ಬಿಹಾರದಲ್ಲಿ ಎನ್‌ಡಿಎ ಸರ್ಕಾರ ರಚನೆಯಲ್ಲಿ ಪ್ರಮುಖ ಪಾತ್ರ ವಹಿಸಿರುವ ಬಿಜೆಪಿ ಈಗ ತನ್ನ ಚಿತ್ತವನ್ನು ಸಂಪೂರ್ಣವಾಗಿ ಟಿಎಂಸಿ ಆಡಳಿತರೂಢ ಪಶ್ಚಿಮ ಬಂಗಾಳದತ್ತ ನೆಟ್ಟಿದೆ. ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯಲ್ಲಿ ಹೇಗಾದರೂ ಪಕ್ಷವನ್ನು ಅಧಿಕಾರಕ್ಕೆ ತರಲು ಬಿಜೆಪಿ ಶತಪ್ರಯತ್ನ ನಡೆಸುತ್ತಿದೆ.
ಈ ಹಿನ್ನೆಲೆಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರು ವಿಧಾನಸಭಾ ಚುನಾವಣೆ ಮುಗಿಯುವವರೆಗೆ ಪ್ರತಿ ತಿಂಗಳು ರಾಜ್ಯಕ್ಕೆ ಭೇಟಿ ನೀಡಲಿದ್ದಾರೆ ಎಂದು ಪಶ್ಚಿಮ ಬಂಗಾಳ ಬಿಜೆಪಿ ಮುಖ್ಯಸ್ಥ ದಿಲೀಪ್ ಘೋಷ್ ಹೇಳಿದ್ದಾರೆ.
ಮುಂದಿನ ವರ್ಷ ಏಪ್ರಿಲ್-ಮೇ ತಿಂಗಳಲ್ಲಿ 294 ಸದಸ್ಯರ ರಾಜ್ಯ ವಿಧಾನಸಭೆಗೆ ಚುನಾವಣೆ ನಡೆಯಲಿದೆ. ಹೀಗಾಗಿ ಬಿಜೆಪಿಯ ಇಬ್ಬರು ಹಿರಿಯ ನಾಯಕರು ಪ್ರತಿ ತಿಂಗಳು ಪ್ರತ್ಯೇಕವಾಗಿ ಪಶ್ಚಿಮ ಬಂಗಾಳಕ್ಕೆ ಭೇಟಿ ನೀಡಿ ಚುನಾವಣೆಗೆ ಮುಂಚಿತವಾಗಿ ಪಕ್ಷದ ಸಂಘಟನೆಯಲ್ಲಿ ತೊಡಗಿಕೊಳ್ಳಲಿದ್ದಾರೆ.
“ಅಮಿತ್ ಶಾ ಮತ್ತು ಜೆಪಿ ನಡ್ಡಾ ಅವರು ವಿಧಾನಸಭೆ ಚುನಾವಣೆ ಮುಗಿಯುವವರೆಗೆ ಪ್ರತಿ ತಿಂಗಳು ಪ್ರತ್ಯೇಕವಾಗಿ ರಾಜ್ಯಕ್ಕೆ ಭೇಟಿ ನೀಡಲಿದ್ದಾರೆ. ಆದರೆ ದಿನಾಂಕಗಳು ಇನ್ನೂ ಅಂತಿಮಗೊಂಡಿಲ್ಲ. ಅವರ ನಿಯಮಿತ ಭೇಟಿಗಳು ಪಕ್ಷದ ಕಾರ್ಯಕರ್ತರಿಗೆ ಚೈತನ್ಯ ತುಂಬುತ್ತವೆ” ಎಂದು ದಿಲೀಪ್ ಘೋಷ್ ಸುದ್ದಿಗಾರರಿಗೆ ತಿಳಿಸಿದರು.
ಇದನ್ನೂ ಓದಿ: ಪಶ್ಚಿಮ ಬಂಗಾಳದ ವೈಭವ ಮರುಸ್ಥಾಪಿಸುವ ಅಗತ್ಯವಿದೆ: ಗೃಹ ಸಚಿವ ಅಮಿತ್ ಶಾ

2019 ರ ಚುನಾವಣೆಯಲ್ಲಿ ಪಶ್ಚಿಮ ಬಂಗಾಳದ 42 ಲೋಕಸಭಾ ಸ್ಥಾನಗಳಲ್ಲಿ 18 ಸ್ಥಾನಗಳನ್ನು ಗೆದ್ದ ಬಿಜೆಪಿ ಆಡಳಿತಾರೂಢ ತೃಣಮೂಲ ಕಾಂಗ್ರೆಸ್ಸಿನ ಪ್ರಮುಖ ಪ್ರತಿಸ್ಪರ್ಧಿಯಾಗಿ ಹೊರಹೊಮ್ಮಿದೆ. ಹೀಗಾಗಿ ಈ ಬಾರಿ ಹೇಗಾದರೂ ಪಕ್ಷವನ್ನು ಅಧಿಕಾರಕ್ಕೆ ತರುವ ಉದ್ದೇಶದಿಂದ ಬಿಜೆಪಿ ಹೊಸ ಪಟ್ಟುಗಳನ್ನು ಹಾಕುತ್ತಿದೆ.
