ದೆಹಲಿಯ ಜನಕಪುರಿಯಲ್ಲಿರುವ ಹಯಾತ್ ಸೆಂಟ್ರಿಕ್ ಹೋಟೆಲ್‌ನಲ್ಲಿ ನಡೆಯುತ್ತಿದ್ದ (ಸೆಪ್ಟೆಂಬರ್ 20 ರಂದು) ಕ್ರಿಶ್ಚಿಯನ್ನರ ಭಾನುವಾರದ ವಾಡಿಕೆಯ ಪ್ರಾರ್ಥನಾ ಸಭೆಗೆ ನುಗ್ಗಿದ ಹಿಂದುತ್ವ ಗುಂಪು ಪ್ರಾರ್ಥನೆಗೆ ಅಡ್ಡಪಿಡಿಸಿದೆ. ಹಿಂದೂಗಳ ಸಾಮೂಹಿಕ ಮತಾಂತರ ನಡೆಯುತ್ತಿದೆ ಎಂದು ಗುಂಪು ಆರೋಪಿಸಿದೆ.
ಪಶ್ಚಿಮ ದೆಹಲಿಯ ಡಿಸಿಪಿ (ಉಪ ಪೊಲೀಸ್ ಆಯುಕ್ತ) ವಿಚಿತ್ರಾ ವೀರ್ ಅವರು ಎಕ್ಸ್‌ನಲ್ಲಿ ನೀಡಿದ ಹೇಳಿಕೆಯಲ್ಲಿ ಮತಾಂತರದ ಆರೋಪಗಳನ್ನು ತಳ್ಳಿಹಾಕಿದ್ದಾರೆ. ಇದು ಕೇವಲ ನಿಯಮಿತ ಭಾನುವಾರದ ಪ್ರಾರ್ಥನೆ ಎಂದು ಸ್ಪಷ್ಟನೆ ನೀಡಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿರುವ ವಿಡಿಯೋದಲ್ಲಿ, ಪ್ರಾರ್ಥನಾ ಹಾಲ್‌ಗೆ ನುಗ್ಗಿದ ಗುಂಪು, ಇಲ್ಲಿ ಧರ್ಮ ಪರಿವರ್ತನೆ ನಡೆಯುತ್ತಿದೆ. ಜನಕಪುರಿಯ ಹಯಾತ್ ಸೆಂಟ್ರಿಕ್ ಹೋಟೆಲ್‌ನಲ್ಲಿ ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರ ಕಾರ್ಯ ನಡೆಯುತ್ತಿದೆ ಎಂದು ಹೇಳುತ್ತಿರುವುದು ಕೇಳಿಬಂದಿದೆ.
ಘಟನೆಯನ್ನು ರೆಕಾರ್ಡ್ ಮಾಡುತ್ತಿದ್ದ ವ್ಯಕ್ತಿಯು ಅಪ್ರಾಪ್ತರನ್ನು ಚಿತ್ರೀಕರಿಸುತ್ತಾ, ಸಭೆಯಲ್ಲಿ ಹಾಜರಿದ್ದ ಮಕ್ಕಳು “ಶೇಕಡಾ 100 ರಷ್ಟು ಹಿಂದೂಗಳು” ಎಂದು ಹೇಳಿದ್ದಾನೆ. ಅಲ್ಲದೆ, ಆಯೋಜಕರು ಮತ್ತು ಸಭಿಕರು ತಮ್ಮ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಆತ ಆರೋಪಿಸಿದ್ದಾನೆ.
“ಇಲ್ಲಿನ ಮಕ್ಕಳು ಶೇ 100ರಷ್ಟು ಹಿಂದೂಗಳು, ಆದರೂ ಅವರನ್ನು ಮತಾಂತರ ಮಾಡುತ್ತಿದ್ದಾರೆ. ನಾವು ಇದನ್ನು ವಿರೋಧಿಸಿದಾಗ ಅವರು ಅಸಭ್ಯವಾಗಿ ವರ್ತಿಸಿದರು. ಇಲ್ಲಿ ಮತಾಂತರ ನಡೆಯುತ್ತಿದೆ. ಕೆಲವರು ಇದನ್ನು ವಿರೋಧಿಸಿದಾಗ ಅವರ ಮೇಲೆ ಹಲ್ಲೆ ಕೂಡ ನಡೆದಿದೆ” ಎಂದು ಆತ ಹೇಳಿದ್ದಾನೆ.
