“ಒಂದು ವೇಳೆ ಇಂದು ಅಮೆರಿಕ ಮತ್ತು ಪಾಕಿಸ್ತಾನದ ನಡುವೆ ಯುದ್ಧ ನಡೆದರೆ, ಪಾಕಿಸ್ತಾನ ನಮ್ಮ ನೆರೆಹೊರೆಯ ದೇಶವಾಗಿರುವುದರಿಂದ ನಾವು ಅದರ ಜೊತೆ ಇರುತ್ತೇವೆ” ಎಂದು ರಾಜಸ್ಥಾನ ಬಿಜೆಪಿ ಅಧ್ಯಕ್ಷ ಹಾಗೂ ರಾಜ್ಯಸಭಾ ಸಂಸದ ಮದನ್ ರಾಠೋರ್ ನೀಡಿರುವ ಹೇಳಿಕೆ ಈಗ ದೇಶಾದ್ಯಂತ ತೀವ್ರ ಚರ್ಚೆಗೆ ಕಾರಣವಾಗಿದೆ.
ಅಕ್ಟೋಬರ್ 15, 2026 ರಂದು ಜೈಪುರದಲ್ಲಿರುವ ಬಿಜೆಪಿ ರಾಜಸ್ಥಾನ ಪ್ರಧಾನ ಕಚೇರಿಯಲ್ಲಿ ಅಬ್ದುಲ್ ಕಲಾಮ್ ಅವರ ಜನ್ಮದಿನದ ಅಂಗವಾಗಿ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅವರು ಈ ಮಾತನ್ನಾಡಿದ್ದಾರೆ.
ರಾಠೋರ್ ಮಾತನಾಡುತ್ತಿರುವ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ವೀಡಿಯೊದಲ್ಲಿ, “ಅಮೆರಿಕ ಮತ್ತು ಪಾಕಿಸ್ತಾನದ ನಡುವೆ ಯುದ್ಧ ನಡೆದರೆ ನಾವು ಪಾಕಿಸ್ತಾನದ ಪರ ನಿಲ್ಲುತ್ತೇವೆ, ಏಕೆಂದರೆ ಅದು ನಮ್ಮ ನೆರೆಯ ದೇಶ. ಇದನ್ನು ನಾವು ಅರ್ಥಮಾಡಿಕೊಳ್ಳಬೇಕು. ಆದರೆ ನಮ್ಮಿಬ್ಬರ ಮಧ್ಯೆ ವಿಚಾರ ಬಂದಾಗ, ನಾವು ನಮ್ಮ ಭಾರತದ ಪರವಾಗಿ ನಿಲ್ಲುತ್ತೇವೆ” ಎಂದು ಹೇಳಿರುವುದು ದಾಖಲಾಗಿದೆ.
ಬಿಜೆಪಿ ನಾಯಕನ ಈ ಹೇಳಿಕೆ ಹೊರಬರುತ್ತಿದ್ದಂತೆಯೇ ವಿಪಕ್ಷಗಳು ತೀವ್ರವಾಗಿ ಖಂಡಿಸಿದ್ದು, ಬಿಜೆಪಿಯ ರಾಷ್ಟ್ರಭಕ್ತಿಯ ನಿಲುವನ್ನು ಪ್ರಶ್ನಿಸಿವೆ.
ಕಾಂಗ್ರೆಸ್ ವಕ್ತಾರೆ ಶಮಾ ಮೊಹಮ್ಮದ್ ಪ್ರತಿಕ್ರಿಯಿಸಿ, ಈ ಹೇಳಿಕೆಯನ್ನು ‘ದೇಶದ್ರೋಹ’ ಎಂದು ಕರೆದಿದ್ದಾರೆ. “ನರೇಂದ್ರ ಮೋದಿ ಮತ್ತು ಅಮಿತ್ ಶಾ ಅವರೂ ಕೂಡ ಪಾಕಿಸ್ತಾನದ ಪರವಾಗಿದ್ದಾರೆಯೇ? ಹಾಗೊಮ್ಮೆ ಇಲ್ಲದಿದ್ದರೆ, ಈ ದೇಶದ್ರೋಹಿ ಹೇಳಿಕೆ ನೀಡಿದ ನಾಯಕನ ವಿರುದ್ಧ ಏನು ಕ್ರಮ ಕೈಗೊಳ್ಳಲಾಗುತ್ತಿದೆ?” ಎಂದು ಪ್ರಶ್ನಿಸಿದ್ದಾರೆ.
