HomeಅಂಕಣಗಳುKarnataka SIRಎಸ್‌ಐಆರ್ ಅಂತಿಮ ಪಟ್ಟಿ 192 ಕ್ಷೇತ್ರಗಳಲ್ಲಿ ಗೆಲುವಿನ ಅಂತರಕ್ಕಿಂತ ಹೆಚ್ಚು ಮತಗಳು ಡಿಲೀಟ್ ಕಾಂಗ್ರೆಸ್- 115,...

ಎಸ್‌ಐಆರ್ ಅಂತಿಮ ಪಟ್ಟಿ 192 ಕ್ಷೇತ್ರಗಳಲ್ಲಿ ಗೆಲುವಿನ ಅಂತರಕ್ಕಿಂತ ಹೆಚ್ಚು ಮತಗಳು ಡಿಲೀಟ್ ಕಾಂಗ್ರೆಸ್- 115, ಬಿಜೆಪಿ-58 ಹಾಗೂ ಜೆಡಿ(ಎಸ್)ನ 19 ಕ್ಷೇತ್ರಗಳಲ್ಲಿ ಭಾರೀ ವ್ಯತ್ಯಾಸ

- Advertisement -
- Advertisement -

ಜನಪರ ಸಂಘಟನೆಗಳು ಮತ್ತು ಜಾತ್ಯತೀತ ಪಕ್ಷಗಳ ವಿರೋಧ, ಆತಂಕ ಹಾಗೂ ಆರೋಪಗಳ ಹೊರತಾಗಿಯೂ ಕರ್ನಾಟಕದಲ್ಲಿ ಎಸ್‌ಐಆರ್ ಪ್ರಕ್ರಿಯೆ ಮುಗಿದಿದೆ. ದಿನಾಂಕ: 2026ರ ಅಕ್ಟೋಬರ್ 27 ರಂದು ರಾಜ್ಯ ಮುಖ್ಯ ಚುನಾವಣಾ ಆಯುಕ್ತರಾದ ಅನ್ಬುಕುಮಾರ್ ಅವರು ಅಂತಿಮ ಮತದಾರರ ಪಟ್ಟಿಯನ್ನು ಪ್ರಕಟಿಸಿದ್ದಾರೆ. 99.32 ಜನರ ಹೆಸರನ್ನು ಪಟ್ಟಿಯಿಂದ ಡಿಲೀಟ್ ಮಾಡಲಾಗಿದೆ. ಅಂತಿಮ ಮತದಾರರ ಪಟ್ಟಿಯಲ್ಲಿ 4.55 ಕೋಟಿ ಮತದಾರರು ಉಳಿದುಕೊಂಡಿದ್ದಾರೆ. ಭಾರೀ ಪ್ರಮಾಣದಲ್ಲಿ ಹೆಸರು ಡಿಲೀಟ್ ಮಾಡಿರುವುದು 2028ರಲ್ಲಿ ನಡೆಯುವ ವಿಧಾನಸಭಾ ಚುನಾವಣೆ ಫಲಿತಾಂಶದ ಮೇಲೆ ನೇರ ಪರಿಣಾಮ ಬೀರುವ ಸಾಧ್ಯತೆ ಇದೆ.

ಈ ಬಗ್ಗೆ ಈಗಾಗಲೇ ‘ನಾನುಗೌರಿ.ಕಾಮ್’ನಲ್ಲಿ ಈ ಬಗ್ಗೆ ವಿಶ್ಲೇಷಣೆ ಮಾಡಲಾಗಿತ್ತು. ಕಾಂಗ್ರೆಸ್ ಕಡಿಮೆ ಅಂತರದಲ್ಲಿ ಗೆದ್ದಿರುವ ಸುಮಾರು 97 ಕ್ಷೇತ್ರಗಳನ್ನು ಪಟ್ಟಿ ಮಾಡಿ, ಈ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಆಗಬಹುದಾದ ನಷ್ಟದ ಬಗ್ಗೆ ಅಂದಾಜಿಸಲಾಗಿತ್ತು.

ಎಸ್‌ಐಆರ್ ಆರಂಭದಿಂದ ಅಂತ್ಯದವರೆಗೆ

ಇದೀಗ, ಕರ್ನಾಟಕದಲ್ಲಿ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ ಪ್ರಕ್ರಿಯೆ ಪೂರ್ಣಗೊಂಡಿದೆ. 2026ರ ಅಕ್ಟೋಬರ್ 27ರಂದು ಪ್ರಕಟವಾದ ಅಂತಿಮ ಮತದಾರರ ಪಟ್ಟಿಯಲ್ಲಿ 4,55,00,011 ಮತದಾರರು ಉಳಿದಿದ್ದಾರೆ. ಪರಿಷ್ಕರಣೆ ಆರಂಭಕ್ಕೂ ಮುನ್ನ ಇದ್ದ ಮತದಾರರ ಸಂಖ್ಯೆಗೆ ಹೋಲಿಸಿದರೆ, ಅಂತಿಮ ಪಟ್ಟಿಯಲ್ಲಿ 99,32,303 ಮತದಾರರು ಡಿಲೀಟ್ ಆಗಿದ್ದಾರೆ.

2026ರ ಜೂನ್ 30ರಂದು ಆರಂಭವಾದ ಈ ಪ್ರಕ್ರಿಯೆಯ ಸಂದರ್ಭದಲ್ಲಿ ಮತದಾರರ ಮಾಹಿತಿಯನ್ನು ಪರಿಶೀಲಿಸಿ, ಕರಡು ಮತದಾರರ ಪಟ್ಟಿಯನ್ನು ಆಗಸ್ಟ್ 24ರಂದು ಪ್ರಕಟಿಸಲಾಗಿತ್ತು. ಆ ಪಟ್ಟಿಯಲ್ಲಿ 4,46,35,975 ಮತದಾರರಿದ್ದರು. ಇದಕ್ಕೂ ಮುನ್ನ ಇದ್ದ ಪಟ್ಟಿಯಲ್ಲಿನ 5,54,32,314 ಮತದಾರರಿಗೆ ಹೋಲಿಸಿದರೆ, ಕರಡು ಪಟ್ಟಿಯಲ್ಲಿ 1,07,96,339 ಹೆಸರುಗಳನ್ನು ಕೈಬಿಡಲಾಗಿತ್ತು.

ಕರಡುಪಟ್ಟಿ ಪ್ರಕಟವಾದ ಬಳಿಕ ಮತದಾರರಿಗೆ ತಮ್ಮ ಹೆಸರುಗಳನ್ನು ಪರಿಶೀಲಿಸಲು, ಆಕ್ಷೇಪಣೆ ಸಲ್ಲಿಸಲು ಹಾಗೂ ಅರ್ಹ ಮತದಾರರು ತಮ್ಮ ಹೆಸರುಗಳನ್ನು ಸೇರ್ಪಡೆಗೊಳಿಸಲು ಅವಕಾಶ ನೀಡಲಾಗಿತ್ತು. ಈ ಪ್ರಕ್ರಿಯೆಯಲ್ಲಿ ಹೊಸದಾಗಿ 10,08,038 ಮತದಾರರ ಹೆಸರುಗಳನ್ನು ಸೇರ್ಪಡೆ ಮಾಡಲಾಗಿದ್ದು, 1,88,324 ಹೆಸರುಗಳನ್ನು ತೆಗೆದುಹಾಕಲಾಗಿದೆ ಎಂದು ವರದಿಗಳು ತಿಳಿಸಿವೆ. ಈ ಬದಲಾವಣೆಗಳ ಬಳಿಕ ಅಂತಿಮ ಪಟ್ಟಿಯಲ್ಲಿನ ಒಟ್ಟು ಮತದಾರರ ಸಂಖ್ಯೆ 4.55 ಕೋಟಿಗೆ ಇಳಿದಿದೆ.

ಕರಡು ಪಟ್ಟಿಯಿಂದ ಹೆಸರುಗಳನ್ನು ತೆಗೆದುಹಾಕಲು ಹಲವು ಕಾರಣಗಳನ್ನು ಗುರುತಿಸಲಾಗಿತ್ತು. ಶಾಶ್ವತವಾಗಿ ಸ್ಥಳಾಂತರಗೊಂಡವರು, ಪರಿಶೀಲನೆ ಸಂದರ್ಭದಲ್ಲಿ ಪತ್ತೆಯಾಗದವರು ಅಥವಾ ಗೈರುಹಾಜರಿದ್ದವರು, ಮೃತಪಟ್ಟವರು ಹಾಗೂ ಪುನರಾವರ್ತಿತ ಅಥವಾ ನಕಲಿ ನಮೂದುಗಳು ಪ್ರಮುಖ ವರ್ಗಗಳಾಗಿದ್ದವು. ವರದಿಗಳ ಪ್ರಕಾರ, ಸುಮಾರು 65.46 ಲಕ್ಷ ಮತದಾರರನ್ನು ಶಾಶ್ವತವಾಗಿ ಸ್ಥಳಾಂತರಗೊಂಡವರ ವರ್ಗದಲ್ಲಿ ಗುರುತಿಸಲಾಗಿತ್ತು. ಸುಮಾರು 19 ಲಕ್ಷ ಹೆಸರುಗಳು ಪತ್ತೆಯಾಗದವರು ಅಥವಾ ಗೈರುಹಾಜರಿದ್ದವರ ವರ್ಗದಲ್ಲಿದ್ದವು. ಮೃತಪಟ್ಟ ಮತದಾರರ ಸಂಖ್ಯೆ ಸುಮಾರು 16.4 ಲಕ್ಷವಾಗಿದ್ದು, ನಕಲಿ ಅಥವಾ ಪುನರಾವರ್ತಿತ ನಮೂದುಗಳ ಸಂಖ್ಯೆ ಸುಮಾರು 7.1 ಲಕ್ಷ ಎಂದು ವರದಿಯಾಗಿದೆ.

2028 ರ ಚುನಾವಣೆ ಮೇಲೆ ಬೀರುವ ಪರಿಣಾಮವೇನು?

2028ರ ವಿಧಾನಸಭಾ ಚುನಾವಣೆಯಲ್ಲಿ ಕಡಿಮೆ ಮತಗಳ ಅಂತರದಿಂದ ಗೆದ್ದ ವಿಧಾನಸಭಾ ಕ್ಷೇತ್ರಗಳ ಮೇಲೆ ಕಣ್ಣಿಟ್ಟಿರುವ ಬಿಜೆಪಿಯು, ಅಂತಹ ಕ್ಷೇತ್ರಗಳಲ್ಲಿ ಎಸ್‌ಐಆರ್ ಹೆಸರಿನಲ್ಲಿ ಕಾಂಗ್ರೆಸ್ ಮತಬ್ಯಾಂಕ್ ಒಡೆಯುವ ಸಾಧ್ಯತೆ ಇದೆ ಎಂದು ಈ ಹಿಂದೆ ನಾಗರಿಕ ಸಂಘಟನೆಗಳು ಆತಂಕ ವ್ಯಕ್ತಪಡಿಸಿದ್ದವು. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಗೆದ್ದಿರುವ 135 ಕ್ಷೇತ್ರಗಳಲ್ಲಿ 97 ರಿಂದ 100 ಸ್ಥಾನಗಳನ್ನು ಕಡಿಮೆ ಅಂತರರಿAದ ಗೆದ್ದಿದೆ.

30 ಸಾವಿರದಿಂದ ಒಂದು ಸಾವಿರದ ಒಳಗಿನ ಮತಗಳ ಅಂತರದಿಂದ ಗೆದ್ದಿರುವ ಕರ್ನಾಟಕದ 97 ಕ್ಷೇತ್ರಗಳನ್ನು ನಾವು ಪಟ್ಟಿ ಮಾಡಿದ್ದೇವೆ. ಈಗ ಆ ಕ್ಷೇತ್ರಗಳಲ್ಲಿ ಡಿಲೀಟ್ ಆಗಿರುವ ಮತಗಳ ಸಂಖ್ಯೆ ಹಾಗೂ ಕಾಂಗ್ರೆಸ್ ಗೆದ್ದಿರುವ ಮತಗಳ ಅಂತರದ ಕುರಿತು ವಿಶ್ಲೇಷಣೆ ಮಾಡಲಾಗಿದೆ.

192 ಕ್ಷೇತ್ರಗಳಲ್ಲಿ ಗೆಲುವಿನ ಅಂತರಕ್ಕಿಂತ ಹೆಚ್ಚು ಮತಗಳು ಡಿಲೀಟ್

ರಾಜ್ಯದ 224 ಕ್ಷೇತ್ರಗಳ ದತ್ತಾಂಶವನ್ನು ಎಸ್‌ಐಆರ್ ವಿರೋಧಿ ಒಕ್ಕೂಟದ ಭಾಗವಾದ ‘ಮತ ಕಾವಲು ಸಮಿತಿ’ ಸಂಗ್ರಹಿಸಿದ್ದು, ರಾಜ್ಯದ 192 ಕ್ಷೇತ್ರಗಳಲ್ಲಿ ಗೆಲುವಿನ ಅಂತರಕ್ಕಿಂತ ಹೆಚ್ಚು ಮತಗಳು ಡಿಲೀಟ್ ಆಗಿರುವುದು ಕಂಡುಬಂದಿದೆ. ಕಾಂಗ್ರೆಸ್ ಅತಿಹೆಚ್ಚು, ಅಂದರೆ 115 ಕ್ಷೇತ್ರಗಳಲ್ಲಿ ಗೆಲುವಿನ ಅಂತರಕಿಂತ ಹೆಚ್ಚಿನ ಮತಗಳು ಡಿಲೀಟ್ ಆಗಿದ್ದರೆ, ಬಿಜೆಪಿಯ 58 ಕ್ಷೇತ್ರಗಳು ಹಾಗೂ ಜೆಡಿಎಸ್‌ನ 19 ಕ್ಷೇತ್ರಗಳಲ್ಲಿ ಅಲ್ಪ ಮಟ್ಟಿಗಿನ ವ್ಯತ್ಸಾಸ ಕಂಡುಬಂದಿದೆ. ಇದೀಗ ಡಿಲೀಟ್ ಆಗಿರುವ 99.3 ಲಕ್ಷದಲ್ಲಿನ ಅರ್ಹ ಮತದಾರರು ಮತದಾರರ ಪಟ್ಟಿಗೆ ಸೇರ್ಪಡೆಯಾಗದೇ ಇದ್ದರೆ, 2028ರ ಚುನಾವಣಾ ಫಲಿತಾಂಶದ ಮೇಲೆ ನೇರ ಪರಿಣಾಮ ಬೀರುವ ಸಾಧ್ಯತೆ ಇದೆ.

