ಉತ್ತರ ಪ್ರದೇಶದ ಕಾನ್ಪುರದ ಸರ್ಕಾರಿ ಆಸ್ಪತ್ರೆಯಲ್ಲಿ ರಸ್ತೆ ಅಪಘಾತದಲ್ಲಿ ಕೈ ಮೂಳೆ ಮುರಿದಿದ್ದ ತರಕಾರಿ ವ್ಯಾಪಾರಿಯೊಬ್ಬರಿಗೆ ಸೂಕ್ತ ಚಿಕಿತ್ಸೆ ನೀಡುವ ಬದಲು ಕಾರ್ಡ್‌ಬೋರ್ಡ್ ರಟ್ಟು ಕಟ್ಟಿ ಮನೆಗೆ ಕಳುಹಿಸಿದ ಘಟನೆ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ಈ ಘಟನೆಯ ವಿರುದ್ಧ ಕಾಂಗ್ರೆಸ್ ತನ್ನ ಅಧಿಕೃತ ಸಾಮಾಜಿಕ ಜಾಲತಾಣ ಖಾತೆಯಲ್ಲಿ ತೀವ್ರ ವಾಗ್ದಾಳಿ ನಡೆಸಿದ್ದು, ಉತ್ತರ ಪ್ರದೇಶ ಸರ್ಕಾರದ ಆರೋಗ್ಯ ವ್ಯವಸ್ಥೆಯ ಕುರಿತು ಪ್ರಶ್ನೆ ಎತ್ತಿದೆ.
ಕಾನ್ಪುರದ ಶಾಸ್ತ್ರಿ ನಗರ ನಿವಾಸಿಯಾಗಿರುವ 42 ವರ್ಷದ ಧರ್ಮಬಾಬು ಗುಪ್ತಾ ತರಕಾರಿ ಮಾರಾಟ ಮಾಡಿ ಜೀವನ ನಡೆಸುತ್ತಿದ್ದಾರೆ. ಗುರುವಾರ ಮಧ್ಯಾಹ್ನ ನಡೆದ ರಸ್ತೆ ಅಪಘಾತದಲ್ಲಿ ಅವರ ಎಡಗೈಗೆ ಗಂಭೀರ ಗಾಯವಾಗಿತ್ತು. ಘಟನಾ ಸ್ಥಳಕ್ಕೆ ಧಾವಿಸಿದ ಪೊಲೀಸರು ಸರ್ಕಾರಿ ಆಂಬ್ಯುಲೆನ್ಸ್ ಮೂಲಕ ಅವರನ್ನು ಕಾನ್ಪುರದ ಹ್ಯಾಲೆಟ್ ಆಸ್ಪತ್ರೆಯ ತುರ್ತು ಚಿಕಿತ್ಸಾ ವಿಭಾಗಕ್ಕೆ ದಾಖಲಿಸಿದ್ದರು.
ಆದರೆ ಆಸ್ಪತ್ರೆಯಲ್ಲಿದ್ದ ಮೂಳೆ ವಿಭಾಗದ ವೈದ್ಯರು ತಮ್ಮ ನೋವನ್ನು ಗಂಭೀರವಾಗಿ ಪರಿಗಣಿಸಲಿಲ್ಲ ಎಂದು ಧರ್ಮಬಾಬು ಆರೋಪಿಸಿದ್ದಾರೆ. ತೀವ್ರ ನೋವಿನಿಂದ ನರಳುತ್ತಿದ್ದರೂ ಎಕ್ಸ್-ರೇ ಮಾಡಿಸಲು ಮುಂದಾಗದೆ, ಕೈ ಮೂಳೆ ಮುರಿದಿಲ್ಲ; ಬರೀ ನೋವು ಮತ್ತು ಊತ ಅಷ್ಟೇ ಎಂದು ವೈದ್ಯರು ಹೇಳಿದ್ದಾರೆ. ಅಷ್ಟೇ ಅಲ್ಲದೆ, ಮುರಿದ ಕೈಗೆ ಪ್ಲಾಸ್ಟರ್ ಹಾಕುವ ಬದಲು ಬ್ಯಾಂಡೇಜ್‌ನೊಂದಿಗೆ ರಟ್ಟಿನ ದೊಡ್ಡ ತುಂಡನ್ನು ಕಟ್ಟಿ, ನೋವು ನಿವಾರಕ ಮಾತ್ರೆ ನೀಡಿ ಚಿಕಿತ್ಸೆ ಮುಗಿದಿದೆ ಎಂದು ಮನೆಗೆ ಕಳುಹಿಸಿದ್ದಾರೆ ಎಂದು ಅವರು ದೂರಿದ್ದಾರೆ.
