Homeಅಂಕಣಗಳುಪುಟಕ್ಕಿಟ್ಟ ಪುಟಗಳುಪುಟಕಿಟ್ಟ ಪುಟಗಳು: ದಿವ್ಯ ಜೀವನಕೆ ಪ್ರವೇಶಿಕೆ ಎಂಬ ಆಪ್ತ ಸಮಾಲೋಚನೆ

ಪುಟಕಿಟ್ಟ ಪುಟಗಳು: ದಿವ್ಯ ಜೀವನಕೆ ಪ್ರವೇಶಿಕೆ ಎಂಬ ಆಪ್ತ ಸಮಾಲೋಚನೆ

ಮೊಟ್ಟ ಮೊದಲು ವ್ಯಕ್ತಿಯು ತನ್ನ ಮಾನಸಿಕ ಸಂಘರ್ಷಗಳಿಂದ ಮುಕ್ತವಾಗಲು ಸಂಕಲ್ಪ ಮಾಡಿಕೊಳ್ಳಬೇಕು. ನಂತರ ಪ್ರಾರ್ಥನೆ ಮತ್ತು ಶರಣಾಗತಿಗಳೆಂಬ ವಿಧಾನಗಳನ್ನು ಬಳಸಿಕೊಳ್ಳಬೇಕು. ನಂತರ ಸಹನೆ, ವಿನಯಶೀಲತೆ, ಔದಾರ್ಯ ಮತ್ತು ಸರಳತೆಯಂತಹ ಸದ್ಗುಣಗಳನ್ನು ಅಭ್ಯಾಸ ಮಾಡುವುದು.

- Advertisement -
- Advertisement -

ಮಾಡು ಎಲ್ಲವನೂ ಒಲವಿಂದ

ಮಾಡದೇನನೂ ಬಲವಂತದಿಂದ

ಅಂಜು ದೇವರಿಗೆ ಪ್ರೀತಿಯಿಂದ

ಪ್ರೀತಿಸದಿರವನ ಭೀತಿಯಿಂದ

ಇವು ಸಲೇಸಿಯಾದ ಫ್ರಾನ್ಸಿಸ್ ಅವರ ಮಾತುಗಳು. ಫ್ರಾನ್ಸಿನ ಕುಲೀನ ಮನೆತನದಲ್ಲಿ ಹುಟ್ಟಿದ ಫ್ರಾನ್ಸಿಸ್ (೧೫೬೭-೧೬೨೨) ಓರ್ವ ಶ್ರೀಮಂತರ ಹುಡುಗನಿಗೆ ಏನೇನೆಲ್ಲಾ ಸಂಪೂರ್ಣ ಸವಲತ್ತುಗಳು ಲಭ್ಯವಿದ್ದವೋ ಅವೆಲ್ಲವನ್ನೂ ಪಡೆದುಕೊಂಡು ಆಧ್ಯಾತ್ಮದ ಕಡೆಗೆ ಮುಖ ಮಾಡಿದ ಕ್ಯಾಥೋಲಿಕ್ ಸಂತ.

