ಪ್ರಸ್ತುತ ಇಡೀ ದೇಶದ ಜನರ ಆಕ್ರೋಶಕ್ಕೆ ಗುರಿಯಾಗಿರುವ ಮುಖ್ಯ ಚುನಾವಣಾ ಆಯುಕ್ತ (ಸಿಇಸಿ) ಗ್ಯಾನೇಶ್ ಕುಮಾರ್ ಅವರ ಸಹೋದರ ಮನೀಶ್ ಕುಮಾರ್ ಮುಖ್ಯ ಆಯುಕ್ತರಾಗಿರುವ ದೆಹಲಿ ವಿಮಾನ ನಿಲ್ದಾಣದ ಕಸ್ಟಮ್ಸ್ನಲ್ಲಿ ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಅವರನ್ನು ಅಧಿಕಾರಿಗಳು ಮೂರು ಗಂಟೆಗಳ ಕಾಲ ತಡೆದು ನಿಲ್ಲಿಸಿದ್ದಲ್ಲದೆ, 50 ಸಾವಿರ ರೂಪಾಯಿ ದಂಡ ವಿಧಿಸಿದ್ದಾರೆ ಎಂದು ಹೇಳಲಾಗ್ತಿದೆ. ‘ಇದು ನಿಜವೇ’..? ಎಂದು ಆಮ್ ಆದ್ಮಿ ಪಕ್ಷ (ಎಎಪಿ) ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಪ್ರಶ್ನಿಸಿದ್ದಾರೆ.
ದೆಹಲಿ ಕಸ್ಟಮ್ಸ್ ಮುಖ್ಯಸ್ಥರು ಮತ್ತು ಸಿಇಸಿ ನಡುವಿನ ಸಂಬಂಧಕ್ಕೆ ಸಂಬಂಧಿಸಿದ ಈ ವಿಷಯವನ್ನು, ಕಸ್ಟಮ್ಸ್ ಹಾಗೂ ಇತರ ಆರ್ಥಿಕ ವಿಷಯಗಳ ಕುರಿತು ಕೆಲಸ ಮಾಡುವ ವಕೀಲರಾದ @ramakantgaur ಅವರು ಮೊದಲು ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಪ್ರಸ್ತಾಪಿಸಿದ್ದರು.
ಭಾರತೀಯ ಕಂದಾಯ ಸೇವೆಯ (ಐಆರ್ಎಸ್) ಅಧಿಕಾರಿಯಾಗಿರುವ ಮನೀಶ್, ಗ್ಯಾನೇಶ್ ಕುಮಾರ್ ಅವರ ಕುಟುಂಬದಲ್ಲಿರುವ ಅನೇಕ ನಾಗರಿಕ ಸೇವಾ ಅಧಿಕಾರಿಗಳಲ್ಲಿ ಒಬ್ಬರು. ಆಡಳಿತ ಪಕ್ಷಕ್ಕೆ ಸಿಇಸಿ ಎಷ್ಟರ ಮಟ್ಟಿಗೆ ‘ಸಹಾಯ’ ಮಾಡಿದ್ದಾರೆ ಎಂಬ ಬಗ್ಗೆ ರಾಜಕೀಯ ಪಕ್ಷಗಳು ಗಂಭೀರ ಪ್ರಶ್ನೆಗಳನ್ನು ಎತ್ತುತ್ತಿದ್ದು, ಈ ಮೂಲಕ ಸಿಇಸಿ ಸರ್ಕಾರದಿಂದ ‘ರಕ್ಷಣೆ’ ಪಡೆಯಲು ಯತ್ನಿಸುತ್ತಿದ್ದಾರೆ ಎಂಬ ಚರ್ಚೆಯು ಸಾರ್ವಜನಿಕ ವಲಯದಲ್ಲಿ ನಡೆಯುತ್ತಿದೆ; ಈ ಚರ್ಚೆಯ ಸುಳಿಗೆ ಮನೀಶ್ ಕೂಡ ಸಿಲುಕಿಕೊಂಡಿದ್ದಾರೆ.
