Homeಗೌರಿ ಕಣ್ಣೋಟದೈಹಿಕ ಸೌಂದರ್ಯ & ಧಾರ್ಮಿಕ ನಂಬಿಕೆ: ಆದರ್ಶ ಹುಡುಗಿಯ ಕುರಿತು ಗೌರಿ ಲಂಕೇಶ್‌ ಬರಹ

ದೈಹಿಕ ಸೌಂದರ್ಯ & ಧಾರ್ಮಿಕ ನಂಬಿಕೆ: ಆದರ್ಶ ಹುಡುಗಿಯ ಕುರಿತು ಗೌರಿ ಲಂಕೇಶ್‌ ಬರಹ

ದೈಹಿಕ ಸೌಂದರ್ಯದ ಬಗ್ಗೆ ಗಮನ ಕೊಡದೆ ನಾನು ನನ್ನ ಸಮಯವನ್ನು ಆಂತರ್ಯದ ಸದ್ಗುಣಗಳನ್ನು ಹೆಚ್ಚಿಸಿಕೊಳ್ಳುವತ್ತ ವ್ಯಯಿಸಿದರೆ ನಾನು ಈ ಜಗತ್ತಿನಲ್ಲಿ ನನ್ನ ಕೈಲಾದಷ್ಟು ಬದಲಾವಣೆ ಮತ್ತು ಅಭಿವೃದ್ಧಿಯನ್ನು ತರಬಹುದೆನಿಸುತ್ತದೆ.

- Advertisement -
- Advertisement -

ಇತ್ತೀಚೆಗೆ ಇಂಟರ್‌ನೆಟ್‌ನಲ್ಲಿ ಯಾರೋ ಒಬ್ಬ ಓರ್ವ ಯುವತಿಯ ಫೋಟೊ ಒಂದನ್ನು ಹಾಕಿ “ಇದನ್ನು ಹೇಗೆ ಅರ್ಥಮಾಡಿಕೊಳ್ಳುವುದೆಂದು ನನಗೆ ಗೊತ್ತಾಗಲಿಲ್ಲ’’ ಎಂದು ಅದರಡಿ ಬರೆದಿದ್ದ. ಆತನ ಗೊಂದಲಕ್ಕೆ ಕಾರಣ ಆ ಹುಡುಗಿಯ ಮುಖದ ಮೇಲಿದ್ದ ದಟ್ಟವಾದ ಕೂದಲು. ಸೌಂದರ್ಯ ಕುರಿತು ಸಾಮಾನ್ಯ ಜನರ ಅಭಿಪ್ರಾಯ ಮತ್ತು ಪುರುಷರ ನಿರೀಕ್ಷೆಗೆ ಬೆಲೆ ಕೊಡದ ಆ ಯುವತಿ ತನ್ನ ಸಿಖ್ ಧರ್ಮದ ನಂಬಿಕೆಯಂತೆ ತನ್ನ ಮುಖದ ಮೇಲಿರುವ ಕೂದಲನ್ನು ಬೋಳಿಸಿಕೊಂಡಿರಲಿಲ್ಲ. ಸಹಜವಾಗಿಯೇ ಇದು ಆ ವ್ಯಕ್ತಿಗೆ ವಿಚಿತ್ರವಾಗಿ ಕಂಡಿತ್ತು.