ಪ್ರೀತಿ, ವಿನಯ ಮತ್ತು ಸಹನೆಗಳನ್ನು ತಮ್ಮ ಧಾರ್ಮಿಕ ಮತ್ತು ಆಧ್ಯಾತ್ಮಿಕ ಜೀವನದಲ್ಲಿ ಪ್ರತಿಪಾದಿಸಿಕೊಂಡು ಬಂದ ಫ್ರಾನ್ಸಿಸ್, ಕ್ಯಾಥೋಲಿಕ್ ಧರ್ಮಸಭೆಯು ಮಾಡಿದ ಎಡವಟ್ಟುಗಳನ್ನೂ ಮನಗಂಡಿದ್ದರು. ಅದಕ್ಕೆ ವಿರೋಧವೊಡ್ಡಿದ ಪ್ರೊಟೆಸ್ಟಂಟರ ಅತಿರೇಕಗಳ ಬಗ್ಗೆಯೂ ಎಚ್ಚೆತ್ತಿದ್ದರು. ಹಾಗಾಗಿ ಕ್ರಿಸ್ತನ ಪ್ರೀತಿ, ಮೂಲ ಧರ್ಮಸಭೆಯ ಭಕ್ತಿ ಇವುಗಳ ಬಗ್ಗೆ ಅರಿವು ಮೂಡಿಸಿ, ಧರ್ಮದ ಒಳತಿರುಳಿನ ಮಹತ್ವವನ್ನು ಮನಗಾಣಿಸಲು ಒಂದು ಸಾತ್ವಿಕ ಕ್ರಾಂತಿಯನ್ನೇ ಮಾಡಿ ಕ್ಯಾಥೋಲಿಕ್ ಚಳವಳಿಯ ಬಹುಮುಖ್ಯ ಭಾಗವಾದರು. ಅಪಾಯಗಳನ್ನು ಮತ್ತು ಬೆದರಿಕೆಗಳನ್ನೂ ಪ್ರೀತಿ ಮತ್ತು ಶಾಂತಿಯಿಂದಲೇ ಎದುರಿಸಿದ ಅವರ ಮನಸ್ಥೈರ್ಯ ಮತ್ತು ತಾತ್ವಿಕ ಬದ್ಧತೆ ಯಾರಿಗಾದರೂ, ಯಾವತ್ತಿಗೂ ಮಾದರಿ.

ಬರವಣಿಗೆ ಮತ್ತು ಪತ್ರಿಕಾ ಪ್ರಕಟಣೆಯನ್ನೂ ತಮ್ಮ ಆಧ್ಯಾತ್ಮಿಕ ಚಳವಳಿಯ ಭಾಗವನ್ನಾಗಿಸಿಕೊಂಡ ಅವರನ್ನು ಪತ್ರಕರ್ತರ ಮತ್ತು ಬರಹಗಾರರ ಪೇಟ್ರನ್ ಸೈಂಟ್ ಎಂದೂ ಕರೆಯುತ್ತಾರೆ.

ಒಂದಷ್ಟು ಜನ ಧಾರ್ಮಿಕ ಪಂಡಿತರು ಮತ್ತು ಕ್ಯಾಥೋಲಿಕ್ ಧಾರ್ಮಿಕ ಹುದ್ದೆಗಳಲ್ಲಿರುವ ಅಧಿಕಾರಸ್ಥರು ಒಂದಷ್ಟು ಪವಾಡಗಳನ್ನೂ ಮತ್ತು ಇನ್ನಿತರ ಮಾನದಂಡಗಳನ್ನು ಇರಿಸಿಕೊಂಡು ಸಂತರೆಂದು ಪ್ರಕಟಿಸುವ ಬಗ್ಗೆ ನನಗೆ ಆಶ್ಚರ್ಯವಿದೆ. ಅದೇನೇ ಇರಲಿ, ಜಿನಿವಾದಲ್ಲಿ ಬಿಷಪ್ ಆಗಿದ್ದ ಸಲೇಸಿಯಾದ ಫ್ರಾನ್ಸಿಸ್ ತಮ್ಮ ಕೆಲಸ, ಬರಹ ಮತ್ತು ನೀಡುವ ಒಳನೋಟಗಳ ಕಾರಣದಿಂದ ಬಹುಮುಖ್ಯರೆನಿಸುತ್ತಾರೆ.

ಮನುಷ್ಯ ಸಹಜವಾದ ತನ್ನ ಒಳದೋಟಿಗಳನ್ನು ಗುರುತಿಸಿಕೊಳ್ಳುವುದು, ಅವುಗಳನ್ನು ತಾನೇ ಮನ್ನಿಸುವುದು, ನಂತರ ಅವುಗಳಿಂದ ಬಿಡುಗಡೆಯಾಗಿ ತನ್ನ ಮನಸ್ಸನ್ನು, ಸಂಬಂಧಗಳನ್ನು ಮತ್ತು ಜೀವನವನ್ನು ಮುಕ್ತವಾಗಿಯೂ ಮತ್ತು ಶಾಂತವಾಗಿಯೂ ನಡೆಸಿಕೊಂಡು ಹೋಗಲು ಅವರು ನೀಡುವ ಮಾರ್ಗದರ್ಶನ ಎಲ್ಲಾ ಕಾಲಕ್ಕೂ ಪ್ರಸ್ತುತವೇ ಆಗುತ್ತದೆ.

