ಜಾಗೃತಿ

ಭಾರತದ ಸ್ವಾತಂತ್ರ್ಯವು ಎಲ್ಲಾ ಭಾರತೀಯರನ್ನು ಉತ್ತೇಜಿಸಿ ಒಂದುಗೂಡಿಸುವ ತಕ್ಷಣದ ಗುರಿಯಾಗಿದ್ದುದರಿಂದಾಗಿ ಗಾಂಧಿಯವರ ಇತರ ಗುರಿಗಳು ಮರೆತುಹೋದವು. ಈ ಮರೆತುಹೋದ ಗುರಿಗಳಲ್ಲಿ ಒಂದೆಂದರೆ, ಭಾರತೀಯ ಸಮಾಜದಲ್ಲಿ ಇರುವ ಕೆಡುಕುಗಳ ಕುರಿತು ಸಾರ್ವಜನಿಕ ಜಾಗೃತಿ.

ಗಾಂಧಿಯವರು ದಕ್ಷಿಣ ಆಫ್ರಿಕಾದಿಂದ ಭಾರತಕ್ಕೆ ಮರಳಿದ ಮೂರು ವರ್ಷಗಳ ಬಳಿಕ ಅಮೃತಲಾಲ್ ಪದಿಯಾರ್ ಅವರ ಕವನ ಸಂಕಲನವೊಂದಕ್ಕೆ ಬರೆದ ಮುನ್ನುಡಿಯಲ್ಲಿ ಅವರು ಗುಜರಾತಿನ “ಅಸ್ಪೃಶ್ಯ”ರ ಮೇಲೆ ದಿನನಿತ್ಯವೂ ಎಸಗುವ ಕೌರ್ಯವನ್ನು ವಿವರಿಸಿದ್ದಾರೆ. 1918ರ ಈ ಮುನ್ನುಡಿಯಲ್ಲಿ- “ಪ್ರತಿಯೊಂದು ಚೌಕದಲ್ಲಿ ಭಾಗವತವನ್ನು ಓದಿ ಹೇಳಲಾಗುವಂತೆ ಈ ಕವನಗಳನ್ನು ಲಕ್ಷಗಟ್ಟಲೆ ಪುರುಷರು ಮತ್ತು ಮಹಿಳೆಯರಿಗೆ ಓದಿ ಹೇಳಬೇಕು” ಎಂದು ಅವರು ಹೇಳಿದ್ದಾರೆ. (ಕೃತಿ ಸಂಗ್ರಹ 14: 344-5).


ಇದನ್ನೂ ಓದಿ: ಗಾಂಧಿ ಜಯಂತಿ: ಅಂಕೋಲೆಯ ಆಗೇರ ಮನೆಯಲ್ಲಿ ಗಾಂಧಿಗೆ ನಿತ್ಯವೂ ಪೂಜೆ!!


ಸರ್ವತೋಮುಖ ಶಿಕ್ಷಣ

ತಾವು ಹತ್ಯೆಯಾಗುವ ಒಂದು ದಿನ ಮೊದಲು ಕಾಂಗ್ರೆಸ್‍ಅನ್ನು ಲೋಕಸೇವಕ ಸಂಘವಾಗಿ ಪರಿವರ್ತನೆ ಮಾಡಬೇಕೆಂದು ಆಶಯ ವ್ಯಕ್ತಪಡಿಸಿದ ವಿವರಗಳಲ್ಲಿ ಅತ್ಯಂತ ವ್ಯಾಪಕವಾದ ಅರ್ಥದಲ್ಲಿ ಜನಪ್ರಿಯ ಶಿಕ್ಷಣದ ಕುರಿತು ಅತ್ಯಂತ ಆಳವಾದ ಒಲವು ಕೂಡಾ ವ್ಯಕ್ತವಾಗುತ್ತದೆ. ರಾಜಕೀಯ ಸ್ವಾತಂತ್ರ್ಯದ ಗುರಿಯನ್ನು ಸಾಧಿಸಲಾಗಿರುವುದರಿಂದ, ಪ್ರತಿಯೊಬ್ಬ ಪ್ರಜೆಗೆ ಅದರಲ್ಲೂ ಗ್ರಾಮಸ್ಥನಿಗೆ “ಸಾಮಾಜಿಕ, ನೈತಿಕ ಮತ್ತು ಆರ್ಥಿಕ ಸ್ವಾತಂತ್ರ್ಯ” ದೊರಕಿಸಿಕೊಡುವುದು ಹೊಸ ರಾಷ್ಟ್ರೀಯ ಗುರಿಯಾಗಬೇಕು ಎಂದು ಜನವರಿ 29, 1948ರಲ್ಲಿ ಗಾಂಧಿಯವರು ಬರೆದಿದ್ದಾರೆ.

