ಹತ್ರಾಸ್ ಅತ್ಯಾಚಾರ ಪ್ರಕರಣದ ಸಂತ್ರಸ್ತ ಕುಟುಂಬಕ್ಕೆ ಸಾಂತ್ವನ ಹೇಳಲು ಪಾದಯಾತ್ರೆ ಹೊರಟಿದ್ದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮತ್ತು ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಸೇರಿ ಸುಮಾರು 200 ಕಾಂಗ್ರೆಸ್ ಕಾರ್ಯಕರ್ತರ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಅಂತರ ಕಾಯ್ದುಕೊಳ್ಳದ ಮತ್ತು ಮಾಸ್ಕ್ ಧರಿಸದ ಕಾರಣಕ್ಕಾಗಿ ಸಾಂಕ್ರಾಮಿಕ ರೋಗಗಳ ಕಾಯ್ದೆಯಡಿ ಎಫ್‌ಐಆರ್ ಹಾಕಲಾಗಿದೆ ಎಂದು ಉತ್ತರ ಪ್ರದೇಶದ ಗೌತಮ್ ಬುದ್ಧ ನಗರದ ಪೋಲೀಸರು ಹೇಳಿದ್ದಾರೆ.
ಹತ್ರಾಸ್‌ನಲ್ಲಿ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ ಮೃತಪಟ್ಟಿದ್ದ ದಲಿತ ಯುವತಿ ಕುಟುಂಬ ಸದಸ್ಯರನ್ನು ಭೇಟಿ ಮಾಡಲು ಕಾಂಗ್ರೆಸ್ ಮುಖಂಡರು ಹೊರಟಿದ್ದರು. ಹತ್ರಾಸ್‌ಗೆ ಭೇಟಿ ನೀಡಲು ಹೊರಟ ಸುದ್ದಿ ಬರುತ್ತಿದ್ದಂತೆ ಜಿಲ್ಲೆಯಲ್ಲಿ 144 ಸೆಕ್ಷನ್ ಜಾರಿಗೊಳಿಸಲಾಗಿತ್ತು.
ನಿಷೇದಾಜ್ಞೆ ನಡುವೆಯೂ ಹೊರಟ ಕಾಂಗ್ರೆಸ್ ನಾಯಕರ ಕಾರುಗಳನ್ನು ಯಮುನಾ ಎಕ್ಸ್‌ಪ್ರೆಸ್ ವೇನಲ್ಲಿ ತಡೆಯಲಾಗಿತ್ತು. ಆದರೆ ತಾವು ಹತ್ರಾಸ್‌ಗೆ ಭೇಟಿ ನೀಡಿಯೇ ನೀಡುತ್ತೇವೆ ಎಂದು ಪಾದಯಾತ್ರೆ ಹೊರಟ್ಟಿದ್ದ ರಾಹುಲ್, ಪ್ರಿಯಾಂಕಾ ಗಾಂಧಿಯನ್ನು ಉತ್ತರ ಪ್ರದೇಶ ಪೊಲೀಸರು ವಶಕ್ಕೆ ಪಡೆದಿದ್ದರು. ಆ ವೇಳೆ ನೂಕುನುಗ್ಗಲು, ತಳ್ಳಾಟ ಉಂಟಾಗಿ ರಾಹುಲ್ ಗಾಂಧಿ ನೆಲಕ್ಕೆ ಬಿದ್ದಿದ್ದರು. ದೆಹಲಿಯ ಮಹಿಳಾ ಕಾಂಗ್ರೆಸ್ ಕಾರ್ಯಕರ್ತೆಯೊಬ್ಬರ ಬಟ್ಟೆ ಹರಿದುಹೋಗಿತ್ತು. ಈ ಘಟನೆಗೆ ರಾಷ್ಟ್ರಾದ್ಯಂತ ಆಕ್ರೋಶ ವ್ಯಕ್ತವಾಗಿತ್ತು.
