ಇಂದು ಬೆಳ್ಳಂಬೆಳಿಗ್ಗೆಯ ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ.ಶಿವಕುಮಾರ್ ಹಾಗೂ ಸಂಸದ ಡಿ.ಕೆ.ಸುರೇಶ್ ನಿವಾಸಗಳ ಮೇಲೆ ಸಿಬಿಐ ದಾಳಿ ನಡೆಸಿ ದಾಖಲೆಗಳ ಪರಿಶೀಲನೆ ನಡೆಸಲಾಗಿದೆ. ಏಕಕಾಲದಲ್ಲಿ ಸಹೋದರರಿಬ್ಬರ ಮನೆ ಮೇಲೆ ಮತ್ತು ಕನಕಪುರದ ಹಲವು ಸ್ಥಳಗಳಲ್ಲಿ ದಾಳಿ ನಡೆದಿದೆ.
ಬೆಂಗಳೂರಿನ ಸದಾಶಿವನಗರದಲ್ಲಿರುವ ಮನೆ, ಕನಕಪುರ ತಾಲ್ಲೂಕಿನ ದೊಡ್ಡ ಆಲನಹಳ್ಳಿ ಮನೆ ಸೇರಿ ಡಿಕೆ ಶಿವಕುಮಾರ್ ಜೊತೆ ಸಂಬಂಧ ಇರುವ 15 ಸ್ಥಳಗಳ ಮೇಲೆ ಸಿಬಿಐ ದಾಳಿ ನಡೆಸಿ, ಪರಿಶೀಲನೆ ನಡೆಸಿದೆ.
ಸಿಬಿಐ ದಾಳಿಗೆ ಪ್ರತಿಕ್ರಿಯಿಸಿರುವ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಸಂಸದ ಡಿ.ಕೆ.ಸುರೇಶ್ ಸರಣಿ ಟ್ವೀಟ್‌ಗಳನ್ನು ಮಾಡಿದ್ದಾರೆ.
ಇದನ್ನೂ ಓದಿ: ಸಿಬಿಐ ಈಗ ಕೇಂದ್ರ ಬೆದರಿಕಾ ದಳವಾಗಿ ಮಾರ್ಪಟ್ಟಿದೆ: ಡಿಕೆ ಸಹೋದರರ ಮೇಲಿನ ಸಿಬಿಐ ದಾಳಿಗೆ ಕಾಂಗ್ರೆಸ್ ಖಂಡನೆ
ಸಿಬಿಐ ದಾಳಿಯನ್ನು ರಾಜಕೀಯ ಷಡ್ಯಂತ್ರ ಎಂದಿರುವ ಸಂಸದ ಡಿ.ಕೆ.ಸುರೇಶ್, ’ಈ ಎಲ್ಲಾ ರಾಜಕೀಯ ಷಡ್ಯಂತ್ರಗಳನ್ನು ಎದುರಿಸಿ ಜಯಿಸಿ ಬರುವ ಶಕ್ತಿಯನ್ನು ಆ ದೇವರು ನಮಗೆ ಕರುಣಿಸಿದ್ದಾನೆ. ಹಾಗಾಗಿ ಅಭಿಮಾನಿಗಳು ವಿಚಲಿತರಾಗುವುದು ಬೇಡ. ನಿಮ್ಮ ಆಶೀರ್ವಾದ ಹಾರೈಕೆ ಸದಾ ಹೀಗೇ ಇರಲಿ’ ಎಂದಿದ್ದಾರೆ.
ಈ ಎಲ್ಲಾ ರಾಜಕೀಯ ಷಡ್ಯಂತ್ರಗಳನ್ನು ಎದುರಿಸಿ ಜಯಿಸಿ ಬರುವ ಶಕ್ತಿಯನ್ನು ಆ ದೇವರು ನಮಗೆ ಕರುಣಿಸಿದ್ದಾನೆ. ಹಾಗಾಗಿ ಅಭಿಮಾನಿಗಳು ವಿಚಲಿತರಾಗುವುದು ಬೇಡ. ನಿಮ್ಮ ಆಶೀರ್ವಾದ ಹಾರೈಕೆ ಸದಾ ಹೀಗೇ ಇರಲಿ.@INCIndia @INCKarnataka @tv9kannada @suvarnanewstv @publictvnews @Vijaykarnataka @prajavani @News18Kannada
— DK Suresh (@DKSureshINC) October 5, 2020
’ಚುನಾವಣೆ ಸಂದರ್ಭದಲ್ಲಿ ಬಿಜೆಪಿ ಪಕ್ಷದ ಕಡೆಯಿಂದ ಬಂದ ಇಂತಹ ಗೊಡ್ಡು ಬೆದರಿಕೆಗಳಿಗೆ ಜಗ್ಗುವುದಾಗಲಿ ಮತ್ತು ಕುಗ್ಗುವುದಾಗಲಿ ದೂರದ ಮಾತು. ರಾಜಕೀಯವನ್ನು ರಾಜಕೀಯವಾಗಿ ಎದುರಿಸಲು ನಾವು ಸದಾ ಸಿದ್ದರಿದ್ದೇವೆ’ ಎಂದು ಆತ್ಮವಿಶ್ವಾಸದ ಮಾತುಗಳನ್ನಾಡಿದ್ದಾರೆ. ಹಾಗಾಗಿ ಈ ವಿಚಾರದಲ್ಲಿ ಅಭಿಮಾನಿಗಳು ಮತ್ತು ಪಕ್ಷದ ಕಾರ್ಯಕರ್ತರು ಧೃತಿಗೆಡುವ ಅವಶ್ಯಕತೆ ಇಲ್ಲ ಎಂದು ಕಾರ್ಯಕರ್ತರಿಗೆ ಧೈರ್ಯ ತುಂಬಿದ್ದಾರೆ.