ಪ್ರತಿಯೊಬ್ಬ ಆಲೋಚನಶೀಲ ಲೋಕಸೇವಕ/ಸೇವಕಿ ತನ್ನ ಹಳ್ಳಿಯ ಜನರಿಗೆ “ಸ್ವಚ್ಛತೆ ಮತ್ತು ನೈರ್ಮಲ್ಯ, ರೋಗರುಜಿನಗಳನ್ನು ತಡೆಗಟ್ಟುವುದು ಸೇರಿದಂತೆ ಹುಟ್ಟಿನಿಂದ ಸಾವಿನ ತನಕದ ಎಲ್ಲಾ ವಿಷಯಗಳಲ್ಲಿ” ಶಿಕ್ಷಣ ನೀಡಬೇಕೆಂದು ಅವರು ಬಯಸಿದ್ದರು.

photo courtesy : The Conversation
ಮತದಾನದ ಹಕ್ಕು

ಕುತೂಹಲಕಾರಿ ವಿಷಯವೆಂದರೆ, ಲೋಕಸೇವಕರು “ಕಾನೂನುಬದ್ಧವಾದ ಮತದಾರರ ಪಟ್ಟಿಯಿಂದ ಯಾರ ಹೆಸರು ಬಿಟ್ಟುಹೋಗಿದೆಯೋ ಅವರ ಹೆಸರುಗಳನ್ನು ಸೇರಿಸಬೇಕು” ಎಂದು ಅವರು ಹೇಳಿದ್ದಾರೆ. ಲೋಕಸೇವಕನು/ಳು “ಯಾವುದೇ ರೂಪದಲ್ಲಿ ತನ್ನ ಸ್ವಂತ ವ್ಯಕ್ತಿತ್ವದಿಂದ ಮತ್ತು ಕುಟುಂಬದಿಂದ ಅಸ್ಪೃಶ್ಯತೆಯ ಆಚರಣೆಯನ್ನು ಸಂಪೂರ್ಣವಾಗಿ ತ್ಯಜಿಸಿರಬೇಕು” ಎಂದು ಹೇಳಿರುವ ಅವರು, “ಅಂತರ ಕೋಮು ಏಕತೆ ಹಾಗೂ ಎಲ್ಲರಿಗೂ ಸಮಾನ ಗೌರವ ಮತ್ತು ಸಮಾನ ಅವಕಾಶ”ದಲ್ಲಿ ನಂಬಿಕೆ ಉಳ್ಳವರಾಗಿರಬೇಕು ಎಂದಿದ್ದಾರೆ.

ಈ ಟಿಪ್ಪಣಿಯಲ್ಲಿ (ಕೃತಿ ಸಂಗ್ರಹ 90: 526-8) ಗಾಂಧಿಯವರು, “ನಾಗರಿಕ ಅಧಿಕಾರವು ಮಿಲಿಟರಿ ಅಧಿಕಾರವನ್ನು ಹಿಂದಿಕ್ಕಿ ಮೇಲೇರುವ ಹೋರಾಟ ಭಾರತದ ಪ್ರಜಾಪ್ರಭುತ್ವದ ಗುರಿಯ ಕಡೆಗಿನ ಪ್ರಗತಿಯಲ್ಲಿ ಜರುಗಲಿದೆ” ಎಂದು ಭವಿಷ್ಯ ನುಡಿದಿದ್ದಾರೆ. ಪ್ರಜಾಸತ್ತಾತ್ಮಕ ಹಕ್ಕುಗಳು ಮತ್ತು ಕರ್ತವ್ಯಗಳಿಗಾಗಿ ತಳಮಟ್ಟದಲ್ಲಿ ಹೋರಾಟ ನಡೆಯಬೇಕು ಎಂದು ಅವರು ಈ ಮನವಿಯಲ್ಲಿ ಹೇಳಿದ್ದಾರೆ.

