“Its the gradual, slight, imperceptible change in our own behavior and perception ; that is the product.”

ನಾನೊಬ್ಬ ಸಿನೆಮಾ ಮನುಷ್ಯ. ಹಾಗಾಗಿ ಯಾವುದೇ ಸಿನೆಮಾ ನೋಡಿದಾಗ, ಆ ಚಿತ್ರ ಚೆನ್ನಾಗಿದೆಯೋ ಇಲ್ಲವೋ, ಚೆನ್ನಾಗಿದ್ದರೆ ಏಕೆ ಚೆನ್ನಾಗಿದೆ, ಅದು ಚೆನ್ನಾಗಿರುವುದಕ್ಕೆ ಯಾರ್‍ಯಾರ ಪಾತ್ರ ಎಷ್ಟು ಎಂಬುದರ ಬಗ್ಗೆ ಯೋಚಿಸುವುದು ನನಗೆ ಸ್ವಾಭಾವಿಕ. ಆದರೆ ಕೆಲವು ಸಿನೆಮಾಗಳನ್ನು ನೋಡಿ, ಇವ್ಯಾವುದರ ಬಗ್ಗೆಯೂ ತಲೆಕೆಡಿಸಿಕೊಳ್ಳದೇ, ಈ ಚಿತ್ರ ನನ್ನ ಮೇಲೆ ಪರಿಣಾಮ ಏನು ಬೀರಿತು, ಸಮಾಜದ ಮೇಲೆ ಏನು ಪರಿಣಾಮ ಬೀರುತ್ತೆ, ಬೀರಬಹುದು ಎಂಬುದರ ಬಗ್ಗೆಯೇ ಯೋಚಿಸುವಂತಾಗುತ್ತದೆ. ದಿ ಸೋಷಲ್ ಡೈಲೆಮಾ ಇಂತಹದ್ದೇ ಒಂದು ಚಿತ್ರ.

It’s a market place which trades exclusively in human future. (ಇದೊಂದು ಮಾನವನ ಭವಿಷ್ಯದಲ್ಲಿ ವ್ಯಾಪಾರ ಮಾಡುವ ಮಾರುಕಟ್ಟೆ.)

ಈ ಚಿತ್ರವು ಸಾಮಾಜಿಕ ಜಾಲತಾಣದ ಹಲವಾರು ಆಯಾಮಗಳನ್ನು ಪರೀಕ್ಷಿಸುತ್ತೆ. ಅದರಲ್ಲಿ ಈ ಸಾಮಾಜಿಕ ಜಾಲತಾಣಗಳು ನಮ್ಮ ರಾಜಕೀಯವನ್ನು ಹೇಗೆ ಬದಲಾಯಿಸುತ್ತಿವೆ ಎಂಬುದರ ಬಗ್ಗೆ ನನಗೆ ಹೆಚ್ಚಿನ ಆಸಕ್ತಿ.
ಈ ಸಾಮಾಜಿಕ ಜಾಲತಾಣಗಳು ಮಾಡುವ ಅಪಾಯಕಾರಿ ಕೆಲಸಗಳಲ್ಲಿ ಒಂದು; ‘Confirmation bias’! ಅಂದರೆ ನಾವು ಯಾವುದೇ ಅಧ್ಯಯನ ಅಥವಾ ತನಿಖೆ ಇಲ್ಲದೇ ಏನೋ ಒಂದು ಊಹೆ ಅಥವಾ ತೀರ್ಮಾನ ಮಾಡಿಕೊಂಡಿರುತ್ತೇವೆ, ಅದಾದನಂತರ ಆ ತೀರ್ಮಾನಕ್ಕೆ ಇಂಬು ಕೊಡುವ ಉದಾಹರಣೆಗಳನ್ನೇ ನೋಡುತ್ತ ಅದನ್ನೇ ಅಧ್ಯಯನ ಎಂದು ತಿಳಿದುಕೊಂಡು, ಅಧ್ಯಯನ ಮಾಡುವುದಕ್ಕಿಂತ ಮುಂಚೆಯೇ ಬಂದ ತೀರ್ಮಾನವನ್ನು ಗಟ್ಟಿಗೊಳಿಸುತ್ತ ಹೋಗುತ್ತೇವೆ. ನಾನು ಪಾಠ ಮಾಡುವಾಗ ಹೀಗೆಲ್ಲ ಮಾಡಬಾರದು, ಸಾಮಾನ್ಯತೆಯಿಂದ ದೂರ ಬಂದು, ಸರಿಯಾದ ಅಧ್ಯಯನ ಮಾಡಬೇಕು ಎಂತೆಲ್ಲ ಹೇಳುತ್ತೇನೆ. ಈಗ ಸಾಮಾಜಿಕ ಜಾಲತಾಣದ ಕಿಂಗ್ ಆಗಿರುವ ಫೇಸ್‌ಬುಕ್‌ನಲ್ಲಿ ಆಗುತ್ತಿರುವುದೇನು ಅಥವಾ ಫೇಸ್‌ಬುಕ್ ಮಾಡುತ್ತಿರುವುದೇನು? ಈ Confirmation bias ಎಂಬ ಪ್ರಕ್ರಿಯೆಯನ್ನು ಮಹದಾಕಾರವಾಗಿ ಬೆಳೆಸುತ್ತಿದೆ. ಒಂದರ್ಥದಲ್ಲಿ ಈ ಪ್ರಕ್ರಿಯೆಯೊಂದನ್ನೇ ಹೆಚ್ಚಿಸುತ್ತಿದೆ ಎಂತಲೂ ಹೇಳಬಹುದು.

