ಅತ್ಯಂತ ಜನನಿಬಿಡ ರಸ್ತೆಯೊಂದರಲ್ಲಿ ವಾಹನ ಸಂಚಾರವನ್ನು ನಿರ್ವಹಿಸಲು ಸತತ ನಾಲ್ಕು ಗಂಟೆಗಳ ಕಾಲ ಭಾರಿ ಮಳೆಯ ಮಧ್ಯೆ ನಿಂತಿದ್ದ ತಮಿಳುನಾಡಿನ ತೂತುಕುಡಿ ಜಿಲ್ಲೆಯ ಟ್ರಾಫಿಕ್ ಪೊಲೀಸ್ ಕಾರ್ಯಕ್ಕೆ ಸಾರ್ವಜನಿಕರಿಂದ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ. ಅಲ್ಲದೇ ಎಸ್‌ಪಿಯವರು ಸ್ಥಳಕ್ಕೆ ಆಗಮಿಸಿ ಅವರಿಗೆ ಬಹುಮಾನ ನೀಡಿ ಗೌರವಿಸಿದ್ದಾರೆ.
ತಮಿಳುನಾಡು ರಾಜಧಾನಿ ಚೆನ್ನೈನಿಂದ 600 ಕಿ.ಮೀ ದೂರದಲ್ಲಿರುವ ತೂತುಕುಡಿ ದಕ್ಷಿಣ ನಗರದ ಬಿಡುವಿಲ್ಲದ VVD ಜಂಕ್ಷನ್‌ನಲ್ಲಿ ವಾಹನ ಸಂಚಾರಕ್ಕೆ ತೊಂದರೆಯಾಗದಂತೆ ನೋಡಿಕೊಳ್ಳಲು ಪೊಲೀಸ್ ಪೇದೆ ಮುತ್ತುರಾಜ್ ಅವರು ಸುಮಾರು ನಾಲ್ಕು ಗಂಟೆಗಳ ಕಾಲ ಭಾರಿ ಮಳೆಯಲ್ಲಿ ನಿಂತು ಕರ್ತವ್ಯ ನಿರ್ವಹಿಸಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದ ವಿಡಿಯೋ ನೋಡಿ ಪೊಲೀಸ್ ವರಿಷ್ಠಾಧಿಕಾರಿ ಎಸ್.ಜಯಕುಮಾರ್ ಅಚ್ಚರಿ ವ್ಯಕ್ತಪಡಿಸಿದ್ದಾರೆ. ತಕ್ಷಣ ಸ್ಥಳಕ್ಕೆ ಬಂದು ಜಂಕ್ಷನ್‌ನಲ್ಲಿ ರೇನ್‌ಕೋಟ್ ಧರಿಸಿ ವಾಹನಗಳನ್ನು ಸರಿಯಾಗಿ ಕಳಿಸುತ್ತಿದ್ದ ಮುತ್ತುರಾಜ್ ಅವರಿಗೆ ನೆನಪಿನ ಕಾಣಿಕೆ ನೀಡಿ ಗೌರವಿಸಿದ್ದಾರೆ.
ಇದನ್ನೂ ಓದಿ: 2024 ರ ಚುನಾವಣೆಗೆ ಸಜ್ಜು: 100 ದಿನ ರಾಷ್ಟ್ರೀಯ ಪ್ರವಾಸ ಕೈಗೊಳ್ಳಲಿರುವ ಜೆ.ಪಿ.ನಡ್ಡಾ!
Traffic Constable Muthuraj regulates traffic for 4 hours in pouring rain. Tuticorin SP Jeyakumar springs a surprise; drives to the spot and honours the constable with a gift. @ndtv@TUTICORINPOLICE pic.twitter.com/Sqa4uuRbve
— J Sam Daniel Stalin (@jsamdaniel) November 19, 2020
“ಆ ಕಷ್ಟದ ಪರಿಸ್ಥಿತಿಯಲ್ಲೂ ಅವರ ಕರ್ತವ್ಯ ಪ್ರಜ್ಞೆಯನ್ನು ಗುರುತಿಸಲು ನಾನು ಬಯಸುತ್ತೇನೆ” ಎಂದು ಹಿರಿಯ ಪೊಲೀಸ್ ಅಧಿಕಾರಿ ಎನ್‌ಡಿಟಿವಿಗೆ ತಿಳಿಸಿದ್ದಾರೆ.