2023ರ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ 135, ಬಿಜೆಪಿ 66 ಮತ್ತು ಜೆಡಿಎಸ್ 19 ಸ್ಥಾನಗಳಲ್ಲಿ ಗೆದ್ದರೆ, 4 ಕ್ಷೇತ್ರಗಳಲ್ಲಿ ಸ್ವತಂತ್ರ ಅಭ್ಯರ್ಥಿಗಳು ಗೆದ್ದಿದ್ದಾರೆ. ಉಪ ಚುನಾವಣೆಗಳ ಬಳಿಕ ಕಾಂಗ್ರೆಸ್ ತನ್ನ ಸೀಟ್‌ಗಳ ಸಂಖ್ಯೆಯಲ್ಲಿ ಏರಿಕೆ ಕಂಡಿದೆ. 2023ರಲ್ಲಿ ಕಾಂಗ್ರೆಸ್ ಗೆದ್ದಿರುವ 135 ಕ್ಷೇತ್ರಗಳ ಪೈಕಿ 115 ಕ್ಷೇತ್ರಗಲ್ಲಿ ಗೆಲುವಿನ ಅಂತರಕ್ಕಿಂತ ಹೆಚ್ಚಿನ ಮತಗಳು ಡಿಲೀಟ್ ಆಗಿವೆ. ಬಿಜೆಪಿ ಗೆದ್ದ 66 ಕ್ಷೇತ್ರಗಳ ಪೈಕಿ 58 ರಲ್ಲಿ ಮತ್ತು ಜೆಡಿಎಸ್ ಗೆದ್ದ 19ಕ್ಕೆ 19 ಕ್ಷೇತ್ರಗಳಲ್ಲಿ ಗೆಲುವಿನ ಅಂತರಕ್ಕಿಂತ ಹೆಚ್ಚಿನ ಮತಗಳು ಡಿಲೀಟ್ ಆಗಿವೆ. ಈ ವ್ಯತ್ಯಾಸಗಳು, 2028ಕ್ಕೆ ನಡೆಯುವ ಚುನಾವಣೆ ಫಲಿತಾಂಶದ ಮೇಲೆ ಪರಿಣಾಮ ಬೀರುವುದು ಖಚಿತವಾದರೂ, ಯಾವ ಪಕ್ಷದ ಮೇಲೆ ನೇರ ಪರಿಣಾಮ ಬೀರಲಿದೆ ಎಂಬುದನ್ನು ಈಗಲೇ ಖಚಿತವಾಗಿ ಹೇಳುವುದಕ್ಕೆ ಸಾಧ್ಯವಿಲ್ಲ. ಆದರೆ, ಕಾಂಗ್ರೆಸ್ ಈ ಹಿಂದೆ ಅಲ್ಪಮತಗಳ ಅಂತರದಿಂದ ಗೆದ್ದಿರುವ ಸುಮಾರು 97 ಕ್ಷೇತ್ರಗಳಲ್ಲಿ ಆಡಳಿತ ಪಕ್ಷಕ್ಕೆ ವ್ಯಕ್ತರಿಕ್ತ ತೀರ್ಪು ಬರುವು ಸಾಧ್ಯತೆಗಳನ್ನು ತಳ್ಳಿ ಹಾಕುವಂತಿಲ್ಲ.

ಹಾಲಿ ಸಚಿವರು ಮತ್ತು ಬೆಂಗಳೂರು ನಗರ ಶಾಸಕರ ಕ್ಷೇತ್ರಗಳಲ್ಲಿ ಭಾರೀ ಕಡಿತ

ಕಾಂಗ್ರೆಸ್ ಸರ್ಕಾರದ ಹಾಲಿ ಸಚಿವರು ಮತ್ತು ಬೆಂಗಳೂರು ನಗರ ಜಿಲ್ಲೆ ಹಾಗೂ ಜಿಬಿಎ ವ್ಯಾಪ್ತಿಯ ಶಾಸಕರ ಕ್ಷೇತ್ರಗಳಲ್ಲಿ ಭಾರೀ ಸಂಖ್ಯೆಯಲ್ಲಿ ಮತಗಳ ಕಡಿತ ಮಾಡಲಾಗಿದೆ. ಎಸ್‌ಐಆರ್ ಅಂತಿಮ ಮತದಾರರ ಪಟ್ಟಿಯ ಪ್ರಕಾರ, ಬೆಂಗಳೂರು ನಗರದ 28 ವಿಧಾನಸಭಾ ಕ್ಷೇತ್ರಗಳಲ್ಲಿ ಒಟ್ಟು 46.88 ಲಕ್ಷ ಮತದಾರರ ಹೆಸರುಗಳನ್ನು ಪಟ್ಟಿಯಿಂದ ಕಡಿತಗೊಳಿಸಲಾಗಿದೆ. ಈ ಬೃಹತ್ ಪರಿಷ್ಕರಣೆಯಿಂದಾಗಿ ಬೆಂಗಳೂರಿನ ಒಟ್ಟು ಮತದಾರರ ಸಂಖ್ಯೆಯು 1.03 ಕೋಟಿಯಿಂದ 59.08 ಲಕ್ಷಕ್ಕೆ ಕುಸಿದಿದೆ. ಶಾಶ್ವತವಾಗಿ ಸ್ಥಳಾಂತರಗೊಂಡಿದ್ದಾರೆ ಎಂದು ಸುಮಾರು 32.74 ಲಕ್ಷ, ಗೈರುಹಾಜರಾಗಿದ್ದಾರೆ ಎಂದು 7.27 ಲಕ್ಷಕ್ಕೂ ಹೆಚ್ಚು, ಮೃತಪಟ್ಟವರು ಎಂದು 3.19 ಲಕ್ಷಕ್ಕೂ ಹೆಚ್ಚು ಮತದಾರರ ಹೆಸರನ್ನು ಡಿಲೀಟ್ ಮಾಡಲಾಗಿದೆ.

ಅತಿಹೆಚ್ಚು ಮತದಾರರು ಕಡಿತಗೊಂಡ ಪ್ರಮುಖ ಕ್ಷೇತ್ರಗಳು

ಬಿಜೆಪಿ ಶಾಸಕ ಎಂ.ಕೃಷ್ಣಪ್ಪ ಪ್ರತಿನಿಧಿಸುತ್ತಿರುವ ಬೆಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ 3.55 ಲಕ್ಷಕ್ಕೂ ಹೆಚ್ಚು, ಬಿಜೆಪಿ ಶಾಸಕಿ ಮಂಜುಳಾ ಲಿಂಬಾವಳಿ ಅವರು ಪ್ರತಿನಿಧಿಸುತ್ತಿರುವ ಮಹದೇವಪುರ ಕ್ಷೇತ್ರದಲ್ಲಿ 284.463 ಮತಗಳು, ಬಿಜೆಪಿ ಶಾಸಕ ಎಂ. ಸತೀಶ್ ರೆಡ್ಡಿ ಪ್ರತಿನಿಧಿಸುವ ಬೊಮ್ಮನಹಳ್ಳಿ ಕ್ಷೇತ್ರದಲ್ಲಿ 265.202, ಬಿಜೆಪಿಯ ಬೈರತಿ ಬಸವರಾಜು ಅವರು ಶಾಸಕರಾಗಿರುವ ಕೆ.ಆರ್. ಪುರ ಕ್ಷೇತ್ರದಲ್ಲಿ 259.305, ಬಿಜೆಪಿಯ ಮತ್ತೋರ್ವ ಶಾಸಕ ಕೆ.ಗೋಪಾಲಯ್ಯ ಶಾಸಕರಾಗಿರುವ ಮಹಾಲಕ್ಷ್ಮಿ ಲೇಔಟ್ ವಿಧಾನಸಭಾ ಕ್ಷೇತ್ರದಲ್ಲಿ 134,223, ಮಾಜಿ ಶಾಸಕ ಅಶ್ವತ್ಥನಾರಾಯಣ ಶಾಸಕರಾಗಿರುವ ಮಲ್ಲೇಶ್ವರ ವಿಧಾನಸಭಾ ಕ್ಷೇತ್ರಸಲ್ಲಿ 109.599, ರಘು ಶಾಸಕರಾಗಿರುವ ಸಿವಿ ರಾಮನ್ ನಗರದಲ್ಲಿ 140.272, ಮುನಿರತ್ನ ನಾಯ್ಡು ಶಾಸಕರಾಗಿರುವ ರಾಜರಾಜೇಶ್ವರಿನಗರ ವಿಧಾನಸಭಾ ಕ್ಷೇತ್ರದಲ್ಲಿ 243.924, ಎಸ್‌ಆರ್ ವಿಶ್ವನಾಥ್ ಶಾಕರಾಗಿರುವ ಯಲಹಂಕ ವಿಧಾನಸಭಾ ಕ್ಷೇತ್ರದಲ್ಲಿ 172.458, ಉದಯ್ ಗರುಡಾಚಾರ್ ಪ್ರತಿನಿಧಿಸುವ ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರದಲ್ಲಿ 107,757, ಯಶವಂತಪುರ ವಿಧಾನಸಭಾ ಕ್ಷೇತ್ರದಲ್ಲಿ 237,616, ಸುರೇಶ್ ಕುಮಾರ್ ಅವರು ಪ್ರತಿನಿಧಿಸುತ್ತಿರುವ ರಾಜಾಜಿನಗರ ವಿಧಾನಸಭಾ ಕ್ಷೇತ್ರದಲ್ಲಿ 100,357, ರವಿ ಸುಬ್ರಮಣ್ಯ ಅವರು ಶಾಕರಾಗಿರುವ ಬಸವನಗುಡಿಯಲ್ಲಿ 113,085, ಆರ್. ಅಶೋಕ್ ಶಾಸಕರಾಗಿರುವ ಪದ್ಮನಾಭನಗರದಲ್ಲಿ 125,994, ಸಿ.ಕೆ. ರಾಮಮೂರ್ತಿ ಶಾಸಕರಾಗಿರುವ ಜಯನಗರದಲ್ಲಿ 93,318 ಮತದಾರರ ಹೆಸರನ್ನು ಡಿಲೀಟ್ ಮಾಡಲಾಗಿದೆ.

ಇನ್ನು ಬೆಂಗಳೂರು ನಗರದ ಕಾಂಗ್ರೆಸ್ ಶಾಸಕರ ಕ್ಷೇತ್ರಗಳಲ್ಲಿ ನೋಡುವುದಾದರೆ, ಕಳೆದ ಚುನಾವಣೆಯಲ್ಲಿ 105 ಮತಗಳ ಕಡಿಮೆ ಅಂತರದಲ್ಲಿ ಗೆದ್ದಿರುವ ಗಾಂಧಿನಗರ ವಿಧಾನಸಭಾ ಕ್ಷೇತ್ರದ ಶಾಸಕ ದಿನೇಶ್ ಗುಂಡೂರಾವ್ ಅವರ ಕ್ಷೇತ್ರದಲ್ಲಿ 112.247 ಮತಗಳನ್ನು ಡಿಲೀಟ್ ಮಾಡಲಾಗಿದೆ. ಇಂಧನ ಸಚಿವ ಕೆ.ಜೆ. ಜಾರ್ಜ್ ಪ್ರತಿನಿಧಿಸುವ ಸರ್ವಜ್ಞನಗರದಲ್ಲಿ 164.060, ಆಹಾರ ಸಚಿವ ರಿಜ್ವಾನ್ ಅರ್ಷದ್ ಪ್ರತಿನಿಧಿಸುವ ಶಿವಾಜಿನಗರದಲ್ಲಿ 81,372, ಸಚಿವ ಜಮೀರ್ ಅಹಮದ್ ಅವರು ಪ್ರತಿನಿಧಿಸುವ ಚಾಮರಾಜಪೇಟೆಯಲ್ಲಿ 107,757, ಎಸಿ ಶ್ರೀನಿವಾಸ್ ಅವರು ಶಾಕರಾಗಿರುವ ಪುಲಿಕೇಶಿನಗರ ವಿಧಾನಸಭಾ ಕ್ಷೇತ್ರದಲ್ಲಿ 109.588, ಬಿಡಿಎ ಅಧ್ಯಕ್ಷರಾದ ಎನ್.ಎ. ಹ್ಯಾರಿಸ್ ಅವರ ಶಾಂತಿನಗರ ಕ್ಷೇತ್ರದಲ್ಲಿ 106,315, ಬೆಂಗಳೂರು ನಗರ ಅಭಿವೃದ್ಧಿ ಸಚಿವರಾದ ಕೃಷ್ಣ ಬೈರೇಗೌಡ ಅವರ ಬ್ಯಾಟರಾಯನಪುರ ಕ್ಷೇತ್ರದಲ್ಲಿ 227,630, ಸಚಿವ ಬೈರತಿ ಸುರೇಶ್ ಅವರ ಹೆಬ್ಬಾಳ ಕ್ಷೇತ್ರದಲ್ಲಿ 130,449, ಪ್ರಿಯಾ ಕೃಷ್ಣ ಅವರು ಶಾಸಕರಾಗಿರುವ ಗೋವಿಂದರಾಜನಗರದಲ್ಲಿ 148,785, ಕಾಂಗ್ರೆಸ್ ಹಿರಿಯ ಶಾಸಕ ಎಂ.ಕೃಷ್ಣಪ್ಪ ಅವರ ವಿಜಯನಗರ ಕ್ಷೇತ್ರದಲ್ಲಿ 162,692, ಸಚಿವ ರಾಮಲಿಂಗಾರೆಡ್ಡಿ ಅವರ ಬಿ.ಟಿ.ಎಂ. ಲೇಔಟ್‌ನಲ್ಲಿ 146,073, ಬಿ.ಶಿವಣ್ಣ ಶಾಸಕರಾಗಿರುವ ಆನೇಕಲ್‌ನಲ್ಲಿ 187,599 ಮತದಾರರ ಹೆಸರನ್ನು ಡಿಲೀಟ್ ಮಾಡಿಲಾಗಿದೆ.

ಡಿ.ಕೆ. ಶಿವಕುಮಾರ್ ಸಂಪುಟದ ಹಾಲಿ ಸಚಿವರ ಕ್ಷೇತ್ರದಲ್ಲಿ ಡಿಲೀಟ್ ಆದ ಮತಗಳೆಷ್ಟು..?

ಚುನಾವಣಾ ಆಯೋಗವು ಅಕ್ಟೋಬರ್ 27ರಂದು ಬಿಡುಗಡೆ ಮಾಡಿರುವ ಎಸ್‌ಐಆರ್ ಅಂತಿಮ ಪಟ್ಟಿಯಲ್ಲಿ 99.32 ಲಕ್ಷ ಜನರ ಹೆಸರನ್ನು ಡಿಲೀಟ್ ಮಾಡಲಾಗಿದೆ. 224 ಕ್ಷೇತ್ರಗಳ ಪೈಕಿ 192 ಕ್ಷೇತ್ರಗಳಲ್ಲಿ ಗೆಲುವಿನ ಅಂತರಕ್ಕಿಂತ ಹೆಚ್ಚು ಮತಗಳು ಡಿಲೀಟ್ ಆಗಿವೆ. ಕಾಂಗ್ರೆಸ್‌ನ 115, ಬಿಜೆಪಿಯ 58 ಹಾಗೂ ಜೆಡಿ (ಎಸ್) 2023ರಲ್ಲಿ ಗೆದ್ದಿದ್ದ 19 ಕ್ಷೇತ್ರಗಳಲ್ಲಿ ಗೆಲುವಿನ ಅಂತರ ಮತ್ತು ಡಿಲೀಟ್ ಆದ ಮತಗಳ ಸಂಖ್ಯೆಯಲ್ಲಿ ಭಾರಿ ವ್ಯತ್ಯಾಸ ಕಂಡುಬಂದಿದೆ.

ಡಿ.ಕೆ. ಶಿವಕುಮಾರ್ ಸಚಿವ ಸಂಪುಟದಲ್ಲಿರುವ ಹಾಲಿ ಸಚಿವರ ಕ್ಷೇತ್ರಗಳಲ್ಲಿ ಸಹ ಬೃಹತ್ ಪ್ರಮಾಣದಲ್ಲಿ ಮತಗಳು ಡಿಲೀಟ್ ಆಗಿದೆ. ಅದರಲ್ಲೂ ಬೆಂಗಳೂರು ನಗರದ ಸಚಿವರ ಕ್ಷೇತ್ರದಲ್ಲಿ ಲಕ್ಷಗಟ್ಟಲೆ ಮತಗಳು ಡಿಲೀಟ್ ಆಗಿರುವುದು ಆತಂಕ ಮೂಡಿಸಿದೆ. ಅದರ ಬಗ್ಗೆ ‘ಮತ ಕಾವಲು’ ಸಮಿತಿ ದತ್ತಾಂಶ ಸಂಗ್ರಹಿಸಿದ್ದು, ನಾನುಗೌರಿ.ಕಾಮ್ ವಿಶ್ಲೇಷಣೆ ಮಾಡಿದೆ.



ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಕನಕಪುರ ವಿಧಾನಸಭಾ ಕ್ಷೇತ್ರದಲ್ಲಿ 32,814 ಮತಗಳು ಡಿಲೀಟ್ ಆಗಿದೆ. ಆದರೆ, 2023ರ ವಿಧಾನಸಭಾ ಚುನಾವಣೆಯಲ್ಲಿ ಅವರ ಗೆಲುವಿನ ಅಂತರ 122,392 ಆಗಿತ್ತು. ಪ್ರಸ್ತುತ ಡಿಲೀಟ್ ಆಗಿರುವ ಮತಗಳು 32,814 ಮಾತ್ರ. ಕೊನೆಯ ಚುನಾವಣೆಯಲ್ಲಿ ಡಿ.ಕೆ. ಶಿವಕುಮಾರ್ 1,43,023 ಮತಗಳು ಪಡೆದರೆ, ಜೆಡಿಎಸ್ ಪಕ್ಷದ ಬಿ. ನಾಗರಾಜು 20,631 ಮತ್ತು ಬಿಜೆಪಿಯ ಆರ್. ಅಶೋಕ್ 19,753 ಮತಗಳನ್ನು ಪಡೆದಿದ್ದರು.

ಡಾ. ಜಿ. ಪರಮೇಶ್ವರ – ಕೊರಟಗೆರೆ ವಿಧಾನಸಭಾ ಕ್ಷೇತ್ರ

2013ರ ವಿಧಾನಸಭೆ ಚುನಾವಣೆಯಲ್ಲಿ ಉಪ ಮುಖ್ಯಮಂತ್ರಿಗಳಾದ ಡಾ. ಜಿ. ಪರಮೇಶ್ವರ ಅವರು 79,099 ಪಡೆಯುವ ಮೂಲಕ 64,752 ಮತಗಳನ್ನು ಪಡೆದಿದ್ದ ಜೆಡಿಎಸ್‌ನ ಪಿ. ಆರ್. ಸುಧಾಕರ್ ಲಾಲ್ ವಿರುದ್ಧ ಅಲ್ಪ ಮತಗಳ ಅಂತರದಿಂದ ಜಯಗಳಿಸಿದ್ದರು. ಬಿಜೆಪಿಯ ಬಿ. ಎಚ್. ಅನಿಲ್ ಕುಮಾರ್ ಅವರು 24,091 ಮತಗಳನ್ನು ಪಡೆದು ಮೂರನೇ ಸ್ಥಾನಕ್ಕೆ ತಲುಪಿಸಿದ್ದರು. ಇವರ ಗೆಲುವಿನ ಅಂತರ 14,347, ಎಸ್‌ಐಆರ್ ಪಟ್ಟಿಯಲ್ಲಿ ಡಿಲೀಟ್ ಆದ ಮತಗಳ ಸಂಖ್ಯೆ 24,091, ಕೊರಟಗೆರೆಯಲ್ಲಿಯೂ ಸಹ ಡಿಲೀಟ್ ಆದ ಮತಗಳ ಸಂಖ್ಯೆ ಗೆಲುವಿನ ಅಂತರಕ್ಕಿಂತ ಹೆಚ್ಚಾಗಿದೆ.

ಪ್ರಿಯಾಂಕ್ ಖರ್ಗೆ – ಚಿತ್ತಾಪುರ ವಿಧಾನಸಭಾ ಕ್ಷೇತ್ರ

2023ರ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪ್ರಿಯಾಂಕ್ ಖರ್ಗೆ ಅವರು ತಮ್ಮ ಸಮೀಪದ ಪ್ರತಿಸ್ಪರ್ಧಿ ಬಿಜೆಪಿಯ ಮಣಿಕಂಠ ರಾಠೋಡ್ ಅವರ ವಿರುದ್ಧ 13,640 ಮತಗಳ ಅಂತರದಿAದ ಜಯ ದಾಖಲಿಸಿದ್ದರು.

ಪ್ರಿಯಾಂಕ್ ಖರ್ಗೆ ಅವರು 81,323 ಮತಗಳನ್ನು ಪಡೆದರೆ, ಬಿಜೆಪಿಯ ಮಣಿಕಂಠ ರಾಠೋಡ್ 67,683 ಮತಗಳನ್ನು ಪಡೆದಿದ್ದರು. ಜೆಡಿಎಸ್‌ನ ಡಾ. ಸುಭಾಷ್ ಚಂದ್ರ ರಾಥೋಡ್ 643 ಮತಗಳನ್ನು ಪಡೆದಿದ್ದರು. ಚಿತ್ತಾಪುರದಲ್ಲಿ ಗೆಲುವಿನ ಅಂತರ 13,640 ಮತಗಳಾಗಿದ್ದು, ಎಸ್‌ಐಆರ್ ಬಳಿಕ ಕ್ಷೇತ್ರದಲ್ಲಿ 62,502 ಮತಗಳನ್ನು ಡಿಲೀಟ್ ಮಾಡಲಾಗಿದೆ. ಚಿತ್ತಾಪುರದಲ್ಲಿಯೂ ಸಹ ಡಿಲೀಟ್ ಆದ ಮತಗಳ ಸಂಖ್ಯೆ ಗೆಲುವಿನ ಅಂತರಕ್ಕಿಂತ ಮೂರ್ನಾಲ್ಕು ಪಟ್ಟು ಹೆಚ್ಚಿದೆ.

ಕೃಷ್ಣ ಬೈರೇಗೌಡ – ಬ್ಯಾಟರಾಯನಪುರ ವಿಧಾನಸಭಾ ಕ್ಷೇತ್ರ

ಬ್ಯಾಟರಾಯನಪುರ ವಿಧಾನಸಭಾ ಕ್ಷೇತ್ರವು ಬೆಂಗಳೂರು ನಗರ ಜಿಲ್ಲೆಯ ಪ್ರಮುಖ ಕ್ಷೇತ್ರವಾಗಿದೆ. ಕಾಂಗ್ರೆಸ್ ಪಕ್ಷದ ಅನುಭವಿ ನಾಯಕ ಹಾಗೂ ಬೆಂಗಳೂರು ನಗರಾಭಿವೃದ್ಧಿ ಸಚಿವರಾದ ಕೃಷ್ಣ ಬೈರೇಗೌಡ ಅವರು ಪ್ರತಿನಿಧಿಸುತ್ತಿದ್ದಾರೆ. ಈ ಕ್ಷೇತ್ರವು ಅಸ್ತಿತ್ವಕ್ಕೆ ಬಂದ ದಿನದಿಂದಲೂ (2008) ಕೃಷ್ಣ ಬೈರೇಗೌಡ ಅವರೇ ಇಲ್ಲಿ ಸತತವಾಗಿ ಜಯಗಳಿಸುತ್ತಾ ಬಂದಿದ್ದಾರೆ. ಮುಖ್ಯವಾಗಿ, ಅತಿ ಹೆಚ್ಚು ಮತಗಳು ಡಿಲೀಟ್ ಆದ ಕ್ಷೇತ್ರಗಳಲ್ಲಿ ಬ್ಯಾಟರಾಯನಪುರವೂ ಒಂದಾಗಿದೆ.

2023ರ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಕೃಷ್ಣ ಬೈರೇಗೌಡ ಅವರು ತಮ್ಮ ಸಮೀಪದ ಪ್ರತಿಸ್ಪರ್ಧಿ ಬಿಜೆಪಿಯ ಎಚ್.ಸಿ. ತಮ್ಮೇಶ್ ಗೌಡ ಅವರ ವಿರುದ್ಧ 38,204 ಮತಗಳ ಅಂತರದಿಂದ ಭರ್ಜರಿ ಜಯ ಸಾಧಿಸಿದ್ದರು.

ಕಾಂಗ್ರೆಸ್‌ನ ಕೃಷ್ಣ ಬೈರೇಗೌಡ ಅವರು 1,60,182 ಮತಗಳನ್ನು ಪಡೆದರೆ, ಬಿಜೆಪಿಯ ಎಚ್.ಸಿ. ತಮ್ಮೇಶ್ ಗೌಡ ಅವರು 1,21,978 ಮತಗಳನ್ನು ಪಡೆದಿದ್ದರು. ಜೆಡಿಎಸ್‌ನ ಪಿ. ನಾಗರಾಜ್ ಗೌಡ ಅವರು 4,365 ಮತಗಳನ್ನು ಪಡೆದಿದ್ದರು. ಬ್ಯಾಟರಾಯನಪುರ ಕ್ಷೇತ್ರದಲ್ಲಿ ಭಾರಿ ಸಂಖ್ಯೆಯಲ್ಲಿ ಮತಗಳು ಡಿಲೀಟ್ ಆಗಿವೆ. 2023ರಲ್ಲಿ ಕೃಷ್ಣ ಬೈರೇಗೌಡ ಅವರ ಗೆಲುವಿನ ಅಂತರ 38,204 ಮತಗಳಾಗಿದ್ದರೆ, ಎಸ್‌ಐಆರ್ ಬಳಿಕ ಬರೋಬ್ಬರಿ 227,630 ಮತಗಳನ್ನು ಡಿಲೀಟ್ ಮಾಡಲಾಗಿದೆ.

ರಾಮಲಿಂಗಾರೆಡ್ಡಿ – ಬಿ.ಟಿ.ಎಂ. ಲೇಔಟ್ ವಿಧಾನಸಭಾ ಕ್ಷೇತ್ರ

ಬಿ.ಟಿ.ಎಂ. ಲೇಔಟ್ ವಿಧಾನಸಭಾ ಕ್ಷೇತ್ರವು ಕರ್ನಾಟಕದ ಬೆಂಗಳೂರು ನಗರ ಜಿಲ್ಲೆಯ ಒಂದು ಪ್ರಮುಖ ಕ್ಷೇತ್ರವಾಗಿದೆ. ಪ್ರಸ್ತುತ ಈ ಕ್ಷೇತ್ರವನ್ನು ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ಹಾಗೂ ಬೃಹತ್ ನೀರಾವರಿ ಸಚಿವರಾದ ರಾಮಲಿಂಗಾರೆಡ್ಡಿ ಅವರು ಪ್ರತಿನಿಧಿಸುತ್ತಿದ್ದಾರೆ. ಈ ಕ್ಷೇತ್ರವು ಅಸ್ತಿತ್ವಕ್ಕೆ ಬಂದ ದಿನದಿಂದಲೂ ರಾಮಲಿಂಗಾರೆಡ್ಡಿ ಅವರೇ ಇಲ್ಲಿ ಸತತವಾಗಿ ಜಯಗಳಿಸುತ್ತಾ ಬಂದಿದ್ದಾರೆ.

2023ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ರಾಮಲಿಂಗಾರೆಡ್ಡಿ ಅವರು ತಮ್ಮ ಸಮೀಪದ ಪ್ರತಿಸ್ಪರ್ಧಿ ಬಿಜೆಪಿಯ ಕೆ.ಆರ್. ಶ್ರೀಧರ ಅವರ ವಿರುದ್ಧ 9,222 ಮತಗಳ ಅಂತರದಿಂದ ಜಯ ದಾಖಲಿಸಿದ್ದರು.

ಕಾಂಗ್ರೆಸ್‌ನ ರಾಮಲಿಂಗಾರೆಡ್ಡಿ ಅವರು 68,557 ಮತಗಳನ್ನು ಪಡೆದರೆ, ಬಿಜೆಪಿಯ ಕೆ. ಆರ್. ಶ್ರೀಧರ ಅವರು 59,335 ಮತಗಳನ್ನು ಪಡೆದಿದ್ದರು. ಬಿಟಿಎಂ ಲೇಔಟ್‌ನಲ್ಲಿಯೂ ಸಹ ಅತಿ ಹೆಚ್ಚಿನ ಮತಗಳು ಡಿಲೀಟ್ ಆಗಿವೆ. 2013ರಲ್ಲಿ ಗೆಲುವಿನ ಅಂತರ 9,222 ಆಗಿದ್ದರೆ, ಎಸ್‌ಐಆರ್ ಬಳಿಕ 146,073 ಮತಗಳು ಡಿಲೀಟ್ ಆಗಿವೆ.

ಈಶ್ವರ್ ಖಂಡ್ರೆ – ಭಾಲ್ಕಿ ವಿಧಾನಸಭಾ ಕ್ಷೇತ್ರ

ಭಾಲ್ಕಿ ವಿಧಾನಸಭಾ ಕ್ಷೇತ್ರವು ಬೀದರ್ ಜಿಲ್ಲೆಯಲ್ಲಿ ಕಾಂಗ್ರೆಸ್ ಭದ್ರಕೋಟೆಯಾಗಿದೆ. ಪ್ರಸ್ತುತ ಈ ಕ್ಷೇತ್ರವನ್ನು ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ಹಾಗೂ ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವರಾದ ಈಶ್ವರ್ ಖಂಡ್ರೆ ಅವರು ಪ್ರತಿನಿಧಿಸುತ್ತಿದ್ದಾರೆ.

2023ರ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಈಶ್ವರ್ ಖಂಡ್ರೆ ಅವರು ತಮ್ಮ ಸಮೀಪದ ಪ್ರತಿಸ್ಪರ್ಧಿ ಬಿಜೆಪಿಯ ಪ್ರಕಾಶ್ ಖಂಡ್ರೆ ಅವರ ವಿರುದ್ಧ 27,706 ಮತಗಳ ಅಂತರದಿಂದ ಜಯ ಸಾಧಿಸಿದ್ದರು. ಈಶ್ವರ್ ಖಂಡ್ರೆ ಅವರು 99,451 ಮತಗಳನ್ನು ಪಡೆದರೆ, ಬಿಜೆಪಿಯ ಪ್ರಕಾಶ್ ಖಂಡ್ರೆ ಅವರು 71,745 ಮತಗಳನ್ನು ಪಡೆದಿದ್ದರು.

2023ರಲ್ಲಿ ಭಾಲ್ಕಿಯಲ್ಲಿ ಗೆಲುವಿನ ಅಂತರ 27,706 ಆಗಿದ್ದರೆ, ಎಸ್‌ಐಆರ್ ಬಳಿಕ ಕ್ಷೇತ್ರದಲ್ಲಿ 35,846 ಗಳು ಡಿಲೀಟ್ ಆಗಿವೆ.

ಸತೀಶ್ ಜಾರಕಿಹೊಳಿ – ಯಮಕನಮರಡಿ ವಿಧಾನಸಭಾ ಕ್ಷೇತ್ರ

ಯಮಕನಮರಡಿ ವಿಧಾನಸಭಾ ಕ್ಷೇತ್ರವು ಬೆಳಗಾವಿ ಜಿಲ್ಲೆಯ ಪ್ರಮುಖ ಕ್ಷೇತ್ರವಾಗಿದೆ. ಪ್ರಸ್ತುತ ಈ ಕ್ಷೇತ್ರವನ್ನು ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ಹಾಗೂ ಕರ್ನಾಟಕ ಸರ್ಕಾರದ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಪ್ರತಿನಿಧಿಸುತ್ತಿದ್ದಾರೆ. ಈ ಕ್ಷೇತ್ರವು ಅಸ್ತಿತ್ವಕ್ಕೆ ಬಂದ ದಿನದಿಂದಲೂ (2008) ಸತೀಶ್ ಜಾರಕಿಹೊಳಿ ಅವರೇ ಇಲ್ಲಿ ಸತತವಾಗಿ ಜಯಗಳಿಸುತ್ತಾ ಬಂದಿದ್ದಾರೆ. ಎಸ್‌ಐಆರ್ ಪ್ರಕ್ರಿಯೆಯನ್ನು ಶ್ಲಾಘಿಸುವ ಮೂಲಕ ಅವರು ಕಾಂಗ್ರೆಸ್ ಪಕ್ಷಕ್ಕೆ ಮುಜುಗರ ಉಂಟುಮಾಡಿದ್ದಾರೆ.