ವಾಕ್ ಸ್ವಾತಂತ್ರ್ಯ

ಭಾರತದಲ್ಲಿ ವಾಕ್ ಮತ್ತು ಬರಹ ಸ್ವಾತಂತ್ರ್ಯವನ್ನು ನಿಯಂತ್ರಿಸಲು ಬ್ರಿಟಿಷರು ತಂದ ರೌಲತ್ ಕಾಯಿದೆಯ ವಿರುದ್ಧ ಗಾಂಧಿಯವರು ನೀಡಿದ್ದ ಸತ್ಯಾಗ್ರಹದ ಕರೆಯಂತೆ ದೇಶದಾದ್ಯಂತ ನಡೆಯುತ್ತಿದ್ದ ಪ್ರತಿಭಟನೆಗೆ, ಏಪ್ರಿಲ್ 1919ರಲ್ಲಿ ನಡೆದ ಜಲಿಯನ್‍ವಾಲಾ ಬಾಗ್ ಹತ್ಯಾಕಾಂಡವು ಬ್ರಿಟಿಷ್ ಸಾಮ್ರಾಜ್ಯದ ಪ್ರತಿಕ್ರಿಯೆಯಾಗಿತ್ತು ಎಂಬುದು ಕೆಲವರಿಗಷ್ಟೇ ನೆನಪಿದೆ.

ಇಪ್ಪತ್ತೊಂದು ವರ್ಷಗಳ ಬಳಿಕ, 1940ರಲ್ಲಿ ಗಾಂಧೀಜಿಯವರು ಆರಂಭಿಸಿದ್ದ ನಾಗರಿಕ ಅಸಹಕಾರ ಚಳವಳಿಯಲ್ಲಿ ಇದೇ ವಾಕ್ ಸ್ವಾತಂತ್ರ್ಯವು ಮತ್ತೊಮ್ಮೆ ಲಕ್ಷಾಂತರ ಜನರ ಬೇಡಿಕೆಯಾಗಿತ್ತು. ಈ ಅಸಹಕಾರ ಚಳವಳಿಯಲ್ಲಿ (ಇದು ಆಗಸ್ಟ್ 1942ರ ಭಾರತ ಬಿಟ್ಟು ತೊಲಗಿ ಚಳವಳಿಗಿಂತ ಮೊದಲು ನಡೆದಿತ್ತು) ಒಂದು ಅಥವಾ ಅದಕ್ಕಿಂತ ಹೆಚ್ಚು ವರ್ಷ ಕಾಲ ಜೈಲಿಗೆ ತಳ್ಳಲ್ಪಟ್ಟವರಲ್ಲಿ ನೆಹರೂ, ಪಟೇಲ್, ಅಬ್ದುಲ್ ಕಲಾಂ ಅಜಾದ್, ವಿನೋಬಾ ಭಾವೆ ಮತ್ತು ರಾಜಾಜಿ ಕೂಡ ಸೇರಿದ್ದರು.

