ಮಹತ್ವದ ಬೆಳವಣಿಗೆಯಲ್ಲಿ, ಹೌತಿ ಬಂಡುಕೋರರು ಯೆಮನ್‌ನ ಇಡೀ ಕೆಂಪು ಸಮುದ್ರದ (ರೆಡ್ ಸೀ) ಕರಾವಳಿಯನ್ನು ತಮ್ಮ ನಿಯಂತ್ರಣಕ್ಕೆ ತೆಗೆದುಕೊಂಡಿದ್ದಾರೆ ಎಂದು ವರದಿಯಾಗಿದೆ.
ಇರಾನ್ ಬೆಂಬಲಿತ ಹೌತಿ ಸಶಸ್ತ್ರ ಪಡೆಗಳು ಯೆಮನ್ ಸರ್ಕಾರದ ನಿಯಂತ್ರಣದಲ್ಲಿದ್ದ ಕೊನೆಯ ಕರಾವಳಿ ಪ್ರದೇಶಗಳನ್ನು ವಶಪಡಿಸಿಕೊಳ್ಳುವ ಮೂಲಕ ಈ ಮಹತ್ವದ ಮುನ್ನಡೆಯನ್ನು ಸಾಧಿಸಿವೆ ಎಂದು ವರದಿಗಳು ಹೇಳಿವೆ.
ಈ ಬೆಳವಣಿಗೆಯಿಂದಾಗಿ ಜಾಗತಿಕ ಹಡಗು ಸಾರಿಗೆಯ ಅತ್ಯಂತ ಪ್ರಮುಖ ಜಲಮಾರ್ಗವಾಗಿರುವ ‘ಬಾಬ್ ಅಲ್-ಮಂದೇಬ್’ ಜಲಸಂಧಿಯ ಮೇಲೆ ಹೌತಿಗಳು ಸಂಪೂರ್ಣ ಹಿಡಿತ ಸಾಧಿಸಿದಂತಾಗಿದೆ, ಇದು ಅಂತಾರಾಷ್ಟ್ರೀಯ ವ್ಯಾಪಾರ ಮತ್ತು ಪ್ರಾದೇಶಿಕ ಭದ್ರತೆಯ ಮೇಲೆ ತೀವ್ರ ಪರಿಣಾಮ ಬೀರುವ ಸಾಧ್ಯತೆ ಇದೆ.
ಶುಕ್ರವಾರ (ಸೆ.11) ಮುಂಜಾನೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮನ್ನಣೆ ಪಡೆದ ಯೆಮನ್ ಸರ್ಕಾರದ ಪಡೆಗಳ ವಿರುದ್ಧ ತೀವ್ರವಾಗಿ ಮುನ್ನುಗ್ಗಿದ ಈ ಬಂಡುಕೋರರ ಗುಂಪು, ಕರಾವಳಿಯಲ್ಲಿದ್ದ ಕೊನೆಯ ಪಟ್ಟಣಗಳನ್ನು ವಶಪಡಿಸಿಕೊಂಡಿದೆ. ಅಷ್ಟೇ ಅಲ್ಲದೆ, ಅವರು ‘ಬಾಬ್ ಅಲ್-ಮಂದೇಬ್’ ಜಲಸಂಧಿಯಲ್ಲಿರುವ ದ್ವೀಪಗಳ ಕಡೆಗೂ ನುಗ್ಗಿದ್ದಾರೆ ಎಂದು ಸರ್ಕಾರದ ಮೂಲಗಳು ಮತ್ತು ಪ್ರತ್ಯಕ್ಷದರ್ಶಿಗಳನ್ನು ಉಲ್ಲೇಖಿಸಿ aljazeera.com ವರದಿ ಮಾಡಿದೆ.
ಅಮೆರಿಕ ಮತ್ತು ಇರಾನ್ ನಡುವಿನ ಯುದ್ಧದಿಂದ ಜಾಗತಿಕ ಇಂಧನ ಸಾಗಣೆಯ ಸರಿಸುಮಾರು ಐದನೇ ಒಂದು ಭಾಗದಷ್ಟು ಹಡಗುಗಳು ಹಾದು ಹೋಗುತ್ತಿದ್ದ ‘ಹಾರ್ಮುಝ್ ಜಲಸಂಧಿ’ಯಲ್ಲಿ ಅಡಚಣೆಯಾದಾಗ, ಈ ಜಲಮಾರ್ಗವು ಪರ್ಯಾಯ ಮಾರ್ಗವಾಗಿ ಮಾರ್ಪಟ್ಟಿತ್ತು.