ಆತ ಈ ಫೋಟೋವನ್ನು ಹಾಕಿದ ನಂತರ ಅದರಲ್ಲಿರುವ ಯುವತಿಯ ಧಾರ್ಮಿಕ ನಂಬಿಕೆಯನ್ನು ಬೆಂಬಲಿಸುತ್ತ ಮತ್ತು ಅದನ್ನು ಲೇವಡಿ ಮಾಡಿದ ವ್ಯಕ್ತಿಯ ಅಸೂಕ್ಷ್ಮತೆಯನ್ನು ಖಂಡಿಸುತ್ತಾ ಹಲವಾರು ಪ್ರತಿಕ್ರಿಯೆಗಳು ಬಂದವು. ಹಾಗೆಯೇ ಆಕೆಯನ್ನು ತಮಾಷೆ ಮಾಡಿದವರಿಗೂ ಕೊರತೆ ಇರಲಿಲ್ಲ. ಆಕೆಯ ಸುತ್ತ ಎಲ್ಲ ತರಹದ ಅಭಿಪ್ರಾಯಗಳು ವ್ಯಕ್ತವಾಗುತ್ತಿರುವಾಗಲೇ ಆ ಯುವತಿಯೇ ತನ್ನ ಅಭಿಪ್ರಾಯವನ್ನು ದಾಖಲಿಸಿದಳು. ಆಕೆ ಅದೆಷ್ಟು ಸೂಕ್ಷ್ಮಮನಸ್ಸಿನ, ದೃಢ ನಂಬಿಕೆಯ, ಸಂವೇದನಾಶೀಲ ಯುವತಿ ಎಂದರೆ ಆಕೆಯನ್ನು ಎಲ್ಲರೂ ಹಾಡಿಹೊಗಳಿದರು.

ಆ ಯುವತಿಯ ಪ್ರತಿಕ್ರಿಯೆ ಹೀಗಿತ್ತು:

“ಹಾಯ್ ಗೆಳೆಯರೆ. ನಾನು ಬಲ್‌ಪ್ರೀತ್ ಕೌರ್. ಆ ಫೋಟೋದಲ್ಲಿರುವ ಹುಡುಗಿ. ನನ್ನ ಸ್ನೇಹಿತರು ಫೇಸ್ಸ್ಬುಕ್‌ನಲ್ಲಿ ಈ ಫೋಟೋದ ಬಗ್ಗೆ ನನ್ನ ಗಮನ ಸೆಳೆಯುವ ತನಕ ಈ ಕುರಿತು ನನಗೆ ಗೊತ್ತಿರಲಿಲ್ಲ. ಈ ನನ್ನ ಫೋಟೊವನ್ನು ತೆಗೆದವರು ನನ್ನನ್ನು ಕೇಳಿದ್ದರೆ ನಾನು ಸ್ಮೈಲ್‌ ಮಾಡಿ ಸಹಕರಿಸುತ್ತಿದ್ದೆ. ಈ ಫೋಟೋಗೆ ಬಂದಿರುವ ನಕಾರಾತ್ಮಕ ಮತ್ತು ಸಕಾರಾತ್ಮಕ ಪ್ರತಿಕ್ರಿಯೆಗಳನ್ನು ಓದಿ ನನಗೆ ಮುಜುಗರವಾಗಲಿ, ಅವಮಾನವಾಗಲಿ ಆಗಿಲ್ಲ. ಯಾಕೆಂದರೆ ನಾನು ಇರುವುದೇ ಹೀಗೆ. ಹೌದು, ನಾನು ಧರ್ಮದ ದೀಕ್ಷೆ ಪಡೆದಿರುವ, ಮುಖದ ಮೇಲೆ ಕೂದಲನ್ನು ಹೊಂದಿರುವ ಸಿಖ್ ಮಹಿಳೆ. ನಾನು ಇತರೆ ಮಹಿಳೆಯರಿಗಿಂತ ಭಿನ್ನವಾಗಿ ಕಾಣುವುದರಿಂದ ನನ್ನ ಲಿಂಗದ ಬಗ್ಗೆ ಹಲವರಿಗೆ ಅನುಮಾನ ಮೂಡುತ್ತದೆ ಎಂಬುದನ್ನು ನಾನು ಬಲ್ಲೆ. ಅದರೆ ಧರ್ಮಧೀಕ್ಷೆ ಪಡೆದಿರುವ ಸಿಖ್ಖರು ಈ ದೇಹವನ್ನು ದೇವರೇ ನಮಗೆ ಕೊಟ್ಟಿದ್ದೆಂದೂ, ಈ ದೇಹ ಪವಿತ್ರವೆಂದೂ (ಒಂದು ರೀತಿಯಲ್ಲಿ ಇದು ಲಿಂಗರಹಿತ ದೇಹ), ಇದನ್ನು ದೇವರು ಕೊಟ್ಟಂತೆಯೇ ಕಾಪಾಡಿಕೊಳ್ಳಬೇಕೆಂದೂ ನಂಬಿದ್ದೇವೆ. ಹೇಗೆ ಮಕ್ಕಳು ತಮಗೆ ಜನ್ಮ ನೀಡಿದ ತಂದೆ/ತಾಯಿಯನ್ನು ತಿರಸ್ಕರಿಸುವುದಿಲ್ಲವೋ, ಹಾಗೆಯೇ ಸಿಖ್ಖರು ದೇವರು ಕೊಟ್ಟಿರುವ ದೇಹವನ್ನು ತಿರಸ್ಕರಿಸುವುದಿಲ್ಲ. “ನಾನು, ನನ್ನದು’’ ಎಂಬ ಭಾವನೆಯಲ್ಲಿ ನಮ್ಮ ದೇಹವನ್ನು ಒಂದು ಪರಿಕರದಂತೆ ಬದಲಾಯಿಸುತ್ತಾ ಹೋದರೆ ನಾವು ನಮ್ಮ ಒಳಗೇ ನಮ್ಮ ಅಹಂ ಮತ್ತು ದೈವತ್ವದ ನಡುವೆ ಬಿರುಕನ್ನು ಮೂಡಿಸಿಕೊಳ್ಳುತ್ತೇವೆ. ಸೌಂದರ್ಯದ ಬಗ್ಗೆ ಸಮಾಜದ ಪರಿಕಲ್ಪನೆಯನ್ನು ಮೀರಿ ನಿಲ್ಲುವ ಮೂಲಕ ನಾನು ನನ್ನ ಕೃತ್ಯಗಳ ಬಗ್ಗೆ ಹೆಚ್ಚು ಗಮನಹರಿಸಲು ನನಗೆ ಸಾಧ್ಯ ಎಂದು ನಾನು ನಂಬಿದ್ದೇನೆ. ನನ್ನ ಚಿಂತನೆ, ವರ್ತನೆ ಮತ್ತು ಕೃತ್ಯಗಳು ನನ್ನ ಈ ದೇಹದ ವಿನ್ಯಾಸಕ್ಕಿಂತ ಮೌಲ್ಯಯುತವಾದದ್ದೆಂದು ಭಾವಿಸಿದ್ದೇನೆ”.