ಅಕ್ಟೋಬರ್ 21, 1940ರಲ್ಲಿ ಮೊದಲ ಅಸಹಕಾರ ಸತ್ಯಾಗ್ರಹಿ ವಿನೋಬಾ ಭಾವೆಯವರ ಬಂಧನವಾಗಿತ್ತು. ಅವರ ಬಂಧನದ ಸುದ್ದಿಯನ್ನು ತಮ್ಮ ಪತ್ರಿಕೆಗಳಲ್ಲಿ ಪ್ರಕಟಿಸಬಾರದು ಎಂಬ ಸರಕಾರದ ಆಜ್ಞೆಗೆ ಅನುಗುಣವಾಗಿ ಗಾಂಧಿಯವರು ಅದರ ಪ್ರಕಟಣೆಯನ್ನು ತಡೆಹಿಡಿದರು! ಆವರು ಹೀಗೆ ಹೇಳಿದರು:

ಪ್ರತಿಯೊಬ್ಬರೂ ತಾನೇ ಸ್ವಂತ ನಡೆದಾಡುವ ಪತ್ರಿಕೆಯಾಗಲಿ ಮತ್ತು ಈ ಒಳ್ಳೆಯ ಸುದ್ದಿಯನ್ನು ಬಾಯಿಯಿಂದ ಬಾಯಿಗೆ ಹರಡಲಿ… ಇಲ್ಲಿರುವ ಚಿಂತನೆ ಎಂದರೆ, ನಾನು ನನ್ನ ನೆರೆಯವರಿಗೆ ನಾನು ಕೇಳಿದ ಸತ್ಯ ಸುದ್ದಿಯನ್ನು ಹೇಳುವುದು. ಇದನ್ನು ಯಾವುದೇ ಸರಕಾರವು ತಡೆಹಿಡಿಯಲು ಅಥವಾ ಹತ್ತಿಕ್ಕಲು ಸಾಧ್ಯವಿಲ್ಲ. ಇದು ಈ ತನಕ ಆವಿಷ್ಕಾರವಾದ ಅತ್ಯಂತ ಅಗ್ಗದ ಪತ್ರಿಕೆ; ಅದು ಸರಕಾರ ಎಷ್ಟೇ ಚತುರವಾಗಿರಲಿ, ಅದರ ಚಾತುರ್ಯವನ್ನು ಅಣಕಿಸಿ ತಿರಸ್ಕರಿಸುತ್ತದೆ.

ಈ ನಡೆದಾಡುವ ಪತ್ರಿಕೆಗಳು ತಾವು ನೀಡುವ ಸುದ್ದಿಯ ಬಗ್ಗೆ ಖಾತರಿ ಹೊಂದಿರಲಿ. ಅವರು ಯಾವುದೇ ಸೋಮಾರಿ ವದಂತಿಗಳಲ್ಲಿ ತೊಡಗಬಾರದು. ಅವರು ತಾವು ನೀಡುವ ಸುದ್ದಿಯ ಮೂಲದ ಕುರಿತು ಖಾತರಿ ಹೊಂದಿರಬೇಕು. ಬೆಳಗ್ಗಿನ ದಿನಪತ್ರಿಕೆಯನ್ನು ತೆರೆಯದೆಯೇ ಸಾರ್ವಜನಿಕರಿಗೆ ಎಲ್ಲಾ ಮಾಹಿತಿಗಳು ಸಿಗುವುದನ್ನು ಅವರು ಕಾಣುತ್ತಾರೆ… (ಹರಿಜನ್, ನವಂಬರ್ 3, 1940; ಕೃತಿ ಸಂಗ್ರಹ 73: 126)

ಭಿನ್ನಮತದ ಹಕ್ಕು

ಆದರೆ, ವಾಕ್ ಸ್ವಾತಂತ್ರ್ಯವೆಂದರೆ ಭಿನ್ನಮತದ ಸ್ವಾತಂತ್ರ್ಯ ಎಂದೂ ಅರ್ಥ. ಆಗಸ್ಟ್ 7, 1942ರಲ್ಲಿ ಭಾರತ ಬಿಟ್ಟು ತೊಲಗಿ ಅಭಿಯಾನವನ್ನು ಆರಂಭಿಸಿದಾಗ ಗಾಂಧಿಯವರು ಹೀಗೆ ಘೋಷಿಸಿದ್ದರು:

ನಾನು ಫ್ರೆಂಚ್ ಕ್ರಾಂತಿಯ ಬಗ್ಗೆ ಬಹಳಷ್ಟು ಓದಿದ್ದೇನೆ… ಪಂಡಿತ್ ಜವಾಹರಲಾಲ್ ನೆಹರೂ ಅವರು ರಷ್ಯನ್ ಕ್ರಾಂತಿಯ ಬಗ್ಗೆ ನನಗೆ ಎಲ್ಲವನ್ನೂ ಹೇಳಿದ್ದಾರೆ. ಆದರೆ, ಅವರದ್ದು ಜನರಿಗಾಗಿ ನಡೆದ ಹೋರಾಟಗಳಾಗಿದ್ದರೂ, ಅವು ನಾನು ಕಲ್ಪಿಸಿಕೊಳ್ಳುವ ಪ್ರಜಾಪ್ರಭುತ್ವದ ಹೋರಾಟಗಳಾಗಿರಲಿಲ್ಲ ಎಂದು ನಾನು ನಂಬಿದ್ದೇನೆ. ನನ್ನ ಪ್ರಜಾಪ್ರಭುತ್ವದ ಅರ್ಥ ಪ್ರತಿಯೊಬ್ಬ ಮನುಷ್ಯ ತನ್ನ ಸ್ವಂತ ಯಜಮಾನ ಎಂಬುದು. (ಸಂಗ್ರಹಿತ ಕೃತಿಗಳು 76: 381).

photo courtesy : Twitter

ಭಾರತ ಬಿಟ್ಟು ತೊಲಗಿ ಚಳವಳಿಯು ಬ್ರಿಟಿಷ್ ಸಾಮ್ರಾಜ್ಯವನ್ನು ನಡುಗಿಸಿತು ಮಾತ್ರವಲ್ಲ; ಅದು ಅನೇಕ ಸ್ವಾತಂತ್ರ್ಯ ಹೋರಾಟಗಾರರಿಗೆ ಸೆರೆಮನೆವಾಸ ಮತ್ತು ಸಾವನ್ನೂ ತಂದಿತು. (ಸೆರೆಯಲ್ಲಿ ಸತ್ತವರಲ್ಲಿ ಗಾಂಧಿಯವರ ಪತ್ನಿ ಕಸ್ತೂರ್ ಬಾ ಅವರೂ ಒಬ್ಬರಾಗಿದ್ದರು.) 1945ರ ಬೇಸಿಗೆಯಲ್ಲಿ ಅಂದರೆ, ಭಾರತ ಬಿಟ್ಟು ತೊಲಗಿ ಚಳವಳಿಯ ಮೂರು ವರ್ಷಗಳ ಬಳಿಕ ಬಂಧಿತರಲ್ಲಿ ಬಹುತೇಕ ಮಂದಿ ಬಿಡುಗಡೆಗೊಂಡರು; ಮತ್ತು ಸ್ವಾತಂತ್ರ್ಯವು ಹತ್ತಿರವಾಗಿತ್ತು.

ಫೆಬ್ರವರಿ 1946ರಲ್ಲಿ ನೌಕಾಪಡೆ (ರಾಯಲ್ ಇಂಡಿಯನ್ ನೇವಿ)ಯ ಹಡಗುಗಳಲ್ಲಿ ನಡೆದ ಬಂಡಾಯ ಮುಂಬಯಿ, ಕರಾಚಿ ಮತ್ತು ವೈಝಾಕ್ (ವಿಶಾಖಪಟ್ಟಣ)ನಲ್ಲಿ ಹೆಚ್ಚು ಪ್ರಚೋದಕವಾಗಿದ್ದವು. ಯಾವುದೇ ಭಾರತೀಯ ಅಧಿಕಾರಿ ಈ ಬಂಡಾಯದಲ್ಲಿ ಪಾಲ್ಗೊಳ್ಳಲಿಲ್ಲವಾದರೂ ಮುಂಬಯಿಯ ಸಾವಿರಾರು ಕಾರ್ಮಿಕರು ಬಂಡಾಯದ ಬೆಂಬಲದಲ್ಲಿ ಮುಷ್ಕರ ಹೂಡಿದರು. ಬಂಡಾಯದ ಉದ್ರಿಕ್ತ ಬೆಂಬಲಿಗರು ತಾವು ಎದುರುಗೊಳ್ಳುವ ಪ್ರತಿಯೊಬ್ಬರೂ “ಜೈ ಹಿಂದ್” ಎಂದು ಕೂಗಬೇಕೆಂದು ಒತ್ತಾಯಿಸಿದ್ದರು.