ಚಿಕಿತ್ಸೆಯ ಬಳಿಕ ಮನೆಗೆ ತೆರಳಿದ ಧರ್ಮಬಾಬು ಅವರಿಗೆ ರಾತ್ರಿಯಿಡೀ ನೋವು ವಿಪರೀತವಾಗಿ ಹೆಚ್ಚಾಗಿ ನರಳಾಡುವಂತಾಗಿದೆ. ಶುಕ್ರವಾರ ಬೆಳಿಗ್ಗೆ ಅವರು ಸಾಮಾಜಿಕ ಕಾರ್ಯಕರ್ತ ಮುನ್ನಾ ಸಿಂಗ್ ಅವರನ್ನು ಭೇಟಿಯಾಗಿ ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ. ಮುನ್ನಾ ಸಿಂಗ್ ಅವರ ನೆರವಿನೊಂದಿಗೆ ನಾರಾಯಣ ಆಸ್ಪತ್ರೆಗೆ ತೆರಳಿ ತಪಾಸಣೆ ಹಾಗೂ ಎಕ್ಸ್-ರೇ ಮಾಡಿಸಿದಾಗ, ಧರ್ಮಬಾಬು ಅವರ ಎಡಗೈನಲ್ಲಿ ಎರಡು ಕಡೆ ಮೂಳೆ ಮುರಿದಿರುವುದು ದೃಢಪಟ್ಟಿದೆ.
ಮತ್ತೊಂದೆಡೆ, ಈ ಆರೋಪಗಳನ್ನು ತಳ್ಳಿಹಾಕಿರುವ ಜಿಎಸ್‌ವಿಎಂ ವೈದ್ಯಕೀಯ ಕಾಲೇಜಿನ ಮೂಳೆ ವಿಭಾಗದ ಮುಖ್ಯಸ್ಥ ಡಾ. ಸಂಜಯ್ ಕುಮಾರ್, ಚಿಕಿತ್ಸೆಯಲ್ಲಿ ಯಾವುದೇ ನಿರ್ಲಕ್ಷ್ಯ ನಡೆದಿಲ್ಲ ಎಂದು ಸಮರ್ಥಿಸಿಕೊಂಡಿದ್ದಾರೆ. ಗುರುವಾರ ಮಧ್ಯಾಹ್ನ ಆಸ್ಪತ್ರೆಗೆ ಬಂದ ರೋಗಿ ಮತ್ತು ಅವರ ಜೊತೆಗಿದ್ದವರು ಮದ್ಯ ಸೇವಿಸಿದ್ದರು, ಆದರೂ ಅವರಿಗೆ ಚಿಕಿತ್ಸೆ ನೀಡಲಾಗಿದೆ ಎಂದು ಅವರು ದೂರಿದ್ದಾರೆ. ಎಕ್ಸ್-ರೇ ಸರಿಯಾಗಿ ಮಾಡಲು ಅನುಕೂಲವಾಗುವಂತೆ ತಾತ್ಕಾಲಿಕವಾಗಿ ಬ್ಯಾಂಡೇಜ್ ಮೂಲಕ ರಟ್ಟು ಕಟ್ಟಲಾಗಿತ್ತು; ಆದರೆ ಎಕ್ಸ್-ರೇ ವಿಭಾಗಕ್ಕೆ ತೆರಳುವಂತೆ ಸೂಚಿಸಿದಾಗ ರೋಗಿ ಆಕ್ರೋಶಗೊಂಡು, ಎಕ್ಸ್-ರೇಗೆ ಎಂದು ಹೋದವರು ಮತ್ತೆ ವಾಪಸ್ ಬರಲಿಲ್ಲ ಎಂದು ಡಾ. ಸಂಜಯ್ ಕುಮಾರ್ ತಿಳಿಸಿದ್ದಾರೆ, ಸದ್ಯ ಈ ಆರೋಪಗಳ ಕುರಿತು ತನಿಖೆ ನಡೆಸಲಾಗುತ್ತಿದೆ ಎಂದು ಹೇಳಿದ್ದಾರೆ.