ಈ ಸಾಮಾಜಿಕ ಜಾಲತಾಣಗಳು ಮಾಡುವುದೇನು? ಇವುಗಳು ಒಬ್ಬ ವ್ಯಕ್ತಿಯನ್ನು ಮಾದರಿಯಾಗಿ(model) ಬದಲಿಸುತ್ತವೆ. ಆ ವ್ಯಕ್ತಿ ಸಾಮಾಜಿಕ ಜಾಲತಾಣಕ್ಕೆ ಸೇರಿದೊಡನೇ, ಅವನು ವ್ಯಕ್ತಿಯಾಗಿ ಉಳಿಯವುದಿಲ್ಲ. ಯಾವ್ಯಾವ ಜಾಹೀರಾತುದಾರರಿಗೆ ಆ ವ್ಯಕ್ತಿ ಮಾದರಿ ಎಂಬುದನ್ನು ನಿರ್ಧರಿಸಲಾಗುತ್ತದೆ. ಅವನ ಇಷ್ಟ, ಪ್ಯಾಷನ್, ದೃಷ್ಟಿಕೋನವನ್ನು ಕಂಡುಹಿಡಿದು ಅವನಿಗೆ ಯಾವ ಉತ್ಪನ್ನಗಳ ಜಾಹೀರಾತುಗಳನ್ನು ತೋರಿಸಬೇಕು, ಅವನು/ಳು ಆ ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ಹೆಚ್ಚು ಸಮಯ ಕಳೆಯುವಂತೆ ಮಾಡಲು ಏನೆಲ್ಲ ತೋರಿಸಬೇಕು ಎಂಬುದನ್ನು ನಿರ್ಧರಿಸಿ, ಅವನು/ಳು ಹೆಚ್ಚೆಚ್ಚು ಸಮಯ ಅಲ್ಲಿಯೇ ಕಳೆಯುವಂತೆ ಮಾಡಲಾಗುತ್ತದೆ, ಅದರಿಂದ ಅವರ ವ್ಯಾಪಾರವೂ ಹೆಚ್ಚುತ್ತಲೇ ಇರುತ್ತದೆ.

ಇದರಲ್ಲಿ ಎರಡು ಅಂಶಗಳಿವೆ; ಒಂದು ಆ ವ್ಯಕ್ತಿ ಸಾಮಾಜಿಕ ಜಾಲತಾಣದಲ್ಲಿ ತಾನು ಕಳೆಯುವ ಸಮಯವನ್ನು ಹಾಗೂ ತಾನು ನೋಡುವ ಕಾಂಟೆಂಟ್‌ಅನ್ನು ತನ್ನ ಆಯ್ಕೆ ಅಂದುಕೊಂಡಿರುತ್ತಾಳೆ/ನೆ, ಆದರೆ ವಾಸ್ತವದಲ್ಲಿ ಅದು ಅವಳ/ನ ಆಯ್ಕೆ ಆಗಿರದೇ, ಸಾಮಾಜಿಕ ಜಾಲತಾಣದ್ದಾಗಿರುತ್ತೆ. ಹಾಗೂ ಇದೊಂದು ಗೀಳಾಗಿ ಪರಿವರ್ತನೆಯಾಗುವಲ್ಲಿ ಹೆಚ್ಚು ಸಮಯ ತೆಗೆದುಕೊಳ್ಳುವುದಿಲ್ಲ. ಆ ಗೀಳಿನ ಪರಿಣಾಮಗಳೇನು ಎಂಬುದನ್ನು ಬೇರೆಯದಾಗಿ ಚರ್ಚೆ ಮಾಡಬೇಕಾಗುವುದು. ಇದು ಕೇವಲ ಉತ್ಪನ್ನಗಳ ಜಾಹೀರಾತಿಗೆ ಸೀಮಿತವಾಗಿದ್ದರೆ ಅಷ್ಟು ಸಮಸ್ಯೆಯಾಗಿರುತ್ತಿದ್ದಿಲ್ಲವೇನೋ?

