ತಮಿಳುನಾಡಿನ ಕೊಯಮತ್ತೂರಿನಲ್ಲಿ 11ನೇ ತರಗತಿಯ ದಲಿತ ವಿದ್ಯಾರ್ಥಿಯೊಬ್ಬ ಶಾಲೆಯ ಪೂಜಾ ರಜೆ ಮುಗಿಸಿ ಮರಳಿ ಶಾಲೆಗೆ ತೆರಳಿದ ದಿನವೇ ಮನೆಯಲ್ಲಿ ಶವವಾಗಿ ಪತ್ತೆಯಾಗಿದ್ದಾನೆ. ಶಾಲೆಯಲ್ಲಿ ತನ್ನ ಮಗ ಜಾತಿ ಆಧಾರಿತ ತಾರತಮ್ಯವನ್ನು ಎದುರಿಸುತ್ತಿದ್ದ ಎಂದು ಪೋಷಕರು ಆರೋಪಿಸಿದ್ದಾರೆ. ವಿದ್ಯಾರ್ಥಿಯ ಸಾವನ್ನು ಆತ್ಮಹತ್ಯೆ ಪ್ರಕರಣವೆಂದು ಪರಿಗಣಿಸಿರುವ ಪೊಲೀಸರು, ಪೋಷಕರು ಮಾಡಿರುವ ಆರೋಪಗಳ ಕುರಿತು ತನಿಖೆ ನಡೆಸುತ್ತಿದ್ದಾರೆ.
ವಿದ್ಯಾರ್ಥಿಯ ಸಾವಿನ ಬಳಿಕ ಪೋಷಕರು ಸಲ್ಲಿಸಿದ ಪೊಲೀಸ್ ದೂರಿನಲ್ಲಿ, ಅನುದಾನಿತ ಶಾಲೆಯಲ್ಲಿ ತಮ್ಮ ಮಗನಿಗೆ ತಾರತಮ್ಯದ ವರ್ತನೆ ತೋರಲಾಗುತ್ತಿತ್ತು ಎಂದು ಆರೋಪಿಸಿದ್ದಾರೆ. ಘಟನೆಯ ಬಳಿಕ ಕೆಲವು ವಿದ್ಯಾರ್ಥಿಗಳು ಆತನೊಂದಿಗೆ ಮಾತನಾಡುವುದನ್ನೂ ನಿಲ್ಲಿಸಿದ್ದರು. ಇದರಿಂದ ಆತ ಮಾನಸಿಕವಾಗಿ ನೊಂದಿದ್ದ ಎಂದು ಪೋಷಕರು ದೂರಿನಲ್ಲಿ ತಿಳಿಸಿದ್ದಾರೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ (ದೌರ್ಜನ್ಯ ತಡೆ) ಕಾಯ್ದೆಯ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಶಾಲೆಯ ಮುಖ್ಯೋಪಾಧ್ಯಾಯರು, ತರಗತಿ ಶಿಕ್ಷಕರು ಹಾಗೂ ಇತರರ ಪಾತ್ರದ ಕುರಿತು ತನಿಖೆ ನಡೆಯುತ್ತಿದೆ.
“ಶಾಲೆ, ಮುಖ್ಯೋಪಾಧ್ಯಾಯರು, ತರಗತಿ ಶಿಕ್ಷಕರು ಮತ್ತು ಇತರರ ಪಾತ್ರದ ಕುರಿತು ತನಿಖೆ ನಡೆಸುತ್ತಿದ್ದೇವೆ. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ (ದೌರ್ಜನ್ಯ ತಡೆ) ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದೇವೆ” ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ ಎಂದು ಎನ್‌ಡಿಟಿವಿ ವರದಿ ಮಾಡಿದೆ.
ಯಾರಾದಾರೂ ಶಿಕ್ಷಕರನ್ನು ಬಂಧಿಸಲಾಗಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, “ಅಗತ್ಯವಿದ್ದರೆ ಬಂಧಿಸುತ್ತೇವೆ” ಎಂದು ಹೇಳಿದ್ದಾರೆ.
ವಿದ್ಯಾರ್ಥಿಯ ಸಾವಿಗೂ ಮುನ್ನ ಪೋಷಕರು ಪೊಲೀಸರಿಗೆ ದೂರು ನೀಡಿರಲಿಲ್ಲ. ಆದರೆ, ಶಾಲೆಯ ಆಡಳಿತ ಮಂಡಳಿಯ ಗಮನಕ್ಕೆ ಸಮಸ್ಯೆಯನ್ನು ತಂದಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಈ ವಿಚಾರದಲ್ಲಿ ಶಾಲೆಯ ಕಡೆಯಿಂದ ಅಲ್ಪಮಟ್ಟಿನ ಮಧ್ಯಪ್ರವೇಶವಷ್ಟೇ ನಡೆದಿತ್ತು ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಕುಟುಂಬದ ಜಾತಿ ಮತ್ತು ಆಹಾರ ಪದ್ಧತಿಗೆ ಸಂಬಂಧಿಸಿದಂತೆ ವಿದ್ಯಾರ್ಥಿಯ ವಿರುದ್ಧ ತಾರತಮ್ಯ ನಡೆದಿರಬಹುದು ಎಂದು ಮೂಲಗಳು ಸೂಚಿಸಿವೆ. ಆದರೆ, ಈ ವಿವರಗಳು ತನಿಖೆಯ ಆರಂಭಿಕ ಹಂತದಲ್ಲಿದ್ದು, ಸ್ವತಂತ್ರವಾಗಿ ದೃಢಪಟ್ಟಿಲ್ಲ.
ವಿದ್ಯಾರ್ಥಿಯ ಸಾವಿಗೆ ಕಾರಣವಾದ ಸಂದರ್ಭಗಳು ಹಾಗೂ ಶಾಲೆಯಲ್ಲಿ ನಡೆದಿದೆ ಎನ್ನಲಾದ ಜಾತಿ ತಾರತಮ್ಯದ ಆರೋಪಗಳ ಕುರಿತು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
ಕೊಯಮತ್ತೂರಿನ ಶಾಲೆಗಳಲ್ಲಿ ಜಾತಿ ಆಧಾರಿತ ತಾರತಮ್ಯ ನಡೆದಿದೆ ಎಂಬ ಆರೋಪಗಳು ಈ ಹಿಂದೆಯೂ ಕೇಳಿಬಂದಿದ್ದವು. ಕಳೆದ ವರ್ಷ, ಮುಟ್ಟಿನ ಅವಧಿಯಲ್ಲಿದ್ದ ದಲಿತ ವಿದ್ಯಾರ್ಥಿನಿಯೊಬ್ಬಳನ್ನು ತರಗತಿಯ ಹೊರಗಿನ ಮೆಟ್ಟಿಲುಗಳ ಮೇಲೆ ಕುಳಿತು ಪರೀಕ್ಷೆ ಬರೆಯುವಂತೆ ಒತ್ತಾಯಿಸಿದ ಆರೋಪದ ಹಿನ್ನೆಲೆಯಲ್ಲಿ ಖಾಸಗಿ ಶಾಲೆಯೊಂದರ ಮುಖ್ಯೋಪಾಧ್ಯಾಯರನ್ನು ಅಮಾನತುಗೊಳಿಸಲಾಗಿತ್ತು.