2023ರ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸತೀಶ್ ಜಾರಕಿಹೊಳಿ ಅವರು ತಮ್ಮ ಸಮೀಪದ ಪ್ರತಿಸ್ಪರ್ಧಿ ಬಿಜೆಪಿಯ ಬಸವರಾಜ ಹುಂಡ್ರಿ ಅವರ ವಿರುದ್ಧ 57,211 ಮತಗಳ ಬೃಹತ್ ಅಂತರದಿಂದ ಜಯ ದಾಖಲಿಸಿದ್ದರು.

ಸತೀಶ್ ಜಾರಕಿಹೊಳಿ ಅವರು 1,00,290 ಮತಗಳನ್ನು ಪಡೆದರೆ, ಬಿಜೆಪಿಯ ಬಸವರಾಜ ಹುಂಡ್ರಿ ಅವರು 43,079 ಮತಗಳು ಹಾಗೂ ಜೆಡಿಎಸ್‌ನ ಅಷ್ಟಗಿ ಮಾರುತಿ ಮಲ್ಲಪ್ಪ ಅವರು 19,567 ಮತಗಳನ್ನು ಪಡೆದಿದ್ದರು.

2023ರ ಚುನಾವಣಾ ಫಲಿತಾಂಶದಲ್ಲಿ ಕಾಂಗ್ರೆಸ್ ಗೆಲುವಿನ ಅಂತರ 57,211 ಆಗಿದ್ದರೆ, ಎಸ್‌ಐಆರ್ ಬಳಿಕ 24,235 ಮತಗಳು ಡಿಲೀಟ್ ಆಗಿವೆ.

ಡಾ. ಶರಣ ಪ್ರಕಾಶ್ ಪಾಟೀಲ್ – ಸೇಡಂ ವಿಧಾನಸಭಾ ಕ್ಷೇತ್ರ

ಸೇಡಂ ವಿಧಾನಸಭಾ ಕ್ಷೇತ್ರವು ಕರ್ನಾಟಕದ ಕಲಬುರಗಿ ಜಿಲ್ಲೆಯ ಒಂದು ಪ್ರಮುಖ ಕ್ಷೇತ್ರವಾಗಿದೆ. ಪ್ರಸ್ತುತ ಈ ಕ್ಷೇತ್ರವನ್ನು ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ಹಾಗೂ ವೈದ್ಯಕೀಯ ಶಿಕ್ಷಣ ಸಚಿವರಾದ ಡಾ. ಶರಣಪ್ರಕಾಶ್ ರುದ್ರಪ್ಪ ಪಾಟೀಲ್ ಅವರು ಪ್ರತಿನಿಧಿಸುತ್ತಿದ್ದಾರೆ.

2023ರ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಡಾ. ಶರಣಪ್ರಕಾಶ್ ಪಾಟೀಲ್ ಅವರು ತಮ್ಮ ಸಮೀಪದ ಪ್ರತಿಸ್ಪರ್ಧಿ ಬಿಜೆಪಿಯ ರಾಜ್‌ಕುಮಾರ್ ಪಾಟೀಲ್ ತೇಲ್ಕೂರ್ ಅವರ ವಿರುದ್ಧ 43,561 ಮತಗಳ ಬೃಹತ್ ಅಂತರದಿಂದ ಭರ್ಜರಿ ಜಯ ಸಾಧಿಸಿದ್ದರು.

ಡಾ. ಶರಣಪ್ರಕಾಶ್ ಪಾಟೀಲ್ ಅವರು 93,377 ಮತಗಳನ್ನು ಪಡೆದರೆ, ಬಿಜೆಪಿಯ ರಾಜ್‌ಕುಮಾರ್ ಪಾಟೀಲ್ ತೇಲ್ಕೂರ್ ಅವರು 49,816 ಹಾಗೂ ಜೆಡಿಎಸ್‌ನ ಬಾಲರಾಜ್ ಗುತ್ತೇದಾರ್ ಅವರು 21,125 ಮತಗಳನ್ನು ಪಡೆದರು.

2023ರ ಚುನಾವಣಾ ಫಲಿತಾಂಶದಲ್ಲಿ ಕಾಂಗ್ರೆಸ್ ಗೆಲುವಿನ ಅಂತರ 43,561 ಆಗಿದ್ದರೆ, ಎಸ್‌ಐಆರ್ ಬಳಿಕ 48,691 ಮತಗಳು ಡಿಲೀಟ್ ಆಗಿವೆ.

ಕೆ.ಎಚ್. ಮುನಿಯಪ್ಪ – ದೇವನಹಳ್ಳಿ ವಿಧಾನಸಭಾ ಕ್ಷೇತ್ರ

ದೇವನಹಳ್ಳಿ ವಿಧಾನಸಭಾ ಕ್ಷೇತ್ರವು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಪ್ರಮುಖ ಕ್ಷೇತ್ರವಾಗಿದೆ. ಪ್ರಸ್ತುತ ಈ ಕ್ಷೇತ್ರವನ್ನು ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ಹಾಗೂ ಸಮಾಜ ಕಲ್ಯಾಣ ಇಲಾಖೆ ಸಚಿವರಾದ ಕೆ. ಎಚ್. ಮುನಿಯಪ್ಪ ಅವರು ಪ್ರತಿನಿಧಿಸುತ್ತಿದ್ದಾರೆ.

2023ರ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಕೆ. ಎಚ್. ಮುನಿಯಪ್ಪ ಅವರು ಜೆಡಿಎಸ್‌ನ ಶಾಸಕರಾಗಿದ್ದ ನಿಸರ್ಗ ನಾರಾಯಣಸ್ವಾಮಿ ಎಲ್.ಎನ್ ಅವರ ವಿರುದ್ಧ 4,631 ಮತಗಳ ಅಲ್ಪ ಅಂತರದಿಂದ ಜಯ ಸಾಧಿಸಿದ್ದರು.

ಕೆ. ಎಚ್. ಮುನಿಯಪ್ಪ ಅವರು 73,058 ಮತಗಳನ್ನು ಪಡೆದರೆ, ಜೆಡಿಎಸ್‌ನ ನಿಸರ್ಗ ನಾರಾಯಣಸ್ವಾಮಿ 68,427 ಹಾಗೂ ಬಿಜೆಪಿಯ ಪಿಳ್ಳ ಮುನಿಶಾಮಪ್ಪ 34,404 ಮತಗಳನ್ನು ಪಡೆದಿದ್ದರು.

2023ರ ಚುನಾವಣೆಯ ಗೆಲುವಿನ ಅಂತರ 4,631 ಆಗಿದ್ದು, ಎಸ್‌ಐಆರ್ ಬಳಿಕ 32,580 ಮತಗಳ ಡಿಲೀಟ್ ಆಗಿವೆ.

ಕೆ.ಜೆ. ಜಾರ್ಜ್ – ಸರ್ವಜ್ಞನಗರ ವಿಧಾನಸಭಾ ಕ್ಷೇತ್ರ

ಸರ್ವಜ್ಞನಗರ ವಿಧಾನಸಭಾ ಕ್ಷೇತ್ರವು ಬೆಂಗಳೂರುನಗರ ಜಿಲ್ಲೆಯ ಪ್ರಮುಖ ಕ್ಷೇತ್ರವಾಗಿದೆ. ಎಸ್‌ಐಆರ್ ಬಳಿಕ ಅತಿಹೆಚ್ಚು ಮತಗಳು ಡಿಲೀಟ್ ಆಗಿರುವ ಕ್ಷೇತ್ರಗಳಲ್ಲಿ ಇದೂ ಸಹ ಒಂದು. ಈ ಕ್ಷೇತ್ರವನ್ನು ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ಹಾಗೂ ಕರ್ನಾಟಕ ಸರ್ಕಾರದ ಇಂಧನ ಸಚಿವರಾದ ಕೆ. ಜೆ. ಜಾರ್ಜ್ ಅವರು ಪ್ರತಿನಿಧಿಸುತ್ತಿದ್ದಾರೆ. ಈ ಕ್ಷೇತ್ರವು ಅಸ್ತಿತ್ವಕ್ಕೆ ಬಂದ ದಿನದಿಂದಲೂ (2008) ಕೆ. ಜೆ. ಜಾರ್ಜ್ ಅವರೇ ಇಲ್ಲಿ ಸತತವಾಗಿ ಜಯಗಳಿಸುತ್ತಾ ಬಂದಿದ್ದಾರೆ.

2023ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಕೆ. ಜೆ. ಜಾರ್ಜ್ ಅವರು ತಮ್ಮ ಸಮೀಪದ ಪ್ರತಿಸ್ಪರ್ಧಿ ಬಿಜೆಪಿಯ ಪದ್ಮನಾಭ ರೆಡ್ಡಿ ಅವರ ವಿರುದ್ಧ 55,768 ಮತಗಳ ಬೃಹತ್ ಅಂತರದಿಂದ ಭರ್ಜರಿ ಜಯ ಸಾಧಿಸಿದ್ದರು.

ಕೆ. ಜೆ. ಜಾರ್ಜ್ 1,18,783 ಮತಗಳನ್ನು ಪಡೆದರೆ, ಬಿಜೆಪಿಯ ಪದ್ಮನಾಭ ರೆಡ್ಡಿ ಅವರು 63,015 ಮತಗಳು ಹಾಗೂ ಜೆಡಿಎಸ್‌ನ ಮೊಹಮ್ಮದ್ ಮುಸ್ತಫಾ ಅವರು 3,839 ಮತಗಳನ್ನು ಪಡೆದಿದ್ದರು.

2023ರ ಚುನಾವಣೆಯಲ್ಲಿ ಇಲ್ಲಿನ ಗೆಲುವಿನ ಅಂತರ 55,768 ಆಗಿತ್ತು. ಎಸ್‌ಐಆರ್ ಬಳಿಕ ಕ್ಷೇತ್ರದಲ್ಲಿ 164,060 ಮತಗಳನ್ನು ಡಿಲೀಟ್ ಮಾಡಲಾಗಿದೆ.

ಬೈರತಿ ಸುರೇಶ್ – ಹೆಬ್ಬಾಳ ವಿಧಾನಸಭಾ ಕ್ಷೇತ್ರ

2023ರ ವಿಧಾನಸಭಾ ಚುನಾವಣೆಯಲ್ಲಿ ಹೆಬ್ಬಾಳ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದ ಬೈರತಿ ಸುರೇಶ್ ಅವರು ಬಿಜೆಪಿಯ ಕಟ್ಟಾ ಜಗದೀಶ್ ಅವರನ್ನು 30,754 ಮತಗಳ ಭಾರಿ ಅಂತರದಿಂದ ಸೋಲಿಸಿ ಗೆಲುವು ಸಾಧಿಸಿದರು.

ವಿಜೇತ ಬೈರತಿ ಸುರೇಶ್ ಅವರು 91,838 ಮತಗಳನ್ನು ಪಡೆದರೆ, ಬಿಜೆಪಿಯ ಕಟ್ಟಾ ಜಗದೀಶ್ 61,084 ಹಾಗೂ ಜೆಡಿಎಸ್‌ನ ಸೈಯದ್ ಮೋಹಿದ್ ಅಲ್ತಾಫ್ ಅವರು 1,604 ಮತಗಳನ್ನು ಪಡೆದಿದ್ದರು.

ಹೆಬ್ಬಾಳದಲ್ಲಿ ಗೆಲುವಿನ ಅಂತರ 30,754 ಆಗಿದ್ದರೆ, ಎಸ್‌ಐಆರ್ ಬಳಿಕ ಕ್ಷೇತ್ರದಲ್ಲಿ 130,449 ಮತಗಳನ್ನು ಡಿಲೀಟ್ ಮಾಡಲಾಗಿದೆ. ಬೆಂಗಳೂರು ನಗರದ ಅತಿಹೆಚ್ಚು ಮತಗಳು ಡಿಲೀಟ್ ಆದ ಕ್ಷೇತ್ರಗಳಲ್ಲಿ ಹೆಬ್ಬಾಳ ಕೂಡ ಒಂದಾಗಿದೆ.

ಎಂ.ಬಿ. ಪಾಟೀಲ್ – ಬಬಲೇಶ್ವರ ವಿಧಾನಸಭಾ ಕ್ಷೇತ್ರ

ಬಬಲೇಶ್ವರ ವಿಧಾನಸಭಾ ಕ್ಷೇತ್ರವು ವಿಜಯಪುರ ಜಿಲ್ಲೆ ವ್ಯಾಪ್ತಿಯ ಪ್ರಮುಖ ಕ್ಷೇತ್ರವಾಗಿದೆ. 2008ರ ಕ್ಷೇತ್ರ ಮರುವಿಂಗಡಣೆಗೆ ಮುನ್ನ ಈ ಕ್ಷೇತ್ರವನ್ನು “ಟಿಕೋಟಾ ವಿಧಾನಸಭಾ ಕ್ಷೇತ್ರ” ಎಂದು ಕರೆಯಲಾಗುತ್ತಿತ್ತು. ಪ್ರಸ್ತುತ ಈ ಕ್ಷೇತ್ರದ ಶಾಸಕರಾಗಿ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ಮತ್ತು ಸಚಿವ ಎಂ. ಬಿ. ಪಾಟೀಲ್ ಪ್ರತಿನಿಧಿಸುತ್ತಿದ್ದಾರೆ. 2008ರಲ್ಲಿ ಈ ಕ್ಷೇತ್ರ ಮರುನಾಮಕರಣಗೊಂಡಾಗಿನಿಂದ ನಡೆದ ಎಲ್ಲಾ ನಾಲ್ಕೂ ಚುನಾವಣೆಗಳಲ್ಲಿ (2008, 2013, 2018, 2023) ಇವರೇ ಸತತವಾಗಿ ಜಯಗಳಿಸುತ್ತಾ ಬಂದಿದ್ದಾರೆ.

2023ರ ಸಾರ್ವತ್ರಿಕ ಚುನಾವಣೆಯಲ್ಲಿ ಕಾಂಗ್ರೆಸ್‌ನ ಎಂ. ಬಿ. ಪಾಟೀಲ್ ಅವರು ತಮ್ಮ ಪ್ರತಿಸ್ಪರ್ಧಿ ಬಿಜೆಪಿಯ ವಿಜಯಕುಮಾರ್ (ವಿಜುಗೌಡ) ಪಾಟೀಲ್ ಅವರನ್ನು 15,216 ಮತಗಳ ಅಂತರದಿಂದ ಸೋಲಿಸಿದರು.

ಎಂ. ಬಿ. ಪಾಟೀಲ್ ಅವರು 93,923 ಮತಗಳನ್ನು ಪಡೆದರೆ, ಬಿಜೆಪಿಯ ವಿಜಯಕುಮಾರ್ ಪಾಟೀಲ್ ಅವರು 78,707 ಹಾಗೂ ಜೆಡಿಎಸ್‌ನ ಬಸವರಾಜ ಹೊನವಾಡ ಅವರು 1,304 ಮತಗಳನ್ನು ಪಡೆದಿದ್ದರು.

