ಬೆಂಗಳೂರು: ಪೆಟ್ರೋಲ್ನಲ್ಲಿ ನಿಗದಿತ E20 (ಶೇ.20 ಎಥೆನಾಲ್) ಮಿತಿಗಿಂತ ಹೆಚ್ಚಿನ ಪ್ರಮಾಣದಲ್ಲಿ ಎಥೆನಾಲ್ ಮಿಶ್ರಣ ಮಾಡುತ್ತಿರುವುದನ್ನು ಕರ್ನಾಟಕ ಸರ್ಕಾರ ಬಯಲಿಗೆ ತಂದ ಬೆನ್ನಲ್ಲೇ, ರಾಜ್ಯ ಕಾನೂನು ಮಾಪನಶಾಸ್ತ್ರ ಇಲಾಖೆಯು ತೈಲ ಮಾರುಕಟ್ಟೆ ಕಂಪನಿಗಳ (OMC) ಟರ್ಮಿನಲ್ಗಳ ತಪಾಸಣೆಯನ್ನು ತೀವ್ರಗೊಳಿಸಿದೆ. ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಸಚಿವ ರಿಜ್ವಾನ್ ಅರ್ಷದ್ ಅವರು ಈ ಕುರಿತು ಮಾಹಿತಿ ಹಂಚಿಕೊಂಡಿದ್ದು, ಬೆಂಗಳೂರು ಹೊರವಲಯದ ದೇವನಗೊಂಡಿಯಲ್ಲಿರುವ ಇಂಡಿಯನ್ ಆಯಿಲ್ ಕಾರ್ಪೊರೇಷನ್ ಲಿಮಿಟೆಡ್ ಟರ್ಮಿನಲ್ನಲ್ಲಿ ನಡೆದ ಪರಿಶೀಲನೆ ವೇಳೆ ಮಾಪನ ವ್ಯತ್ಯಾಸ ಪತ್ತೆಯಾದ ಹಿನ್ನೆಲೆಯಲ್ಲಿ ಶೋಕಾಸ್ ನೋಟಿಸ್ ಜಾರಿ ಮಾಡಲಾಗಿದೆ.
ತಪಾಸಣೆಯಲ್ಲಿ ಪತ್ತೆಯಾದ ವ್ಯತ್ಯಾಸಗಳೇನು?
ನವೆಂಬರ್ 25, 2026ರಂದು ಬೆಂಗಳೂರು ಮತ್ತು ಮೈಸೂರು ವಿಭಾಗದ ಕಾನೂನು ಮಾಪನಶಾಸ್ತ್ರ ಜಂಟಿ ನಿಯಂತ್ರಕರ ತಂಡವು ದೇವನಗೊಂಡಿಯ IOCL ಟರ್ಮಿನಲ್ನಲ್ಲಿರುವ ಮಾಸ್ ಫ್ಲೋ ಮೀಟರ್ಗಳನ್ನು ಪ್ರಮಾಣೀಕೃತ ಮಾಪಕದ ಮೂಲಕ ಪರೀಕ್ಷಿಸಿದೆ.
ತಪಾಸಣಾ ವರದಿ ಮತ್ತು ನೋಟಿಸ್ ಪ್ರಕಾರ ಕಂಡುಬಂದ ವ್ಯತ್ಯಾಸಗಳು ಹೀಗಿವೆ:
- ಬೇ (Bay) ನಂ. 9 (ಎಥೆನಾಲ್): ಬ್ಯಾಚ್ ಕಂಟ್ರೋಲ್ ಯೂನಿಟ್ ಅಳವಡಿಸಲಾದ ಮಾಸ್ ಫ್ಲೋ ಮೀಟರ್ನಲ್ಲಿ (Sl. No. 19061056) ಪ್ರತಿ 3,000 ಲೀಟರ್ಗೆ 14 ಲೀಟರ್ ಹೆಚ್ಚುವರಿ ಎಥೆನಾಲ್ ಪೂರೈಕೆಯಾಗುತ್ತಿದೆ.
- ಬೇ ನಂ. 9 (ಮೋಟಾರ್ ಗ್ಯಾಸೋಲಿನ್ / ಪೆಟ್ರೋಲ್): ಅದೇ ವಿಭಾಗದ ಮಾಸ್ ಫ್ಲೋ ಮೀಟರ್ನಲ್ಲಿ (Sl. No. 19061056) ಪ್ರತಿ 3,000 ಲೀಟರ್ಗೆ 4 ರಿಂದ 6 ಲೀಟರ್ ಕಡಿಮೆ ಪೆಟ್ರೋಲ್ ಪೂರೈಕೆಯಾಗುತ್ತಿದೆ.
- ಬೇ ನಂ. 4 (ಎಥೆನಾಲ್): ಇನ್ನೊಂದು ಮಾಸ್ ಫ್ಲೋ ಮೀಟರ್ನಲ್ಲಿ (Sl. No. EC 20010954) ಪ್ರತಿ 3,000 ಲೀಟರ್ಗೆ 3 ಲೀಟರ್ ಹೆಚ್ಚುವರಿ ಎಥೆನಾಲ್ ಪೂರೈಕೆಯಾಗುತ್ತಿದೆ.
