ಜವಾಹರಲಾಲ್ ನೆಹರು ವಿಶ್ವವಿದ್ಯಾಲಯ ವಿದ್ಯಾರ್ಥಿ ಸಂಘದ (JNUSU) ಸದಸ್ಯರು ಮಂಗಳವಾರ (ಅಕ್ಟೋಬರ್ 20) ತಮ್ಮ 17 ದಿನಗಳ ಉಪವಾಸ ಸತ್ಯಾಗ್ರಹವನ್ನು ಕೊನೆಗೊಳಿಸಿದ್ದಾರೆ. ವಿದ್ಯಾರ್ಥಿ ಪ್ರತಿನಿಧಿಗಳು ಮತ್ತು ವಿಶ್ವವಿದ್ಯಾಲಯದ ಡೀನ್ ನೇತೃತ್ವದ ಸಮಿತಿಯ ನಡುವೆ ನಡೆದ ಸಭೆಗಳ ನಂತರ ಈ ಬೆಳವಣಿಗೆ ನಡೆದಿದೆ.
ಸ್ಕೂಲ್ ಆಫ್ ಸೋಷಿಯಲ್ ಸೈನ್ಸಸ್‌ನ ಡೀನ್ ವಿವೇಕ್ ಕುಮಾರ್ ಸಹಿ ಮಾಡಿರುವ ಪತ್ರದಲ್ಲಿ, ಐವರು ವಿದ್ಯಾರ್ಥಿಗಳ ಅಮಾನತು ಆದೇಶವನ್ನು ಹಿಂಪಡೆಯಲು ನಿರ್ದೇಶಿಸಲಾಗಿದೆ ಎಂದು ತಿಳಿಸಲಾಗಿದೆ. ಆ ಪತ್ರದಲ್ಲಿ ಅದಿತಿ ಮಿಶ್ರಾ, ಕೆ. ಗೋಪಿಕಾ ಬಾಬು, ಸುನಿಲ್ ಯಾದವ್, ದಾನಿಶ್ ಅಲಿ ಮತ್ತು ನಿತೀಶ್ ಕುಮಾರ್ ಎಂಬ ವಿದ್ಯಾರ್ಥಿಗಳ ಹೆಸರನ್ನು ಉಲ್ಲೇಖಿಸಲಾಗಿದೆ.
ಅಧ್ಯಕ್ಷರು ಸೇರಿದಂತೆ ಜೆಎನ್‌ಯುಎಸ್‌ಯು ಪದಾಧಿಕಾರಿಗಳ ಅಮಾನತು ಆದೇಶವನ್ನು (ರಸ್ಟಿಕೇಶನ್) ಹಿಂಪಡೆಯುವುದು ವಿದ್ಯಾರ್ಥಿಗಳ ಪ್ರಮುಖ ಬೇಡಿಕೆಗಳಲ್ಲಿ ಒಂದಾಗಿತ್ತು.
ವಿದ್ಯಾರ್ಥಿಗಳು ಮತ್ತು ವಿಶ್ವವಿದ್ಯಾಲಯ ಸಮಿತಿಯ ನಡುವಿನ ಸಭೆಯಲ್ಲಿ ಚರ್ಚಿಸಲಾದ 5 ಪ್ರಮುಖ ವಿಷಯಗಳು ಇಲ್ಲಿವೆ:
1.ವಿದ್ಯಾರ್ಥಿಗಳ ವಿರುದ್ಧದ ಎಲ್ಲಾ ಎಫ್‌ಐಆರ್‌ಗಳನ್ನು ಹಿಂಪಡೆಯಲಾಗುವುದು.
2.ವಿವಾದಾತ್ಮಕ ಷರತ್ತುಗಳನ್ನು ಪರಿಶೀಲಿಸಲು ಮತ್ತು ಅವುಗಳನ್ನು ತೆಗೆದುಹಾಕಲು, ಜೆಎನ್‌ಯುಎಸ್‌ಯು ಪದಾಧಿಕಾರಿಗಳ ಪೈಕಿ ಒಬ್ಬರು, ಒಬ್ಬ ವಿದ್ಯಾರ್ಥಿ ಪ್ರತಿನಿಧಿ ಹಾಗೂ ಒಬ್ಬ ಚುನಾಯಿತ ಸದಸ್ಯರನ್ನು ಒಳಗೊಂಡ ಸಮಿತಿಯೊಂದನ್ನು ರಚಿಸಲಾಗುವುದು.