ಈ ಕ್ಷೇತ್ರದ ಗೆಲುವಿನ ಅಂತರ 15,216 ಆಗಿದ್ದು, ಎಸ್‌ಐಆರ್ ಬಳಿಕ 29,452 ಮತಗಳು ಡಿಲೀಟ್ ಆಗಿವೆ.

ಯು.ಟಿ. ಖಾದರ್ – ಮಂಗಳೂರು ವಿಧಾನಸಭಾ ಕ್ಷೇತ್ರ

2023ರ ವಿಧಾನಸಭಾ ಚುನಾವಣೆಯಲ್ಲಿ ಮಂಗಳೂರು ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ಯು. ಟಿ. ಖಾದರ್ ಅವರು ಬಿಜೆಪಿಯ ಸತೀಶ್ ಕುಂಪಲ ಅವರ ವಿರುದ್ಧ 22,790 ಮತಗಳ ಅಂತರದಿಂದ ಗೆಲುವು ಸಾಧಿಸಿದರು.

ಯು. ಟಿ. ಖಾದರ್ ಅವರು 83,219 ಮತಗಳನ್ನು ಪಡೆದರೆ, ಬಿಜೆಪಿಯ ಸತೀಶ್ ಕುಂಪಲ 60,429 ಮತಗಳು ಹಾಗೂ ಎಸ್‌ಡಿಪಿಐ ಪಕ್ಷದ ರಿಯಾಜ್ ಫರಂಗಿಪೇಟೆ 15,054 ಮತಗಳನ್ನು ಪಡೆದರು.

ಕ್ಷೇತ್ರದ ಗೆಲುವಿನ ಅಂತರ 22,790 ಆಗಿದ್ದು, ಎಸ್‌ಐಆರ್ ಬಳಿಕ 23,496 ಮತಗಳು ಡಿಲೀಟ್ ಆಗಿವೆ.

ಪಿ.ಎಂ. ನರೇಂದ್ರಸ್ವಾಮಿ – ಮಳವಳ್ಳಿ ವಿಧಾನಸಭಾ ಕ್ಷೇತ್ರ

ಮಳವಳ್ಳಿ ವಿಧಾನಸಭಾ ಕ್ಷೇತ್ರವು ಕರ್ನಾಟಕದ ಪ್ರಮುಖ ಕ್ಷೇತ್ರಗಳಲ್ಲಿ ಒಂದಾಗಿದೆ. ಇದು ಮಂಡ್ಯ ಜಿಲ್ಲೆಯ ವ್ಯಾಪ್ತಿಯಲ್ಲಿ ಬರುತ್ತದೆ. ಪ್ರಸ್ತುತ ಈ ಕ್ಷೇತ್ರದ ಶಾಸಕರಾಗಿ ಕಾಂಗ್ರೆಸ್‌ನ ಹಿರಿಯ ನಾಯಕ ಪಿ. ಎಂ. ನರೇಂದ್ರಸ್ವಾಮಿ ಪ್ರತಿನಿಧಿಸುತ್ತಿದ್ದಾರೆ. 2023ರ ವಿಧಾನಸಭಾ ಚುನಾವಣೆಯಲ್ಲಿ ಇವರು ಜನತಾ ದಳ ಪಕ್ಷದ ಹಾಲಿ ಶಾಸಕರಾಗಿದ್ದ ಡಾ. ಕೆ. ಅನ್ನದಾನಿ ಅವರ ವಿರುದ್ಧ ಭರ್ಜರಿ ಜಯ ಸಾಧಿಸುವ ಮೂಲಕ ಮೂರನೇ ಬಾರಿಗೆ ಈ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆಯಾಗಿದ್ದಾರೆ.

2023ರ ಸಾರ್ವತ್ರಿಕ ಚುನಾವಣೆಯಲ್ಲಿ ಪಿ. ಎಂ. ನರೇಂದ್ರಸ್ವಾಮಿ ಅವರು ತಮ್ಮ ನಿಕಟ ಪ್ರತಿಸ್ಪರ್ಧಿ ಜೆಡಿಎಸ್‌ನ ಡಾ. ಕೆ. ಅನ್ನದಾನಿ ಅವರನ್ನು 46,846 ಮತಗಳ ಭಾರಿ ಅಂತರದಿಂದ ಸೋಲಿಸಿದರು. ನರೇಂದ್ರಸ್ವಾಮಿ ಅವರು 1,06,498 ಪಡೆದರೆ, ಜೆಡಿಎಸ್‌ನ ಡಾ. ಕೆ. ಅನ್ನದಾನಿ ಅವರು 59,652 ಮತಗಳು ಹಾಗೂ ಬಿಜೆಪಿಯ ಜಿ. ಮುನಿರಾಜು 25,116 ಮತಗಳನ್ನು ಪಡೆದರು.

ಇಲ್ಲಿನ ಗೆಲುವಿನ ಅಂತರ 46,846 ಆಗಿದ್ದು, ಎಸ್‌ಐಆರ್ ಬಳಿಕ ಡಿಲೀಟ್ ಆದ ಮತಗಳ ಸಂಖ್ಯೆ 40,068 ಮಾತ್ರ.

ಶಿವರಾಜ್ ತಂಗಡಗಿ – ಕನಕಗಿರಿ ವಿಧಾನಸಭಾ ಕ್ಷೇತ್ರ

ಕನಕಗಿರಿ ವಿಧಾನಸಭಾ ಕ್ಷೇತ್ರವು ಕೊಪ್ಪಳ ಜಿಲ್ಲೆಯ ಪ್ರಮುಖ ಕ್ಷೇತ್ರವಾಗಿದೆ. ಪ್ರಸ್ತುತ ಈ ಕ್ಷೇತ್ರದ ಶಾಸಕರಾಗಿ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ಶಿವರಾಜ್ ತಂಗಡಗಿ ಇದ್ದಾರೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

2023ರ ಸಾರ್ವತ್ರಿಕ ಚುನಾವಣೆಯಲ್ಲಿ ಕಾಂಗ್ರೆಸ್‌ನ ಶಿವರಾಜ್ ತಂಗಡಗಿ ಅವರು ತಮ್ಮ ನಿಕಟ ಪ್ರತಿಸ್ಪರ್ಧಿ ಬಿಜೆಪಿಯ ಹಾಲಿ ಶಾಸಕರಾಗಿದ್ದ ಬಸವರಾಜ ದಡೇಸೂಗೂರು ಅವರನ್ನು 42,632 ಮತಗಳ ಭಾರಿ ಅಂತರದಿಂದ ಸೋಲಿಸಿ ಗೆಲುವು ದಾಖಲಿಸಿದರು.

ಶಿವರಾಜ್ ತಂಗಡಗಿ 1,06,164 ಮತಗಳನ್ನು ಪಡೆದರೆ, ಬಿಜೆಪಿಯ ಬಸವರಾಜ ದಡೇಸೂಗೂರು ಅವರು 63,532 ಮತಗಳು ಹಾಗೂ ಕೆಆರ್‌ಪಿಪಿ ಚಾರುಲ್ ವೆಂಕಟ್ರಮಣ ದಾಸರಿ 1,319 ಪಡೆದರು.

ಇಲ್ಲಿನ ಗೆಲುವಿನ ಅಂತರ 42,632 ಆಗಿದ್ದು, ಎಸ್‌ಐಆರ್ ಬಳಿಕ ಕ್ಷೇತ್ರದಲ್ಲಿ ಡಿಲೀಟ್ ಆದ ಮತಗಳು 31,797 ಮಾತ್ರ.



ರುದ್ರಪ್ಪ ಲಮಾಣಿ – ಹಾವೇರಿ ವಿಧಾನಸಭಾ ಕ್ಷೇತ್ರ

ಹಾವೇರಿ ವಿಧಾನಸಭಾ ಕ್ಷೇತ್ರವು ಹಾವೇರಿ ಜಿಲ್ಲೆಯ ವ್ಯಾಪ್ತಿಯಲ್ಲಿ ಬರುತ್ತದೆ. ಪ್ರಸ್ತುತ ಈ ಕ್ಷೇತ್ರದ ಶಾಸಕರಾಗಿ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ರುದ್ರಪ್ಪ ಮಾನಪ್ಪ ಲಮಾಣಿ ಇದ್ದಾರೆ.

2023ರ ಸಾರ್ವತ್ರಿಕ ಚುನಾವಣೆಯಲ್ಲಿ ಕಾಂಗ್ರೆಸ್‌ನ ರುದ್ರಪ್ಪ ಲಮಾಣಿ ಅವರು ತಮ್ಮ ನಿಕಟ ಪ್ರತಿಸ್ಪರ್ಧಿ ಬಿಜೆಪಿಯ ಗವಿಸಿದ್ದಪ್ಪ ದ್ಯಾಮಣ್ಣನವರ್ ಅವರನ್ನು 11,915 ಮತಗಳ ಅಂತರದಿಂದ ಸೋಲಿಸಿ ಗೆಲುವು ದಾಖಲಿಸಿದರು.

ರುದ್ರಪ್ಪ ಮಾನಪ್ಪ ಲಮಾಣಿ 93,827 ಮತಗಳನ್ನು ಪಡೆದರೆ, ಬಿಜೆಪಿಯ ಗವಿಸಿದ್ದಪ್ಪ ದ್ಯಾಮಣ್ಣನವರ್ 81,912 ಮತಗಳು ಹಾಗೂ ಜೆಡಿಎಸ್‌ನ ತುಕಾರಾಂ ಎಚ್. ಮಾಳಗಿ1,206 ಮತಗಳನ್ನು ಪಡೆದರು.

ಇಲ್ಲಿನ ಗೆಲುವಿನ ಅಂತರ 11,915 ಮತಗಳಾಗಿದ್ದರೆ, ಎಸ್‌ಐಆರ್ ಬಳಿಕ 33,653 ಮತಗಳು ಡಿಲೀಟ್ ಆಗಿವೆ.

ಕೆ.ಎಸ್. ಬಸವಂತಪ್ಪ – ಮಾಯಕೊಂಡ ವಿಧಾನಸಭಾ ಕ್ಷೇತ್ರ

2023ರ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಮಾಯಕೊಂಡ ವಿಧಾನಸಭಾ ಕ್ಷೇತ್ರದಿಂದ ಕಾಂಗ್ರೆಸ್ ಪಕ್ಷದ ಕೆ. ಎಸ್. ಬಸವಂತಪ್ಪ ಅವರು ಭರ್ಜರಿ ಗೆಲುವು ಸಾಧಿಸಿದರು. ಇವರು ತಮ್ಮ ನಿಕಟ ಪ್ರತಿಸ್ಪರ್ಧಿಯಾದ ಪಕ್ಷೇತರ ಅಭ್ಯರ್ಥಿ ಬಿ. ಎಂ. ಪುಷ್ಪಾ ವಾಗೀಶಸ್ವಾಮಿ ಅವರ ವಿರುದ್ಧ 33,302 ಮತಗಳ ಭಾರಿ ಅಂತರದಿಂದ ಗೆದ್ದರು.

ಕೆ. ಎಸ್. ಬಸವಂತಪ್ಪ ಅವರು 70,916 ಮತಗಳನ್ನು ಪಡೆದರೆ, ಪಕ್ಷೇತರ ಅಭ್ಯರ್ಥಿ ಬಿ. ಎ. ಪುಷ್ಪಾ ವಾಗೀಶಸ್ವಾಮಿ ಅವರು 37,614 ಹಾಗೂ ಬಿಜೆಪಿಯ ಎಂ. ಬಸವರಾಜ ನಾಯ್ಕ 34,630 ಮತಗಳು, ಜೆಡಿಎಸ್‌ನ ಆನಂದಪ್ಪ. ಎಚ್. 12,915 ಮತಗಳನ್ನು ಪಡೆದರು.

ಇಲ್ಲಿನ ಗೆಲುವಿನ ಅಂತರ 33,302 ಆಗಿದ್ದು, ಎಸ್‌ಐಆರ್ ಬಳಿಕ ಡಿಲೀಟ್ ಆದ ಮತಗಳು 17,264 ಮಾತ್ರ.

ಟಿ. ರಘುಮೂರ್ತಿ – ಚಳ್ಳಕೆರೆ ವಿಧಾನಸಭಾ ಕ್ಷೇತ್ರ

ಚಳ್ಳಕೆರೆ ವಿಧಾನಸಭಾ ಕ್ಷೇತ್ರವು ಚಿತ್ರದುರ್ಗ ಜಿಲ್ಲೆಯ ಪ್ರಮುಖ ಕ್ಷೇತ್ರವಾಗಿದೆ. ಪ್ರಸ್ತುತ ಈ ಕ್ಷೇತ್ರದ ಶಾಸಕರಾಗಿ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ಟಿ. ರಘುಮೂರ್ತಿ ಪ್ರತಿನಿಧಿಸುತ್ತಿದ್ದಾರೆ. ಈ ಕ್ಷೇತ್ರದಿಂದ ಸತತ ಮೂರನೇ ಬಾರಿಗೆ (2013, 2018, 2023) ಶಾಸಕರಾಗಿ ಆಯ್ಕೆಯಾಗಿದ್ದಾರೆ.

2023ರ ಸಾರ್ವತ್ರಿಕ ಚುನಾವಣೆಯಲ್ಲಿ ಕಾಂಗ್ರೆಸ್‌ನ ಟಿ. ರಘುಮೂರ್ತಿ ಅವರು ತಮ್ಮ ನಿಕಟ ಪ್ರತಿಸ್ಪರ್ಧಿ ಜನತಾ ದಳ (ಸೆಕ್ಯುಲರ್) ಪಕ್ಷದ ರವೀಶ್ ಕುಮಾರ್ ಎಂ. ಅವರನ್ನು 16,450 ಮತಗಳ ಅಂತರದಿಂದ ಸೋಲಿಸಿದರು.

ಟಿ. ರಘುಮೂರ್ತಿ ಅವರು 67,952 ಮತಗಳನ್ನು ಪಡೆದರೆ, ಜೆಡಿಎಸ್‌ನ ರವೀಶ್ ಕುಮಾರ್ 51,502 ಮತಗಳನ್ನು ಪಡೆದರು. ಇಲ್ಲಿನ ಗೆಲುವಿನ ಅಂತರ 16,450 ಮತಗಳು ಆಗಿದ್ದು, ಎಸ್‌ಐಆರ್ ಬಳಿಕ 32,300 ಮತಗಳನ್ನು ಡಿಲೀಟ್ ಮಾಡಲಾಗಿದೆ.

ಬಿ. ಝಡ್. ಜಮೀರ್ ಅಹಮದ್ ಖಾನ್ – ಚಾಮರಾಜಪೇಟೆ ವಿಧಾನಸಭಾ ಕ್ಷೇತ್ರ

ಚಾಮರಾಜಪೇಟೆ ವಿಧಾನಸಭಾ ಕ್ಷೇತ್ರವು ಬೆಂಗಳೂರು ನಗರ ಜಿಲ್ಲೆಯ ವ್ಯಾಪ್ತಿಯ ಪ್ರಮುಖ ಕ್ಷೇತ್ರವಾಗಿದೆ. ದಲಿತರು, ಅಲ್ಪಸಂಖ್ಯಾತರು ಮತ್ತು ವಲಸಿಗರು ಅತಿಹೆಚ್ಚು ಮತದಾರರಿದ್ದಾರೆ. ಪ್ರಸ್ತುತ ಈ ಕ್ಷೇತ್ರದ ಶಾಸಕರಾಗಿ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ಬಿ. ಝಡ್. ಜಮೀರ್ ಅಹಮದ್ ಖಾನ್ ಪ್ರತಿನಿಧಿಸುತ್ತಿದ್ದಾರೆ.

