ಪ್ರತಿಭಟನಾ ಸ್ಥಳವಲ್ಲ ಎಂದು ಅಧಿಸೂಚನೆ ಹೊರಡಿಸಲಾಗಿರುವ ಜಂತರ್ ಮಂತರ್ನಲ್ಲಿ ರಾಷ್ಟ್ರಧವಜ ಹಾರಿಸಿ ಬಂಧನಕ್ಕೊಳಗಾಗಿದ್ದ ಕಾಕ್ರೋಚ್ ಜನತಾ ಪಕ್ಷದ (ಸಿಜೆಪಿ) ಮುಖಂಡರಾದ ಸೌರವ್ ದಾಸ್ ಮತ್ತು ಅಶುತೋಷ್ ರಂಕಾ, ವಿಶೇಷ ಕಾರ್ಯನಿರ್ವಾಹಕ ಮ್ಯಾಜಿಸ್ಟ್ರೇಟ್ (ಎಸ್ಇಎಂ) ಆದೇಶಿಸಿದ ನ್ಯಾಯಾಂಗ ಬಂಧನವನ್ನು ಪ್ರಶ್ನಿಸಿ ದೆಹಲಿ ಹೈಕೋರ್ಟ್ನಲ್ಲಿ ಸಲ್ಲಿಸಿದ್ದ ತಮ್ಮ ಅರ್ಜಿಯನ್ನು ಬುಧವಾರ ವಾಪಸ್ ಪಡೆದಿದ್ದಾರೆ.
ಅರ್ಜಿಯ ಗುಣಮಟ್ಟದ ಕುರಿತು ಯಾವುದೇ ಅಭಿಪ್ರಾಯ ವ್ಯಕ್ತಪಡಿಸದ ಹೈಕೋರ್ಟ್ ಅರ್ಜಿಯನ್ನು ಹಿಂಪಡೆಯಲು ಅವಕಾಶ ನೀಡಿತು.
ಆದರೆ, ದೆಹಲಿ ಹೈಕೋರ್ಟ್ ಸೌರವ್ ದಾಸ್ ಮತ್ತು ಆಶುತೋಶ್ ರಾಂಕಾ ಅವರನ್ನು ತೀವ್ರ ತರಾಟೆಗೆ ತೆಗೆದುಕೊಂಡಿತು. ಅವರ ವಯಸ್ಸಿನ ಬಗ್ಗೆ ವಿಚಾರಿಸಿದ ನ್ಯಾಯಾಲಯ, ಆ ಇಬ್ಬರು ಜೆನ್-ಝೀ ಅಲ್ಲ ಎಂಬುದನ್ನು ಒತ್ತಿಹೇಳಿತು. ದಾಸ್ ಅವರಿಗೆ 27 ವರ್ಷ ಹಾಗೂ ರಂಕಾ ಅವರಿಗೆ 31 ವರ್ಷ ವಯಸ್ಸಾಗಿದ್ದು, 1997ರ ನಂತರ ಜನಿಸಿದವರು ಜೆನ್-ಝೀ ಎಂದು ಪರಿಗಣಿಸಲ್ಪಡುತ್ತಾರೆ ಎಂಬ ಮಾಹಿತಿಯನ್ನು ನ್ಯಾಯಾಲಯಕ್ಕೆ ನೀಡಲಾಯಿತು.
