ವಿವಾದಿತ ಕೃಷಿ ಮಸೂದೆಗಳನ್ನು ವಿರೋಧಿಸಿ ಪಂಜಾಬ್‌ನಲ್ಲಿ ನಡೆದ ಟ್ರ್ಯಾಕ್ಟರ್ ರ್‍ಯಾಲಿಯಲ್ಲಿ ಸೋಫಾ ಮೇಲೆ ಕುಳಿತಿದ್ದನ್ನು ಟೀಕಿಸಿದ ಆಡಳಿತ ಪಕ್ಷಗಳಿಗೆ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ತಿರುಗೇಟು ನೀಡಿದ್ದಾರೆ. ಪ್ರಧಾನ ಮಂತ್ರಿಗಳು ಐಷಾರಾಮಿ ವಿಮಾನಗಳ ಖರೀದಿಗೆ ಸಾವಿರಾರು ಕೋಟಿಗಳನ್ನು ವ್ಯರ್ಥ ಮಾಡುತ್ತಿದ್ದಾರೆ ಎಂದಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರು ಕಸ್ಟಮ್ ನಿರ್ಮಿತ ಬೋಯಿಂಗ್ ವಿಮಾನಗಳು “ಕೇವಲ ಒಂದು ಸೋಫಾ ಹೊಂದಿಲ್ಲ, ಅವರಿಗಾಗಿ ಇಡೀ ವಿಮಾನದ ತುಂಬಾ ಐಷಾರಾಮಿ ಹಾಸಿಗೆಗಳೇ ಇವೆ. ಈ ಬಗ್ಗೆ ನೀವು ಅವರನ್ನು ಯಾಕೆ ಪ್ರಶ್ನಿಸಬಾರದು..?” ಎಂದರು.
“ನಾನು ಸೋಫಾ ಮೇಲೆ ಕುಳಿತಿದ್ದನ್ನ ಎಲ್ಲರೂ ಬೆರಳು ಮಾಡಿ ತೋರಿಸುತ್ತಿದ್ದಾರೆ. ಇಷ್ಟು ದೊಡ್ಡ ಮೊತ್ತಕ್ಕೆ ಖರೀದಿಸಿದ ಬೋಯಿಂಗ್ 777 ಬಗ್ಗೆ ಯಾರೂ ಕೇಳುತ್ತಿಲ್ಲ ಎಂಬುದು ವಿಚಿತ್ರ” ಎಂದು ಪಟಿಯಾಲದಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ್ದಾರೆ.
ಇದನ್ನೂ ಓದಿ: ದೆಹಲಿಗೆ ಆಗಮಿಸಿದ ಪ್ರಧಾನಿಯ ಪ್ರಯಾಣಕ್ಕೆಂದೆ ವಿಶೇಷವಾಗಿ ತಯಾರಾದ ವಿಮಾನ!
The 'protest' launched by Congress is a political protest by those whose vested interests are hurt by the #FarmBills.
Cushioned sofas on tractors is not a protest.
It is ‘Protest Tourism’ to misguide our farmers who are educated & intelligent to see through this facade. pic.twitter.com/MiYz7IndYf
— Hardeep Singh Puri (@HardeepSPuri) October 5, 2020
ಭಾರತ-ಚೀನಾ ಗಡಿಯಲ್ಲಿ ಚೀನಾದೊಂದಿಗೆ ಬಿಕ್ಕಟ್ಟು ಹೆಚ್ಚಾಗಿದ್ದು, ಸರ್ಕಾರ ಅಗತ್ಯ ಶಸ್ತ್ರಾಸ್ತ್ರ, ಗುಂಡುಮದ್ದುಗಳು, ಇಂಧನ, ಆಹಾರ, ನೀರು ಮತ್ತು ಚಳಿಗಾಲದ ಅಗತ್ಯ ವಸ್ತುಗಳನ್ನು ಪೂರ್ವ ಲಡಾಖ್‌ಗೆ ಕಳಿಸುತ್ತಿದೆ. ಇಂತಹ ಸಮಯದಲ್ಲಿ ಎರಡು ವಿಶೇಷ ವಿಮಾನಗಳಿಗೆ ಇಷ್ಟೊಂದು ಹಣ ಖರ್ಚು ಮಾಡಿದ್ದಾರೆ. ಯಾಕೆಂದರೆ ತನ್ನ ಸ್ನೇಹಿತ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬಳಿ ಅಂಥದ್ದೇ ವಿಮಾನ ಇದೆ ಅನ್ನೋ ಕಾರಣಕ್ಕೆ ಎಂದು ಅವರು ಟ್ರೋಲ್ ಮಾಡಿದವರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
“ಒಂದೆಡೆ ಪ್ರಧಾನಿ ಮೋದಿ 8,000 ಕೋಟಿ ರೂಪಾಯಿ ಮೌಲ್ಯದ ಎರಡು ವಿಮಾನಗಳನ್ನು ಖರೀದಿಸಿದ್ದಾರೆ. ಮತ್ತೊಂದೆಡೆ, ಚೀನಾ ನಮ್ಮ ಗಡಿಯಲ್ಲಿದೆ ಮತ್ತು ನಮ್ಮ ಭದ್ರತಾ ಪಡೆಗಳು ಚಳಿಯಲ್ಲಿ ನಡುಗುತ್ತಾ ನಮ್ಮನ್ನ ರಕ್ಷಣೆ ಮಾಡ್ತಿದ್ದಾರೆ” ಎಂದು ಅವರು ಹೇಳಿದರು, ಜೊತೆಗೆ ಸೋಫಾಗಳನ್ನು ತಮ್ಮ ಹಿತೈಷಿಗಳು ಅಲ್ಲಿ ಇರಿಸಿದ್ದರು ಎಂದಿದ್ದಾರೆ.