ಕಾಂಗ್ರೆಸ್ನ ಅಧಿಕೃತ ಸಾಮಾಜಿಕ ಜಾಲತಾಣ ಖಾತೆಯು, “ಬಿಜೆಪಿ ನಾಯಕರ ಪ್ರತಿ ರಕ್ತನಾಳದಲ್ಲೂ ದೇಶದ್ರೋಹ ಹರಿಯುತ್ತಿದೆ. ಭಯೋತ್ಪಾದಕ ದೇಶವಾದ ಪಾಕಿಸ್ತಾನದ ಮೇಲಿರುವ ಬಿಜೆಪಿಯ ಪ್ರೇಮ ಈಗ ಬಹಿರಂಗವಾಗಿ ಹೊರಬಿದ್ದಿದೆ” ಎಂದು ಕಿಡಿಕಾರಿದೆ. ಆಮ್ ಆದ್ಮಿ ಪಾರ್ಟಿ (AAP) ಕೂಡ ಈ ಹೇಳಿಕೆಯನ್ನು ತೀವ್ರವಾಗಿ ಖಂಡಿಸಿದ್ದು, ಬಿಜೆಪಿಯ ರಾಷ್ಟ್ರವಾದದ ಬೂಟಾಟಿಕೆಯನ್ನು ಪ್ರಶ್ನಿಸಿದೆ.
ತರಾತುರಿಯ ಸ್ಪಷ್ಟನೆ ನೀಡಿದ ಮದನ್ ರಾಠೋರ್:
ಹೇಳಿಕೆ ತೀವ್ರ ವಿವಾದಕ್ಕೆ ತಿರುಗುತ್ತಿದ್ದಂತೆಯೇ ಅಕ್ಟೋಬರ್ 16 ರಂದು ಸ್ಪಷ್ಟನೆ ನೀಡಲು ಯತ್ನಿಸಿರುವ ಮದನ್ ರಾಠೋರ್, ತಮ್ಮ ಹೇಳಿಕೆಯನ್ನು ಯುದ್ಧದ ಸಂದರ್ಭದಲ್ಲಿ ಅಲ್ಲ, ಬದಲಿಗೆ ಕ್ರಿಕೆಟ್ ಪಂದ್ಯದ ಸಂದರ್ಭದಲ್ಲಿ ಹೇಳಿದ್ದಾಗಿ ಸಮರ್ಥಿಸಿಕೊಂಡಿದ್ದಾರೆ ಎಂದು ವರದಿಯಾಗಿದೆ.
ತಮ್ಮ 2 ರಿಂದ 10 ಸೆಕೆಂಡ್ಗಳ ವೀಡಿಯೊ ತುಣುಕನ್ನು ಎಡಿಟ್ ಮಾಡಿ, ದುರುದ್ದೇಶಪೂರ್ವಕವಾಗಿ ಹರಡಲಾಗಿದೆ ಎಂದು ಆರೋಪಿಸಿರುವ ಅವರು, “ಭಾರತ-ಪಾಕಿಸ್ತಾನ್ ಕ್ರಿಕೆಟ್ ಪಂದ್ಯದಲ್ಲಿ ಭಾರತ ಸೋತಾಗ ಪಟಾಕಿ ಹೊಡೆಯುವವರು ರಾಷ್ಟ್ರಭಕ್ತರಲ್ಲ. ಅಮೆರಿಕ ಮತ್ತು ಪಾಕಿಸ್ತಾನದ ನಡುವೆ ಪಂದ್ಯ ನಡೆದರೆ ಅದು ಬೇರೆ ವಿಷಯ. ಭಯೋತ್ಪಾದನೆಯ ಕಾರಣದಿಂದ ಪಾಕಿಸ್ತಾನದೊಂದಿಗೆ ನಮಗೆ ಶತ್ರುತ್ವವಿದೆ. ನಿಜವಾದ ಸಂಘರ್ಷದ ಸಂದರ್ಭದಲ್ಲಿ ಭಾರತ ಎಂದಿಗೂ ಪಾಕಿಸ್ತಾನದ ಪರ ನಿಲ್ಲಲು ಸಾಧ್ಯವಿಲ್ಲ” ಎಂದು ಹೇಳಿದ್ದಾರೆ.
ಇದಕ್ಕೂ ಮುನ್ನ ಪ್ರತಿಪಕ್ಷಗಳ ಪ್ರತಿಭಟನೆಗಳ ಹಿಂದೆ ವಿದೇಶಿ ಹಣಕಾಸಿನ ನೆರವು ಇದೆ ಎಂದು ಆಧಾರರಹಿತ ಆರೋಪ ಮಾಡಿದ್ದ ಮದನ್ ರಾಠೋರ್, ಇದೀಗ ತಮ್ಮದೇ ಹೇಳಿಕೆಯಿಂದಾಗಿ ತೀವ್ರ ಮುಜುಗರಕ್ಕೆ ಈಡಾಗಿದ್ದಾರೆ.