ಎಷ್ಟೇ ಆದರೂ ಕೊನೆಗೂ ಈ ದೇಹ ಬೂದಿ ಆಗುವುದರಿಂದ ಇದರ ಬಗ್ಗೆ ಯಾಕಷ್ಟು ಚಡಪಡಿಸಬೇಕು? ನಾನು ಸತ್ತ ನಂತರ ಯಾರೂ ನಾನು ಹೇಗಿದ್ದೆ ಎಂದು ನೆನಪಿನಲ್ಲಿಟ್ಟುಕೊಳ್ಳುವುದಿಲ್ಲ. ಅಷ್ಟೇ ಯಾಕೆ, ನನ್ನ ಮಕ್ಕಳೂ, ನನ್ನ ದನಿಯನ್ನೂ ಮರೆತುಬಿಡುತ್ತಾರೆ. ಕಾಲಕ್ರಮೇಣ ನಮ್ಮ ಶಾರೀರಿಕ ನೆನಪುಗಳೂ ಅಳಿಸಿಹೋಗುತ್ತವೆ. ಬದಲಾಗಿ ನನ್ನ ಪ್ರಭಾವ ಮತ್ತು ನನ್ನ ಲೆಗಸಿ ಉಳಿದಿರುತ್ತದೆ. ದೈಹಿಕ ಸೌಂದರ್ಯದ ಬಗ್ಗೆ ಗಮನ ಕೊಡದೆ ನಾನು ನನ್ನ ಸಮಯವನ್ನು ಆಂತರ್ಯದ ಸದ್ಗುಣಗಳನ್ನು ಹೆಚ್ಚಿಸಿಕೊಳ್ಳುವತ್ತ ವ್ಯಯಿಸಿದರೆ ನಾನು ಈ ಜಗತ್ತಿನಲ್ಲಿ ನನ್ನ ಕೈಲಾದಷ್ಟು ಬದಲಾವಣೆ ಮತ್ತು ಅಭಿವೃದ್ಧಿಯನ್ನು ತರಬಹುದೆನಿಸುತ್ತದೆ.