ಭಾನುವಾರದ ಪ್ರಾರ್ಥನಾ ಸಭೆಗೆ ನುಗ್ಗಿದ ಅದೇ ಗುಂಪಿನ ವ್ಯಕ್ತಿಯೊಬ್ಬರು ಮತ್ತೊಂದು ವಿಡಿಯೋದಲ್ಲಿ “ಫಾರ್ಮ್”ಗಳನ್ನು ಪ್ರದರ್ಶಿಸಿದ್ದು, ಸಭೆಯಲ್ಲಿದ್ದ 500 ಹಿಂದೂಗಳನ್ನು ಮತಾಂತರ ಮಾಡಲು ಇವುಗಳನ್ನು ವಿತರಿಸಲಾಗುತ್ತಿದೆ ಎಂದು ಆರೋಪಿಸಿದ್ದಾರೆ. ಕ್ರಿಶ್ಚಿಯನ್ ಆಯೋಜಕರು ಸಾಮೂಹಿಕವಾಗಿ ಮತಾಂತರ ಮಾಡಲು ಜನರಿಗೆ ಹಣದ ಆಮಿಷ ಒಡ್ಡುತ್ತಿದ್ದಾರೆ ಎಂದು ಅವರು ದೂರಿದ್ದಾರೆ.
“ಇಲ್ಲಿ ಅವರಿಂದ ಫಾರ್ಮ್‌ಗಳನ್ನು ತುಂಬಿಸಲಾಗುತ್ತಿದೆ. ಜನರಿಗೆ ಹಣದ ಆಮಿಷವೊಡ್ಡಿ ಮತಾಂತರ ಮಾಡಲಾಗುತ್ತಿದೆ. ಇಲ್ಲಿ ಸಾಮೂಹಿಕ ಮತಾಂತರ ನಡೆಯುತ್ತಿದೆ” ಎಂದು ಅವರು ವಿಡಿಯೋದಲ್ಲಿ ಹೇಳಿದ್ದಾರೆ.
ಮತಾಂತರದ ಆರೋಪ ತಳ್ಳಿಹಾಕಿದ ಡಿಸಿಪಿ
ಆದರೆ, ಆ ಫಾರ್ಮ್‌ಗಳು ಗ್ಲೋಬಲ್ ರಾಯಲ್ ಪ್ರೀಸ್ಟ್‌ಹುಡ್ ಚರ್ಚ್‌ನ ಪ್ರಾರ್ಥನೆ ವಿನಂತಿ ಮತ್ತು ಅರ್ಜಿ ನಮೂನೆಗಳಾಗಿದ್ದವು. ‘ಪ್ರಾರ್ಥನಾ ವಿನಂತಿ ಫಾರ್ಮ್’ನಲ್ಲಿ, ವ್ಯಕ್ತಿಯ ಗುರುತಿನ ವಿವರಗಳ ಜೊತೆಗೆ ಪಾದ್ರಿಗೆ ಉದ್ದೇಶಿಸಿರುವ ನಿರ್ದಿಷ್ಟ ಪ್ರಾರ್ಥನೆಯನ್ನು ಬರೆಯಲು ಕೇಳಲಾಗಿತ್ತು. ಪಾಲ್ಗೊಂಡವರಿಗೆ ವಿತರಿಸಲಾದ ‘ವೆಲ್‌ಕಮ್ ಟು ಪ್ರೀಸ್ಟ್‌ಹುಡ್ ಜನರೇಷನ್’ ಫಾರ್ಮ್‌ನಲ್ಲಿ ಗುಂಪಿನೊಳಗೆ ಯಾವ ಸ್ಥಾನದಲ್ಲಿ ಕೆಲಸ ಮಾಡಲು ಆಸಕ್ತಿ ಹೊಂದಿದ್ದೀರಿ ಎಂದು ಕೇಳಲಾಗಿತ್ತು.