ಅಕ್ಟೋಬರ್ 19ರಂದು ಪಂಜಾಬ್ ಸಿಎಂ ಪ್ಯಾರಿಸ್ನಿಂದ ಹಿಂತಿರುಗುತ್ತಿದ್ದರು; ಅವರು ಅಲ್ಲಿ ಆಹಾರ ವ್ಯಾಪಾರ ಮೇಳವೊಂದರಲ್ಲಿ ಭಾಗವಹಿಸಲು ಮತ್ತು ಪಂಜಾಬ್ನ ಉತ್ಪನ್ನಗಳನ್ನು ಪ್ರಚಾರ ಮಾಡಲು ಹೋಗಿದ್ದರು. ದೆಹಲಿಯ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂದಿಳಿದಾಗ, ಕಸ್ಟಮ್ಸ್ ಅಧಿಕಾರಿಗಳು ಅವರನ್ನು ಮೂರು ಗಂಟೆಗಳ ಕಾಲ ತಡೆಹಿಡಿದು, 50,000 ರೂಪಾಯಿ ದಂಡ ವಿಧಿಸಿದ್ದಾರೆ ಎನ್ನಲಾಗಿದೆ. ‘ಇಂಡಿಯನ್ ಎಕ್ಸ್ಪ್ರೆಸ್’ ವರದಿಯ ಪ್ರಕಾರ, “ಮಾನ್ ಅವರ ಲಗೇಜ್ನಲ್ಲಿ ಪಾದರಕ್ಷೆ, ಬೆಲ್ಟ್, ಬಟ್ಟೆಗಳು, ದೈನಂದಿನ ಬಳಕೆಯ ಕೈಗಡಿಯಾರಗಳು ಮತ್ತು ಆಭರಣಗಳಂತಹ ‘ದೈನಂದಿನ ಬಳಕೆಯ ವಸ್ತುಗಳು’ ಇದ್ದವು”.
ಬಿಜೆಪಿ ಮಾನ್ ಅವರನ್ನು ‘ಅವಮಾನಿಸಲು’ ಮತ್ತು ‘ಪಂಜಾಬ್ನ ಘನತೆಯನ್ನು ಕುಗ್ಗಿಸಲು’ ಉದ್ದೇಶಪೂರ್ವಕವಾಗಿ ಈ ಪ್ರಯತ್ನ ನಡೆಸಿದೆ ಎಂದು ಎಎಪಿ ಆರೋಪಿಸಿದೆ. “ರಾಜ್ಯವೊಂದರ ಮುಖ್ಯಮಂತ್ರಿಯನ್ನು ವಿಮಾನ ನಿಲ್ದಾಣದಲ್ಲಿ ಮೂರು ಗಂಟೆಗಳ ಕಾಲ ಕಾಯುವಂತೆ ಮಾಡಿ, ನಂತರ ಕೇವಲ 50,000 ರೂಪಾಯಿಗಳ ದಂಡ ವಿಧಿಸಿದ ಘಟನೆ ಎಂದಾದರೂ ನಡೆದಿದೆಯೇ?” ಎಂದು ಎಎಪಿ ಪ್ರಧಾನ ಕಾರ್ಯದರ್ಶಿ ಬಲ್ತೇಜ್ ಪನ್ನು ಅವರು ವಿಡಿಯೋ ಹೇಳಿಕೆಯಲ್ಲಿ ಪ್ರಶ್ನಿಸಿದ್ದಾರೆ.
ಸಿಇಸಿ ಕೈಗೊಂಡ ನಿರ್ಧಾರಗಳನ್ನು ಚುನಾವಣಾ ಆಯೋಗದ ಹೆಸರಿನಲ್ಲಿ ಜಾರಿಗೊಳಿಸುವುದಕ್ಕೆ, ಇತರ ಇಬ್ಬರು ಚುನಾವಣಾ ಆಯುಕ್ತರಾದ ಸುಖಬೀರ್ ಸಿಂಗ್ ಸಂಧು ಮತ್ತು ವಿವೇಕ್ ಜೋಶಿ ಅವರು ಕನಿಷ್ಠ 14 ಬಾರಿ ಆಕ್ಷೇಪ ವ್ಯಕ್ತಪಡಿಸಿದ್ದರು ಎಂಬ ವಿಷಯ ಬೆಳಕಿಗೆ ಬಂದಾಗಿನಿಂದಲೂ, ಸಿಇಸಿ ಎಲ್ಲೂ ಸಾರ್ವಜನಿಕವಾಗಿ ಕಾಣಿಸಿಕೊಂಡಿಲ್ಲ. ಆದರೆ, ಅವರ ಸಂಬಂಧಿಕರೊಬ್ಬರು ರಾಜಕೀಯ ವಿವಾದವೊಂದರಲ್ಲಿ ಸಿಲುಕಿಕೊಂಡಿರುವುದು ಇದೇ ಮೊದಲ ಬಾರಿಯೇನಲ್ಲ.