2023ರ ಸಾರ್ವತ್ರಿಕ ಚುನಾವಣೆಯಲ್ಲಿ ಕಾಂಗ್ರೆಸ್‌ನ ಬಿ. ಝಡ್. ಜಮೀರ್ ಅಹಮದ್ ಖಾನ್ ಅವರು ತಮ್ಮ ನಿಕಟ ಪ್ರತಿಸ್ಪರ್ಧಿ ಬಿಜೆಪಿಯ ಭಾಸ್ಕರ್ ರಾವ್ (ಮಾಜಿ ಐಪಿಎಸ್ ಅಧಿಕಾರಿ) ಅವರನ್ನು 53,953 ಮತಗಳ ಭಾರಿ ಅಂತರದಿಂದ ಸೋಲಿಸಿ ಭರ್ಜರಿ ಗೆಲುವು ದಾಖಲಿಸಿದರು.

ಬಿ. ಝಡ್. ಜಮೀರ್ ಅಹಮದ್ ಖಾನ್ ಅವರು 77,631 ಮತಗಳನ್ನು ಪಡೆದರೆ, ಬಿಜೆಪಿಯ ಭಾಸ್ಕರ್ ರಾವ್ ಅವರು 23,678 ಮತಗಳು ಹಾಗೂ ಜೆಡಿಎಸ್‌ನ ಸಿ. ಗೋವಿಂದರಾಜು 19,086 ಮತಗಳನ್ನು ಪಡೆದರು.

ಇಲ್ಲಿನ ಗೆಲುವಿನ ಅಂತರ 53,953 ಮತಗಳಾಗಿದ್ದು, ಎಸ್‌ಐಆರ್ ಬಳಿಕ ಈ ಕ್ಷೇತ್ರದಲ್ಲಿ 107,757 ಮತಗಳನ್ನು ಡಿಲೀಟ್ ಮಾಡಲಾಗಿದೆ. ಅತಿಹೆಚ್ಚು ಮತಗಳು ಡಿಲೀಟ್ ಆಗಿರುವ ಕ್ಷೇತ್ರಗಳಲ್ಲಿ ಇದು ಒಂದು.

ರಿಜ್ವಾನ್ ಅರ್ಷದ್ – ಶಿವಾಜಿನಗರ ವಿಧಾನಸಭಾ ಕ್ಷೇತ್ರ

ಶಿವಾಜಿನಗರ ವಿಧಾನಸಭಾ ಕ್ಷೇತ್ರವು ಬೆಂಗಳೂರು ನಗರ ಜಿಲ್ಲೆಯ ವ್ಯಾಪ್ತಿಯ ಪ್ರಮುಖ ಕ್ಷೇತ್ರವಾಗಿದೆ. ದಲಿತರು ಮತ್ತು ಅಲ್ಪಸಂಖ್ಯಾತರೇ ಅತಿಹೆಚ್ಚು ಮತದಾರರಿದ್ದಾರೆ. ಬೆಂಗಳೂರಿನ ಅತ್ಯಂತ ಹಳೆಯ ಮತ್ತು ಇತಿಹಾಸಪ್ರಸಿದ್ಧ ವಾಣಿಜ್ಯ ಹಾಗೂ ವಸತಿಪ್ರದೇಶಗಳಾದ ರಸೆಲ್ ಮಾರ್ಕೆಟ್, ಕಮರ್ಷಿಯಲ್ ಸ್ಟ್ರೀಟ್, ಜಯಮಹಲ್ ಮತ್ತು ಬೆಂಗಳೂರು ಕಂಟೋನ್ಮೆಂಟ್ ರೈಲು ನಿಲ್ದಾಣದ ಸುತ್ತಮುತ್ತಲಿನ ಭಾಗಗಳು ಈ ಕ್ಷೇತ್ರದ ವ್ಯಾಪ್ತಿಗೆ ಬರುತ್ತವೆ.

ಪ್ರಸ್ತುತ ಈ ಕ್ಷೇತ್ರದ ಶಾಸಕರಾಗಿ ಕಾಂಗ್ರೆಸ್ ಪಕ್ಷದ ರಿಜ್ವಾನ್ ಅರ್ಷದ್ ಪ್ರತಿನಿಧಿಸುತ್ತಿದ್ದಾರೆ. 2019ರ ಉಪಚುನಾವಣೆಯಲ್ಲಿ ಮೊದಲ ಬಾರಿಗೆ ಶಾಸಕರಾಗಿ ಆಯ್ಕೆಯಾಗಿದ್ದ ಇವರು, 2023ರ ಸಾರ್ವತ್ರಿಕ ಚುನಾವಣೆಯಲ್ಲೂ ಸತತ ಎರಡನೇ ಬಾರಿಗೆ ಜಯಗಳಿಸುವ ಮೂಲಕ ಕಾಂಗ್ರೆಸ್ ಹಿಡಿತವನ್ನು ಮುಂದುವರಿಸಿದ್ದಾರೆ.

2023ರ ಸಾರ್ವತ್ರಿಕ ಚುನಾವಣೆಯಲ್ಲಿ ಕಾಂಗ್ರೆಸ್‌ನ ರಿಜ್ವಾನ್ ಅರ್ಷದ್ ಅವರು ತಮ್ಮ ನಿಕಟ ಪ್ರತಿಸ್ಪರ್ಧಿ ಬಿಜೆಪಿಯ ಎನ್. ಚಂದ್ರು ಅವರನ್ನು 23,194 ಮತಗಳ ಅಂತರದಿಂದ ಸೋಲಿಸಿ ಗೆಲುವು ದಾಖಲಿಸಿದರು.

ರಿಜ್ವಾನ್ ಅರ್ಷದ್ 64,913 ಮತಗಳನ್ನು ಪಡೆದರೆ, ಬಿಜೆಪಿಯ ಚಂದ್ರ ಎನ್. ಅವರು 41,719 ಮತಗಳನ್ನು ಪಡೆದಿದ್ದರು. ಇಲ್ಲಿನ ಗೆಲುವಿನ ಅಂತರ 23,194 ಆಗಿದ್ದು, ಎಸ್‌ಐಆರ್ ಬಳಿಕ 81,372 ಮತಗಳನ್ನು ಡಿಲೀಟ್ ಮಾಡಲಾಗಿದೆ.

ಸಂತೋಷ್ ಲಾಡ್ – ಕಲಘಟಗಿ ವಿಧಾನಸಭಾ ಕ್ಷೇತ್ರ

ಕಲಘಟಗಿ ವಿಧಾನಸಭಾ ಕ್ಷೇತ್ರವು ಧಾರವಾಡ ಜಿಲ್ಲೆಯ ಪ್ರಮುಖ ಕ್ಷೇತ್ರವಾಗಿದೆ. ಕಲಘಟಗಿ ಕ್ಷೇತ್ರವು ಮುಖ್ಯವಾಗಿ ಕೃಷಿ ಪ್ರಧಾನವಾಗಿದ್ದು, ಪ್ರಸಿದ್ಧ ಕಲಘಟಗಿಯ ಬಣ್ಣದ ಮರದ ಆಟಿಕೆಗಳಿಗೆ ಹಾಗೂ ಐತಿಹಾಸಿಕ ಧಾರ್ಮಿಕ ಕೇಂದ್ರಗಳಿಗೆ ಹೆಸರುವಾಸಿಯಾಗಿದೆ.

ಪ್ರಸ್ತುತ ಈ ಕ್ಷೇತ್ರದ ಶಾಸಕರಾಗಿ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ಸಂತೋಷ್ ಎಸ್. ಲಾಡ್ ಇದ್ದಾರೆ. ಇವರು ಪ್ರಸ್ತುತ ಕಾರ್ಮಿಕ ಇಲಾಖೆಯ ಸಚಿವರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

2023ರ ಸಾರ್ವತ್ರಿಕ ಚುನಾವಣೆಯಲ್ಲಿ ಕಾಂಗ್ರೆಸ್‌ನ ಸಂತೋಷ್ ಲಾಡ್ ಅವರು ತಮ್ಮ ನಿಕಟ ಪ್ರತಿಸ್ಪರ್ಧಿ ಬಿಜೆಪಿಯ ನಾಗರಾಜ್ ಛಬ್ಬಿ ಅವರನ್ನು 14,354 ಮತಗಳ ಅಂತರದಿಂದ ಸೋಲಿಸಿ ಗೆಲುವು ದಾಖಲಿಸಿದರು.

ಸಂತೋಷ್ ಎಸ್. ಲಾಡ್ ಅವರು 92,883 ಮತಗಳನ್ನು ಪಡೆದರೆ, ಬಿಜೆಪಿಯ ನಾಗರಾಜ್ ಛಬ್ಬಿ ಅವರು 78,529 ಮತಗಳನ್ನು ಹಾಗೂ ಜೆಡಿಎಸ್‌ನ ವೀರೇಶ್ ಶಿವಮೂರ್ತಯ್ಯ ಅಣ್ವಿಮಠ 1,225 ಮತಗಳನ್ನು ಪಡೆದರು.

ಇಲ್ಲಿನ ಗೆಲುವಿನ ಅಂತರ 14,354 ಆಗಿದ್ದು, ಎಸ್‌ಐಆರ್ ಬಳಿಕ ಕ್ಷೇತ್ರದಲ್ಲಿ 20,917 ಮತಗಳು ಡಿಲೀಟ್ ಆಗಿವೆ.

ಮಧು ಬಂಗಾರಪ್ಪ – ಸೊರಬ ವಿಧಾನಸಭಾ ಕ್ಷೇತ್ರ

ಸೊರಬ ವಿಧಾನಸಭಾ ಕ್ಷೇತ್ರವು ಶಿವಮೊಗ್ಗ ಜಿಲ್ಲೆಯ ವ್ಯಾಪ್ತಿಯಲ್ಲಿ ಬರುತ್ತದೆ. ರಾಜ್ಯ ರಾಜಕಾರಣದ ಇತಿಹಾಸದಲ್ಲಿ ಮಾಜಿ ಮುಖ್ಯಮಂತ್ರಿ ದಿವಂಗತ ಎಸ್. ಬಂಗಾರಪ್ಪ ಅವರ ಕರ್ಮಭೂಮಿಯಾಗಿ ಈ ಕ್ಷೇತ್ರ ಪ್ರಸಿದ್ಧವಾಗಿದೆ.

ಪ್ರಸ್ತುತ ಈ ಕ್ಷೇತ್ರದ ಶಾಸಕರಾಗಿ ಕಾಂಗ್ರೆಸ್ ಪಕ್ಷದ ಮಧು ಬಂಗಾರಪ್ಪ ಪ್ರತಿನಿಧಿಸುತ್ತಿದ್ದಾರೆ. ಇವರು ಪ್ರಸ್ತುತ ಸರ್ಕಾರದಲ್ಲಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಹಾಗೂ ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

2023ರ ಸಾರ್ವತ್ರಿಕ ಚುನಾವಣೆಯಲ್ಲಿ ಇಲ್ಲಿ ಬಂಗಾರಪ್ಪನವರ ಇಬ್ಬರು ಪುತ್ರರ ನಡುವೆ ತೀವ್ರ ಪೈಪೋಟಿ ನಡೆದಿತ್ತು. ಅಂತಿಮವಾಗಿ ಕಾಂಗ್ರೆಸ್‌ನ ಮಧು ಬಂಗಾರಪ್ಪ ಅವರು ತಮ್ಮ ಸ್ವಂತ ಅಣ್ಣ ಹಾಗೂ ಬಿಜೆಪಿಯ ಹಾಲಿ ಶಾಸಕರಾಗಿದ್ದ ಎಸ್. ಕುಮಾರ್ ಬಂಗಾರಪ್ಪ ಅವರನ್ನು 44,262 ಮತಗಳ ಭಾರಿ ಅಂತರದಿಂದ ಸೋಲಿಸಿ ಭರ್ಜರಿ ಗೆಲುವು ದಾಖಲಿಸಿದರು.

ಮಧು ಬಂಗಾರಪ್ಪ 98,912 ಮತಗಳನ್ನು ಪಡೆದರೆ, ಬಿಜೆಪಿಯ ಎಸ್. ಕುಮಾರ್ ಬಂಗಾರಪ್ಪ ಅವರು 54,650 ಮತಗಳು ಹಾಗೂ ಜೆಡಿಎಸ್‌ನ ಬಾಸೂರು ಚಂದ್ರೇಗೌಡ್ರು 6,477 ಮತಗಳನ್ನು ಪಡೆದಿದ್ದರು.

ಇಲ್ಲಿನ ಗೆಲುವಿನ ಅಂತರ 44,262 ಆಗಿದ್ದು, ಎಸ್‌ಐಆರ್ ಬಳಿಕ ಕ್ಷೇತ್ರದಲ್ಲಿ 19,841 ಮತಗಳು ಮಾತ್ರ ಡಿಲೀಟ್ ಆಗಿವೆ.

ಸಿ. ಪುಟ್ಟರಂಗಶೆಟ್ಟಿ – ಚಾಮರಾಜನಗರ ವಿಧಾನಸಭಾ ಕ್ಷೇತ್ರ

2023ರ ವಿಧಾನಸಭಾ ಚುನಾವಣೆಯಲ್ಲಿ ಚಾಮರಾಜನಗರ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಸಿ. ಪುಟ್ಟರಂಗಶೆಟ್ಟಿ ಅವರು ಜಯಗಳಿಸಿದ್ದಾರೆ. ಅವರು ತಮ್ಮ ಪ್ರತಿಸ್ಪರ್ಧಿ, ಬಿಜೆಪಿಯ ಹಿರಿಯ ನಾಯಕ ವಿ. ಸೋಮಣ್ಣ ಅವರ ವಿರುದ್ಧ 7,533 ಮತಗಳ ಅಂತರದಿಂದ ವಿಜಯಶಾಲಿಯಾಗಿದ್ದಾರೆ.

ಸಿ. ಪುಟ್ಟರಂಗಶೆಟ್ಟಿ 83,858 ಮತಗಳನ್ನು ಪಡೆದರೆ, ಬಿಜೆಪಿಯ ವಿ. ಸೋಮಣ್ಣ 76,325 ಮತಗಳನ್ನು ಹಾಗೂ ಬಿಎಸ್‌ಪಿಯ ಹಾ.ರಾ. ಮಹೇಶ್ 6,461 ಮತಗಳನ್ನು ಪಡೆದರು.

ಇಲ್ಲಿನ ಗೆಲುವಿನ ಅಂತರ 7,533 ಮತಗಳಾಗಿದ್ದು, ಎಸ್‌ಐಆರ್ ಬಳಿಕ 27,933 ಮತಗಳ ಡಿಲೀಟ್ ಆಗಿವೆ.

ಎಸ್.ಎಸ್. ಮಲ್ಲಿಕಾರ್ಜುನ್ – ದಾವಣಗೆರೆ ಉತ್ತರ ವಿಧಾನಸಭಾ ಕ್ಷೇತ್ರ

ದಾವಣಗೆರೆ ಉತ್ತರ ವಿಧಾನಸಭಾ ಕ್ಷೇತ್ರ ರಾಜ್ಯದ ಒಂದು ಪ್ರಮುಖ ವಿಧಾನಸಭಾ ಕ್ಷೇತ್ರವಾಗಿದ್ದು, ಇದು ದಾವಣಗೆರೆ ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಒಳಪಡುತ್ತದೆ.