ವಿಡಿಯೋಗೆ ಪ್ರತಿಕ್ರಿಯಿಸಿದ ಡಿಸಿಪಿ, ಸ್ಥಳೀಯ ಕ್ರಿಶ್ಚಿಯನ್ ಸಮುದಾಯವು ತಮ್ಮ ನಿಯಮಿತ ಪ್ರಾರ್ಥನೆಗಳನ್ನು ನಡೆಸುತ್ತಿತ್ತು, ಸಾಮಾಜಿಕ ಮಾಧ್ಯಮದಲ್ಲಿ ಗುಂಪು ಆರೋಪಿಸಿದಂತೆ ಯಾವುದೇ ಧಾರ್ಮಿಕ ಮತಾಂತರ ನಡೆಯುತ್ತಿಲ್ಲ ಎಂಬುದು ವಿಚಾರಣೆಯಿಂದ ತಿಳಿದುಬಂದಿದೆ ಎಂದು ಸ್ಪಷ್ಟಪಡಿಸಿದ್ದಾರೆ.
“ಸ್ಥಳೀಯ ಕ್ರಿಶ್ಚಿಯನ್ ಸಮುದಾಯದ ಸದಸ್ಯರು ತಮ್ಮ ನಿಯಮಿತ ಭಾನುವಾರದ ಪ್ರಾರ್ಥನೆಗಾಗಿ ಸ್ಥಳದಲ್ಲಿ ಜಮಾಯಿಸಿದ್ದರು. ವಿಚಾರಣೆ ನಡೆಸಿದಾಗ, ಧಾರ್ಮಿಕ ಮತಾಂತರಕ್ಕೆ ಸಂಬಂಧಿಸಿದ ಯಾವುದೇ ವಿಷಯ ಕಂಡುಬಂದಿಲ್ಲ” ಎಂದು ಡಿಸಿಪಿ ಅವರ ಹೇಳಿಕೆಯಲ್ಲಿ ತಿಳಿಸಲಾಗಿದೆ.
“ಸುಮಾರು 500 ವ್ಯಕ್ತಿಗಳ ಮತಾಂತರದ ಬಗೆಗಿನ ಆರೋಪವು ಸತ್ಯವಲ್ಲ; ದಯವಿಟ್ಟು ವದಂತಿಗಳನ್ನು ನಂಬಬೇಡಿ” ಎಂದು ಅಧಿಕಾರಿ ಮನವಿ ಮಾಡಿದ್ದಾರೆ.
ಗ್ಲೋಬಲ್ ರಾಯಲ್ ಪ್ರೀಸ್ಟ್‌ಹುಡ್ ಚರ್ಚ್ ನಿಯಮಿತವಾಗಿ ಭಾನುವಾರಗಳಂದು ಹಯಾತ್ ಸೆಂಟ್ರಿಕ್ ಹೋಟೆಲ್‌ನಲ್ಲಿ ಪ್ರಾರ್ಥನಾ ಸಭೆಗಳನ್ನು ನಡೆಸುತ್ತದೆ, ಇದರಲ್ಲಿ ಹಲವಾರು ಭಕ್ತರು ಪಾಲ್ಗೊಳ್ಳುತ್ತಾರೆ. ಚರ್ಚ್‌ನ ಹಿರಿಯ ಪಾದ್ರಿಯೊಬ್ಬರು ಈ ಸಭೆಯನ್ನು “ಅಟೋನ್‌ಮೆಂಟ್ ಸಂಡೇ ಸರ್ವೀಸ್” ಎಂದು ಕರೆದು, ಇನ್‌ಸ್ಟಾಗ್ರಾಮ್‌ನಲ್ಲಿ ಆಹ್ವಾನವನ್ನು ಪೋಸ್ಟ್ ಮಾಡಿದ್ದರು.