ಈ ನಡುವೆ, ಈ ಘಟನೆಯನ್ನು ಮುಂದಿಟ್ಟುಕೊಂಡು ಕಾಂಗ್ರೆಸ್ ತನ್ನ ಅಧಿಕೃತ ‘ಎಕ್ಸ್’ (Twitter) ಖಾತೆಯಲ್ಲಿ ಉತ್ತರ ಪ್ರದೇಶ ಸರ್ಕಾರದ ಆರೋಗ್ಯ ವ್ಯವಸ್ಥೆಯ ಸ್ಥಿತಿಯನ್ನು ತೀವ್ರವಾಗಿ ಟೀಕಿಸಿದೆ. ಉತ್ತರ ಪ್ರದೇಶದ ‘ವಿಶ್ವದರ್ಜೆಯ ಆರೋಗ್ಯ ವ್ಯವಸ್ಥೆ’ಯ ವಾಸ್ತವ ಇದಾಗಿದೆ ಎಂದು ವ್ಯಂಗ್ಯವಾಡಿರುವ ಕಾಂಗ್ರೆಸ್, ಕಾನ್ಪುರದ ತರಕಾರಿ ವ್ಯಾಪಾರಿ ಧರ್ಮಬಾಬು ಅವರ ಕೈಗೆ ಗಾಯವಾದಾಗ ಚಿಕಿತ್ಸೆ ನೀಡುವ ಬದಲು ಅಲ್ಲಿ ಅವರನ್ನು ಅಪಹಾಸ್ಯ ಮಾಡಲಾಗಿದೆ ಎಂದು ಕಿಡಿಕಾರಿದೆ. ವೈದ್ಯರು ಅವರ ಕೈಗೆ ಎಕ್ಸ್-ರೇ ಮಾಡಿಸಲಿಲ್ಲ, ಪ್ಲಾಸ್ಟರ್ ಕೂಡ ಹಾಕಲಿಲ್ಲ; ಕೈಯಲ್ಲಿ ಎರಡು ಕಡೆ ಮೂಳೆ ಮುರಿದಿದ್ದರೂ ಬರೀ ನೋವು ಮತ್ತು ಊತ ಅಷ್ಟೇ ಎಂದು ಹೇಳಿ ಕಾರ್ಡ್‌ಬೋರ್ಡ್ ರಟ್ಟು ಕಟ್ಟಿ ಮನೆಗೆ ಕಳುಹಿಸಿದ್ದಾರೆ ಎಂದು ಕಾಂಗ್ರೆಸ್ ಆಕ್ರೋಶ ವ್ಯಕ್ತಪಡಿಸಿದೆ. ಬಿಜೆಪಿ ಸರ್ಕಾರ ಎಷ್ಟೇ ದೊಡ್ಡ ದೊಡ್ಡ ಹೇಳಿಕೆಗಳನ್ನು ನೀಡಬಹುದು, ಆದರೆ ವಾಸ್ತವದಲ್ಲಿ ಜನರು ಸಂಕಷ್ಟ ಅನುಭವಿಸುತ್ತಿದ್ದಾರೆ, ಇದು ನಾಚಿಕೆಗೇಡು ಎಂದು ಕಾಂಗ್ರೆಸ್ ತನ್ನ ಪೋಸ್ಟ್‌ನಲ್ಲಿ ವಾಗ್ದಾಳಿ ನಡೆಸಿದೆ.
ಒಂದೆಡೆ ರೋಗಿ ಸೂಕ್ತ ಪರೀಕ್ಷೆ ಹಾಗೂ ಚಿಕಿತ್ಸೆ ಸಿಗದೆ ರಾತ್ರಿಯಿಡೀ ನೋವು ಅನುಭವಿಸಿದ ಆರೋಪ ಮಾಡಿದ್ದರೆ, ಮತ್ತೊಂದೆಡೆ ಆಸ್ಪತ್ರೆಯ ಆಡಳಿತವು ರೋಗಿಯ ವರ್ತನೆಯ ನೆಪ ಮುಂದಿಟ್ಟು ತನ್ನನ್ನು ಸಮರ್ಥಿಸಿಕೊಂಡಿದೆ. ದುಡಿಯುವ ವರ್ಗದ ಸಾಮಾನ್ಯ ತರಕಾರಿ ವ್ಯಾಪಾರಿಯೊಬ್ಬರಿಗೆ ತುರ್ತು ಚಿಕಿತ್ಸೆಯಲ್ಲಿ ಎದುರಾದ ಈ ಪರಿಸ್ಥಿತಿ, ಸರ್ಕಾರಿ ಆಸ್ಪತ್ರೆಗಳಲ್ಲಿನ ಸೇವೆ ಮತ್ತು ಉತ್ತರದಾಯಿತ್ವದ ಕುರಿತು ಮತ್ತೊಮ್ಮೆ ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿದೆ.