ಆದ್ದರಿಂದ ನನಗೆ ನನ್ನ ಮುಖ ಹೇಗಿದೆ ಎಂಬುದಕ್ಕಿಂತ ಆ ಮುಖದ ಹಿಂದೆ ಇರುವ ನಗೆ ಮುಖ್ಯವಾಗಿದೆ. ಮುಂದೆ ಯಾರದರೂ ನನ್ನನ್ನು ನೋಡಿದರೆ ದಯವಿಟ್ಟು ನನಗೆ ಹಲೋ ಹೇಳಿ ನನ್ನನ್ನು ಮಾತನಾಡಿಸಿ. ನನ್ನ ಈ ಫೋಟೋಗೆ ಬಂದಿರುವ ಪಾಸಿಟಿವ್ ಮತ್ತು ನೆಗಟಿವ್, ಎರಡೂ ರೀತಿಯ ಪ್ರತಿಕ್ರಿಯೆಗಳಿಂದ ನಾನು ನನ್ನನ್ನಲ್ಲದೆ ಇತರರನ್ನೂ ಇನ್ನೂ ಚೆನ್ನಾಗಿ ಅರ್ಥಮಾಡಿಕೊಳ್ಳುವುದಕ್ಕೆ ಸಾಧ್ಯವಾಗಿದ್ದರಿಂದ ನಾನು ಎಲ್ಲರಿಗೂ ಆಭಾರಿ ಆಗಿದ್ದೇನೆ.

ಅಂದಹಾಗೆ ನಾನು ಫೋಟೊದಲ್ಲಿ ತೊಟ್ಟಿರುವ ಯೋಗಾ ಪ್ಯಾಂಟ್‌ಗಳು ತುಂಬಾ ಆರಾಮಾಗಿರುತ್ತವೆ. ಹಾಗೆಯೇ ನಾನು ತೊಟ್ಟಿರುವ `ಬೆಟ್ಟರ್ ಟುಗೆದರ್’ ಎಂಬ ಬರಹ ಇರುವ ಟೀಶರ್ಟ್ ಒಂದು ಅಂತರ್‌ಧರ್ಮೀಯ ಯುವಕರ ಸಂಘಟನೆಯದ್ದು. ಕತೆಗಳನ್ನು ಹೇಳುವ ಮತ್ತು ಸಂವಾದಗಳನ್ನು ನಡೆಸುವ ಮೂಲಕ ವಿವಿಧ ಧರ್ಮಗಳ ನಡುವೆ ಸಾಮರಸ್ಯ ತರುವ ಉದ್ದೇಶ ಆ ಯುವ ಸಂಘಟನೆಯದ್ದು. ನನ್ನ ಬಗ್ಗೆ ಇದು ಇನ್ನಷ್ಟು ವಿವರಣೆ ನೀಡುತ್ತದೆಂದು ಇಲ್ಲಿ ಇದನ್ನು ಉಲ್ಲೇಖಿಸಿದ್ದೇನೆ.

“ನನ್ನ ಮಾತುಗಳಿಂದ ಯಾರಿಗಾದರೂ ನೋವುಂಟಾಗಿದ್ದರೆ ದಯವಿಟ್ಟು ನನ್ನನ್ನು ಕ್ಷಮಿಸಿ.’’