ಇಂಟ್ರಡಕ್ಷನ್ ಟು ದ ಡಿವೋಟ್ ಲೈಫ್ ಮತ್ತು ಟ್ರೀಟೀಸ್ ಆನ್ ದ ಲವ್ಹ್ ಆಫ್ ಗಾಡ್ ಅವರ ಬಹಳ ಮುಖ್ಯವಾದ ಎರಡು ಕೃತಿಗಳು. ಧಾರ್ಮಿಕವಾಗಿ ಮಾತ್ರವಲ್ಲದೆಯೂ ಎರಡೂ ಕೃತಿಗಳೂ ನಿಜಕ್ಕೂ ಕ್ಲಾಸಿಕ್ ಎನ್ನಬಹುದು.

ಧರ್ಮ ಎಂಬುದನ್ನು ದಾರಿಯನ್ನಾಗಿಸಿಕೊಂಡು, ಶ್ರದ್ಧೆಯನ್ನು ಗಮನವಾಗಿರಿಸಿಕೊಂಡು, ಭಕ್ತಿಯನ್ನು ಪ್ರೀತಿಯಾಗಿಸಿ ವ್ಯಕ್ತಿಯೊಬ್ಬನು ತನ್ನನ್ನು ತಾನು ಅರಿತುಕೊಂಡು, ತನ್ನ ನೆರೆಹೊರೆಯವರನ್ನು ಕ್ಷಮಿಸಿಕೊಂಡು, ಯಾವುದೇ ಮಾನಸಿಕ ತೊಳಲಾಟಗಳಿಂದ ಮುಕ್ತವಾಗಿ ಶಾಂತಿಯನ್ನು ಹೊಂದಲು ಬೇಕಾದ ಸಮಾಲೋಚನೆಯನ್ನು ಮಾಡುವ ಪುಸ್ತಕವೇ ಇಂಟ್ರಡಕ್ಷನ್ ಟು ದ ಡಿವೋಟ್ ಲೈಫ್ ಅಂದರೆ ದಿವ್ಯ ಜೀವನಕೆ ಪ್ರವೇಶಿಕೆ.

ಇಲ್ಲೂ ಫ್ರಾನ್ಸಿಸ್ ಅವರ ವಿನಯವನ್ನು ಗಮನಿಸಬಹುದು. ದಿವ್ಯ ಜೀವನಕ್ಕೆ ಪ್ರವೇಶಿಕೆಯಷ್ಟೇ ಎಂದು ಹೇಳುವ ಅವರು ಧಾರ್ಮಿಕ ಮುಖಂಡರಂತೆ ವಾಗ್ದಾನಗಳನ್ನು ಮಾಡುವುದಿಲ್ಲ. ವ್ಯಕ್ತಿ ತನ್ನೊಳಗಿನ ಹೋರಾಟಗಳಿಂದ ಮುಕ್ತನಾಗದ ಹೊರತು ಸಹನೆ, ಪ್ರೀತಿ ಮತ್ತು ಶಾಂತಿಯನ್ನು ಪಡೆಯಲಾರ ಎಂದು ಧಾರ್ಮಿಕತೆಯ ದಾರಿಯಲ್ಲಿ, ಆಧ್ಯಾತ್ಮದ ಲೇಪದಲ್ಲಿ ಮನಶಾಸ್ತ್ರೀಯವಾದಂತಹ ಸಮಾಲೋಚನೆಯನ್ನು ಮಾಡುತ್ತಾರೆ. ಧಾರ್ಮಿಕತೆ ಎಂದರೆ ಎಷ್ಟೋ ಸಲ ಮೂಗುಮುರಿಯುವ ವೈಚಾರಿಕತೆಯ ಭರದಲ್ಲಿ ಜೀವಪರವಾಗಿರುವ ಮತ್ತು ಸಮಾಜಮುಖಿಯಾಗಿರುವ ಆಧ್ಯಾತ್ಮಿಕ ಸೇವೆಗಳನ್ನು ಮತ್ತು ಪ್ರಯೋಗಗಳನ್ನು ನಿರ್ಲಕ್ಷಿಸಬಾರದು ಎಂಬ ಸಂಗತಿ ಫ್ರಾನ್ಸಿಸ್ ಅವರ ದಿವ್ಯ ಜೀವನಕೆ ಪ್ರವೇಶಿಕೆಯನ್ನು ಓದಿದರೆ ಮನಗಾಣುವಂತಾಗುತ್ತದೆ.