2023ರ ವಿಧಾನಸಭಾ ಫಲಿತಾಂಶದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಎಸ್. ಎಸ್. ಮಲ್ಲಿಕಾರ್ಜುನ್ ಅವರು ಈ ಕ್ಷೇತ್ರದಲ್ಲಿ ಭರ್ಜರಿ ಜಯ ದಾಖಲಿಸಿದ್ದಾರೆ. ಅವರು ತಮ್ಮ ಸಮೀಪದ ಪ್ರತಿಸ್ಪರ್ಧಿ, ಬಿಜೆಪಿಯ ಲೋಕಿಕೆರೆ ನಾಗರಾಜ್ ಅವರ ವಿರುದ್ಧ 24,472 ಮತಗಳ ಭಾರಿ ಅಂತರದಿಂದ ವಿಜಯಶಾಲಿಯಾಗಿದ್ದಾರೆ.

ಎಸ್. ಎಸ್. ಮಲ್ಲಿಕಾರ್ಜುನ್ 94,019 ಮತಗಳನ್ನು ಪಡೆದರೆ, ಬಿಜೆಪಿಯ ಲೋಕಿಕೆರೆ ನಾಗರಾಜ್ ಅವರು 69,547 ಮತಗಳನ್ನು ಪಡೆದರು.

ಇಲ್ಲಿನ ಗೆಲುವಿನ ಅಂತರ 24,472 ಆಗಿದ್ದು, ಎಸ್‌ಐಆರ್ ಬಳಿಕ 65,085 ಮತಗಳನ್ನು ಡಿಲೀಟ್ ಮಾಡಲಾಗಿದೆ.

ಡಾ. ಅಜಯ್ ಸಿಂಗ್ – ಜೇವರ್ಗಿ ವಿಧಾನಸಭಾ ಕ್ಷೇತ್ರ

ಜೇವರ್ಗಿ ವಿಧಾನಸಭಾ ಕ್ಷೇತ್ರ ಕಲಬುರಗಿ ಜಿಲ್ಲೆಯ ಒಂದು ಪ್ರಮುಖ ವಿಧಾನಸಭಾ ಕ್ಷೇತ್ರವಾಗಿದ್ದು, 2023ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಡಾ. ಅಜಯ್ ಧರ್ಮಸಿಂಗ್ ಅವರು ಈ ಕ್ಷೇತ್ರದಲ್ಲಿ ಸತತ ಮೂರನೇ ಬಾರಿ ಜಯಭೇರಿ ಬಾರಿಸಿದ್ದಾರೆ. ಅವರು ತಮ್ಮ ಸಮೀಪದ ಪ್ರತಿಸ್ಪರ್ಧಿ, ಜೆಡಿಎಸ್ ಪಕ್ಷದ ದೊಡ್ಡಪ್ಪಗೌಡ ಶಿವಲಿಂಗಪ್ಪಗೌಡ ಪಾಟೀಲ್ ನರಿಬೋಳ್ ಅವರ ವಿರುದ್ಧ 10,278 ಮತಗಳ ಅಂತರದಿಂದ ಜಯಶಾಲಿಯಾಗಿದ್ದಾರೆ.

ಡಾ. ಅಜಯ್ ಧರ್ಮಸಿಂಗ್ 70,810 ಮತಗಳನ್ನು ಪಡೆದರೆ, ಜೆಡಿಎಸ್‌ನ ದೊಡ್ಡಪ್ಪಗೌಡ ಎಸ್. ಪಾಟೀಲ್ 60,532 ಮತಗಳನ್ನು ಹಾಗೂ ಬಿಜೆಪಿಯ ಶಿವರಾಜ್ ಪಾಟೀಲ್ ರದ್ದೇವಾಡಗಿ 29,564 ಮತಗಳನ್ನು ಪಡೆದರು.

ಇಲ್ಲಿನ ಗೆಲುವಿನ ಅಂತರ 10,278 ಮತಗಳಾಗಿದ್ದು, ಎಸ್‌ಐಆರ್ ಬಳಿಕ ಕ್ಷೇತ್ರದಲ್ಲಿ 43,391 ಮತಗಳನ್ನು ಡಿಲೀಟ್ ಮಾಡಲಾಗಿದೆ.



ಎನ್. ಚಲುವರಾಯಸ್ವಾಮಿ – ನಾಗಮಂಗಲ ವಿಧಾನಸಭಾ ಕ್ಷೇತ್ರ

ನಾಗಮಂಗಲ ವಿಧಾನಸಭಾ ಕ್ಷೇತ್ರ ಮಂಡ್ಯ ಜಿಲ್ಲೆಯ ಪ್ರಮುಖ ವಿಧಾನಸಭಾ ಕ್ಷೇತ್ರವಾಗಿದ್ದು, 2023ರ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಎನ್. ಚಲುವರಾಯಸ್ವಾಮಿ ಅವರು ಈ ಕ್ಷೇತ್ರದಲ್ಲಿ ಜಯಗಳಿಸಿದ್ದಾರೆ. ಅವರು ತಮ್ಮ ನಿಕಟ ಪ್ರತಿಸ್ಪರ್ಧಿ, ಜೆಡಿಎಸ್ ಪಕ್ಷದ ಸುರೇಶ್ ಗೌಡ ಅವರ ವಿರುದ್ಧ 4,414 ಮತಗಳ ಅಂತರದಿಂದ ರೋಚಕ ಗೆಲುವು ಸಾಧಿಸಿದ್ದಾರೆ.

ಎನ್. ಚಲುವರಾಯಸ್ವಾಮಿ 90,634 ಮತಗಳನ್ನು ಪಡೆದರೆ, ಜೆಡಿಎಸ್‌ನ ಸುರೇಶ್ ಗೌಡ 86,220 ಮತಗಳು ಹಾಗೂ ಬಿಜೆಪಿಯ ಸುಧಾ ಶಿವರಾಮೇಗೌಡ 7,769 ಮತಗಳನ್ನು ಪಡೆದರು.

ಇಲ್ಲಿನ ಗೆಲುವಿನ ಅಂತರ 4,414 ಆಗಿದ್ದು, ಎಸ್‌ಐಆರ್ ಬಳಿಕ ಕ್ಷೇತ್ರದಲ್ಲಿ 21,610 ಮತಗಳನ್ನು ಡಿಲೀಟ್ ಮಾಡಲಾಗಿದೆ.

ಕೆ.ಎಂ. ಶಿವಲಿಂಗೇಗೌಡ – ಅರಸೀಕೆರೆ ವಿಧಾನಸಭಾ ಕ್ಷೇತ್ರ

ಅರಸೀಕೆರೆ ವಿಧಾನಸಭಾ ಕ್ಷೇತ್ರವು ಹಾಸನ ಜಿಲ್ಲೆಯ ಪ್ರಮುಖ ಕ್ಷೇತ್ರವಾಗಿದ್ದು, 2023ರ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಕೆ. ಎಂ. ಶಿವಲಿಂಗೇಗೌಡ ಅವರು ಈ ಕ್ಷೇತ್ರದಲ್ಲಿ ಜಯ ದಾಖಲಿಸಿದ್ದಾರೆ. ದಶಕಗಳ ಕಾಲ ಜೆಡಿಎಸ್‌ನಲ್ಲಿದ್ದ ಶಿವಲಿಂಗೇಗೌಡ ಅವರು ಚುನಾವಣೆಗೆ ಕೆಲ ದಿನಗಳ ಮುನ್ನ ಕಾಂಗ್ರೆಸ್ ಸೇರಿ ಸ್ಪರ್ಧಿಸಿದ್ದರು. ಅವರು ತಮ್ಮ ಸಮೀಪದ ಪ್ರತಿಸ್ಪರ್ಧಿ, ಜೆಡಿಎಸ್ ಪಕ್ಷದ ಎನ್. ಆರ್. ಸಂತೋಷ್ ಅವರ ವಿರುದ್ಧ 20,177 ಮತಗಳ ಅಂತರದಿಂದ ವಿಜಯಶಾಲಿಯಾಗಿದ್ದಾರೆ.

ಕೆ. ಎಂ. ಶಿವಲಿಂಗೇಗೌಡ 98,155 ಮತಗಳನ್ನು ಪಡೆದರೆ, ಜೆಡಿಎಸ್‌ನ ಎನ್. ಆರ್. ಸಂತೋಷ್ 77,978 ಮತಗಳು ಹಾಗೂ ಬಿಜೆಪಿಯ ಜಿ. ವಿ. ಬಸವರಾಜು 6,538 ಮತಗಳನ್ನು ಪಡೆದರು.

ಇಲ್ಲಿನ ಗೆಲುವಿನ ಅಂತರ 20,177 ಆಗಿದ್ದು, ಎಸ್‌ಐಆರ್ ಬಳಿಕ ಕ್ಷೇತ್ರದಲ್ಲಿ 22,662 ಮತಗಳನ್ನು ಡಿಲೀಟ್ ಮಾಡಲಾಗಿದೆ.

ಎಚ್.ಸಿ. ಬಾಲಕೃಷ್ಣ – ಮಾಗಡಿ ವಿಧಾನಸಭಾ ಕ್ಷೇತ್ರ

ಮಾಗಡಿ ವಿಧಾನಸಭಾ ಕ್ಷೇತ್ರ ರಾಮನಗರ ಜಿಲ್ಲೆಯ ಪ್ರಮುಖ ವಿಧಾನಸಭಾ ಕ್ಷೇತ್ರವಾಗಿದ್ದು, 2023ರ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಎಚ್. ಸಿ. ಬಾಲಕೃಷ್ಣ ಅವರು ಈ ಕ್ಷೇತ್ರದಲ್ಲಿ ಜಯಗಳಿಸಿದ್ದಾರೆ. ಅವರು ತಮ್ಮ ನಿಕಟ ಪ್ರತಿಸ್ಪರ್ಧಿ, ಜೆಡಿಎಸ್ ಪಕ್ಷದ ಹಾಲಿ ಶಾಸಕರಾಗಿದ್ದ ಎ. ಮಂಜುನಾಥ್ ಅವರ ವಿರುದ್ಧ 11,839 ಮತಗಳ ಅಂತರದಿಂದ ವಿಜಯಶಾಲಿಯಾಗಿದ್ದಾರೆ.

ಎಚ್. ಸಿ. ಬಾಲಕೃಷ್ಣ 94,650 ಮತಗಳನ್ನು ಪಡೆದರೆ, ಜೆಡಿಎಸ್‌ನ ಎ. ಮಂಜುನಾಥ್ 82,811 ಮತಗಳನ್ನು ಹಾಗೂ ಬಿಜೆಪಿಯ ಪ್ರಸಾದ್ ಗೌಡ ಬಿ.ಯು. 14,561 ಮತಗಳನ್ನು ಪಡೆದರು.

ಇಲ್ಲಿನ ಗೆಲುವಿನ ಅಂತರ 11,839 ಮತಗಳಾಗಿದ್ದು, ಎಸ್‌ಐಆರ್ ಬಳಿಕ ಕ್ಷೇತ್ರದಲ್ಲಿ 29,053 ಮತಗಳು ಡಿಲೀಟ್ ಆಗಿವೆ.

ಬಸವರಾಜ ರಾಯರೆಡ್ಡಿ – ಯಲಬುರ್ಗಾ ವಿಧಾನಸಭಾ ಕ್ಷೇತ್ರ

ಯಲಬುರ್ಗಾ ವಿಧಾನಸಭಾ ಕ್ಷೇತ್ರ ಕೊಪ್ಪಳ ಜಿಲ್ಲೆಯ ಒಂದು ಪ್ರಮುಖ ಕ್ಷೇತ್ರವಾಗಿದ್ದು, 2023ರ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಬಸವರಾಜ ರಾಯರೆಡ್ಡಿ ಅವರು ಈ ಕ್ಷೇತ್ರದಲ್ಲಿ ಗೆಲುವು ಸಾಧಿಸಿದ್ದಾರೆ. ತಮ್ಮ ನಿಕಟ ಪ್ರತಿಸ್ಪರ್ಧಿ, ಬಿಜೆಪಿಯ ಹಾಲಿ ಶಾಸಕರಾಗಿದ್ದ ಹಾಲಪ್ಪ ಬಸಪ್ಪ ಆಚಾರ್ ಅವರ ವಿರುದ್ಧ 17,181 ಮತಗಳ ಅಂತರದಿಂದ ವಿಜಯಶಾಲಿಯಾಗಿದ್ದಾರೆ.

ಬಸವರಾಜ ರಾಯರೆಡ್ಡಿ ಅವರು 94,330 ಮತಗಳನ್ನು ಪಡೆದರೆ, ಬಿಜೆಪಿಯ ಹಾಲಪ್ಪ ಬಸಪ್ಪ ಆಚಾರ್ 77,149 ಮತಗಳನ್ನು ಪಡೆದರು.

ಇಲ್ಲಿನ ಗೆಲುವಿನ ಅಂತರ 17,181 ಮತಗಳಾಗಿದ್ದು, ಎಸ್‌ಐಆರ್ ಬಳಿಕ ಕ್ಷೇತ್ರದಲ್ಲಿ 31,338 ಮತಗಳನ್ನು ಡಿಲೀಟ್ ಮಾಡಲಾಗಿದೆ.

ವಿಜಯಾನಂದ ಕಾಶಪ್ಪನವರ್ – ಹುನಗುಂದ ವಿಧಾನಸಭಾ ಕ್ಷೇತ್ರ

ಬಾಗಲಕೋಟೆ ಜಿಲ್ಲೆಯ ಪ್ರಮುಖ ಕ್ಷೇತ್ರವಾದ ಹುನಗುಂದ ವಿಧಾನಸಭಾ ಕ್ಷೇತ್ರದಲ್ಲಿ 2023ರ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ವಿಜಯಾನಂದ ಕಾಶಪ್ಪನವರ್ ಭರ್ಜರಿ ಜಯ ಸಾಧಿಸಿದ್ದಾರೆ. ಅವರು ತಮ್ಮ ಸಮೀಪದ ಪ್ರತಿಸ್ಪರ್ಧಿ, ಬಿಜೆಪಿಯ ದೊಡ್ಡನಗೌಡ ಜಿ. ಪಾಟೀಲ್ ಅವರ ವಿರುದ್ಧ 30,007 ಮತಗಳ ಭಾರಿ ಅಂತರದಿಂದ ವಿಜಯಶಾಲಿಯಾಗಿದ್ದಾರೆ.

ವಿಜಯಾನಂದ ಕಾಶಪ್ಪನವರ್ 78,434 ಮತಗಳನ್ನು ಪಡೆದರೆ, ಬಿಜೆಪಿಯ ದೊಡ್ಡನಗೌಡ ಜಿ. ಪಾಟೀಲ್ 48,427 ಹಾಗೂ ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ನವಲಿ ಹಿರೇಮಠ ಎಸ್. ಆರ್. 33,790 ಮತಗಳನ್ನು ಪಡೆದಿದ್ದಾರೆ.

ಇಲ್ಲಿನ ಗೆಲುವಿನ ಅಂತರ 30,007 ಆಗಿದ್ದು, ಎಸ್‌ಐಆರ್ ಬಳಿಕ ಕ್ಷೇತ್ರದಲ್ಲಿ 42,108 ಮತಗಳನ್ನು ಡಿಲೀಟ್ ಮಾಡಲಾಗಿದೆ.