“ಅವರು ನನ್ನನ್ನು ಸ್ಥಳದಲ್ಲೇ ಗೌರವಿಸಲು ಸಮಯ ಮೀಸಲಿರಿಸಿದ್ದಕ್ಕೆ ನನಗೆ ತುಂಬಾ ಸಂತೋಷವಾಗಿದೆ ಮತ್ತು ಹೆಮ್ಮೆ ಇದೆ. ಸಾಮಾನ್ಯವಾಗಿ ಪೊಲೀಸ್ ಸಿಬ್ಬಂದಿಯನ್ನು ಎಸ್‌ಪಿ ಕಚೇರಿಯಲ್ಲಿ ಮಾತ್ರ ಗೌರವಿಸಲಾಗುತ್ತದೆ. ನನಗೆ ಪ್ರೇರಣೆಯಾದ ನನ್ನ ರಿಸರ್ವ್ ಪೊಲೀಸ್ ಇನ್ಸ್‌ಪೆಕ್ಟರ್‌ಗೂ ನಾನು ಧನ್ಯವಾದ ಹೇಳಬೇಕು” ಎಂದು ಮುತ್ತುರಾಜ್ ಹೇಳಿದರು.
“ಇದು ನನ್ನ ಕೆಲಸ, ನಾನು ವಿಶೇಷವಾಗಿ ದ್ವಿಚಕ್ರ ವಾಹನ ಸವಾರರ ಬಗ್ಗೆ ಕಾಳಜಿ ವಹಿಸುತ್ತಿದ್ದೆ. ಅವರು ಟ್ರಾಫಿಕ್ ಸಿಗ್ನಲ್‌ಗಳಲ್ಲಿ ಕಾಯುವಾಗ ಮಳೆಯಿಂದ ಸಂಪೂರ್ಣವಾಗಿ ನೆನೆಯುತ್ತಾರೆ. ಹಾಗಾಗಿ ನಾನು ಸಿಗ್ನಲ್ ಆಫ್ ಮಾಡಿ ಕೈಯಾರೆ ಟ್ರಾಫಿಕ್ ನಿಯಂತ್ರಿಸಿದೆ. ಆಗ ಅದು ಅವರಿಗೆ ಸ್ವಲ್ಪ ಸುಲಭವಾಗುತ್ತದೆ” ಎಂದು ತಮ್ಮ ಕರ್ತವ್ಯ ನಿಷ್ಠೆ ಬಗ್ಗೆ ಮಾತನಾಡುತ್ತಾರೆ ಮುತ್ತುರಾಜ್.
ಪತಿ ಮುತ್ತುರಾಜ್ ಕೆಲಸದ ಬಗ್ಗೆ ಅವರ ಪತ್ನಿ ಶಿವರಾಜನಿ ಪ್ರತಿಕ್ರಿಯೆ ನೀಡಿದ್ದು, “ನಾನು ಅವರ ಬಗ್ಗೆ ತುಂಬಾ ಹೆಮ್ಮೆಪಡುತ್ತೇನೆ, ಕೆಲಸದ ವಿಷಯಕ್ಕೆ ಬಂದಾಗ ಆವರು ಯಾವಾಗಲೂ ಕರ್ತವ್ಯನಿಷ್ಠರಾಗಿರುತ್ತಾರೆ” ಎನ್ನುತ್ತಾರೆ. ಈ ದಂಪತಿಗೆ ಒಬ್ಬ ಮಗಳು ಮತ್ತು ಒಬ್ಬ ಮಗನಿದ್ದಾರೆ.


