ರಾಷ್ಟ್ರ ರಾಜಧಾನಿಯಲ್ಲಿ ಸಾರ್ವಜನಿಕ ಪ್ರತಿಭಟನೆಗಳು ಹಾಗೂ ಧರಣಿಗಳನ್ನು ಆಯೋಜಿಸಲು ನಿಗದಿಪಡಿಸಲಾಗಿದ್ದ ಪ್ರಮುಖ ಸ್ಥಳ ‘ಜಂತರ್ ಮಂತರ್’ ಹೊಂದಿದ್ದ ಅಧಿಕೃತ ಸ್ಥಾನಮಾನವನ್ನು ದೆಹಲಿ ಪೊಲೀಸ್ ಇಲಾಖೆ ಹಿಂಪಡೆದಿದೆ. ಕೇಂದ್ರ ಗೃಹ ಸಚಿವಾಲಯದ ಸಮಿತಿಯ ಶಿಫಾರಸಿನ ಮೇರೆಗೆ ದೆಹಲಿ ಪೊಲೀಸ್ ಆಯುಕ್ತರು ಈ ಹೊಸ ಸ್ಟ್ಯಾಂಡಿಂಗ್ ಆರ್ಡರ್ ಹೊರಡಿಸಿದ್ದು, ಬದಲಿಗೆ ನಗರದ ಇತರ ಮೂರು ಮೈದಾನಗಳನ್ನು ನೂತನ ಧರಣಿ ಸ್ಥಳಗಳಾಗಿ ನಿಗದಿಪಡಿಸಲಾಗಿದೆ.
ದೆಹಲಿ ಪೊಲೀಸ್ ಕಮಿಷನರ್ ಆದೇಶದಲ್ಲೇನಿದೆ?
ದೆಹಲಿ ಪೊಲೀಸ್ ಕಮಿಷನರ್ ಅನುರಾಗ್ ಕುಮಾರ್ ಅವರ ಅಧಿಕೃತ ಆದೇಶದ ಪ್ರಕಾರ (Standing Order No. L&O/48/2026), ನಾಗರಿಕರ ಪ್ರತಿಭಟನಾ ಹಕ್ಕು ಮತ್ತು ಪರ್ಯಾಯ ಸ್ಥಳಗಳ ಕುರಿತು ಪರಿಶೀಲಿಸಲು ಕೇಂದ್ರ ಗೃಹ ಸಚಿವಾಲಯವು ಸಮಿತಿಯೊಂದನ್ನು ರಚಿಸಿತ್ತು.
ಸದರಿ ಸಮಿತಿಯು ನೀಡಿದ ವರದಿಯ ಆಧಾರದ ಮೇಲೆ, ಜಂತರ್ ಮಂತರ್ ಅನ್ನು ಪ್ರತಿಭಟನಾ ಸ್ಥಳ ಎಂಬ ಪಟ್ಟಿಯಿಂದ ರದ್ದುಗೊಳಿಸಲಾಗಿದೆ. ಇದರ ಬದಲಾಗಿ ಪ್ರತಿಭಟನೆಗಳನ್ನು ನಡೆಸಲು ಮೂರು ನೂತನ ಸ್ಥಳಗಳನ್ನು ಅಧಿಕೃತವಾಗಿ ಗೊತ್ತುಪಡಿಸಲಾಗಿದೆ:
- ರಾಮ್ಲೀಲಾ ಮೈದಾನ
- ಬುರಾರಿ ಮೈದಾನ
- ಸಿಬಿಡಿ ಮೈದಾನ (ಪೂರ್ವ ದೆಹಲಿ)
ಈ ಮೂರು ಸ್ಥಳಗಳಲ್ಲಿ ಪ್ರತಿಭಟನೆಗಳನ್ನು ನಿಯಂತ್ರಿಸಲು ಮತ್ತು ನಿರ್ವಹಿಸಲು ಅಗತ್ಯವಾದ ಪರಿಷ್ಕೃತ ಪ್ರಮಾಣಿತ ಕಾರ್ಯವಿಧಾನವನ್ನು (SOP) ಶೀಘ್ರದಲ್ಲೇ ಪ್ರತ್ಯೇಕವಾಗಿ ಹೊರಡಿಸಲಾಗುವುದು ಎಂದು ಆದೇಶದಲ್ಲಿ ಸ್ಪಷ್ಟಪಡಿಸಲಾಗಿದೆ.