ವಿವಾಹಿತರಾಗಿ, ನಾಗರಿಕ ಸೇವೆಯನ್ನು ಮಾಡುತ್ತಿರುವ, ಲೌಕಿಕ ಬದುಕನ್ನು ನಡೆಸುತ್ತಿರುವ ಧಾರ್ಮಿಕರಲ್ಲದ ವ್ಯಕ್ತಿಗಳಿಗೆ ನಾನು ಈ ಆಧ್ಯಾತ್ಮಿಕ ಒಳನೋಟಗಳನ್ನು ನೀಡಬೇಕಾಗಿರುವುದು ಎಂಬುದನ್ನು ತಮ್ಮ ಮುನ್ನುಡಿಯಲ್ಲಿಯೇ ಸ್ಪಷ್ಟಪಡಿಸುವ ಫ್ರಾನ್ಸಿಸ್, ಸಾಧಾರಣ ಬದುಕನ್ನು ನಡೆಸುವ ಜನರ ಮಾನಸಿಕ ಸಮಸ್ಯೆಗಳೇನು? ಅವರು ಎದುರಿಸುವ ಸಂಘರ್ಷಗಳೇನು? ಮತ್ತು ಅವರಿಗೆ ಯಾವುದು ಭಾರವಾಗಿದೆ ಎಂಬುದರ ಬಗ್ಗೆ ಸ್ಪಷ್ಟತೆ ಹೊಂದಿದ್ದಾರೆ. ಹಾಗೂ ತನ್ನ ಗಂಡನೊಬ್ಬನ ಸಾವಿಗೆ ಕಾರಣವಾದವನನ್ನು ಕ್ಷಮಿಸಲಾರದ ವಿಧವೆ ಎದುರಿಸುವ ಮಾನಸಿಕ ಕ್ಷೋಭೆಯಂತಹ ಗುರುತರ ವಿಷಯಗಳಿಂದ ಹಿಡಿದು, ಸಾಮಾನ್ಯವಾಗಿ ಮನಸ್ಸಿನಲ್ಲಿ ಉಂಟಾಗುವ ಆಕ್ರೋಶ ಮತ್ತು ಅಸಹನೆಗಳಿಗೂ ಕಾರಣ, ಪರಿಣಾಮ ಮತ್ತು ಪರಿಹಾರಗಳನ್ನು ನೀಡುತ್ತಾ ಹೋಗುವುದು ಇವರು ಮಾಡುವ ಲೋಕೋಪಕಾರ. ಇವರ ಸಮಾಲೋಚನೆಗಳು ನಿರ್ಧಿಷ್ಟವೂ ಹೌದು, ಸಾಮಾನ್ಯವೂ ಹೌದು.

ಈ ಪುಸ್ತಕವು ವೈಯಕ್ತಿಕ ಮಾರ್ಗದರ್ಶನಗಳನ್ನು ನೀಡಿರುವ ಸಂಕಲನವೇ ಆಗಿರುವುದರಿಂದ ಓದುವಾಗ ವ್ಯಕ್ತಿಗತವಾಗಿ ಓದುಗನಿಗೆ ಆಪ್ತವಾಗಿ ಮತ್ತು ಆತ್ಮೀಯವಾಗಿ ಹೇಳುವಂತೆ ತೋರುತ್ತದೆ. ಪರಿಸರ ವಿಜ್ಞಾನ, ಭೂಗೋಳದ ವಿದ್ಯಮಾನಗಳೆಲ್ಲಾ ಉದಾಹರಣೆ ಅಥವಾ ಉಪಮೆಗಳಾಗಿ ಬರುವುದರಿಂದ ಗಾಢ ಧಾರ್ಮಿಕತೆಯ ಅಥವಾ ಬರಿಯ ಆಧ್ಯಾತ್ಮದ ಛಾಯೆಯನ್ನು ಇದು ಹೊಂದಿರುವುದಿಲ್ಲ.

