಾಗಿ ನ್ಯಾಯಾಲಯವು ತನ್ನದೇ ಆದ ನಿರ್ಧಾರವನ್ನು ಹೇರಲು ಸಾಧ್ಯವಿಲ್ಲ” ಎಂದು ಕಟ್ಟುನಿಟ್ಟಾಗಿ ಹೇಳಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಪ್ರಕರಣದ ಹಿನ್ನೆಲೆಯನ್ನು ಗಮನಿಸುವುದಾದರೆ, 2018ರಲ್ಲಿ ಸಲ್ಲಿಕೆಯಾಗಿದ್ದ ಆರ್ಟಿಐ ಅರ್ಜಿಗೆ ವಾಯುಪಡೆಯು ಕೆಲ ಮಾಹಿತಿಯನ್ನು ನೀಡಿತ್ತಾದರೂ, ಭದ್ರತಾ ಕಾಳಜಿ ಮತ್ತು ಗೌಪ್ಯತೆಯ ನಿಯಮಗಳನ್ನು ಉಲ್ಲೇಖಿಸಿ ‘ಭಾಗ-1’ ಮತ್ತು ‘ಭಾಗ-2’ ದಾಖಲೆ ನೀಡಲು ನಿರಾಕರಿಸಿತ್ತು. ಆದರೆ, ಭದ್ರತಾ ಸಿಬ್ಬಂದಿಯ ಹೆಸರುಗಳನ್ನು ಮರೆಮಾಚಿ (Redact ಮಾಡಿ) ಲಭ್ಯವಿರುವ ‘ಭಾಗ-2’ ದಾಖಲೆಗಳನ್ನು ಒದಗಿಸುವಂತೆ ಸಿಐಸಿ ಸೂಚಿಸಿತ್ತು. ಇದನ್ನು ಪ್ರಶ್ನಿಸಿ ವಾಯುಪಡೆಯ ಕೇಂದ್ರ ಸಾರ್ವಜನಿಕ ಮಾಹಿತಿ ಅಧಿಕಾರಿ (CPIO) ಹೈಕೋರ್ಟ್ ಮೆಟ್ಟಿಲೇರಿದ್ದರು.
ಅರ್ಜಿದಾರರ ಪರ ವಕೀಲರು ವಾದ ಮಂಡಿಸಿ, “ಪ್ರಧಾನಿಯವರ ವಿದೇಶಿ ಪ್ರವಾಸಗಳಿಗೆ ಸಾರ್ವಜನಿಕರ ಹಣ ವೆಚ್ಚವಾಗುತ್ತಿರುವುದರಿಂದ ಈ ಮಾಹಿತಿ ಬಹಿರಂಗಪಡಿಸುವುದು ಸಾರ್ವಜನಿಕ ಹಿತಾಸಕ್ತಿಯಾಗಿದೆ” ಎಂದು ತಿಳಿಸಿದ್ದರು. ಆದರೆ ಇದನ್ನು ಒಪ್ಪದ ನ್ಯಾಯಾಲಯ, “ಕೇವಲ ಸಾರ್ವಜನಿಕ ಹಣ ವೆಚ್ಚವಾಗಿದೆ ಎಂಬ ಕಾರಣಕ್ಕೆ ಪ್ರಧಾನಿಯವರ ಭದ್ರತಾ ವ್ಯವಸ್ಥೆಗೆ ಧಕ್ಕೆ ತರುವಂತಹ ಮಾಹಿತಿಯನ್ನು ಬಹಿರಂಗಪಡಿಸುವುದನ್ನು ಸಮರ್ಥಿಸಲು ಸಾಧ್ಯವಿಲ್ಲ” ಎಂದು ಸ್ಪಷ್ಟಪಡಿಸಿ, ಸಿಐಸಿ ಆದೇಶವನ್ನು ತಡೆಹಿಡಿದು ರದ್ದುಗೊಳಿಸಿದೆ ಎಂದು ವರದಿಯಾಗಿದೆ.