3.ಜವಾಹರಲಾಲ್ ನೆಹರು ವಿಶ್ವವಿದ್ಯಾಲಯ ಪ್ರವೇಶ ಪರೀಕ್ಷೆ (ಜೆಎನ್‌ಯುಇಇ) ಕುರಿತಾಗಿ, ಜೆಎನ್‌ಯುಎಸ್‌ಯು ಪದಾಧಿಕಾರಿಯೊಬ್ಬರ ಪ್ರತಿನಿಧಿಯನ್ನು ಒಳಗೊಂಡ ಸಮಿತಿಯೊಂದನ್ನು ರಚಿಸಲಾಗುವುದು.
4.ಜೆಎನ್‌ಯುಎಸ್‌ಯು ಪದಾಧಿಕಾರಿಗಳ ಪ್ರತಿನಿಧಿಗಳನ್ನು ಒಳಗೊಂಡ ಹಾಸ್ಟೆಲ್ ಮೀಸಲಾತಿ ಸಮಿತಿಯನ್ನು ರಚಿಸಲಾಗುವುದು.
5.ವಿದ್ಯಾರ್ಥಿಗಳನ್ನು ಉಚ್ಚಾಟಿಸುವ ಕ್ರಮದ ವಿರುದ್ಧದ ಪ್ರತಿಭಟನೆ, ಯುಜಿಸಿ ನಿಯಮಾವಳಿಗಳ ವಿರುದ್ಧದ ಪ್ರತಿಭಟನೆ ಹಾಗೂ ಹಾಸ್ಟೆಲ್ ಮೂಲಸೌಕರ್ಯಕ್ಕೆ ಸಂಬಂಧಿಸಿದ ಪ್ರತಿಭಟನೆಯ ಸಂದರ್ಭದಲ್ಲಿ ಆರಂಭಿಸಲಾಗಿದ್ದ ಶಿಸ್ತು ವಿಚಾರಣೆಗಳನ್ನು ಹಿಂಪಡೆಯಲಾಗುವುದು.
ಇದು ಮಾತ್ರವಲ್ಲದೆ, ವಸತಿ ನಿಲಯದ (ಹಾಸ್ಟೆಲ್) ಮೀಸಲಾತಿ ಮತ್ತು ಅದರ ರಚನೆ, ಗ್ರಂಥಾಲಯದ (ಲೈಬ್ರರಿ) ಸಮಯ ಹಾಗೂ ಸಿಎಸ್‌ಎಲ್‌ಜಿಯಲ್ಲಿ ಕ್ಯಾಂಟೀನ್ ತೆರೆಯುವ ಕುರಿತು ಚರ್ಚೆಗಳನ್ನು ಸಹ ನಡೆಸಲಾಗಿದೆ ಎಂದು ವರದಿಯಾಗಿದೆ.
ಜೆಎನ್‌ಯುಎಸ್‌ಯು ಸದಸ್ಯರು ಅಮಾನತುಗೊಂಡಿದ್ದ ಪದಾಧಿಕಾರಿಗಳನ್ನು ಮರುಸೇರ್ಪಡೆಗೊಳಿಸಬೇಕೆಂದು ಒತ್ತಾಯಿಸುತ್ತಿದ್ದರು. ಪಿಟಿಐಸುದ್ದಿ ಸಂಸ್ಥೆಯ ಪ್ರಕಾರ, ವಿದ್ಯಾರ್ಥಿ ಸಂಘಟನೆಯು ತಾನು ಕೇವಲ ಒಂದು ವಿದ್ಯಾರ್ಥಿ ಗುಂಪಲ್ಲ, ಬದಲಿಗೆ ಸುಮಾರು 9,000 ವಿದ್ಯಾರ್ಥಿಗಳ ಬೆಂಬಲ ಹೊಂದಿರುವ ಚುನಾಯಿತ ಪ್ರಾತಿನಿಧಿಕ ಸಂಸ್ಥೆಯಾಗಿದೆ ಎಂದು ವಾದಿಸಿದೆ. ಇದರ ಪ್ರತಿನಿಧಿಗಳನ್ನು ಸ್ವತಂತ್ರ ಚುನಾವಣಾ ಸಮಿತಿಗಳ ಮೂಲಕ ಆಯ್ಕೆ ಮಾಡಲಾಗಿದ್ದು, ವಿದ್ಯಾರ್ಥಿಗಳ ಕಲ್ಯಾಣ ಅಧಿಕಾರಿಯ (ಡೀನ್ ಆಫ್ ಸ್ಟೂಡೆಂಟ್ಸ್) ಕಚೇರಿಯಿಂದ ಅಧಿಸೂಚನೆ ಹೊರಡಿಸಲಾಗಿದೆ ಎಂದು ಅದು ತಿಳಿಸಿದೆ.
