Homeಮುಖಪುಟವರವರ ರಾವ್ ಸ್ಥಿತಿ ಗಂಭೀರವಾಗಿದೆ; ನಾನಾವತಿ ಆಸ್ಪತ್ರೆಗೆ ದಾಖಲಿಸಿ - ಬಾಂಬೆ ಹೈಕೋರ್ಟ್‌!

ವರವರ ರಾವ್ ಸ್ಥಿತಿ ಗಂಭೀರವಾಗಿದೆ; ನಾನಾವತಿ ಆಸ್ಪತ್ರೆಗೆ ದಾಖಲಿಸಿ – ಬಾಂಬೆ ಹೈಕೋರ್ಟ್‌!

- Advertisement -
- Advertisement -

ಬಂಧನದಲ್ಲಿರುವ ತೆಲುಗು ಕವಿ ವರವರ ರಾವ್ ಅವರನ್ನು 15 ದಿನಗಳ ಕಾಲ ನಾನಾವತಿ ಆಸ್ಪತ್ರೆಗೆ ಸ್ಥಳಾಂತರಿಸಿ ಎಂದು ಬಾಂಬೆ ಹೈಕೋರ್ಟ್‌ ಅಧಿಕಾರಿಗಳಿಗೆ ತಿಳಿಸಿದ್ದು, ಅವರ ಆರೋಗ್ಯ ಸ್ಥಿತಿ ಅತ್ಯಂತ ಗಂಭೀರವಾಗಿದೆ ಎಂದು ಹೇಳಿದೆ.

ಭೀಮಾ ಕೋರೆಗಾಂವ್ ಪ್ರಕರಣದಲ್ಲಿ ಕಳೆದ 2 ವರ್ಷಗಳಿಂದ ತಲೋಜ ಜೈಲಿನಲ್ಲಿರುವ ಇವರಿಗೆ “ಚಿಕಿತ್ಸೆಯ ಅಗತ್ಯವಿದೆ” ಎಂದು ನ್ಯಾಯಮೂರ್ತಿಗಳಾದ ಎಸ್.ಎಸ್. ಶಿಂಧೆ ಮತ್ತು ಮಾಧವ್ ಜಮ್ದಾರ್ ಅವರ ನೇತೃತ್ವದ ಹೈಕೋರ್ಟ್ ನ್ಯಾಯಪೀಠ ಹೇಳಿದೆ.

ವರವರ ರಾವ್ ಅವರ ವೈದ್ಯಕೀಯ ಪರೀಕ್ಷೆಯ ವಿವರಗಳನ್ನು ಅವರ ಪತ್ನಿಗೆ ನೀಡುವಂತೆ ನ್ಯಾಯಾಲಯ ಮಂಗಳವಾರ ಮಹಾರಾಷ್ಟ್ರ ಸರ್ಕಾರಕ್ಕೆ ಸೂಚಿಸಿತ್ತು. ವರವರ ರಾವ್ ಅವರನ್ನು ನಾನಾವತಿ ಆಸ್ಪತ್ರೆಗೆ ಸ್ಥಳಾಂತರಿಸಲು ಅವರ ಪತ್ನಿ ಹೈಕೋರ್ಟ್ ಮೆಟ್ಟಿಲೇರಿದ್ದರು.

ಇದನ್ನೂ ಓದಿ: ಬೆಳದಿಂಗಳು ಕತ್ತಲೆಗೆ ಜಾರಿದಾಗ : ಕ್ರಾಂತಿಕಾರಿ ಕವಿ ವರವರ ರಾವ್ ಜೀವನ ಚಿತ್ರಣ

80 ವರ್ಷದ ವರವರಾ ರಾವ್ ಅವರನ್ನು 2018 ರ ಜನವರಿಯಲ್ಲಿ ಬಂಧಿಸಿ, ಭಯೋತ್ಪಾದನಾ-ವಿರೋಧಿ ಕಾನೂನಾದ ಯುಎಪಿಎ ಯನ್ನು ದಾಖಲಿಸಲಾಗಿದೆ. ಅನಾರೋಗ್ಯ ಪೀಡಿತರಾದ ಅವರು ನಿರಂತರವಾಗಿ ಸೆರೆವಾಸ ಅನುಭವಿಸುವುದು ಸಂವಿಧಾನದ 21 ನೇ ಪರಿಚ್ಚೇದದ ಉಲ್ಲಂಘನೆಯಾಗಿದೆ ಮತ್ತು ಅದು ಅವರ ಬದುಕುವ ಹಕ್ಕು ಮತ್ತು ವೈಯಕ್ತಿಕ ಸ್ವಾತಂತ್ರ್ಯದ ಉಲ್ಲಂಘನೆಯಾಗಿದೆ ಎಂದು ಹೇಳಿತ್ತು.