ಲಕ್ಷ್ಮಣ ಸವದಿ – ಅಥಣಿ ವಿಧಾನಸಭಾ ಕ್ಷೇತ್ರ

ಅಥಣಿ ವಿಧಾನಸಭಾ ಕ್ಷೇತ್ರ ಬೆಳಗಾವಿ ಜಿಲ್ಲೆಯ ಒಂದು ಪ್ರಮುಖ ಮತ್ತು ಹೈಪ್ರೊಫೈಲ್ ವಿಧಾನಸಭಾ ಕ್ಷೇತ್ರವಾಗಿದೆ. 2023ರ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಲಕ್ಷ್ಮಣ ಸಂಗಪ್ಪ ಸವದಿ ಅವರು ಈ ಕ್ಷೇತ್ರದಲ್ಲಿ ಭರ್ಜರಿ ಜಯ ದಾಖಲಿಸಿದ್ದಾರೆ. ಚುನಾವಣೆಗೆ ಕೆಲ ದಿನಗಳ ಮುನ್ನ ಬಿಜೆಪಿಯಿಂದ ಟಿಕೆಟ್ ಸಿಗದ ಕಾರಣ ಕಾಂಗ್ರೆಸ್ ಸೇರಿದ್ದ ಮಾಜಿ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಅವರು, ತಮ್ಮ ನಿಕಟ ಪ್ರತಿಸ್ಪರ್ಧಿ ಬಿಜೆಪಿಯ ಮಹೇಶ ಈರನಗೌಡ ಕುಮಠಳ್ಳಿ ಅವರ ವಿರುದ್ಧ 76,122 ಮತಗಳ ಭಾರಿ ಅಂತರದಿಂದ ವಿಜಯಶಾಲಿಯಾಗಿದ್ದಾರೆ.

ಲಕ್ಷ್ಮಣ ಸವದಿ 1,31,404 ಮತಗಳನ್ನು ಪಡೆದರೆ, ಬಿಜೆಪಿಯ ಮಹೇಶ ಕುಮಠಳ್ಳಿ ಅವರು 55,282 ಹಾಗೂ ಜೆಡಿಎಸ್‌ನ ಶಶಿಕಾಂತ್ ಪಡಸಲಗಿ 1,265 ಪಡೆದರು.

ಇಲ್ಲಿನ ಗೆಲುವಿನ ಅಂತರ 76,122 ಆಗಿದ್ದು, ಎಸ್‌ಐಆರ್ ಬಳಿಕ ಕ್ಷೇತ್ರದಲ್ಲಿ 25,866 ಮತಗಳನ್ನು ಡಿಲೀಟ್ ಮಾಡಲಾಗಿದೆ.


ಇದನ್ನೂ ಓದಿ: ‘ಎಸ್ಐಆರ್’ ಬಳಿಕ ‘ಎಸ್ಎಸ್ಆರ್’ ಮೂಲಕ ಮುಖ ಉಳಿಸಿಕೊಳ್ಳಲು ಚುನಾವಣಾ ಆಯೋಗದ ಕಸರತ್ತು: SIR ವಿರೋಧಿ ಜನಪರ ಸಂಘಟನೆಗಳಿಂದ ತೀವ್ರ ಹೋರಾಟದ ಎಚ್ಚರಿಕೆ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಸಾಂಸ್ಕೃತಿಕ ನಾಯಕ ಬಸವಣ್ಣನ ನಿಂದನೆ: ರವಿ ಹಂಜ್‌ ವಿರುದ್ದ ಕರವೇ ನಾರಾಯಣಗೌಡ ಆಕ್ರೋಶ.

"ಕರ್ನಾಟಕ ಕಂಡ ಮಹಾ ಮಾನವತಾವಾದಿ, ದಾರ್ಶನಿಕ, ಸಾಮಾಜಿಕ ಕ್ರಾಂತಿಯ ಹರಿಕಾರ, ಭಕ್ತಿ ಭಂಡಾರಿ ಬಸವಣ್ಣನವರನ್ನು ಕೀಳಾಗಿ ನಿಂದಿಸಿದ್ದ ರವಿ ಹಂಜ್ ಎಂಬಾತನನ್ನು ಪೊಲೀಸರು ಬಂಧಿಸಿರುವುದು ಸ್ವಾಗತಾರ್ಹ. ಈತ ಮಾಡಿರುವುದು ಭಯೋತ್ಪಾದನೆಗೆ ಸಮನಾದ ಕೃತ್ಯ....

ಮುರಿದ ಕೈಗೆ ಚಿಕಿತ್ಸೆ ಬದಲು ಕಾರ್ಡ್‌ಬೋರ್ಡ್ ರಟ್ಟು ಕಟ್ಟಿ ಕಳಿಸಿದ ಆಸ್ಪತ್ರೆ ಸಿಬ್ಬಂದಿ: ಉತ್ತರ ಪ್ರದೇಶದ ಆರೋಗ್ಯ ವ್ಯವಸ್ಥೆ ವಿರುದ್ಧ ಕಾಂಗ್ರೆಸ್ ಕಿಡಿ!

ಉತ್ತರ ಪ್ರದೇಶದ ಕಾನ್ಪುರದ ಸರ್ಕಾರಿ ಆಸ್ಪತ್ರೆಯಲ್ಲಿ ರಸ್ತೆ ಅಪಘಾತದಲ್ಲಿ ಕೈ ಮೂಳೆ ಮುರಿದಿದ್ದ ತರಕಾರಿ ವ್ಯಾಪಾರಿಯೊಬ್ಬರಿಗೆ ಸೂಕ್ತ ಚಿಕಿತ್ಸೆ ನೀಡುವ ಬದಲು ಕಾರ್ಡ್‌ಬೋರ್ಡ್ ರಟ್ಟು ಕಟ್ಟಿ ಮನೆಗೆ ಕಳುಹಿಸಿದ ಘಟನೆ ವ್ಯಾಪಕ ಆಕ್ರೋಶಕ್ಕೆ...

ಉತ್ತರ ಪ್ರದೇಶದಲ್ಲಿ 1.27 ಕೋಟಿ ಹಿಂದೂ ಮತದಾರರ ಹೆಸರು ಅಳಿಸಿದ ಆರೋಪ: ಯೋಗಿ ಆದಿತ್ಯನಾಥ್ ಅವರಿಂದ ದಾಖಲೆ, ದತ್ತಾಂಶ ಕೇಳಿದ ಸ್ವತಂತ್ರ ಆಯೋಗ

ನವದೆಹಲಿ: ಉತ್ತರ ಪ್ರದೇಶದಲ್ಲಿ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ಸುಮಾರು 1.27 ಕೋಟಿ ಹಿಂದೂ ಮತದಾರರನ್ನು ಪಟ್ಟಿಯಿಂದ ಹೊರಗಿಡಲಾಗಿದೆ ಎಂಬ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಹೇಳಿಕೆ ಇದೀಗ...

ಐಸಿಜೆಯ ‘ನರಮೇಧ’ ತೀರ್ಪಿಗೆ ರೋಹಿಂಗ್ಯಾ ನಿರಾಶ್ರಿತರಿಂದ ಸ್ವಾಗತ: ತಾಯ್ನಾಡು ಮ್ಯಾನ್ಮಾರ್‌ಗೆ ಮರಳುವ ಇಂಗಿತ

ನವೆಂಬರ್ 19, 2026ರಂದು, ವಿಶ್ವಸಂಸ್ಥೆಯ ಅತ್ಯುನ್ನತ ನ್ಯಾಯಾಲಯವಾದ ಇಂಟರ್‌ನ್ಯಾಷನಲ್ ಕೋರ್ಟ್ ಆಫ್ ಜಸ್ಟೀಸ್ (ಐಸಿಜೆ) ರೋಹಿಂಗ್ಯಾ ಮುಸ್ಲಿಂ ಅಲ್ಪಸಂಖ್ಯಾತರ ವಿರುದ್ಧ ಮ್ಯಾನ್ಮಾರ್ ನರಮೇಧ ನಡೆಸಿದೆ ಎಂದು ಐತಿಹಾಸಿಕ ತೀರ್ಪು ನೀಡಿದೆ. ಅಂತಾರಾಷ್ಟ್ರೀಯ...

‘ಬಸವ ಮಂಟಪ’ ವಿವಾದ: ವಿದೇಶಕ್ಕೆ ತೆರಳಲು ಯತ್ನಿಸಿದ ಲೇಖಕ ರವಿ ಹಂಜ್ ಕೊಚ್ಚಿನ್ ವಿಮಾನ ನಿಲ್ದಾಣದಲ್ಲಿ ವಶಕ್ಕೆ; ಕೃತಿ ಮುಟ್ಟುಗೋಲು, ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಸಿಎಂ ಡಿಕೆಶಿ ಆದೇಶ

ಬೆಂಗಳೂರು, ನವೆಂಬರ್ 21: 12ನೇ ಶತಮಾನದ ಸಮಾಜ ಸುಧಾರಕ, ವಚನ ಚಳವಳಿಯ ಮುಂಚೂಣಿ ನಾಯಕ ಜಗಜ್ಯೋತಿ ಬಸವಣ್ಣನವರ ಕುರಿತು ಅವಹೇಳನಕಾರಿ ಮತ್ತು ಅವಮಾನಕರ ವಿಚಾರಗಳನ್ನು ಬರೆದಿದ್ದಾರೆ ಎಂಬ ಆರೋಪಕ್ಕೆ ಗುರಿಯಾಗಿರುವ ‘ಬಸವ ಮಂಟಪ’...

ಸ್ಥಳಾಂತರಗೊಂಡ ರೋಹಿಂಗ್ಯಾಗಳ ಸುರಕ್ಷಿತ, ತ್ವರಿತ ವಾಪಸಾತಿಗೆ ಬೆಂಬಲ : ಭಾರತ ಪುನರುಚ್ಚಾರ

ಸ್ಥಳಾಂತರಗೊಂಡ ರೋಹಿಂಗ್ಯಾ ಮುಸ್ಲಿಮರನ್ನು ಮ್ಯಾನ್ಮಾರ್‌ಗೆ ಸುರಕ್ಷಿತವಾಗಿ ಮತ್ತು ಸುಸ್ಥಿರವಾಗಿ ವಾಪಸ್ ಕಳುಹಿಸುವುದಕ್ಕೆ ತನ್ನ ಬೆಂಬಲವನ್ನು ಭಾರತ ಶುಕ್ರವಾರ (ನ.20) ಪುನರುಚ್ಚರಿಸಿದೆ. ಮ್ಯಾನ್ಮಾರ್ ವಿರುದ್ಧದ ನರಮೇಧ ಪ್ರಕರಣದಲ್ಲಿ ಅಂತಾರಾಷ್ಟ್ರೀಯ ನ್ಯಾಯಾಲಯ (ಐಸಿಜೆ) ತನ್ನ ಐತಿಹಾಸಿಕ...

“ತೆರಿಗೆ ಇಳಿಸಿದರೂ ಉದ್ಯಮ ವಲಯ ಸಂಬಳ ಹೆಚ್ಚಿಸಿಲ್ಲ”: ಪ್ರಧಾನಿ ಮೋದಿ ಮಾತುಗಳಲ್ಲೇ ಸಾಬೀತಾಯ್ತು ‘ಟ್ರಿಕಲ್-ಡೌನ್’ ಆರ್ಥಿಕತೆಯ ವೈಫಲ್ಯ!

ಕೇಂದ್ರ ಸರ್ಕಾರವು ಕಾರ್ಪೊರೇಟ್ ತೆರಿಗೆಯನ್ನು ಕಡಿತಗೊಳಿಸಿ ಉದ್ಯಮ ವಲಯಕ್ಕೆ ಭಾರಿ ರಿಯಾಯಿತಿ ನೀಡಿದ್ದರೂ, ಕಂಪನಿಗಳು ತಮ್ಮ ಲಾಭವನ್ನು ಕಾರ್ಮಿಕರೊಂದಿಗೆ ಹಂಚಿಕೊಳ್ಳದೆ ಕೇವಲ ತಮ್ಮ ತಿಜೋರಿ ತುಂಬಿಸಿಕೊಂಡಿವೆ ಎಂಬುದನ್ನು ಕೇಂದ್ರ ಸಾಂಖ್ಯಿಕ ಮತ್ತು ಕಾರ್ಯಕ್ರಮ...

ಮಣಿಪುರದಲ್ಲಿ ನಕಲಿ ಮದ್ಯ ಸೇವಿಸಿ 13 ಮಂದಿ ಸಾವು; 346 ಜನರು ಆಸ್ಪತ್ರೆಗೆ ದಾಖಲು, ಹಲವರ ಸ್ಥಿತಿ ಗಂಭೀರ

ಮಣಿಪುರದ ಚಾಂಡೆಲ್ ಜಿಲ್ಲೆಯಲ್ಲಿ ಕಲುಷಿತ ಮದ್ಯ ಸೇವನೆಯಿಂದ ಸಂಭವಿಸಿರುವ ಭೀಕರ ದುರಂತದಲ್ಲಿ ಮೃತಪಟ್ಟವರ ಸಂಖ್ಯೆ 13ಕ್ಕೆ ಏರಿಕೆಯಾಗಿದೆ. ನಕಲಿ ಮದ್ಯ ಸೇವನೆಯಿಂದ ಮೆಥನಾಲ್ ವಿಷಪೂರಿತಕ್ಕೆ ಒಳಗಾಗಿರುವ ಶಂಕೆಯ ಹಿನ್ನೆಲೆಯಲ್ಲಿ 346ಕ್ಕೂ ಹೆಚ್ಚು ಜನರನ್ನು...

SIR ಪೂರ್ವದ ಮತದಾರರ ಪಟ್ಟಿ ಬಳಕೆ : ರಾಜಸ್ಥಾನ ಪಂಚಾಯತ್ ಸಮರದಲ್ಲಿ ಕಾಂಗ್ರೆಸ್​ಗೆ ಭರ್ಜರಿ ಜಯ; ಬಿಜೆಪಿಗೆ ಹಿನ್ನಡೆ

ರಾಜಸ್ಥಾನದ ಗ್ರಾಮೀಣ ಸ್ಥಳೀಯ ಸಂಸ್ಥೆಗಳ (ಪಂಚಾಯತ್ ಸಮಿತಿ ಮತ್ತು ಜಿಲ್ಲಾ ಪರಿಷತ್) ಚುನಾವಣಾ ಫಲಿತಾಂಶ ಪ್ರಕಟಗೊಂಡಿದ್ದು, ಪ್ರತಿಪಕ್ಷ ಕಾಂಗ್ರೆಸ್ ಭರ್ಜರಿ ಮೇಲುಗೈ ಸಾಧಿಸಿದೆ. ಈ ಫಲಿತಾಂಶವು ರಾಜ್ಯದ ಆಡಳಿತಾರೂಢ ಬಿಜೆಪಿಗೆ ದೊಡ್ಡ ಮಟ್ಟದ...

ಎಸ್‌ಐಆರ್‌ನಲ್ಲಿ ಅಳಿಸುವಿಕೆಗೆ ಗುರುತಿಸಿದ್ದ 1,635 ಮತದಾರರ ಹೆಸರು ಅಂತಿಮ ಪಟ್ಟಿಯಲ್ಲಿ ಮತ್ತೆ ಪ್ರತ್ಯಕ್ಷ; ಹಳೆಯ EPIC ಸಂಖ್ಯೆಗಳೇ ಮುಂದುವರಿಕೆ

ಬೆಂಗಳೂರು: ಮತದಾರರ ಪಟ್ಟಿಯನ್ನು ಶುದ್ಧೀಕರಿಸುವ ಹೆಸರಿನಲ್ಲಿ ನಡೆದಿರುವ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ಗಂಭೀರ ಲೋಪಗಳು ನಡೆದಿರುವುದನ್ನು ದಿ ವೈರ್ ವರದಿ ಬಹಿರಂಗಪಡಿಸಿದೆ. ಬೆಂಗಳೂರಿನಲ್ಲಿ ಎಸ್‌ಐಆರ್ ವೇಳೆ ಗೈರುಹಾಜರಿ, ಸ್ಥಳಾಂತರ, ಮರಣ...