ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಬಿಡುಗಡೆ ಮಾಡಿರುವ ಮಾಹಿತಿಯ ಪ್ರಕಾರ ರಾಜ್ಯದಲ್ಲಿ ಕೊರೊನಾ ಕಾರಣದಿಂದ ಮೃತಪಟ್ಟವರಿಗೆ ಅಧಿಕ ರಕ್ತದೊತ್ತಡ ಸಮಸ್ಯೆ ಇತ್ತು ಎಂಬ ಅಂಶ ಬೆಳಕಿಗೆ ಬಂದಿದೆ. ನವೆಂಬರ್ 10 ರವರೆಗೆ ಕರ್ನಾಟಕದಲ್ಲಿ ದಾಖಲಾದ 11,430 ಕೋವಿಡ್ ಸಾವುಗಳಲ್ಲಿ 5,572 ಜನರಿಗೆ ಅಧಿಕ ರಕ್ತದೊತ್ತಡ ಮತ್ತು 4,167 ಜನರಿಗೆ ಮಧುಮೇಹವಿರುವುದು ವರದಿಯಲ್ಲಿ ತಿಳಿದುಬಂದಿದೆ.
ಈ ರೀತಿಯ ಸಾಂಕ್ರಾಮಿಕವಲ್ಲದ ಕಾಯಿಲೆಗಳು ಈಗಾಗಲೇ ಕೊರೊನಾ, ನ್ಯುಮೋನಿಯಾದಂತಹ ಸಾಂಕ್ರಾಮಿಕ ಕಾಯಿಲೆಗಳಿಂದ ಉಂಟಾಗಿರುವ ಭೀತಿಯನ್ನು ಹೆಚ್ಚಿಸುತ್ತಿವೆ ಎಂದು ವೈದ್ಯರು ಹೇಳಿದ್ದಾರೆ. ಮಂಗಳವಾರ, ಮೃತಪಟ್ಟ 20 ಕೊರೊನಾ ರೋಗಿಗಳಲ್ಲಿ 11 ಜನರಿಗೆ ಅಧಿಕ ರಕ್ತದೊತ್ತಡ ಮತ್ತು 10 ಮಂದಿ ಮಧುಮೇಹ ರೋಗಿಗಳಾಗಿದ್ದರು. ಕೊರೊನಾ ಕಾರಣದಿಂದಾಗಿ ನ್ಯುಮೋನಿಯಾ ಮತ್ತೆ ವಿಶ್ವದಾದ್ಯಂತ ಹೆಚ್ಚಾಗುತ್ತಿದೆ ಎಂದು ಟೈಮ್ಸ್ ನೌ ವರದಿ ಮಾಡಿದೆ.
“ಮಧುಮೇಹವು ಯಾವುದೇ ಸೋಂಕಿಗೂ ಅಪಾಯಕಾರಿ ಅಂಶವಾಗಿದೆ. ಮಧುಮೇಹದಿಂದಾಗಿ ರೋಗನಿರೋಧಕ ಶಕ್ತಿ ಕಡಿಮೆಯಾಗಿರುವವರು ಕೊರೊನಾ ವೈರಸ್ ವಿರುದ್ಧ ಸುದೀರ್ಘ ಯುದ್ಧ ಮಾಡಬೇಕಾಗುತ್ತದೆ” ಎಂದು ರಾಮಯ್ಯ ಆಸ್ಪತ್ರೆಯ ಶ್ವಾಸಕೋಶಶಾಸ್ತ್ರಜ್ಞ ಡಾ.ಪ್ರಸನ್ನ ಕುಮಾರ್ ಟಿ ಹೇಳಿದ್ದಾರೆ.
ಇದನ್ನೂ ಓದಿ: ಕೊರೊನಾ ಮರೆತ ಜನರಿಂದ ದೀಪಾವಳಿ ಶಾಪಿಂಗ್ ಫುಲ್ ಜೋರು!
ಮಧುಮೇಹಿಗಳಂತೆ ಕಡಿಮೆ ರೋಗನಿರೋಧಕ ಶಕ್ತಿ ಹೊಂದಿರುವವರು, ಅಧಿಕ ರಕ್ತದೊತ್ತಡ, ದೀರ್ಘಕಾಲದ ಮೂತ್ರಪಿಂಡ ಮತ್ತು ಹೃದಯ ಸಂಬಂಧಿ ಕಾಯಿಲೆಗಳಿಂದ ಬಳಲುತ್ತಿರುವವರು ಕೊರೊನಾ ನ್ಯುಮೋನಿಯಾಕ್ಕೆ ಹೆಚ್ಚು ಒಳಗಾಗುತ್ತಾರೆ. ನ್ಯುಮೋನಿಯಾವನ್ನು ತಡೆಗಟ್ಟಲು ಈ ರೋಗಗಳನ್ನು ನಿಯಂತ್ರಣದಲ್ಲಿಡುವುದು ಅವಶ್ಯಕ ಎಂದು ವಿಕ್ರಮ್ ಆಸ್ಪತ್ರೆಯ ಸಲಹೆಗಾರ ಹೃದಯರೋಗ ತಜ್ಞ ಡಾ.ವಾಸುನೇತ್ರ ಕಾಸರಗೋಡ್ ತಿಳಿಸಿದ್ದಾರೆ.
ಇಂತಹ ರೋಗಿಗಳನ್ನು ಆಸ್ಪತ್ರೆಗಳಿಗೆ ಸೇರಿಸುವಲ್ಲಿ ವಿಳಂಬ ಮಾಡುವುದು ಅಪಾಯವನ್ನು ಹೆಚ್ಚಿಸುತ್ತದೆ. ಆದರೆ ಸರಿಯಾದ ಚಿಕಿತ್ಸೆ ಪಡೆದರೆ ಗುಣವಾಗುತ್ತಾರೆ. “91 ವರ್ಷ ವಯಸ್ಸಿನ ಮಧುಮೇಹ ಮತ್ತು ಕೋವಿಡ್ ನ್ಯುಮೋನಿಯಾ ಇದ್ದ ರೋಗಿ ಕೂಡ ಚಿಕಿತ್ಸೆ ಪಡೆದು ಚೆನ್ನಾಗಿ ಚೇತರಿಸಿಕೊಂಡಿರುವುದನ್ನು ನಾವು ನೋಡಿದ್ದೇವೆ” ಎಂದು ಮಣಿಪಾಲ್ ಆಸ್ಪತ್ರೆಯ ಡಾ.ಸತ್ಯನಾರಾಯಣ ಮೈಸೂರು ತಿಳಿಸಿದ್ದಾರೆ.