ಆಗ ಗಾಂಧಿಯವರು ಆ ಕಾಲದಲ್ಲಿ ತಾವಿದ್ದ ಪುಣೆಯಿಂದ ಪ್ರತಿಕ್ರಿಯಿಸಿದ್ದು ಹೀಗೆ: “ಯಾವುದೇ ಒಬ್ಬ ಮನುಷ್ಯನನ್ನು ‘ಜೈ ಹಿಂದ್’ ಎಂದಾಗಲೀ ಅಥವಾ ಇನ್ಯಾವುದೇ ಜನಪ್ರಿಯ ಘೋಷಣೆಯಾಗಲೀ ಕೂಗುವಂತೆ ಒತ್ತಾಯಿಸಲಾಗುವಾಗ, ಲಕ್ಷಾಂತರ ಮೂಕ ಭಾರತೀಯರ ಸ್ವರಾಜ್ಯದ ಶವಪೆಟ್ಟಿಗೆಗೆ ಒಂದೊಂದು ಮೊಳೆ ಹೊಡೆಯಲಾಗುತ್ತದೆ” ಎಂದಿದ್ದರು. (ಕೃತಿ ಸಂಗ್ರಹ 83: 172).

  • ರಾಜಮೋಹನ್ ಗಾಂಧಿ

ಭಾರತದ ಖ್ಯಾತ ಇತಿಹಾಸಜ್ಞ ಮಹಾತ್ಮ ಗಾಂಧಿ ಮತ್ತು ಸಿ ರಾಜಗೋಪಲಚಾರಿ ಅವರ ಮೊಮ್ಮಗನಾಗಿರುವ ರಾಜಮೋಹನ್ ಅವರು ಗಾಂಧಿಯವರ ಜೀವನ ಚರಿತ್ರೆಯನ್ನು (ಮೋಹನ್ ದಾಸ್: ಎ ಟ್ರು ಸ್ಟೋರಿ ಆಫ್ ಎ ಮ್ಯಾನ್, ಹಿಸ್ ಪೀಪಲ್ ಅಂಡ್ ಎಂಪೈರ್) ರಚಿಸಿದ್ದಾರೆ. ವಿಶ್ವದ ಹಲವು ವಿಶ್ವವಿದ್ಯಾಲಯಗಳಲ್ಲಿ ಪ್ರಾಧ್ಯಾಪಕರಾಗಿ ಕೆಲಸ ನಿರ್ವಹಿಸಿರುವ ಅವರು ರಾಜಾಜಿ, ಸರ್ದಾರ್ ಪಟೇಲ್, ಗಫರ್ ಖಾನ್ ಅವರ ಜೀವನ ಚರಿತ್ರೆಗಳು ಸೇರಿದಂತೆ ಹಲವು ಪುಸ್ತಕಗಳನ್ನು ರಚಿಸಿದ್ದಾರೆ.

ಅನುವಾದ: ನಿಖಿಲ್ ಕೋಲ್ಪೆ


ಇದನ್ನೂ ಓದಿ: ಅಂದು ಗಾಂಧೀಜಿಯನ್ನು ಕಾಡಿದ ಭಯ ಇಂದು ನಮ್ಮೆಲ್ಲರನ್ನೂ ಕಾಡುತ್ತಿದೆ : ಎ.ನಾರಾಯಣ

LEAVE A REPLY

Please enter your comment!
Please enter your name here