ಇದನ್ನೂ ಓದಿ: ಹತ್ರಾಸ್: ರಾಹುಲ್ ಗಾಂಧಿ ಮೇಲಿನ ಪೊಲೀಸ್ ದೌರ್ಜನ್ಯ ಖಂಡಿಸಿದ ಕುಮಾರಸ್ವಾಮಿ
ರಾಹುಲ್ ಪ್ರಿಯಾಂಕಾ ಇಬ್ಬರನ್ನು ಬಂಧಿಸಿ ಸ್ವಲ್ಪ ಸಮಯದವರೆಗೆ ಅತಿಥಿ ಗೃಹದಲ್ಲಿ ಇರಿಸಲಾಗಿತ್ತು. ನಂತರ, ಅವರನ್ನು ಯುಪಿ ಪೊಲೀಸರು ಬಿಡುಗಡೆ ಮಾಡಿ ಮತ್ತೆ ದೆಹಲಿಗೆ ಕರೆದೊಯ್ದಿದ್ದರು.
ಸದ್ಯ ಗೌತಮ್ ಬುದ್ದ ನಗರ ಪೊಲೀಸರು ಎಫ್‌ಐಆರ್ ಅನ್ನು ಭಾರತೀಯ ದಂಡ ಸಂಹಿತೆ ಸೆಕ್ಷನ್ 188 (ಸಾರ್ವಜನಿಕ ಸೇವಕರಾಗಿದ್ದುಕೊಂಡು ಆದೇಶ ಪಾಲನೆ ಮಾಡದಿರುವುದು), ಸೆಕ್ಷನ್ 269 (ಕಾನೂನುಬಾಹಿರ ಅಥವಾ ನಿರ್ಲಕ್ಷ್ಯದಿಂದ ಜೀವಕ್ಕೆ ಅಪಾಯಕಾರಿಯಾದ ಯಾವುದೇ ರೋಗದ ಸೋಂಕನ್ನು ಹರಡುವುದು), ಸೆಕ್ಷನ್ 270 (ಜೀವಕ್ಕೆ ಅಪಾಯಕಾರಿ ರೋಗದ ಸೋಂಕನ್ನು ಹರಡುವ ಸಾಧ್ಯತೆ) ಮತ್ತು ಸಾಂಕ್ರಾಮಿಕ ರೋಗಗಳ ಕಾಯ್ದೆಯ ಸೆಕ್ಷನ್ 3ರ ಅಡಿಯಲ್ಲಿ ಎಫ್‌ಐಆರ್ ದಾಖಲಿಸಿದ್ದಾರೆ.
Case registered against Congress's Rahul Gandhi and Priyanka Gandhi Vadra, and over 200 others under section 188, 269 and 270 of Indian Penal Code, and Epidemic Act: Gautam Buddh Nagar Police https://t.co/bRnwI2BvND
— ANI UP (@ANINewsUP) October 1, 2020
ಗೌತಮ್ ಬುದ್ಧ ನಗರದ ಪೊಲೀಸರು ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ತಮ್ಮ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿದ್ದಾರೆ. ‘ಪಕ್ಷದ ಕೆಲವು ಕಾರ್ಯಕರ್ತರು ಹಲ್ಲೆ ನಡೆಸಿದ ಕಾರಣ ಮಹಿಳಾ ಕಾನ್‌ಸ್ಟೆಬಲ್‌ಗಳು ಗಾಯಗೊಂಡಿದ್ದಾರೆ. ಅಲ್ಲದೆ ಮಹಿಳಾ ಸಬ್ ಇನ್ಸ್‌ಪೆಕ್ಟರ್‌ನ ಸಮವಸ್ತ್ರ ಹರಿದುಹೋಗಿದೆ’ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಬಂಧನವನ್ನು ಖಂಡಿಸಿ ದೇಶದಾದ್ಯಂತ ಕಾಂಗ್ರೆಸ್ ನಾಯಕರು, ಕಾರ್ಯಕರ್ತರು ಸೇರಿ ವಿವಿಧ ಪಕ್ಷಗಳ ಮುಖಂಡರು ಟ್ವೀಟ್ ಮಾಡಿ ಉತ್ತರ ಪ್ರದೇಶ ಸರ್ಕಾರದ ಕ್ರಮವನ್ನು ಟೀಕಿಸಿದ್ದರು.