ಬಲ್‌ಪ್ರೀತ್ ಕೌರ್‌ಳ ಪ್ರತಿಕ್ರಿಯೆ ಜನರ ಮೆಚ್ಚುಗೆಗೆ ಪಾತ್ರವಾಗಿದ್ದಾಗಲೇ ಆಕೆಯ ಫೋಟೋವನ್ನು ಇಂಟರ್‌ನೆಟ್‌ನಲ್ಲಿ ಪೋಸ್ಟ್ ಮಾಡಿದ ವ್ಯಕ್ತಿ ತಪ್ಪೊಪ್ಪಿಕೊಂಡ. ಆತ ಹೀಗೆ ಬರೆದ:

“ನಾನು ಬಲ್‌ಪ್ರೀತಳ ಫೋಟೊ ಹಾಕಿದ್ದು ತಮಾಷೆಯಾಗಿರಲಿಲ್ಲ ಎಂದು ನನಗೆ ಅರಿವಾಗಿದೆ. ನಾನು ಸಿಖ್ಖರ, ಬಲ್‌ಪ್ರೀತಳ ಮತ್ತು ಇತರರ ಕ್ಷಮೆ ಕೇಳುತ್ತೇನೆ. ಇತರರನ್ನು ಲೇವಡಿ ಮಾಡುವುದು ಹಲವರಿಗೆ ಸಂತೋಷ ಕೊಡಬಹುದು, ಆದರೆ ಆ ಲೇವಡಿಗೆ ಗುರಿಯಾಗುವವರನ್ನು ಅಗೌರವಿಸುತ್ತದೆ. ನಾನು ಮಾಡಿದ್ದು ಸಂಪೂರ್ಣವಾಗಿ ತಪ್ಪು ಎಂದು ನನಗೆ ಗೊತ್ತು.”

ಇದಾದ ನಂತರ ನಾನು ಸಿಖ್ಖ್ ಧರ್ಮದ ಬಗ್ಗೆ ಹೆಚ್ಚು ಓದಿಕೊಂಡಿದ್ದು ಅದು ನಿಜವಾಗಲೂ ಆಸಕ್ತಿದಾಯಕವಾಗಿದೆ. ಬಲ್‌ಪ್ರೀತ್ ಹೇಳುವಂತೆ ನಮ್ಮ ದೈಹಿಕ ಸೌಂದರ್ಯಕ್ಕೆ ಹೆಚ್ಚು ಗಮನ ಕೊಡುವುದಕ್ಕಿಂತ ನಾವೊಂದು ಉತ್ತಮವಾದ ಲೆಗಸಿಯನ್ನು ಬಿಟ್ಟುಹೋಗುವುದು ಮುಖ್ಯ.

ಬಲ್‌ಪ್ರೀತ್, ನಾನು ಈ ಕುರಿತು ಮುಕ್ತವಾಗಿ ಚಿಂತಿಸದ ವ್ಯಕ್ತಿಯಾಗಿದ್ದಕ್ಕೆ ನನ್ನನ್ನು ಕ್ಷಮಿಸು. ನೀನು ನನಗಿಂತ ಉತ್ತಮ ವ್ಯಕ್ತಿ ಅಗಿರುವೆ.

ಸಿಖ್ಖರೇ, ನಾನು ನಿಮ್ಮ ಜೀವನಕ್ರಮದ ಬಗ್ಗೆ ಮತ್ತು ನಿಮ್ಮ ಸಂಸ್ಕೃತಿಯ ಬಗ್ಗೆ ಅವಹೇಳನ ಮಾಡಿದ್ದಕ್ಕೆ ನಿಮ್ಮ ಕ್ಷಮೆ ಕೇಳುತ್ತೇನೆ. ಬಲ್‌ಪ್ರೀತ್ ತಾನು ನಂಬಿರುವ ಸಿದ್ಧಾಂತದಲ್ಲಿ ಇಟ್ಟುರುವ ನಂಬಿಕೆ ನನ್ನನ್ನು ಸ್ತಬ್ಧನನ್ನಾಗಿಸಿದೆ.

