ಬಿಜೆಪಿ ಹಣ ಮತ್ತು ಬೆದರಿಕೆಯನ್ನು ಬಳಸಿ ಜನರನ್ನು ಪ್ರಭಾವಿಸುತ್ತಿದೆ ಎಂದು ಪಶ್ಚಿಮ ಬಂಗಾಳದ ಮಾಜಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಆರೋಪಿಸಿದ್ದಾರೆ. “ತಮ್ಮ ಪಕ್ಷದ ಕಾರ್ಯಕರ್ತರ ವಿರುದ್ಧ ಪೊಲೀಸರ ದೌರ್ಜನ್ಯಗಳು ಹೆಚ್ಚಾಗಿವೆ, ಸರ್ಕಾರಿ ಅಧಿಕಾರಿಗಳು ಅವರಿಗೆ ಬೆದರಿಕೆ ಹಾಕುತ್ತಿದ್ದಾರೆ” ಎಂದು ಅವರು ದೂರಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ‘ಮಮತಾ ಎಐಟಿಸಿ’ ಯಲ್ಲಿ ಹಂಚಿಕೊಂಡ ಹೇಳಿಕೆಯೊಂದರಲ್ಲಿ, ಜಿಲ್ಲಾ ಮ್ಯಾಜಿಸ್ಟ್ರೇಟ್ಗಳು, ಬ್ಲಾಕ್ ಅಭಿವೃದ್ಧಿ ಅಧಿಕಾರಿಗಳು (ಬಿಡಿಒ) ಮತ್ತು ಪೊಲೀಸ್ ವರಿಷ್ಠಾಧಿಕಾರಿಗಳನ್ನು ಜನರಿಗೆ ಬೆದರಿಕೆ ಹಾಕಲು ಬಳಸಿಕೊಳ್ಳಲಾಗುತ್ತಿದೆ ಎಂದು ಅವರು ಆರೋಪಿಸಿದ್ದಾರೆ.
“ಬಿಜೆಪಿ ಜನರನ್ನು ಪ್ರಭಾವಿಸಲು ಹಣ ಮತ್ತು ಬೆದರಿಕೆಯನ್ನು ಬಳಸುತ್ತಿದೆ. ನಿನ್ನೆಯಿಂದೀಚೆಗೆ ಪೊಲೀಸರ ದೌರ್ಜನ್ಯಗಳು ತೀವ್ರವಾಗಿ ಹೆಚ್ಚಾಗಿವೆ” ಎಂದು ಬ್ಯಾನರ್ಜಿ ಹೇಳಿದ್ದಾರೆ.
ಬಿಜೆಪಿ ಸರ್ಕಾರವು ಜನರಿಗೆ ಸ್ಟಾಂಪ್ ಪೇಪರ್ಗಳು ಮತ್ತು ನೋಟರಿ ಮಾಡಿದ ಅಫಿಡವಿಟ್ಗಳಂತಹ ಕಾನೂನು ದಾಖಲೆಗಳನ್ನು ಒದಗಿಸುತ್ತಿದ್ದರೆ, ತಮ್ಮ ಪಕ್ಷಕ್ಕೆ ಅಂತಹ ಸೌಲಭ್ಯಗಳನ್ನು ತಡೆಯಲಾಗುತ್ತಿದೆ ಎಂದೂ ಅವರು ಆರೋಪಿಸಿದ್ದಾರೆ.
“ವೈಯಕ್ತಿಕವಾಗಿ ಬರುವ ಜನರನ್ನು ಕೂಡ ನನ್ನ ಕಚೇರಿಗೆ ಬರಲು ಬಿಡುತ್ತಿಲ್ಲ. ಇಂತಹ ದೌರ್ಜನ್ಯಗಳನ್ನು ನೀವು ಊಹಿಸಬಲ್ಲಿರಾ? ನಾವೇನು ಸ್ವತಂತ್ರರಾಗಿದ್ದೇವೆಯೇ? ಈ ದೇಶದಲ್ಲಿ ನಮಗೆ ಇನ್ನು ಸ್ವಾತಂತ್ರ್ಯವಿದೆಯೇ?” ಎಂದು ಬ್ಯಾನರ್ಜಿ ಪ್ರಶ್ನಿಸಿದ್ದಾರೆ.
“ನಮ್ಮ ಮಹಾನ್ ನಾಯಕರು ಸ್ವಾತಂತ್ರ್ಯಕ್ಕಾಗಿ ಹೋರಾಡಿ ತಮ್ಮ ಪ್ರಾಣವನ್ನೇ ಅರ್ಪಿಸಿದರು. ಆದರೆ ಇಂದು, ಬಿಜೆಪಿ ಹಣ ನೀಡಿ ಜನರನ್ನು ಖರೀದಿಸುತ್ತಿದೆ ಮತ್ತು ತೃಣಮೂಲ ಕಾಂಗ್ರೆಸ್ಗೆ ಸೇರಿದರೆ ಜೈಲಿಗೆ ಹಾಕುವುದಾಗಿ ನಮ್ಮ ಕಾರ್ಯಕರ್ತರಿಗೆ, ಶಾಸಕರಿಗೆ ಹಾಗೂ ಸಂಸದರಿಗೆ ಬೆದರಿಕೆ ಹಾಕುತ್ತಿದೆ. ನಿಮಗೆ ಧೈರ್ಯವಿದ್ದರೆ, ರಾಜಕೀಯವಾಗಿ ಹೋರಾಡಿ. ಅದಕ್ಕೆ ನಮ್ಮ ಯಾವುದೇ ಆಕ್ಷೇಪವಿಲ್ಲ” ಎಂದು ಮಾಜಿ ಮುಖ್ಯಮಂತ್ರಿ ಸ್ಪಷ್ಟವಾಗಿ ಹೇಳಿದ್ದಾರೆ.