ಓದುಗನನ್ನು ಪ್ರೀತಿಯಿಂದ ಫಿಲೋಥೆಯಾ ಎಂದು ಕರೆಯುತ್ತಾರೆ. ದೇವರ ಪ್ರೀತಿಪಾತ್ರನೇ ಎಂದು ಕರೆಯುವ ಮೂಲಕ ವ್ಯಕ್ತಿಯ ಬಿಂದುತನವನ್ನು ಅಗಾಧವಾದ ಸಿಂಧುತನಕ್ಕೆ ಒಯ್ಯುತ್ತಾರೆ. ನಿನಗೆ ಎಂದು ಬರೆಯುತ್ತಿರುವ ಇದು ಮುಂದೆ ಎಷ್ಟೋಜನರಿಗೆ ಬೆಳಕು ನೀಡಲಿ ಎಂಬುವ ಅವರ ಮಾತಿನಲ್ಲಿ ನನಗೊಬ್ಬನಿಗೇ ಈ ಸಮಸ್ಯೆ ಎಂದು ಕೊರಗದಿರುವಂತೆಯೂ ಸಾಂತ್ವಾನ ನೀಡುತ್ತಾರೆ. ಮೆಕಾನಿಕ್ ಶಾಪಿನಲ್ಲಿ ಕೆಲಸ ಮಾಡುವವರಿಂದ ಹಿಡಿದು ಸರಕಾರಗಳಲ್ಲಿ ಕೆಲಸ ಮಾಡುವವರವರೆಗೂ ತಮ್ಮ ತಮ್ಮ ಬದುಕನ್ನು ದಿವ್ಯ ಜೀವನವನ್ನಾಗಿಸಿಕೊಳ್ಳಲು ಸಾಧ್ಯವಿದೆ ಎಂಬುದು ಅವರ ಮುಖ್ಯ ದೃಷ್ಟಿ.

ಮೊಟ್ಟ ಮೊದಲು ವ್ಯಕ್ತಿಯು ತನ್ನ ಮಾನಸಿಕ ಸಂಘರ್ಷಗಳಿಂದ ಮುಕ್ತವಾಗಲು ಸಂಕಲ್ಪ ಮಾಡಿಕೊಳ್ಳಬೇಕು. ನಂತರ ಪ್ರಾರ್ಥನೆ ಮತ್ತು ಶರಣಾಗತಿಗಳೆಂಬ ವಿಧಾನಗಳನ್ನು ಬಳಸಿಕೊಳ್ಳಬೇಕು. ನಂತರ ಸಹನೆ, ವಿನಯಶೀಲತೆ, ಔದಾರ್ಯ ಮತ್ತು ಸರಳತೆಯಂತಹ ಸದ್ಗುಣಗಳನ್ನು ಅಭ್ಯಾಸ ಮಾಡುವುದು. ನಂತರ ಸಾಮಾನ್ಯವಾಗಿ ನುಸುಳುವ ಪ್ರಲೋಭನೆಯೇ ಮೊದಲಾದ ಮಾನಸಿಕ ಒತ್ತಡಗಳನ್ನು ಉಂಟುಮಾಡುವ ನಕಾರಾತ್ಮಕ ಗುಣಗಳನ್ನು ಗುರುತಿಸಿ ಅವುಗಳಿಂದ ಹೊರಗೆ ಬರುವುದು ಹೇಗೆ ಎಂಬುದನ್ನು ತಿಳಿಸುವುದು ಇಡೀ ಕೃತಿಯ ಮುಖ್ಯ ಉದ್ದೇಶ. ಅದಕ್ಕೆ ಅವರ ನಿರೂಪಣೆ ಓರ್ವ ಆತ್ಮೀಯ ಹಿರಿಯ ಅಥವಾ ಆಪ್ತ ಗೆಳೆಯನೊಬ್ಬ ಸಾಮಿಪ್ಯದಲ್ಲಿ ಕುಳಿತು ತನ್ನ ಸ್ಪರ್ಷದಿಂದ ಸಾಂತ್ವನ ಮತ್ತು ಸ್ಥೈರ್ಯ ನೀಡುವಂತೆ ಇದೆ.