ಆತ ಅಷ್ಟಕ್ಕೆ ಸುಮ್ಮನಾಗಲಿಲ್ಲ. ಅಮೆರಿಕದ ಒಹೈಯೋ ವಿಶ್ವವಿದ್ಯಾಲಯದಲ್ಲಿ ಓದುತ್ತಿರುವ, ಮುಂದೆ ನ್ಯೂರೋ ಸರ್ಜನ್ ಆಗಬೇಕೆಂಬ ಗುರಿ ಹೊಂದಿರುವ ಬಲ್‌ಪ್ರೀತಳಿಗೆ ವೈಯಕ್ತಿಕವಾಗಿ ಈ ಮೇಲ್ ಮೂಲಕ ಕ್ಷಮೆ ಕೋರಿದ. ಅದನ್ನು ಓದಿ ಬಲ್‌ಪ್ರೀತ್ ಎಷ್ಟು ದಂಗಾದಳೆಂದರೆ “ಆತ ಪ್ರಾಮಾಣಿಕವಾಗಿ ತನ್ನ ತಪ್ಪನ್ನು ಒಪ್ಪಿಕೊಂಡಿದ್ದಾನೆ. ನಿಜವಾಗಲೂ ಹೇಳಬೇಕೆಂದರೆ ನನಗೂ ಆ ರೀತಿ ಕ್ಷಮೆ ಕೇಳುವುದು ಕಷ್ಟವಾಗುತ್ತಿತ್ತೇನೋ’’ ಎಂದಿದ್ದಾಳೆ. ಹಾಗೆ ಹೇಳುವ ಮೂಲಕ ಬಲ್‌ಪ್ರೀತ್ ನಿಜವಾಗಲೂ ಎಷ್ಟು ಧಾರಾಳ ಮನಸ್ಸಿನವಳು ಎಂದು ಮತ್ತೊಮ್ಮೆ ಸಾಬೀತುಪಡಿಸಿದ್ದಾಳೆ.

ಸದ್ಯದಲ್ಲೇ ಆತ ಓಹೈಯೋಗೆ ಬಂದು ಆಕೆಯನ್ನು ಮುಖತಃ ಭೇಟಿ ಆಗಿ ಕ್ಷಮೆ ಕೋರಲೂ ಸಿದ್ಧ ಎಂದಿದ್ದಾನೆ. ಅದಕ್ಕೆ ಬಲ್‌ಪ್ರೀತ್ “ಅದರ ಅಗತ್ಯವಿಲ್ಲ. ಆದರೆ ನಾವು ಭೇಟಿ ಆದರೆ ಈ ಬಾರಿ ಜೊತೆಯಾಗಿ ಫೋಟೋ ತೆಗೆಸಿಕೊಳ್ಳೋಣ’’ ಎಂದು ತಮಾಷೆ ಮಾಡಿದ್ದಾಳೆ!

ಇತರರ ಧಾರ್ಮಿಕ ನಂಬಿಕೆಯ ಬಗ್ಗೆ, ಉಡುಗೆತೊಡುಗೆಗಳ ಬಗ್ಗೆ, ದೈಹಿಕ ಸೌಂದರ್ಯದ ಬಗ್ಗೆ ಪೂರ್ವಾಗ್ರಹಗಳನ್ನು ಹೊಂದಿರುವವರು ಅವುಗಳನ್ನು ಲೇವಡಿ ಮಾಡುವುದು ಸಾಮಾನ್ಯ. ಆದರೆ ಬಲ್‌ಪ್ರೀತ್ ಎಂಬ ಯುವತಿ ತನ್ನ ತಾಳ್ಮೆ, ದಿಟ್ಟತನ ಮತ್ತು ಸೂಕ್ಷ್ಮತೆಯಿಂದ ಅಂತಹ ಪೂರ್ವಾಗ್ರಹಗಳನ್ನು ಮನಮುಟ್ಟುವಂತೆ ತೊಡೆದುಹಾಕಿದ್ದಾಳೆ. ಇದು ಇತರರಿಗೆ ಮೇಲುಪಂಕ್ತಿ ಆಗಲಿ ಎಂಬ ಆಶಯ ನನ್ನದು…

ಗೌರಿ ಲಂಕೇಶ್‌

ಅಕ್ಟೋಬರ್ 17, 2012


ಇದನ್ನೂ ಓದಿ: ದೊರೆಸ್ವಾಮಿ ಎಂಬ ರಾಕ್‍ಸ್ಟಾರ್ !! ಆರು ವರ್ಷದ ಹಿಂದೆ ಗೌರಿ ಲಂಕೇಶ್‌ ಬರೆದ ಲೇಖನ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...