ಮುಂಬೈ ಬಳಿಯ ತಲೋಜ ಜೈಲಿನಲ್ಲಿರುವ ಪ್ರಕರಣದ ಸಹ-ಆರೋಪಿ ಸ್ಟಾನ್ ಸ್ವಾಮಿ ವಕೀಲರಿಗೆ ಕರೆ ಮಾಡಿ ವರವರ ರಾವ್ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದಾರೆ ಎಂದು ತಿಳಿಸಿದ್ದಾರೆಂದು ಇಂದಿರಾ ಜೈಸಿಂಗ್ ನ್ಯಾಯಾಲಯಕ್ಕೆ ತಿಳಿಸಿದ್ದರು.

ಇದನ್ನೂ ಓದಿ: ವರವರ ರಾವ್ ಅನಾರೋಗ್ಯದ ಸ್ಥಿತಿಯನ್ನು ದುರುಪಯೋಗ ಮಾಡುತ್ತಿದ್ದಾರೆ; ಅವರಿಗೆ ಜಾಮಿನು ನೀಡಕೂಡದು: NIA

“ವರವಾರ ರಾವ್ ಅವರನ್ನು ತಲೋಜಾ ಜೈಲಿನಿಂದ ನಾನಾವತಿ ಆಸ್ಪತ್ರೆಗೆ ಸ್ಥಳಾಂತರಿಸಲು ನಾನು ತುರ್ತು ಮಧ್ಯಂತರ ಪರಿಹಾರವನ್ನು ಕೋರುತ್ತೇನೆ. ಅವರ ಹಕ್ಕುಗಳನ್ನು ಉಲ್ಲಂಘಿಸಲಾಗುತ್ತಿರುವುದರಿಂದ ಅವರನ್ನು ಬಿಡುಗಡೆ ಮಾಡಬೇಕು ಎಂಬುದೇ ನನ್ನ ಬಯಕೆಯಾಗಿದೆ” ಎಂದು ವಕೀಲೆ ನ್ಯಾಯಾಲಯಕ್ಕೆ ಹೇಳಿದ್ದರು.

ವರವಾರ ರಾವ್ ಅವರ ಅನಾರೋಗ್ಯಕ್ಕೆ ಚಿಕಿತ್ಸೆ ನೀಡಲು ತಲೋಜಾ ಜೈಲಿನಲ್ಲಿ ಸೂಪರ್-ಸ್ಪೆಷಾಲಿಟಿ ಆಸ್ಪತ್ರೆಯ ಮೂಲಸೌಕರ್ಯಗಳಿಲ್ಲ ಮತ್ತು ಈ ಸಮಯದಲ್ಲಿ ಅವರು ತಮ್ಮ ಕುಟುಂಬದೊಂದಿಗೆ ಇರಬೇಕಾಗಿದೆ. ಈ ಸ್ಥಿತಿಯಲ್ಲಿ ಅವರು ವಿಚಾರಣೆಗೆ ನಿಲ್ಲಲು ಸಹ ಸಾಧ್ಯವಿಲ್ಲ. ಒಂದು ವೇಳೆ ಅವರು ಜೈಲಿನಲ್ಲಿ ಸತ್ತರೆ ಅದು ಕಸ್ಟಡಿಯಲ್ ಸಾವಾಗುತ್ತದೆ” ಎಂದು ಅವರು ನ್ಯಾಯಾಲಯಕ್ಕೆ ಹೇಳಿದ್ದರು.