ಹೌತಿ ಬಂಡುಕೋರರು ಗುರುವಾರ (ಸೆ.10) ಮುಂಜಾನೆ ಯೆಮನ್‌ನ ಕರಾವಳಿ ಪಟ್ಟಣವಾದ ಮೊಖಾವನ್ನು ತಲುಪಿದ್ದರು. ನಂತರ ಹತ್ತಿರದ ದ್ವೀಪಗಳನ್ನು ವಶಪಡಿಸಿಕೊಳ್ಳಲು ಸಮುದ್ರದ ಕಡೆಗೆ ಮುನ್ನುಗ್ಗಿದ್ದಾರೆ ಎಂದು ತೈಜ್ ನಗರದಿಂದ aljazeera.comನ ಮಹಾ ಅಲಿ ವರದಿ ಮಾಡಿದ್ದಾರೆ.
ಹೌತಿಗಳು ಬಾಬ್ ಅಲ್-ಮಂದೇಬ್ ಕರಾವಳಿಯಲ್ಲಿರುವ ಧುಬಾಬ್ ಪಟ್ಟಣವನ್ನು ತಲುಪಿದ್ದಾರೆ ಎಂದು ಯೆಮನ್ ಸರ್ಕಾರದ ಮೂಲಗಳನ್ನು ಉಲ್ಲೇಖಿಸಿ ಶುಕ್ರವಾರ (ಸೆ.11) ರಾಯಿಟರ್ಸ್ ವರದಿ ಮಾಡಿತ್ತು.
ಸರ್ಕಾರಿ ಪಡೆಗಳು ಹಿಂತೆಗೆದುಕೊಂಡ ನಂತರ, ಹೌತಿಗಳನ್ನು ಹೊತ್ತ ಬೋಟ್‌ಗಳು ಬಾಬ್ ಅಲ್-ಮಂದೇಬ್ ಜಲಸಂಧಿಯ ಮಧ್ಯಭಾಗದಲ್ಲಿರುವ ಮಯ್ಯೂನ್ ದ್ವೀಪವನ್ನು ತಲುಪಿವೆ ಎಂದು ಸರ್ಕಾರಿ ಅಧಿಕಾರಿಗಳು ದೃಢಪಡಿಸಿರುವುದಾಗಿ ವರದಿಯಾಗಿದೆ.
ಹೌತಿಗಳು ಬಾಬ್ ಅಲ್-ಮಂದೇಬ್ ಪ್ರದೇಶವನ್ನು ಸಂಪೂರ್ಣವಾಗಿ ತಮ್ಮ ಹತೋಟಿಗೆ ತೆಗೆದುಕೊಂಡಿದ್ದಾರೆ ಎಂದು ಮೂಲವೊಂದು ಉಲ್ಲೇಖಿಸಿ ಸುದ್ದಿ ಸಂಸ್ಥೆ ಎಎಫ್‌ಪಿ ವರದಿ ಮಾಡಿದೆ.
ಸನಾ ಮೂಲದ ಯೆಮನ್ ಪ್ರೆಸ್ ಏಜೆನ್ಸಿಯು ಫೀಲ್ಡ್ ಸೋರ್ಸ್ ಉಲ್ಲೇಖಿಸಿ, ಹೌತಿ ಪಡೆಗಳು ಜಲಸಂಧಿಯ ಮೇಲೆ ಕಣ್ಣಿಡಬಹುದಾದ ಆಯಕಟ್ಟಿನ ಜಾಗದಲ್ಲಿರುವ ‘ಅಲ್-ಒಮರಿ’ ಸೇನಾ ಶಿಬಿರವನ್ನು ವಶಪಡಿಸಿಕೊಂಡಿವೆ ಎಂದು ತಿಳಿಸಿದೆ.