ಕ್ರಿಸ್ತನ ಆಶಯ ಮತ್ತು ಮೌಲ್ಯಗಳನ್ನು ತಮ್ಮ ಸಮಕಾಲೀನಕ್ಕೆ ತಮ್ಮ ಮಾತುಗಳಲ್ಲಿ ವಿಸ್ತರಿಸುವ ಧೋರಣೆಯೇ ಇದಾಗಿದ್ದರೂ ಅವರ ಒಲವು ಮತ್ತು ನಿಲುವು ಅತ್ಯಂತ ಮಾನುಷ. ವ್ಯಕ್ತಿಯ ಲೋಪದೋಷಗಳನ್ನು ಖಂಡಿಸುವ ಭರದಲ್ಲಿ ಅವನನ್ನೇ ತಳ್ಳಿಬಿಡಬೇಡ ಎನ್ನುವ ಅವರ ಅಂತಃಕರಣ ಮತ್ತೂ ಹೇಳುತ್ತದೆ, ಎಲ್ಲರೊಡನೆ ಮತ್ತು ಎಲ್ಲದರೊಂದಿಗೆ ತಾಳ್ಮೆಯಿಂದಿರು, ಮೊದಲು ನಿನ್ನ ಬಗ್ಗೆ ನಿನಗೆ ಸಹನೆ ಇರಲಿ ಎಂದು.

ಒಟ್ಟಾರೆ ಫ್ರಾನ್ಸಿಸ್ ಅವರ ಇಂಟ್ರಡಕ್ಷನ್ ಟು ದ ಡಿವೋಟ್ ಲೈಫ್ ಆಪ್ತ ಸಮಾಲೋಚನೆ ನೀಡುತ್ತಾ ನನಗೆ ಹೇಳಿದ ಗುಟ್ಟೇನೆಂದರೆ, ಧಾರ್ಮಿಕತೆಯ ನೆಪದಲ್ಲಿ, ಆಧ್ಯಾತ್ಮಿಕತೆಯ ಪ್ರಭಾವದಲ್ಲಿ ವ್ಯಕ್ತಿಗಳ ಮಾನಸಿಕ ಸಮಸ್ಯೆಗಳನ್ನು ಪರಿಹರಿಸಲು ಸಾಧ್ಯ. ಜೀವಿಗಳನ್ನು ಪ್ರೀತಿಸು. ಯಾವ ಆತ್ಮವನ್ನೂ ನಿರಾಕರಿಸಬೇಡ. ಅವರಿಗೆ ನಿನ್ನಿಂದ ಏನು ಒಳಿತಾಗುವುದೋ, ಎಷ್ಟು ಶಾಂತಿ ಸಿಗುವುದೋ ಯಾರು ಬಲ್ಲರು? ಎಂಬ ಜೀವನಪ್ರೀತಿಯನ್ನು ಕಲಿಸುವ ಸರಳ ತಾತ್ವಿಕ ಮಾತುಗಳು.

  • ಯೋಗೇಶ್ ಮಾಸ್ಟರ್

ಪುಟಕ್ಕಿಟ್ಟ ಪುಟಗಳು: ಲಿಯೋ ಟಾಲ್ಸ್‌ಟಾಯ್‌ರವರ ಯುದ್ಧ ಮತ್ತು ಶಾಂತಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಲೈಂಗಿಕ ದೌರ್ಜನ್ಯ ಪ್ರಕರಣ : ರೇವಣ್ಣ, ಪ್ರಜ್ವಲ್‌ಗೆ ಎಸ್‌ಐಟಿ ನೋಟಿಸ್

0
ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಪಟ್ಟಂತೆ ತನಿಖೆಗೆ ಹಾಜರಾಗಲು ಆರೋಪಿಗಳಾದ ಹೆಚ್‌.ಡಿ ರೇವಣ್ಣ ಹಾಗೂ ಪ್ರಜ್ವಲ್ ರೇವಣ್ಣಗೆ ಎಸ್ಐಟಿ ಅಧಿಕಾರಿಗಳು ಇಂದು (ಏ.30) ನೋಟಿಸ್ ಜಾರಿ ಮಾಡಿದ್ದಾರೆ ಎಂದು ತಿಳಿದು ಬಂದಿದೆ. ಹಾಸನದ ಹೊಳೆನರಸೀಪುರ ನಗರ...