ಇದನ್ನೂ ಓದಿ: ಕವಿ ವರವರ ರಾವ್ ಬಿಡುಗಡೆಗೊಳಿಸಿ: ಸಾಹಿತಿ, ಚಿಂತಕರ ಆಗ್ರಹ

ಪ್ರಕರಣವನ್ನು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ತನಿಖೆ ನಡೆಸುತ್ತಿದ್ದು, ಡಿಸೆಂಬರ್ 31, 2017 ರಂದು ಪುಣೆಯ ಎಲ್ಗರ್ ಪರಿಷತ್ ಸಮಾವೇಶದಲ್ಲಿ ಪ್ರಚೋದನಕಾರಿ ಭಾಷಣ ಮಾಡಿದ್ದರಿಂದ ಮರುದಿನ ಭೀಮಾ ಕೊರೆಗಾಂವ್ ಯುದ್ಧ ಸ್ಮಾರಕದ ಬಳಿ ಹಿಂಸಾಚಾರ ನಡೆಯಿತು ಎಂದು ಪೊಲೀಸರು ಆರೋಪಿಸಿದ್ದಾರೆ. ಈ ಹಿನ್ನಲೆಯಲ್ಲಿ, ವರವರ ರಾವ್ ಸೇರಿದಂತೆ ಹಲವಾರು ಸಾಮಾಜಿಕ ಕಾರ್ಯಕರ್ತರನ್ನು ಬಂಧಿಸಲಾಗಿದೆ.

ಇದೇ ಪ್ರಕರಣದಲ್ಲಿ ತೀರಾ ಇತ್ತೀಚೆಗೆ ಬಂಧಿಸಲ್ಪಟ್ಟ ಮತ್ತೊಬ್ಬ ಸಾಮಾಜಿಕ ಕಾರ್ಯಕರ್ತರಾದ ಫಾದರ್ ಸ್ಟಾನ್ ಸ್ವಾಮಿ, ತನಗೆ ಪಾರ್ಕಿನ್ಸನ್ ಕಾಯಿಲೆ ಇರುವುದರಿಂದ ಲೋಟಗಳನ್ನು ಹಿಡಿಯಲು ಕೈನಡುಗುತ್ತದೆ, ಆದ್ದರಿಂದ ಸ್ಟ್ರಾ ಬಳಸಿ ನೀರು ಕುಡಿಯಲು ಅನುಮತಿ ನೀಡಬೇಕು ಎಂದು ವಿನಂತಿಸಿಕೊಂಡಿದ್ದರು, ಆದರೆ ಎನ್ಐಎ ಇದಕ್ಕೆ ಪ್ರತಿಕ್ರಿಯಿಸಲು 20 ದಿನಗಳ ಕಾಲಾವಕಾಶ ಕೇಳಿತ್ತು.


ಇದನ್ನೂ ಓದಿ: ನಿರಂಕುಶಾಧಿಕಾರ ಎಂಬ ತೋಳ ಮತ್ತು ಕುರಿಮರಿಗಳಂತಿರುವ ಸಾಮಾನ್ಯರು: ಎ ನಾರಾಯಣ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

2023ರಲ್ಲಿ ತೀವ್ರ ಹಸಿವಿನಿಂದ ತತ್ತರಿಸಿದ 282 ಮಿಲಿಯನ್ ಜನರು: ಆಹಾರದ ಅಭಾವಕ್ಕೆ ವಿಶ್ವಸಂಸ್ಥೆ ಉಲ್ಲೇಖಿಸಿದ...

0
ಕಳೆದ ವರ್ಷ ಪ್ರಪಂಚದಾದ್ಯಂತ ಆಹಾರ ಅಭದ್ರತೆ ಸ್ಥಿತಿ ಭಾರೀ ಹದಗೆಟ್ಟಿದೆ, 2023ರಲ್ಲಿ ಸುಮಾರು 282 ಮಿಲಿಯನ್ ಜನರು ತೀವ್ರ ಹಸಿವಿನಿಂದ ಬಳಲಿದ್ದಾರೆ, ಇದರಲ್ಲಿ ವಿಶೇಷವಾಗಿ ಯುದ್ಧಪೀಡಿತ ಗಾಝಾ ಮತ್ತು ಸುಡಾನ್‌ನಲ್ಲಿ ಹೆಚ್ಚಿನ ಜನರು...