ಈ ಎಲ್ಲಾ ವ್ಯತ್ಯಾಸಗಳು ಕಾನೂನು ಮಾಪನಶಾಸ್ತ್ರ ಕಾಯ್ದೆ ಮತ್ತು ನಿಯಮಗಳ ಅಡಿಯಲ್ಲಿ ಅನುಮತಿಸಲಾದ ಮಿತಿಗಿಂತ ಹೆಚ್ಚಿವೆ ಎಂದು ಇಲಾಖೆ ತಿಳಿಸಿದೆ.
ಗ್ರಾಹಕ ಹಿತಾಸಕ್ತಿ ಮತ್ತು 7 ದಿನಗಳ ಗಡುವು!
ಮಾನದಂಡಗಳಿಗೆ ಅನುಗುಣವಲ್ಲದ ಮಾಪನ ಉಪಕರಣಗಳ ಬಳಕೆಯಿಂದ ಗ್ರಾಹಕರು, ಡೀಲರ್ಗಳು ಮತ್ತು ಇತರ ಪಾಲುದಾರರ ಹಿತಾಸಕ್ತಿಗೆ ಧಕ್ಕೆಯಾಗಬಹುದು ಎಂದು ದೇವನಗೊಂಡಿ IOCL ಟರ್ಮಿನಲ್ನ ಉಪ ಮಹಾಪ್ರಬಂಧಕರಿಗೆ ನೀಡಿರುವ ನೋಟಿಸ್ನಲ್ಲಿ ಎಚ್ಚರಿಸಲಾಗಿದೆ.
ನೋಟಿಸ್ನಲ್ಲಿ ಇಲಾಖೆ ನೀಡಿರುವ ಪ್ರಮುಖ ಸೂಚನೆಗಳು:
- ಎಥೆನಾಲ್ ಮತ್ತು ಮೋಟಾರ್ ಗ್ಯಾಸೋಲಿನ್ ಮಾಸ್ ಫ್ಲೋ ಮೀಟರ್ಗಳಲ್ಲಿನ ವ್ಯತ್ಯಾಸಗಳಿಗೆ ಕಾರಣಗಳನ್ನು ಸ್ಪಷ್ಟಪಡಿಸಬೇಕು.
- ಮಾಸ್ ಫ್ಲೋ ಮೀಟರ್ಗಳು ಮತ್ತು ಬ್ಯಾಚ್ ಕಂಟ್ರೋಲ್ ಯೂನಿಟ್ನ ನಿಖರತೆ ಖಚಿತಪಡಿಸಲು ಕೈಗೊಂಡ ಕ್ರಮಗಳು, ಇತ್ತೀಚಿನ ಕ್ಯಾಲಿಬ್ರೇಷನ್ ಹಾಗೂ ನಿರ್ವಹಣಾ ದಾಖಲೆಗಳನ್ನು ಸಲ್ಲಿಸಬೇಕು.
- ತಪ್ಪು ಸರಿಪಡಿಸಲು ಮತ್ತು ಕಾನೂನು-ನಿಯಮಗಳ ಪಾಲನೆಗೆ ಕೈಗೊಳ್ಳಲಿರುವ ಸುಧಾರಣಾ ಕ್ರಮಗಳ ವಿವರ ನೀಡಬೇಕು.
- ನೋಟಿಸ್ ತಲುಪಿದ 7 ದಿನಗಳೊಳಗೆ ಲಿಖಿತ ವಿವರಣೆ ಮತ್ತು ಸಂಬಂಧಿತ ದಾಖಲೆಗಳ ಪ್ರತಿಯನ್ನು ಸಲ್ಲಿಸಬೇಕು.
- ಮಾಪನ ವ್ಯವಸ್ಥೆಗಳ ನಿಖರತೆ ಮತ್ತು ಕಾನೂನುಬದ್ಧ ಅನುಸರಣೆ ದೃಢಪಡುವವರೆಗೆ ಅವುಗಳನ್ನು ಮುಂದಿನ ವಾಣಿಜ್ಯ ವಹಿವಾಟುಗಳಿಗೆ ಬಳಸಬಾರದು.
ನಿಗದಿತ ಅವಧಿಯೊಳಗೆ ಸಮರ್ಪಕ ವಿವರಣೆ ನೀಡಲು ವಿಫಲವಾದರೆ, ಕಾನೂನು ಮಾಪನಶಾಸ್ತ್ರ ಕಾಯ್ದೆ, 2009 ಹಾಗೂ ಅದರ ನಿಯಮಗಳ ಅಡಿಯಲ್ಲಿ ಹೆಚ್ಚಿನ ಕಾನೂನು ಮತ್ತು ಇಲಾಖಾ ಕ್ರಮ ಕೈಗೊಳ್ಳಲಾಗುವುದು ಎಂದು ನೋಟಿಸ್ನಲ್ಲಿ ಸ್ಪಷ್ಟಪಡಿಸಲಾಗಿದೆ.