‘ಇಂದು ಮುಂಜಾನೆಯಿಂದ ನಡೆದ ಸಿಬಿಐ ವಿಚಾರಣೆ ಈಗಷ್ಟೆ ಮುಕ್ತಾಯವಾಗಿದೆ. ಹಿಂದೆ IT ಮತ್ತು ED ಅಧಿಕಾರಿಗಳು ನಡೆಸಿದ ವಿಚಾರಣೆಯ ದಾಖಲೆ ಪ್ರತಿಗಳ ನಕಲನ್ನು ಸಿಬಿಐ ಅಧಿಕಾರಿಗಳು ತಗೆದುಕೊಂಡಿರುತ್ತಾರೆ. ನನ್ನ ದೆಹಲಿ ನಿವಾಸದಲ್ಲಿ ಇನ್ನೂ ಪರಿಶೀಲನೆ ನಡೆಯುತ್ತಿದೆ. ಕಾನೂನಿನ ಚೌಕಟ್ಟಿನಲ್ಲಿ ಅಧಿಕಾರಿಗಳಿಗೆ ಎಲ್ಲಾ ರೀತಿಯಲ್ಲೂ ಸ್ಪಂದಿಸಿದ್ದೇವೆ’ ಎಂದು ತಾವು ಸಿಬಿಐಗೆ ಸಂಪೂರ್ಣ ಸಹಕಾರ ನೀಡಿದ್ದೇವೆ ಎಂದು ಡಿ.ಕೆ.ಸುರೇಶ್ ತಿಳಿಸಿದ್ದಾರೆ.
ಬೆಳಗ್ಗೆ ಸಹೋದರರಿಬ್ಬರ ಮನೆ ಮೇಲೆ ಸಿಬಿಐ ದಾಳಿಯಾಗುತ್ತಿದ್ದಂತೆ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು.
ಇದನ್ನೂ ಓದಿ: ಸಿಎಂ ಮಗ ವಿಜಯೇಂದ್ರ ಮೇಲೆ FIR ದಾಖಲಿಸದ DCP ವಿರುದ್ದ ದೂರು ದಾಖಲು!
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, “ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ ಶಿವಕುಮಾರ್ ಮನೆ ಮೇಲೆ ನರೇಂದ್ರ ಮೋದಿ ಸರ್ಕಾರ ನಡೆಸಿರುವ ಸಿಬಿಐ ದಾಳಿ ರಾಜಕೀಯ ದುಷ್ಟತನದ ಪರಮಾವಧಿ. ಇದು ಕಾಂಗ್ರೆಸ್ ಪಕ್ಷವನ್ನು ರಾಜಕೀಯವಾಗಿ ಎದುರಿಸಲಿಕ್ಕಾಗದ ಬಿಜೆಪಿ ನಾಯಕರ ನೈತಿಕ ದಿವಾಳಿತನವನ್ನು ತೋರಿಸುತ್ತದೆ” ಎಂದು ಕಿಡಿಕಾರಿದ್ದರು.
ಕೆಪಿಸಿಸಿ ಅಧ್ಯಕ್ಷರಾದ @DKShivakumar ಮನೆ ಮೇಲೆ @narendramodi ಸರ್ಕಾರ ನಡೆಸಿರುವ ಸಿಬಿಐ ದಾಳಿ ರಾಜಕೀಯ ದುಷ್ಟತನದ ಪರಮಾವಧಿ.
ಇದು ಕಾಂಗ್ರೆಸ್ ಪಕ್ಷವನ್ನು ರಾಜಕೀಯವಾಗಿ ಎದುರಿಸಲಿಕ್ಕಾಗದ @BJP4India ನಾಯಕರ ನೈತಿಕ ದಿವಾಳಿತನವನ್ನು ತೋರಿಸುತ್ತದೆ.
— Siddaramaiah (@siddaramaiah) October 5, 2020
ರಾಜ್ಯದ ಹಲವು ಕಡೆಗಳಲ್ಲಿ ಸಿಬಿಐ ದಾಳಿ ಖಂಡಿಸಿ ಕಾಂಗ್ರೆಸ್ ಪ್ರತಿಭಟನೆ ನಡೆಸಿತ್ತು. ಶಿವಮೊಗ್ಗದಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮನೆಗೆ ಎನ್‌ಎಸ್‌ಯುಐ ಸಂಘಟನೆ ಮುತ್ತಿಗೆ ಹಾಕಲು ಪ್ರಯತ್ನಿಸಿತ್ತು. ಎನ್‌ಎಸ್‌ಯುಐನ 50 ಕ್ಕೂ ಹೆಚ್ಚು ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದ್ದಾರೆ.


