ವಿಶೇಷ ಕಾರ್ಯನಿರ್ವಾಹಕ ಮ್ಯಾಜಿಸ್ಟ್ರೇಟ್ (ಎಸ್ಇಎಂ) ತಮ್ಮ ನ್ಯಾಯಾಂಗ ಬಂಧನವನ್ನು ವಿಸ್ತರಿಸಿರುವುದನ್ನು ಪ್ರಶ್ನಿಸಿ ಕಾಕ್ರೋಚ್ ಜನತಾ ಪಕ್ಷದ (ಸಿಜೆಪಿ) ಮುಖಂಡರಾದ ಸೌರವ್ ದಾಸ್ ಮತ್ತು ಅಶುತೋಷ್ ರಂಕಾ ಸಲ್ಲಿಸಿರುವ ಅರ್ಜಿಯನ್ನು ಬುಧವಾರ (ಅ.21) ವಿಚಾರಣೆ ನಡೆಸಲು ದೆಹಲಿ ಹೈಕೋರ್ಟ್ ಒಪ್ಪಿಗೆ ನೀಡಿದೆ.
ಶಾಂತಿ ಕಾಪಾಡಲು ವಿಶೇಷ ಕಾರ್ಯನಿರ್ವಾಹಕ ಮ್ಯಾಜಿಸ್ಟ್ರೇಟ್ ಮುಂದೆ ಮುಚ್ಚಳಿಕೆ ಬರೆದುಕೊಡುವಂತೆ ದೆಹಲಿ ಪೊಲೀಸ್ ಇಲಾಖೆಯು ಅಕ್ಟೋಬರ್ 17 ರಂದು ನೀಡಿದ್ದ ನೋಟೀಸ್ ಅನ್ನು ಪ್ರಶ್ನಿಸಿ, ಆಲ್ ಇಂಡಿಯಾ ಸ್ಟೂಡೆಂಟ್ಸ್ ಅಸೋಸಿಯೇಷನ್ (ಐಸಾ) ಅಧ್ಯಕ್ಷೆ ನೇಹಾ ಬೋರಾ ಅವರು ಸಲ್ಲಿಸಿರುವ ಪ್ರತ್ಯೇಕ ಅರ್ಜಿಯನ್ನೂ ನ್ಯಾಯಮೂರ್ತಿ ಸುಬ್ರಮಣ್ಯಂ ಪ್ರಸಾದ್ ಅವರು ವಿಚಾರಣೆಗೆ ಕೈಗೆತ್ತಿಕೊಳ್ಳಲಿದ್ದಾರೆ.
ದಸರಾ ರಜೆ ನಿಮಿತ್ತ ಈ ವಾರ ಹೈಕೋರ್ಟ್ ಮುಚ್ಚಿದ್ದರೂ, ಅಕ್ಟೋಬರ್ 19 ರಂದು ಎಸ್ಇಎಂ ಹೊರಡಿಸಿದ ಎರಡು ದಿನಗಳ ನ್ಯಾಯಾಂಗ ಬಂಧನದ ಆದೇಶವನ್ನು ದಾಸ್ ಮತ್ತು ರಂಕಾ ಹೈಕೋರ್ಟ್ನಲ್ಲಿ ಪ್ರಶ್ನಿಸಿದ್ದಾರೆ.
ಸಂಭಾವ್ಯ ಶಾಂತಿಭಂಗ, ಸಾರ್ವಜನಿಕ ಶಾಂತಿ ಕದಡುವುದು ಅಥವಾ ಅಶಾಂತಿಯನ್ನುಂಟು ಮಾಡುವ ಯಾವುದೇ ತಪ್ಪಾದ ಕೃತ್ಯವನ್ನು ವ್ಯಕ್ತಿಯು ಎಸಗುವ ಸಾಧ್ಯತೆಯಿದೆ ಎಂಬ ನಂಬಲಾರ್ಹ ಮಾಹಿತಿಯಿದ್ದಾಗ, ಶಾಂತಿ ಕಾಪಾಡಲು ಆ ವ್ಯಕ್ತಿಯಿಂದ ಮುಚ್ಚಳಿಕೆ ಪಡೆಯಲು ಎಸ್ಇಎಂಗೆ ಸೆಕ್ಷನ್ 126 ಅಧಿಕಾರ ನೀಡುತ್ತದೆ. ನೇಹಾ ಬೋರಾ ಅವರ ಅರ್ಜಿಯು ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ (ಬಿಎನ್ಎಸ್ಎಸ್) ಸೆಕ್ಷನ್ 126ರ ಅಡಿಯಲ್ಲಿ ನೀಡಲಾದ ಅಕ್ಟೋಬರ್ 17ರ ದಿನಾಂಕದ ನೋಟೀಸ್ಗೆ ಸಂಬಂಧಿಸಿದ್ದಾಗಿದೆ. “ವಿಚಾರಣೆಯ ಅವಧಿಗೆ ಶಾಂತಿ ಕಾಪಾಡಲು” ಒಬ್ಬ ಜಾಮೀನುದಾರರೊಂದಿಗೆ 10,000 ರೂ.ಗಳ ವೈಯಕ್ತಿಕ ಮುಚ್ಚಳಿಕೆಯನ್ನು ಏಕೆ ಬರೆದುಕೊಡಬಾರದು ಎಂಬುದಕ್ಕೆ ಕಾರಣ ತೋರಿಸುವಂತೆ ಅಕ್ಟೋಬರ್ 19 ರಂದು ಎಸ್ಇಎಂ ಮುಂದೆ ಹಾಜರಾಗಲು ವಿದ್ಯಾರ್ಥಿ ನೇಹಾಗೆ ನೋಟೀಸ್ನಲ್ಲಿ ಸೂಚಿಸಲಾಗಿತ್ತು.
