ಚಿಕ್ಕಮಗಳೂರು: ದಿನಕ್ಕೆ 200-300 ರೂಪಾಯಿ ಕೂಲಿ ಸಾಕಾಗುವುದಿಲ್ಲ, ಬೇರೆ ತೋಟಕ್ಕೆ ಕೆಲಸಕ್ಕೆ ಹೋಗುತ್ತೇವೆ ಎಂದಿದ್ದಕ್ಕೆ ಕಾಫಿ ಎಸ್ಟೇಟ್ ಮಾಲೀಕರು ಬಂದೂಕು ಮತ್ತು ದೊಣ್ಣೆಗಳಿಂದ ಮಹಿಳೆಯರು ಸೇರಿದಂತೆ 34 ವಲಸೆ ಕಾರ್ಮಿಕರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿರುವ ಅಮಾನವೀಯ ಘಟನೆ ಚಿಕ್ಕಮಗಳೂರು ತಾಲೂಕಿನ ಮಲ್ಲಂದೂರು ಪೊಲೀಸ್ ಠಾಣಾ ವ್ಯಾಪ್ತಿಯ ಬಸಗೋಡು ಗ್ರಾಮದಲ್ಲಿ ನಡೆದಿದೆ.
ನವೆಂಬರ್ 27ರ ಶುಕ್ರವಾರ ಬಸಗೋಡು ಕಾಫಿ ಎಸ್ಟೇಟ್ನಲ್ಲಿ ಈ ದೌರ್ಜನ್ಯ ನಡೆದಿದ್ದು, ಹಲ್ಲೆಯ ಭೀಕರ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ತೀವ್ರ ಸಾರ್ವಜನಿಕ ಆಕ್ರೋಶ ವ್ಯಕ್ತವಾದ ಬೆನ್ನಲ್ಲೇ, ಎಸ್ಟೇಟ್ ಮಾಲೀಕರಾದ ಭರತ್ ಮತ್ತು ಸತ್ಯಕೀರ್ತಿ ವಿರುದ್ಧ ಮಲ್ಲಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ (FIR) ದಾಖಲಾಗಿದೆ.
ಘಟನೆಯ ಹಿನ್ನೆಲೆ ಮತ್ತು ಸಂತ್ರಸ್ತರ ಅಳಲು: ತಮಿಳುನಾಡು ಮೂಲದ ಒಟ್ಟು 34 ವಲಸೆ ಕಾರ್ಮಿಕರು ಕೇವಲ ನಾಲ್ಕು ದಿನಗಳ ಹಿಂದಷ್ಟೇ ಬಸಗೋಡು ಕಾಫಿ ಎಸ್ಟೇಟ್ಗೆ ಕೆಲಸಕ್ಕೆ ಬಂದಿದ್ದರು. ತೋಟದಲ್ಲಿ ನೀಡಲಾಗುತ್ತಿದ್ದ ದಿನಕ್ಕೆ ₹200 ರಿಂದ ₹300 ಕೂಲಿ ತಮ್ಮ ಜೀವನ ನಿರ್ವಹಣೆಗೆ ಸಾಲುವುದಿಲ್ಲ ಎಂಬ ಕಾರಣಕ್ಕೆ ಕಾರ್ಮಿಕರು ಬೇರೆ ತೋಟಕ್ಕೆ ಕೆಲಸಕ್ಕೆ ಹೋಗಲು ನಿರ್ಧರಿಸಿದ್ದರು. ಇದಕ್ಕೆ ಆಕ್ಷೇಪಿಸಿದ ಮಾಲೀಕರು ತಾವು ನೀಡಿದ್ದ ಮುಂಗಡ ಹಣವನ್ನು ವಾಪಸ್ ಕೇಳಿದ್ದರು.
“ಮಾಲೀಕರು ಕೇಳಿದ ಹಣವನ್ನು ನಾವು ವಾಪಸ್ ಕೊಟ್ಟೆವು. ಆದರೂ ಬಿಡದೆ ಮೊದಲು ನಮ್ಮ ಕೆಲಸದ ಮೇಸ್ತ್ರಿ ಮೇಲೆ ಹಲ್ಲೆ ಮಾಡಿದರು. ಬಳಿಕ ನಮ್ಮ ಜೊತೆಯಲ್ಲಿದ್ದ ಮಹಿಳಾ ಕಾರ್ಮಿಕರ ಮೇಲೆ ದೊಣ್ಣೆಯಿಂದ ಮನಬಂದಂತೆ ಹೀನಾಮಾನವಾಗಿ ಥಳಿಸಿದರು. ಮಹಿಳೆಯರಿಗೆ ಬಂದೂಕಿನಿಂದ ತಿವಿದು, ಶೂಟ್ ಮಾಡುವ ರೀತಿಯಲ್ಲಿ ಬೆದರಿಸಿ ಗುದ್ದಿದ್ದಾರೆ. ನಾವು ತಡೆಯಲು ಹೋಗದಿದ್ದರೆ ಅವರ ಪರಿಸ್ಥಿತಿ ಏನಾಗುತ್ತಿತ್ತೋ ಊಹಿಸಲೂ ಸಾಧ್ಯವಿಲ್ಲ” ಎಂದು ಹಲ್ಲೆಗೊಳಗಾದ ಸಂತ್ರಸ್ತ ಕಾರ್ಮಿಕರೊಬ್ಬರು ಘಟನೆಯ ಭೀಕರತೆಯನ್ನು ವಿವರಿಸಿದ್ದಾರೆ. ಈ ಹಿಂದೆ ಸುಮಾರು 60 ಕಾರ್ಮಿಕರು ಇಲ್ಲಿಂದ ಕೆಲಸ ಬಿಟ್ಟು ಹೋಗಿದ್ದ ಸಿಟ್ಟನ್ನೂ ಮಾಲೀಕರು ತಮ್ಮ ಮೇಲೆ ತೀರಿಸಿಕೊಂಡಿದ್ದು, ತಂಡದಲ್ಲಿದ್ದ ಎಲ್ಲಾ 34 ಕಾರ್ಮಿಕರಿಗೂ ಥಳಿಸಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.