ವಿಶ್ವವಿದ್ಯಾನಿಲಯದ ನೇಮಕಾತಿಯಲ್ಲಿ ಭ್ರಷ್ಟಾಚಾರ ನಡೆದಿದೆ ಎಂದು ಆರೋಪಿಸಿರುವ ಸಂಘಟನೆಯು, ತೆರಿಗೆದಾರರ ಹಣವನ್ನು ರಕ್ಷಿಸುವಲ್ಲಿ ಆಡಳಿತ ಮಂಡಳಿಗಿರುವ ಬದ್ಧತೆಯನ್ನು ಪ್ರಶ್ನಿಸಿದೆ ಎಂದು ವರದಿಯಾಗಿದೆ.
ಸೋಮವಾರ (ಅ.19) ಉಪಕುಲಪತಿ (ವಿ-ಸಿ) ಶಾಂತಿಶ್ರೀ ಧೂಳಿಪುಡಿ ಪಂಡಿತ್ ಅವರು, ಅ.16ರಂದು ಬೆಳಿಗ್ಗೆ 8.50ಕ್ಕೆ ಪ್ರತಿಭಟನಾ ನಿರತ ವಿದ್ಯಾರ್ಥಿಗಳನ್ನು ಭೇಟಿ ಮಾಡಲು ಸಮರ್ಥ ಅಧಿಕಾರಿಯೊಬ್ಬರು ಸಿದ್ಧರಿದ್ದರು, ಆದರೆ ಆ ಸಮಯದಲ್ಲಿ ಸ್ಥಳದಲ್ಲಿ ಯಾರೂ ಇರಲಿಲ್ಲ ಎಂದು ತಿಳಿಸಿದ್ದರು.
ವಿಸಿಯ ಈ ಹೇಳಿಕೆಯನ್ನು ವಿದ್ಯಾರ್ಥಿಗಳು ತಳ್ಳಿಹಾಕಿದ್ದು, ಬೆಳಿಗ್ಗೆ 9 ಗಂಟೆಗೆ ಉಪಕುಲಪತಿಗಳು (ವಿ-ಸಿ) ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿದ ಸಮಯವನ್ನು ಪ್ರಶ್ನಿಸಿದ್ದಾರೆ. ಕೇವಲ ಬೆರಳಣಿಕೆಯಷ್ಟು ವಿದ್ಯಾರ್ಥಿಗಳು ಮಾತ್ರ ಪ್ರತಿಭಟನೆಯಲ್ಲಿ ಪಾಲ್ಗೊಳ್ಳುತ್ತಿದ್ದಾರೆ ಎಂಬ ಭ್ರಮೆಯನ್ನು ಸೃಷ್ಟಿಸುವ ಉದ್ದೇಶದಿಂದ ಈ ರೀತಿ ಮಾಡಲಾಗಿದೆ ಎಂದು ಅವರು ಆರೋಪಿಸಿದ್ದಾರೆ.
ಉಪವಾಸ ಸತ್ಯಾಗ್ರಹದ ಸಮಯದಲ್ಲಿ ಅಮಾನತುಗೊಂಡಿದ್ದ ತಮ್ಮ ಪದಾಧಿಕಾರಿಗಳಿಗೆ ವೈದ್ಯಕೀಯ ತಪಾಸಣೆಯನ್ನು ನಿರಾಕರಿಸಲಾಗಿತ್ತು ಎಂದು ಜೆಎನ್‌ಯುಎಸ್‌ಯು ಆರೋಪಿಸಿದೆ. ಇದಕ್ಕೆ ವಿರುದ್ಧವಾಗಿ ಉಪಕುಲಪತಿಗಳು (ವಿ-ಸಿ), ಆಡಳಿತ ಮಂಡಳಿಯು “ಅತ್ಯಂತ ಪ್ರಜಾಸತ್ತಾತ್ಮಕವಾಗಿ ಮತ್ತು ಮಾನವೀಯವಾಗಿ” ನಡೆದುಕೊಂಡಿದೆ ಹಾಗೂ “20 ಲಕ್ಷ ರೂಪಾಯಿ ಮೌಲ್ಯದ ಸಾರ್ವಜನಿಕ ಆಸ್ತಿ” ನಾಶವಾಗಿದ್ದರೂ ಸಹ ಅಮಾನತುಗೊಂಡ ವಿದ್ಯಾರ್ಥಿಗಳ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಹೇಳಿದ್ದಾರೆ.


