ಹಿಂದಿ ಚಿತ್ರರಂಗದ 60, 70 ದಶಕದ ಜನಪ್ರಿಯ ನಾಯಕನಟಿ ಆಶಾ ಪರೇಖ್ ಅವರಿಗೆ ಇಂದು 78ರ ಸಂಭ್ರಮ. ಬಾಲಿವುಡ್ ಸಿನಿಮಾಗಳ ದೊಡ್ಡ ಯಶಸ್ಸಿನೊಂದಿಗೆ ಜ್ಯುಬಿಲಿ ಹಿರೋಯಿನ್ ಎಂದೇ ಕರೆಸಿಕೊಂಡಿದ್ದ ಅವರು ‘ಶರವೇಗದ ಸರದಾರ’ ಎಂಬ ಕನ್ನಡ ಚಿತ್ರದಲ್ಲೂ ಅಭಿನಯಿಸಿದ್ದಾರೆ.

ಅರವತ್ತರ ದಶಕದ ಡ್ಯಾನ್ಸಿಂಗ್ ಕ್ವೀನ್ ಎಂದು ಕರೆಸಿಕೊಂಡವರು ಆಶಾ ಪರೇಖ್. ಅವರು ಚಿತ್ರರಂಗಕ್ಕೆ ಪರಿಚಯವಾದ ಸಂದರ್ಭದಲ್ಲಿ ಸಾಧನಾ, ನೂತನ್, ವಹೀದಾ ರೆಹಮಾನ್ ಸ್ಟಾರ್ ನಟಿಯರಾಗಿ ಮಿಂಚುತ್ತಿದ್ದರು. ಇವರೆಲ್ಲರ ನಡುವಿನ ಪೈಪೋಟಿಯನ್ನು ದಿಟ್ಟತನದಿಂದ ಎದುರಿಸಿದವರು ಆಶಾ.

ಆಶಾ ಪರೇಖ್ ಹುಟ್ಟಿದ್ದು 1942, ಅಕ್ಟೋಬರ್ 2ರಂದು ಬೆಂಗಳೂರಿನಲ್ಲಿ. ತಂದೆ ಗುಜರಾತಿ ಮತ್ತು ತಾಯಿ ಮುಸ್ಲಿಂ ಸಮುದಾಯದವರು. ಮಧ್ಯಮ ವರ್ಗದ ಕುಟುಂಬದ ಏಕೈಕ ಪುತ್ರಿಯಾದ ಅವರಿಗೆ ಅಕ್ಕರೆಯ ಬಾಲ್ಯ ಸಿಕ್ಕಿತು. ಚಿಕ್ಕಂದಿನಲ್ಲೇ ಅವರಿಗೆ ನೃತ್ಯದ ತರಬೇತಿಯಾಗಿತ್ತು. ಶಾಲೆಯ ಕಾರ್ಯಕ್ರಮವೊಂದರಲ್ಲಿ ಆಶಾ ನೃತ್ಯ ಕಾರ್ಯಕ್ರಮ ನೀಡುತ್ತಿದ್ದಾಗ, ನಿರ್ದೇಶಕ ಬಿಮಲ್ ರಾಯ್ ಕಣ್ಣಿಗೆ ಬಿದ್ದರು. ಒಮ್ಮೆಗೇ ಆಕರ್ಷಿತರಾದ ರಾಯ್ ತಮ್ಮ`ಬಾಪ್ ಬೇಟಿ’ (1954) ಚಿತ್ರದಲ್ಲಿ ಬಾಲನಟಿಯಾಗುವಂತೆ ಆಶಾರನ್ನು ಕೇಳಿದರು. ಅಲ್ಲಿಂದ ಮುಂದೆ ವಿದ್ಯಾಭ್ಯಾಸದ ಜೊತೆಗೆ ಕೆಲವು ಚಿತ್ರಗಳಲ್ಲಿ ಬಾಲನಟಿಯಾಗಿ ನಟಿಸಿದರು.