ತಮ್ಮ ಕೆಲಸದ ವಿಚಾರಕ್ಕೆ ಪ್ರಶ್ನೆಗೆ ಒಳಗಾದವರಲ್ಲಿ ಗೌತಮ್ ಬುದ್ಧ ನಗರ ಜಿಲ್ಲಾ ಮ್ಯಾಜಿಸ್ಟ್ರೇಟ್ ಆಗಿರುವ ಗ್ಯಾನೇಶ್ ಕುಮಾರ್ ಅವರ ಮಗಳು ಮೇಧಾ ರೂಪಂ ಕೂಡ ಒಬ್ಬರು. ಕೆಲಸದ ಪರಿಸ್ಥಿತಿ ಕುರಿತು ನೋಯ್ಡಾದಲ್ಲಿ ಕಾರ್ಮಿಕರು ನಡೆಸಿದ ಪ್ರತಿಭಟನೆ ಸಂಬಂಧ ಹೋರಾಟಗಾರ ಮೇಲೆ ರಾಷ್ಟ್ರೀಯ ಭದ್ರತಾ ಕಾಯ್ದೆಯನ್ನು (ಎನ್ಎಸ್ಎ) ಜಾರಿಗೊಳಿಸಲು ರೂಪಂ ಅವರ ಆದೇಶಗಳೇ ಕಾರಣವಾಗಿದ್ದವು. ಈ ಪ್ರಕರಣದಲ್ಲಿ ಅವರ ಆದೇಶವೊಂದನ್ನು ಅಲಹಾಬಾದ್ ಹೈಕೋರ್ಟ್ ರದ್ದುಗೊಳಿಸಿತಲ್ಲದೆ, ರೂಪಂ ಅವರಿಗೆ ದಂಡವನ್ನು ವಿಧಿಸಿತು ಮತ್ತು ಅವರ ನಿರ್ಧಾರವನ್ನು ಕಠಿಣವಾಗಿ ತರಾಟೆಗೆ ತೆಗೆದುಕೊಂಡಿತ್ತು. ಸುಪ್ರೀಂ ಕೋರ್ಟ್ ದಂಡಕ್ಕೆ ತಡೆಯಾಜ್ಞೆ ನೀಡಿದ್ದರೂ, ಎನ್ಎಸ್ಎ ಆದೇಶಗಳನ್ನು ರದ್ದುಗೊಳಿಸಿರುವ ಹೈಕೋರ್ಟ್ ತೀರ್ಪು ಹಾಗೇ ಉಳಿದುಕೊಂಡಿದೆ. ದೇಶದ ಅತ್ಯುನ್ನತ ಕಾನೂನು ಅಧಿಕಾರಿಯಾದ ಸಾಲಿಸಿಟರ್ ಜನರಲ್ ಅವರ ಪರವಾಗಿ ವಾದ ಮಂಡಿಸಲು ಬಂದಿದ್ದು ಮತ್ತು ವಾದ-ಪ್ರತಿವಾದಗಳು ನಡೆಯುತ್ತಿದ್ದಂತೆ ವರ್ಚುವಲ್ ಕೋರ್ಟ್ನ ಆಡಿಯೋವನ್ನು ಮ್ಯೂಟ್ (ಮೌನ) ಮಾಡಲು ಸರ್ವೋಚ್ಚ ನ್ಯಾಯಾಲಯವು ಸೂಚಿಸಿದ ವಿಷಯವು ಸಾರ್ವಜನಿಕರ ಗಮನ ಸೆಳೆದಿದ್ದಲ್ಲದೆ ತೀವ್ರ ಆಕ್ರೋಶಕ್ಕೂ ಕಾರಣವಾಗಿತ್ತು.
ಮನೀಶ್ ಕುಮಾರ್ ಅವರು 1992ರ ಬ್ಯಾಚ್ನ ಐಆರ್ಎಸ್ ಅಧಿಕಾರಿಯಾಗಿದ್ದು, ಜೂನ್ 2025ರಿಂದ ಕಸ್ಟಮ್ಸ್ ಮತ್ತು ಪರೋಕ್ಷ ತೆರಿಗೆಗಳ ಮುಖ್ಯ ಆಯುಕ್ತರಾಗಿ ನಿಯೋಜನೆಗೊಂಡಿದ್ದಾರೆ.
ಮಾನ್ ಅವರಿಗೆ ವಿಧಿಸಲಾದ ದಂಡದ ಕುರಿತು ವಿವರಗಳನ್ನು ಕೋರಿ ದೆಹಲಿ ಕಸ್ಟಮ್ಸ್ ವಲಯವನ್ನು ಸಂಪರ್ಕಿಸಲಾಗಿದೆ. ಪ್ರತಿಕ್ರಿಯೆ ಬಂದ ನಂತರ ವರದಿಯನ್ನು ಅಪ್ಡೇಟ್ ಮಾಡುತ್ತೇವೆ ಎಂದು thewire.in ಹೇಳಿದೆ. ಅಕ್ಟೋಬರ್ 21 ರಿಂದ ದೆಹಲಿ ಕಸ್ಟಮ್ಸ್ ವೆಬ್ಸೈಟ್ ಕಾರ್ಯನಿರ್ವಹಿಸುತ್ತಿಲ್ಲ ಎಂದು ತಿಳಿಸಿದೆ.