1990ರ ದಶಕದ ಆರಂಭದವರೆಗೆ ದೆಹಲಿಯ ಇಂಡಿಯಾ ಗೇಟ್ ಸಮೀಪದ ‘ಬೋಟ್ ಕ್ಲಬ್’ ಬೃಹತ್ ಜನಪರ ಚಳವಳಿಗಳ ಪ್ರಮುಖ ಕೇಂದ್ರವಾಗಿತ್ತು. 1988ರಲ್ಲಿ ಮಹೇಂದ್ರ ಸಿಂಗ್ ಟಿಕಾಯತ್ ನೇತೃತ್ವದಲ್ಲಿ ನಡೆದ ಬೃಹತ್ ರೈತ ರ್ಯಾಲಿಯು ಈ ಸ್ಥಳ ಬದಲಾವಣೆಗೆ ಪ್ರಮುಖ ಪ್ರಚೋದನೆ ಆಗಿತ್ತು ಎಂದು ಹಲವು ಚಾರಿತ್ರಿಕ ದಾಖಲೆಗಳು ಮತ್ತು ಮೂಲಗಳು ತೋರಿಸುತ್ತವೆ. ಇದರ ಬೆನ್ನಲ್ಲೇ ಭದ್ರತೆ ಹಾಗೂ ಸಂಚಾರ ದಟ್ಟಣೆಯ ಕಾರಣ ನೀಡಿ 1993ರಲ್ಲಿ ಪ್ರತಿಭಟನೆಗಳನ್ನು ಬೋಟ್ ಕ್ಲಬ್ನಿಂದ ಜಂತರ್ ಮಂತರ್ಗೆ ಸ್ಥಳಾಂತರಿಸಲಾಯಿತು.
18ನೇ ಶತಮಾನದ ಖಗೋಳ ವೀಕ್ಷಣಾಲಯದ ಐತಿಹಾಸಿಕ ತಾಣವಾದ ಜಂತರ್ ಮಂತರ್, ಕಳೆದ ಮೂರು ದಶಕಗಳಿಂದ ಅಂಚಿಗೆ ನೂಕಲ್ಪಟ್ಟ ಸಮುದಾಯಗಳು, ರೈತರು, ಕಾರ್ಮಿಕರು ಮತ್ತು ವಿದ್ಯಾರ್ಥಿಗಳು ತಮ್ಮ ಸಾಂವಿಧಾನಿಕ ಹಕ್ಕುಗಳಿಗಾಗಿ ಧ್ವನಿ ಎತ್ತುವ ಪ್ರಮುಖ ವೇದಿಕೆಯಾಯಿತು. ಭ್ರಷ್ಟಾಚಾರ ವಿರೋಧಿ ಚಳವಳಿಗಳು, ನಿರ್ಭಯಾ ಪ್ರಕರಣದ ನ್ಯಾಯಕ್ಕಾಗಿ ನಡೆದ ವಿದ್ಯಾರ್ಥಿ ಪ್ರತಿಭಟನೆಗಳು, ಐತಿಹಾಸಿಕ ರೈತ ಹೋರಾಟ ಹಾಗೂ ಮಹಿಳಾ ಕುಸ್ತಿಪಟುಗಳ ಧರಣಿಗಳಿಗೆ ಈ ಸ್ಥಳವು ಸಾಕ್ಷಿಯಾಗಿದೆ.