ಜೀತದಾಳುಗಳಂತೆ ದೌರ್ಜನ್ಯ; ಜಿಲ್ಲಾ ಆಸ್ಪತ್ರೆಗೆ ದಾಖಲು: ಕಾರ್ಮಿಕರನ್ನು ಜೀತದಾಳುಗಳಂತೆ ಕೂಡಿಹಾಕಿ, ಮಹಿಳೆಯರು ಮತ್ತು ಮಕ್ಕಳೆಂದೂ ನೋಡದೆ ಮಾನಸಿಕ ಹಾಗೂ ದೈಹಿಕ ಹಿಂಸೆ ನೀಡಿ ಕೊಲೆ ಬೆದರಿಕೆ ಹಾಕಲಾಗಿದೆ. ವೈರಲ್ ಆಗಿರುವ ವಿಡಿಯೋದಲ್ಲಿ, ಹಲ್ಲೆಯ ತೀವ್ರತೆಗೆ ಮಹಿಳಾ ಕಾರ್ಮಿಕೆಯೊಬ್ಬರು ನೆಲಕ್ಕೆ ಬಿದ್ದು ಒದ್ದಾಡುತ್ತಿದ್ದರೂ ಬಿಡದೆ ದೊಣ್ಣೆಯಿಂದ ಥಳಿಸುತ್ತಿರುವುದು ಹಾಗೂ “ಸಾವಿರಾರು ಜನರಿಗೆ ಕೆಲಸ ಕೊಡುವ ಸಾಹುಕಾರನಿಗೆ ಎದುರಾಡುತ್ತೀರಾ?” ಎಂದು ನಿಂದಿಸುತ್ತಿರುವುದು ಸೆರೆಯಾಗಿದೆ.
ಗಂಭೀರವಾಗಿ ಗಾಯಗೊಂಡಿರುವ ಮಹಿಳಾ ಕಾರ್ಮಿಕರು ಸೇರಿದಂತೆ ಸಂತ್ರಸ್ತರನ್ನು ಚಿಕ್ಕಮಗಳೂರು ನಗರದ ಮಲ್ಲೇಗೌಡ ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಹಲ್ಲೆಯ ವೇಳೆ ತಮ್ಮ ಕಿವಿಯಲ್ಲಿದ್ದ ಚಿನ್ನದ ಒಡವೆಯೂ ನಾಪತ್ತೆಯಾಗಿದೆ ಎಂದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಕಾರ್ಮಿಕ ಮಹಿಳೆ ಮೀನಾ ತಿಳಿಸಿದ್ದಾರೆ.
ನಾಳೆ ಆಜಾದ್ ಪಾರ್ಕ್ ಬಳಿ ಬೃಹತ್ ಪ್ರತಿಭಟನೆಗೆ ಕರೆ: ಬಸಗೋಡು ಕಾಫಿ ಎಸ್ಟೇಟ್ ಮಾಲೀಕರು ಕಾರ್ಮಿಕರ ಮೇಲೆ ಮನಬಂದಂತೆ ಹಲ್ಲೆ ನಡೆಸಿ, ಜೀವ ಬೆದರಿಕೆ ಹಾಕಿರುವ ಅಮಾನವೀಯ ಕೃತ್ಯವನ್ನು ಖಂಡಿಸಿ ನಾಳೆ (ನವೆಂಬರ್ 29, ಭಾನುವಾರ) ಬೆಳಗ್ಗೆ 11:30ಕ್ಕೆ ಚಿಕ್ಕಮಗಳೂರು ನಗರದ ಆಜಾದ್ ಪಾರ್ಕ್ ಬಳಿ ಪ್ರತಿಭಟನೆ ನಡೆಸಲಾಗುವುದು ಎಂದು ಕರ್ನಾಟಕ ಜನಶಕ್ತಿ ಸಂಘಟನೆಯ ರಾಜ್ಯ ಕಾರ್ಯದರ್ಶಿ ಕೆ.ಎಲ್. ಅಶೋಕ್ ತಿಳಿಸಿದ್ದಾರೆ. ಮಲೆನಾಡಿನ ಕಾಫಿ ತೋಟಗಳಲ್ಲಿ ಕನಿಷ್ಠ ವೇತನ ನಿರಾಕರಣೆ ಮತ್ತು ವಲಸೆ ಕಾರ್ಮಿಕರ ಮೇಲೆ ನಡೆಯುತ್ತಿರುವ ಇಂತಹ ದೌರ್ಜನ್ಯಗಳಿಗೆ ಕಡಿವಾಣ ಹಾಕಬೇಕು ಹಾಗೂ ತಪ್ಪಿತಸ್ಥರನ್ನು ತಕ್ಷಣ ಬಂಧಿಸಿ ಕಠಿಣ ಕಾನೂನು ಕ್ರಮ ಜರುಗಿಸಬೇಕು ಎಂದು ಸಂಘಟನೆಗಳು ಆಗ್ರಹಿಸಿವೆ.