ಹೌತಿಗಳ ಮಿಲಿಟರಿ ವಕ್ತಾರ ಬ್ರಿಗೇಡಿಯರ್-ಜನರಲ್ ಯಾಹ್ಯಾ ಸಾರೀ ಅವರು ಎಕ್ಸ್‌ನಲ್ಲಿ ಹಂಚಿಕೊಂಡಿರುವ ಹೇಳಿಕೆಯ ಪ್ರಕಾರ, ಈ ಕಾರ್ಯಾಚರಣೆಯು ಒಟ್ಟು 5,400 ಚದರ ಕಿಲೋಮೀಟರ್ (2,100 ಚದರ ಮೈಲಿ) ವಿಸ್ತೀರ್ಣವನ್ನು ಹೊಂದಿರುವ ಆರು ಜಿಲ್ಲೆಗಳಿಂದ ಸೌದಿ ಬೆಂಬಲಿತ ಪಡೆಗಳನ್ನು ಹೊರಹಾಕಲು ಕಾರಣವಾಗಿದೆ. ಅಷ್ಟೇ ಅಲ್ಲದೆ, 38 ಬ್ರಿಗೇಡ್‌ಗಳನ್ನು ಒಳಗೊಂಡಿದ್ದ ಏಳು ಮಿಲಿಟರಿ ಬ್ರಿಗೇಡ್‌ಗಳ ಮೇಲೆ ದಾಳಿ ನಡೆಸಲಾಗಿದ್ದು, ನೂರಾರು ಸೈನಿಕರು ಸಾವನ್ನಪ್ಪಿದ್ದಾರೆ, ಸೆರೆಹಿಡಿಯಲ್ಪಟ್ಟಿದ್ದಾರೆ ಅಥವಾ ಗಾಯಗೊಂಡಿದ್ದಾರೆ ಎಂದು ಅವರು ತಿಳಿಸಿದ್ದಾರೆ.
ಸನಾದಿಂದ ವರದಿ ಮಾಡಿರುವ aljazeera.comನ ನಬಿಲ್ ಅಲ್-ಯೂಸೆಫಿ ಅವರು, ಬಾಬ್ ಅಲ್-ಮಂದೇಬ್ ಮೇಲಿನ ನಿಯಂತ್ರಣವನ್ನು ದೃಢೀಕರಿಸುವ ಯಾವುದೇ ಅಧಿಕೃತ ಪ್ರಕಟಣೆಯನ್ನು ಹೌತಿ ಪಡೆ ಇದುವರೆಗೆ ಹೊರಡಿಸಿಲ್ಲ ಎಂದು ಹೇಳಿದ್ದಾರೆ.
ಬಾಬ್ ಅಲ್-ಮಂದೇಬ್ ಕೆಂಪು ಸಮುದ್ರದ (ರೆಡ್ ಸೀ) ದಕ್ಷಿಣದ ಪ್ರವೇಶ ದ್ವಾರವಾಗಿದೆ ಮತ್ತು ಸೌದಿ ತೈಲ ಟರ್ಮಿನಲ್‌ಗಳನ್ನು ತಲುಪುವ ಮಾರ್ಗವಾಗಿದೆ. ಇದು ಹಾರ್ಮುಝ್ ಜಲಸಂಧಿಯನ್ನು ತಪ್ಪಿಸಿ ಯುರೋಪ್‌ಗೆ ಕಚ್ಚಾ ತೈಲವನ್ನು ಸಾಗಿಸಲು ಪರ್ಯಾಯ ಮಾರ್ಗವನ್ನು ಒದಗಿಸುತ್ತದೆ. ಈ ಹಿಂದೆ ಹೌತಿಗಳು ಇದೇ ಜಲಮಾರ್ಗದಲ್ಲಿ ಹಡಗುಗಳನ್ನು ಗುರಿಯಾಗಿಸಿಕೊಂಡು ನಡೆಸಿದ ಸರಣಿ ದಾಳಿಗಳ ಸಂದರ್ಭದಲ್ಲಿ, ಕೆಂಪು ಸಮುದ್ರದಲ್ಲಿ ಹಡಗುಗಳ ಸಂಚಾರವು ಗಣನೀಯವಾಗಿ ಕಡಿಮೆಯಾಗಿತ್ತು.