ನಂತರ 2017ರಲ್ಲಿ ರಾಷ್ಟ್ರೀಯ ಹಸಿರು ನ್ಯಾಯಾಧಿಕರಣ (NGT) ಧ್ವನಿ ಮಾಲಿನ್ಯದ ಕಾರಣ ನೀಡಿ ಜಂತರ್ ಮಂತರ್ನಲ್ಲಿ ಪ್ರತಿಭಟನೆಗಳನ್ನು ನಿಷೇಧಿಸಿತ್ತು. ಆದರೆ 2018ರಲ್ಲಿ ಮಹತ್ವದ ತೀರ್ಪು ನೀಡಿದ್ದ ಸುಪ್ರೀಂ ಕೋರ್ಟ್, “ಶಾಂತಿಯುತ ಪ್ರತಿಭಟನೆ ನಾಗರಿಕರ ಮೂಲಭೂತ ಹಕ್ಕು” ಎಂದು ಎತ್ತಿಹಿಡಿದು, ಆಡಳಿತಾತ್ಮಕ ನಿರ್ಬಂಧಗಳನ್ನು ತಳ್ಳಿಹಾಕಿ ಜಂತರ್ ಮಂತರ್ನಲ್ಲಿ ಸೀಮಿತ ಧರಣಿಗಳಿಗೆ ಅವಕಾಶ ಮರುಸ್ಥಾಪಿಸಿತ್ತು.
ಸಂಸತ್ತಿಗೆ ತೀರಾ ಸಮೀಪದಲ್ಲಿರುವ ಜಂತರ್ ಮಂತರ್ನಲ್ಲಿ ನಡೆಯುವ ಪ್ರತಿಭಟನೆಗಳು ಆಡಳಿತಗಾರರ ಹಾಗೂ ರಾಷ್ಟ್ರೀಯ ಮಾಧ್ಯಮಗಳ ಗಮನವನ್ನು ನೇರವಾಗಿ ಸೆಳೆಯುತ್ತಿದ್ದವು. ಆದರೆ, ಸಾರ್ವಜನಿಕ ಸುಗಮ ಸಂಚಾರದ ನೆಪದಲ್ಲಿ ಪ್ರತಿಭಟನಾಕಾರರನ್ನು ನಗರದ ಹೊರವಲಯದ ಜಾಗಗಳಿಗೆ ಸ್ಥಳಾಂತರಿಸುವುದು ಪ್ರಜಾಪ್ರಭುತ್ವದಲ್ಲಿ ಭಿನ್ನಮತದ ದ್ವನಿಯನ್ನು ಅಧಿಕಾರದ ಕೇಂದ್ರಗಳಿಂದ ದೂರವಿಡುವ ಆಡಳಿತಾತ್ಮಕ ಯತ್ನ ಎಂಬ ಆತಂಕವನ್ನು ನಾಗರಿಕ ಹಕ್ಕುಗಳ ಹೋರಾಟಗಾರರು ಮತ್ತು ವಿರೋಧ ಪಕ್ಷಗಳು ವ್ಯಕ್ತಪಡಿಸಿವೆ.
ಸಾರ್ವಜನಿಕರ ಸುಗಮ ಸಂಚಾರದ ಹಕ್ಕು ಮತ್ತು ನಾಗರಿಕರ ಮೂಲಭೂತ ಪ್ರತಿಭಟನಾ ಹಕ್ಕಿನ ನಡುವಿನ ಸಮತೋಲನದ ಕುರಿತು ಸುಪ್ರೀಂ ಕೋರ್ಟ್ನಲ್ಲಿ ಈಗಾಗಲೇ ವಿವಿಧ ಆಯಾಮಗಳ ವಿಚಾರಣೆಗಳು ನಡೆಯುತ್ತಿವೆ. ಪ್ರಸ್ತುತ ದೆಹಲಿಯಲ್ಲಿ ಜ್ವಲಂತ ರಾಜಕೀಯ ಹಾಗೂ ನಾಗರಿಕ ವಿಷಯಗಳ ಕುರಿತು ಪ್ರತಿಭಟನೆಗಳು ತೀವ್ರಗೊಳ್ಳುತ್ತಿರುವ ವೇಳೆಯಲ್ಲೇ ಪೊಲೀಸರ ಈ ಪರಿಷ್ಕೃತ ಆದೇಶ ಹೊರಬಿದ್ದಿದ್ದು, ಮಂಗಳವಾರ (ಅಕ್ಟೋಬರ್ 13) ಸುಪ್ರೀಂ ಕೋರ್ಟ್ನಲ್ಲಿ ನಡೆಯಲಿರುವ ವಿಚಾರಣೆಗಳು ಅತ್ಯಂತ ಮಹತ್ವ ಪಡೆದುಕೊಂಡಿವೆ.