ಅಕ್ಟೋಬರ್ 16 ರಂದು ಸಿಜೆಪಿ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ‘ಲಹರಾ ದೋ ತಿರಂಗಾ’ ಮೆರವಣಿಗೆಯಲ್ಲಿ ಭಾಗವಹಿಸಲು ತೆರಳುತ್ತಿದ್ದಾಗ ನೇಹಾ ಬೋರಾ ಅವರನ್ನು ಮುನ್ನೆಚ್ಚರಿಕೆ ಕ್ರಮವಾಗಿ ವಶಕ್ಕೆ ಪಡೆಯಲಾಗಿತ್ತು. ಬಳಿಕ ಅವರನ್ನು ಅಕ್ಟೋಬರ್ 17 ರಂದು ಬಿಡುಗಡೆ ಮಾಡಲಾಗಿತ್ತು.
ಜಂತರ್ ಮಂತರ್ ಪ್ರವೇಶಿಸಿದ ಸಿಜೆಪಿ ನಾಯಕರು ವಶಕ್ಕೆ
ನಿರ್ಬಂಧಿತ ಪ್ರತಿಭಟನಾ ಸ್ಥಳವಾಗಿದ್ದ ಜಂತರ್ ಮಂತರ್ನ ಗೇಟ್ ಅನ್ನು ಹತ್ತಿ ಒಳಗೆ ಪ್ರವೇಶಿಸಿದ ಆರೋಪದ ಮೇಲೆ ಅಕ್ಟೋಬರ್ 13 ರಂದು ಸೌರವ್ ದಾಸ್ ಮತ್ತು ಆಸುತೋಶ್ ರಾಂಕಾ ಅವರನ್ನು ವಶಕ್ಕೆ ಪಡೆಯಲಾಗಿದ್ದು, ಅವರನ್ನು ಐದು ದಿನಗಳ ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿತ್ತು.
ಮಂದೀರ್ ಮಾರ್ಗ್ ಪೊಲೀಸ್ ಠಾಣೆಯ ಹೊಸದಾಗಿ ನೇಮಕಗೊಂಡ ವಿಶೇಷ ಕಾರ್ಯನಿರ್ವಾಹಕ ಮ್ಯಾಜಿಸ್ಟ್ರೇಟ್ ಮುಂದೆ ಸೋಮವಾರ ಹಾಜರುಪಡಿಸಿದ ನಂತರ, ಅಕ್ಟೋಬರ್ 21 ರವರೆಗೆ ಅವರ ನ್ಯಾಯಾಂಗ ಬಂಧನವನ್ನು ವಿಸ್ತರಿಸಿ ಆದೇಶಿಸಲಾಯಿತು.
ಇತರ ಸಿಜೆಪಿ ಕಾರ್ಯಕರ್ತರೊಂದಿಗೆ ದಾಸ್ ಮತ್ತು ರಾಂಕಾ ಅವರು ರಾಷ್ಟ್ರಧ್ವಜವನ್ನು ಪ್ರದರ್ಶಿಸಿ, ಮುಖ್ಯ ಚುನಾವಣಾ ಆಯುಕ್ತ ಗ್ಯಾನೇಶ್ ಕುಮಾರ್ ವಿರುದ್ಧ ಘೋಷಣೆಗಳನ್ನು ಕೂಗಿದರು. ನಂತರ ಅಕ್ಟೋಬರ್ 13 ರಂದು ಅವರನ್ನು ತಡೆದು ಮುನ್ನೆಚ್ಚರಿಕೆ ಕ್ರಮವಾಗಿ ಬಂಧಿಸಲಾಯಿತು.
ಅಕ್ಟೋಬರ್ 14 ರಂದು ವಿಶೇಷ ಕಾರ್ಯನಿರ್ವಾಹಕ ಮ್ಯಾಜಿಸ್ಟ್ರೇಟ್ ದಾಸ್ ಮತ್ತು ರಾಂಕಾ ಅವರನ್ನು ಮೊದಲ ಬಾರಿಗೆ ಐದು ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದರು.