ಪ್ರತಿಭಟನಾಕಾರರು ಮತ್ತು ಅವರ ಉದ್ದೇಶಗಳು ಏನೆಂಬುದನ್ನು ಪರಿಶೀಲಿಸುವುದು ಅತ್ಯಗತ್ಯವಾಗಿರುವುದರಿಂದ ಈ ಪ್ರಶ್ನೆಗಳು ಪ್ರಾಮುಖ್ಯತೆ ಪಡೆಯುತ್ತವೆ ಎಂದು ಹೈಕೋರ್ಟ್ ತಿಳಿಸಿದೆ. ಜನರಿಗೆ ಪ್ರತಿಭಟಿಸುವ ಹಕ್ಕಿದೆ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿತಾದರೂ, ಪ್ರಜಾಪ್ರಭುತ್ವದಲ್ಲಿ ವ್ಯವಸ್ಥೆಯಲ್ಲಿ ಬದಲಾವಣೆಯು ಚುನಾವಣೆಗಳ ಮೂಲಕ ಬರುತ್ತದೆ ಎಂದು ಹೇಳಿತು. ಅಲ್ಲದೆ, ಅಧಿಕಾರಿಗಳು ದಾಸ್ ಮತ್ತು ರಾಂಕಾ ಅವರೊಂದಿಗೆ ಸೌಮ್ಯತೆಯಿಂದ ವರ್ತಿಸಿದ್ದಾರೆ ಎಂದು ನ್ಯಾಯಾಲಯ ತಿಳಿಸಿತು.
ಪ್ರಕರಣದ ವಿಚಾರಣೆ ನಡೆಸುತ್ತಿದ್ದ ದೆಹಲಿ ಹೈಕೋರ್ಟ್ನ ನ್ಯಾಯಮೂರ್ತಿ ಸುಬ್ರಮಣ್ಯಂ ಪ್ರಸಾದ್ ಅವರು, ಸೌರವ್ ಮತ್ತು ಆಶುತೋಶ್ ಅವರು ಎಸ್ಇಎಂ ಜೊತೆ ಈ ಹಿಂದೆ ಮಾಡಿಕೊಂಡಿದ್ದ ಮುಚ್ಚಳಿಕೆಯನ್ನು ಉಲ್ಲಂಘಿಸಿದ್ದಾರೆ ಎಂಬುದನ್ನು ಒತ್ತಿ ಹೇಳಿದರು. ಇಬ್ಬರೂ ಮೊದಲು ಮೇಲ್ಮನವಿ ನ್ಯಾಯಾಲಯದ ಮೊರೆ ಹೋಗಬೇಕು, “ನಂತರ ಕಾನೂನು ಪ್ರಕಾರ ನಿಮಗೆ ಏನು ಲಭ್ಯವಿದೆ ಎಂಬುದನ್ನು ನೋಡಿಕೊಳ್ಳಬೇಕು” ಎಂದು ಸಲಹೆ ನೀಡಿದರು.
“ನೀವು ವಾಸ್ತವವಾಗಿ ಮುಚ್ಚಳಿಕೆಯನ್ನು ಮುರಿದಿರುವ ವ್ಯಕ್ತಿ… ನಿಮ್ಮ ಪರಿಹಾರವು ವಾಸ್ತವವಾಗಿ ಮೇಲ್ಮನವಿಯಲ್ಲಿದೆ” ಎಂದು ‘ಬಾರ್ ಅಂಡ್ ಬೆಂಚ್’ ವರದಿ ಮಾಡಿರುವಂತೆ ನ್ಯಾಯಾಲಯ ತಿಳಿಸಿದೆ. “ಸಮರ್ಥನೀಯತೆ ಮತ್ತು ವಿಚಾರಣೆಗೆ ಅರ್ಹತೆ ನಡುವೆ ವ್ಯತ್ಯಾಸವಿದೆ; ಸಮರ್ಥನೀಯವಾಗಿದೆ. ಅಲ್ಲಿಂದ 2 ಕಿಲೋಮೀಟರ್ ಮತ್ತು ಇಲ್ಲಿಂದ 2 ಕಿಲೋಮೀಟರ್ (ಅಧಿಕಾರ ವ್ಯಾಪ್ತಿಯ ನ್ಯಾಯಾಲಯ) ನಡುವಿನ ವ್ಯತ್ಯಾಸ ನನಗೆ ಕಾಣುತ್ತಿಲ್ಲ. ಇದು ಮೇಲ್ಮನವಿ ಸಲ್ಲಿಸಬಹುದಾದ ಆದೇಶವಾಗಿದ್ದಾಗ ಆರ್ಟಿಕಲ್ 226 ರ ಅಡಿಯಲ್ಲಿ ಏಕೆ ಬರಬೇಕು?” ಎಂದು ಪ್ರಶ್ನಿಸಿತು.