ಇದನ್ನೂ ಓದಿ: ಫ್ಯಾಕ್ಟ್‌ಚೆಕ್: ಪ್ರಧಾನಿ ಉದ್ಘಾಟಿಸಿದ ಅಟಲ್ ಸುರಂಗ ಎಂದು ಅಮೇರಿಕಾ ಸುರಂಗದ ಚಿತ್ರ ಹಂಚಿಕೊಂಡ ಮಾಧ್ಯಮಗಳು!
ಇತ್ತ ಸರ್ಕಾರ ವಿಮಾನಗಳ ಖರೀದಿಯನ್ನು ಸಮರ್ಥಿಸಿಕೊಂಡಿದ್ದು, ವಿಮಾನಗಳು ಭಾರತೀಯ ವಾಯುಪಡೆಗೆ ಸೇರಿವೆ. ಅದು ಕೇವಲ ಪ್ರಧಾನಮಂತ್ರಿಯ ವಿಮಾನ ಅಲ್ಲ, ಇತರ ವಿವಿಐಪಿಗಳ ಬಳಕೆಗಾಗಿವೆ ಎಂದು ಮೂಲಗಳು ಸ್ಪಷ್ಟಪಡಿಸಿವೆ.
ಭಾರತದ ರಾಷ್ಟ್ರಪತಿ, ಉಪರಾಷ್ಟ್ರಪತಿ ಹಾಗೂ ಪ್ರಧಾನಮಂತ್ರಿಯಂತಹ ಗಣ್ಯವಕ್ತಿಗಳು ಪ್ರಯಾಣಿಸಲೆಂದೇ ವಿಶೇಷವಾಗಿ ತಯಾರಿಸಲಾಗಿರುವ B777(ಏರ್ ಇಂಡಿಯಾ ಒನ್) ವಿಮಾನ ತಿಂಗಳ ಆರಂಭದಲ್ಲಿ ಅಮೆರಿಕಾದಿಂದ ದೆಹಲಿಗೆ ಬಂದಿಳಿದಿತ್ತು.
ಪ್ರಸ್ತುತ ರಾಷ್ಟ್ರಪತಿ, ಉಪರಾಷ್ಟ್ರಪತಿ ಹಾಗೂ ಪ್ರಧಾನಿಗಳು ಏರ್ ಇಂಡಿಯಾದ ಬಿ747 ವಿಮಾನವನ್ನ ಪ್ರಯಾಣಕ್ಕಾಗಿ ಬಳಸುತ್ತಿದ್ದು, ಇದನ್ನು ಏರ್ ಇಂಡಿಯಾ ಪೈಲಟ್ಗಳೇ ಚಾಲನೆ ಮಾಡುತ್ತಾರೆ. ಆದರೆ ಹೊಸದಾಗಿ ಆಗಮಿಸಿರುವ ವಿಶೇಷ ವಿಮಾನವನ್ನು ಏರ್ ಇಂಡಿಯಾ ಪೈಲಟ್ಗಳ ಬದಲಾಗಿ ಭಾರತೀಯ ವಾಯುಸೇನೆಯ ಪೈಲಟ್ಗಳು ಚಾಲನೆ ಮಾಡಲಿದ್ದಾರೆ.