ಅಮಿತ್ ಶಾ ತಿಂಗಳಿಗೆ ಸತತ ಎರಡು ದಿನ ಮತ್ತು ಜೆ.ಪಿ.ನಡ್ಡಾ ಮೂರು ದಿನಗಳ ಕಾಲ ರಾಜ್ಯಕ್ಕೆ ಭೇಟಿ ನೀಡುವ ಸಾಧ್ಯತೆ ಇದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.
“ಪಶ್ಚಿಮ ಬಂಗಾಳದ ಜನರು ಕಾಂಗ್ರೆಸ್, ಸಿಪಿಐ (ಎಂ) ಮತ್ತು ಟಿಎಂಸಿಗೆ ಅವಕಾಶಗಳನ್ನು ನೀಡಿದ್ದಾರೆ. ಆದರೆ, ಮೂರೂ ಪಕ್ಷಗಳು ಜನಸಾಮಾನ್ಯರ ನಿರೀಕ್ಷೆಗೆ ತಕ್ಕಂತೆ ಕಾರ್ಯನಿರ್ವಹಿಸಲು ವಿಫಲವಾಗಿವೆ, ಅದು ಈಗ ಬಿಜೆಪಿಯಿಂದ ಈಡೇರಲಿದೆ” ಎಂದು ದಿಲೀಪ್ ಘೋಷ್ ಹೇಳಿದ್ದಾರೆ.
ಇದನ್ನೂ ಓದಿ: ಪಶ್ಚಿಮ ಬಂಗಾಳ ಪ್ರವಾಸ: ಬಿಜೆಪಿ ಅಧಿಕಾರಕ್ಕೆ ತರಲು ಪಣತೊಟ್ಟ ಅಮಿತ್ ಶಾ
ಇನ್ನು ಚುನಾವಣೆಯ ಮೇಲೆ ಕಣ್ಣಿಟ್ಟಿರುವ ಬಿಜೆಪಿ ರಾಜ್ಯವನ್ನು ಐದು ಸಾಂಸ್ಥಿಕ ವಲಯಗಳಾಗಿ ವಿಂಗಡಿಸಿ ಕೇಂದ್ರ ನಾಯಕರಿಗೆ ಉಸ್ತುವಾರಿ ವಹಿಸಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.
ಬಿಜೆಪಿಯ ಹಿರಿಯ ಮುಖಂಡರಾದ ಸುನಿಲ್ ದಿಯೋಧರ್, ವಿನೋದ್ ತಾವ್ಡೆ, ದುಶ್ಯಂತ್ ಗೌತಮ್, ಹರೀಶ್ ದ್ವಿವೇದಿ ಮತ್ತು ವಿನೋದ್ ಸೊಂಕರ್ ಈ ಉಸ್ತುವಾರಿ ವಹಿಸಿಕೊಂಡಿರುವ ನಾಯಕರು. ಈ ನಾಯಕರು ತಮ್ಮ ತಮ್ಮವಲಯಗಳಲ್ಲಿ ಸರಣಿ ಸಭೆಗಳನ್ನು ನಡೆಸಿ ವಾರದೊಳಗೆ ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ.ಪಿ.ನಡ್ಡಾ ಅವರಿಗೆ ವರದಿಯನ್ನು ಸಲ್ಲಿಸಲಿದ್ದಾರೆ.
ವಿಧಾನಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲಿದೆ ಎಂದು ಕೋಲ್ಕತಾ ವಲಯದ ಉಸ್ತುವಾರಿ ವಹಿಸಿಕೊಂಡಿರುವ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ದುಶ್ಯಂತ್ ಗೌತಮ್ ವಿಶ್ವಾಸ ವ್ಯಕ್ತಪಡಿಸಿದರು.
ಮುಂದಿನ ಏಪ್ರಿಲ್-ಮೇ ತಿಂಗಳಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ 10 ವರ್ಷಗಳ ಆಡಳಿತವನ್ನು ಕೊನೆಗೊಳಿಸುವುದಾಗಿ ಬಿಜೆಪಿ ಮುಖಂಡರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.