ಇದನ್ನೂ ಓದಿ: ನಿರಾಶ್ರಿತರ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲುವ ಈ ಐದು ಚಲನಚಿತ್ರಗಳು

ಖ್ಯಾತ ನಿರ್ದೇಶಕ ವಿಜಯ್ ಭಟ್ ತಮ್ಮ `ಗೂಂಜ್ ಉಠಿ ಶೆಹನಾಯ್’ ಚಿತ್ರದ ನಾಯಕಿ ಪಾತ್ರಕ್ಕೆ ಆಶಾರನ್ನು ಆಯ್ಕೆ ಮಾಡಿದರು. ಆಗಿನ್ನೂ ಆಶಾಗೆ ಹದಿನಾರರ ಹರೆಯ. ಆಶಾ ಪರೇಖ್ ಸ್ಟಾರ್ ನಾಯಕಿಯಲ್ಲ ಎಂದು ಚಿತ್ರದ ನಿರ್ಮಾಪಕರು ಆಕೆಯನ್ನು ಬೇಡವೆಂದರು. ಇದರಿಂದ ನಿರಾಶರಾದ ಆಶಾ ಒಂದಷ್ಟು ಸಮಯ ಸಿನಿಮಾದಿಂದ ದೂರವುಳಿದು, ತಮ್ಮ ನೆಚ್ಚಿನ ಹವ್ಯಾಸ ನೃತ್ಯದಲ್ಲಿ ತೊಡಗಿಸಿಕೊಂಡರು.

1959ರಲ್ಲಿ ಆಶಾಗೆ ಸಿನಿ ಜೀವನಕ್ಕೆ ದೊಡ್ಡ ತಿರುವು ಸಿಕ್ಕಿತು. ರೊಮ್ಯಾಂಟಿಕ್ ಹೀರೋ ಶಮ್ಮಿ ಕಪೂರ್ ಜೊತೆಗಿನ `ದಿಲ್ ದೇಕೆ ದೇಖೋ’ ಚಿತ್ರ ಅವರಿಗೆ ಹೆಸರು ತಂದುಕೊಟ್ಟಿತು. ಹಿಂದಿನ ಎಲ್ಲಾ ದಾಖಲೆಗಳನ್ನು ಮುರಿದ ಸಿನಿಮಾ ಬಾಕ್ಸ್ ಆಫೀಸಲ್ಲಿ ಮೋಡಿ ಮಾಡಿತು. ಈ ಚಿತ್ರದ ನಂತರ ಆಶಾ ಹಿಂದಿರುಗಿ ನೋಡಲೇ ಇಲ್ಲ. `ಜಬ್ ಪ್ಯಾರ್ ಕಿಸೀ ಸೆ ಹೋತಾ ಹೈ’, `ಫಿರ್ ವೊಹಿ ದಿಲ್ ಲಾಯಾ ಹೂ’, `ಜಿದ್ದಿ’, `ಮೇರೆ ಸನಂ’, `ತೀಸ್ರಿ ಮಂಜಿಲ್’ ಸೇರಿದಂತೆ ಮ್ಯೂಸಿಕಲ್ ಹಿಟ್ ಚಿತ್ರಗಳೊಂದಿಗೆ ಆಶಾ ಸ್ಟಾರ್ ನಾಯಕಿಯಾದರು.

ಆಶಾಗೆ ಹಟ್ಟಿ ಚಿತ್ರಗಳಲ್ಲಿ ನಾಯಕಿಯಾಗಿ ನಟಿಸಬೇಕೆನ್ನುವ ಅಪೇಕ್ಷೆಯಿತ್ತು. ಆದರೆ ರೊಮ್ಯಾಂಟಿಕ್ ಕಾಮಿಡಿ ಚಿತ್ರಗಳಲ್ಲಿ ಆಶಾಗೆ ಗಂಭೀರ ಪಾತ್ರಗಳಿರಲಿಲ್ಲ. ಮನೋಜ್ ಕುಮಾರ್ ಜೊತೆಗಿನ `ದೋ ಬದನ್’ (1966) ಚಿತ್ರದೊಂದಿಗೆ ಗಂಭೀರ ಪಾತ್ರಗಳತ್ತ ಹೊರಳಿದರು.


ಇದನ್ನೂ ಓದಿ: ನಟ ಸೋನು ಸೂದ್ ಮಾನವೀಯ ಕಾರ್ಯಕ್ಕೆ ವಿಶ್ವಸಂಸ್ಥೆಯ ಗೌರವ


ಮುಂದೆ ಅವರು ಹತ್ತಾರು ಅರ್ಥಪೂರ್ಣ ಪ್ರಯೋಗಗಳಲ್ಲಿ ಕಾಣಿಸಿಕೊಂಡದ್ದು ವಿಶೇಷ. ಇವುಗಳ ಪೈಕಿ `ಕನ್ಯಾದಾನ್’, `ಚಿರಾಗ್’, `ಪಗ್ಲಾ ಕಹೀ ಕಾ’, `ಕಟೀ ಪಂತಗ್’, `ಮೇ ತುಲ್ಸಿ ತೇರೇ ಆಂಗನ್ ಕಿ’ ಪ್ರಮುಖ ಪ್ರಯೋಗಗಳು. ನಟನೆಯ ಜೊತೆಗೆ ಚಿತ್ರ ವಿತರಣೆಯಲ್ಲೂ ಆಶಾಗೆ ಯಶಸ್ಸು ಸಿಕ್ಕಿತ್ತು. ಸುಮಾರು ಎರಡು ದಶಕಗಳ ಕಾಲ ಅವರು ಚಿತ್ರ ವಿತರಣೆಯಲ್ಲಿ ತೊಡಗಿಸಿಕೊಂಡಿದ್ದರು. ಸಮಾಜ ಸೇವಾಕಾರ್ಯಗಳಲ್ಲೂ ಅವರದು ಮುಂಚೂಣಿ ಹೆಸರು.

1971, ಅವರ ಸಿನಿಮಾ ಜೀವನದ ಅದೃಷ್ಟದ ವರ್ಷ. ಆ ವರ್ಷದಲ್ಲಿ ತೆರೆಕಂಡ ಅವರ `ಕಟಿ ಪಂತಗ್’, `ಆನ್ ಮಿಲೋ ಸಜ್ನಾ’, `ಮೇರಾ ಗಾವೋ ಮೇರಾ ದೇಶ್’, `ಕಾರವಾನ್’ ಚಿತ್ರಗಳು ಸೂಪರ್‌ ಹಿಟ್ ಎನಿಸಿದವು. `ಕಟಿ ಪತಂಗ್’ ಚಿತ್ರದ ಉತ್ತಮ ಅಭಿನಯಕ್ಕಾಗಿ ಅವರು ಫಿಲಂಫೇರ್‌ ಪುರಸ್ಕಾರಕ್ಕೂ ಪ್ರಾಪ್ತರಾದರು. ವೃತ್ತಿ ಜೀವನದ ಉತ್ತುಂಗದಲ್ಲಿದ್ದಾಗಲೇ ನೃತ್ಯ ಪ್ರದರ್ಶನಕ್ಕೆಂದು ಆಶಾ ವಿದೇಶಕ್ಕೆ ತೆರಳಿದ್ದರು.

ನೂರಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿರುವ ಆಶಾ ನೃತ್ಯ ಅಕಾಡೆಮಿ `ಕಲಾ ಭವನ್’ ಸ್ಥಾಪಿಸಿದ್ದಾರೆ. ಇಲ್ಲಿ ವಿವಿಧ ಪ್ರಕಾರಗಳ ನೃತ್ಯಗಳನ್ನು ಕಲಿಸಲಾಗುತ್ತದೆ. ನೃತ್ಯದೊಂದಿಗೆ ಈ ಹೊತ್ತಿಗೂ ಅವರು ಸಮಾಜ ಸೇವೆಯಲ್ಲಿ ನಿರತರಾಗಿದ್ದಾರೆ. 1995ರಲ್ಲಿ ನಟನೆಯಿಂದ ದೂರ ಉಳಿದ ನಟಿ ಟೆಲಿವಿಷನ್ ಧಾರಾವಾಹಿಗಳ ನಿರ್ದೇಶನ ಮತ್ತು ನಿರ್ಮಾಣಕ್ಕೆ ಕೈ ಹಾಕಿದರು.

Iconic Actress: Asha Parekh - Sentinelassam

1992ರಲ್ಲಿ ಭಾರತ ಸರ್ಕಾರದ ಪದ್ಮಶ್ರೀ ಗೌರವಕ್ಕೆ ಪಾತ್ರರಾಗಿದ್ದಾರೆ. ಪರೇಖ್ 2002 ರಲ್ಲಿ ಫಿಲ್ಮ್‌ಫೇರ್ ಜೀವಮಾನ ಸಾಧನೆ ಪ್ರಶಸ್ತಿಯನ್ನು ಪಡೆದರು.  2004 ರಲ್ಲಿ ಕಲಾಕರ್ ಪ್ರಶಸ್ತಿ, 2006 ರಲ್ಲಿ ಅಂತರರಾಷ್ಟ್ರೀಯ ಭಾರತೀಯ ಚಲನಚಿತ್ರ ಅಕಾಡೆಮಿ ಪ್ರಶಸ್ತಿಗಳು, 2007 ರಲ್ಲಿ ಪುಣೆ ಅಂತರರಾಷ್ಟ್ರೀಯ ಚಲನಚಿತ್ರೋತ್ಸವ ಪ್ರಶಸ್ತಿ, ಮತ್ತು2007ರಲ್ಲಿ ಒಂಬತ್ತನೇ ವಾರ್ಷಿಕ ಬಾಲಿವುಡ್ ಪ್ರಶಸ್ತಿ ಲಾಂಗ್ ಐಲ್ಯಾಂಡ್ ಪ್ರಶಸ್ತಿ, ಫೆಡರೇಶನ್ ಆಫ್ ಇಂಡಿಯನ್ ಚೇಂಬರ್ಸ್ ಆಫ್ ಕಾಮರ್ಸ್ ಅಂಡ್ ಇಂಡಸ್ಟ್ರಿಯಿಂದ (ಎಫ್‌ಐಸಿಸಿಐ) ಅವರು ಲಿವಿಂಗ್ ಲೆಜೆಂಡ್ ಪ್ರಶಸ್ತಿಯನ್ನು ಪಡೆದಿದ್ದಾರೆ.

2017ರಲ್ಲಿ ಖಾಲಿದ್ ಮೊಹಮದ್ ಬರೆದಿರುವ ಆಶಾ ಪರೇಖ್ ಅವರ ಆತ್ಮಕತೆ ‘ದಿ ಹಿಟ್‌ ಗರ್ಲ್‌’ ಬಿಡುಗಡೆಯಾಗಿದೆ.


ಇದನ್ನೂ ಓದಿ: ನಟಿ, ನೃತ್ಯಗಾರ್ತಿ ಜೊಹ್ರಾ ಸೆಹಗಲ್‌ಗೆ ಗೂಗಲ್ ಡೂಡಲ್ ನಮನ

Donate

ಈ ಲೇಖನ, ಈ ವೆಬ್‌ಸೈಟ್ ನಿಮಗೆ ಇಷ್ಟವಾಯಿತೇ? ನಿಮ್ಮ ಬೆಂಬಲ ಇದಕ್ಕೆ ಅಗತ್ಯ.

ಜನಪರ ಪತ್ರಿಕೋದ್ಯಮದ ಉಳಿವು ಮತ್ತು ಬೆಳವಣಿಗೆಗಾಗಿ ನಿಮ್ಮ ನಿರಂತರ ಆರ್ಥಿಕ ನೆರವು ಅಗತ್ಯ. ನಿಮ್ಮಿಂದ ಸಾಧ್ಯವಿರುವಷ್ಟು ಹೆಚ್ಚಿನ ವಂತಿಗೆಯನ್ನು ನೀಡಲು ಕೆಳಗಿನ ಲಿಂಕುಗಳನ್ನು ಕ್ಲಿಕ್ಕಿಸಿ.
ಒಂದು ವೇಳೆ ಈ ಲಿಂಕಿನ ಮೂಲಕ ಹಣ ಪಾವತಿ ಮಾಡುವುದಕ್ಕೆ ಅಡಚಣೆ ಇದ್ದರೆ, ಈ ಪುಟದ ಮೇಲೆ ಅಥವಾ ಕೆಳಗೆ ಇರುವ ವಂತಿಗೆ – Donate ಬಟನ್.ಅನ್ನು ಕ್ಲಿಕ್ಕಿಸಿ.
ಧನ್ಯವಾದಗಳು
Independent journalism can’t be independent without your support, contribute by clicking below.

Avatar
ಶಶಿಧರ್‌ ಚಿತ್ರದುರ್ಗ

LEAVE A REPLY

Please enter your comment!
Please enter your name here