There are only two industries that call their customers users; Illegal drugs and software.

ಈ ನಮ್ಮ ಇಡೀ ತಲೆಮಾರಿನ ಚಿಂತನೆಯೇ ಈ ಪ್ರಕ್ರಿಯೆಯನ್ನು ಅವಲಂಬಿಸಿದಂತಾಗಿದೆ. ನೀವ್ಯಾರೋ ಒಬ್ಬ ದ್ವೇಷ ಕುಕ್ಕುವ, ಅತ್ಯಂತ ಮೂರ್ಖತನದಿಂದ ಕೂಡಿದ ಭಾಷಣದ ಒಂದು ವೀಡಿಯೋ ನೋಡಿದಾಗ, ಅಂತಹದ್ದೇ ವೀಡಿಯೋಗಳು ನಿಮ್ಮ ಫೀಡ್‌ನಲ್ಲಿ ಪದೇ ಪದೇ ಕಾಣಿಸಿಕೊಳ್ಳತೊಡಗುತ್ತವೆ. ಒಂದು ವೇಳೆ ಆ ವ್ಯಕ್ತಿಗೆ ಆ ದ್ವೇಷಪೂರಿತ ಭಾಷಣದೊಂದಿಗೆ ಒಂದಿಷ್ಟು ಸಹಮತವಿದ್ದರೂ, ಪದೇ ಪದೇ ಅಂತಹದ್ದೇ ಬರಹಗಳು, ವಿಡಿಯೋಗಳನ್ನು ನೋಡಿ, ಆ ವಿಚಾರಧಾರೆಯಲ್ಲಿ ಕಡುನಂಬಿಕೆ ಹೊಂದಲು ಹೆಚ್ಚಿನ ಸಮಯ ತೆಗೆದುಕೊಳ್ಳುವುದಿಲ್ಲ. ಈಗ ಆಗುತ್ತಿರುವುದೂ ಅದೆ. ಇದರ ಸಮಗ್ರತೆ ಮತ್ತು ಪರಿಣಾಮವನ್ನು ಸಂಪೂರ್ಣವಾಗಿ ಅರಿಯಲು ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯವಾಗಿರುವ ಜನರ ಸಂಖ್ಯೆಯನ್ನು ನೋಡಬೇಕು. ಭಾರತದ ಜನಸಂಖ್ಯೆ 138 ಕೋಟಿ, ಫೇಸ್‌ಬುಕ್ ಒಂದರಲ್ಲಿ ತಮ್ಮ ಖಾತೆಯನ್ನು ಹೊಂದಿರುವವರ ಸಂಖ್ಯೆ-56 ಕೋಟಿ. ಒಟ್ಟಾರೆ ವಿಶ್ವದಲ್ಲಿ 260 ಕೋಟಿ ಬಳಕೆದಾರರಿದ್ದಾರೆ ಫೇಸ್‌ಬುಕ್ಕಿಗೆ.

ಈಗ ಯೋಚಿಸಿ, ಶೇಕಡಾ ನಲವತ್ತಕ್ಕೂ ಹೆಚ್ಚು ಜನರ ವಿಚಾರಧಾರೆಯನ್ನು, ನಂಬಿಕೆಗಳನ್ನು, ನಿಲುವುಗಳನ್ನು ಈ ಒಂದು ಸಾಮಾಜಿಕ ಜಾಲತಾಣವು ಪ್ರಭಾವಿಸುತ್ತಿರುವ ಸಂದರ್ಭದಲ್ಲಿ, ರಾಜಕೀಯ ಪಕ್ಷಗಳು ಇದನ್ನು ಹೇಗೆ, ಯಾವ ಮಟ್ಟದಲ್ಲಿ ಬಳಸುತ್ತಿರಬಹುದು. ನೆನಪಿಡಿ, ಈ ಭೂಮಿ ದುಂಡಗಿದೆ ಎಂಬ ಅಭಿಪ್ರಾಯವನ್ನು ಹೊಂದಿದ ವ್ಯಕ್ತಿಗೆ ಭೂಮಿ ಚಪ್ಪಟೆಯಾಗಿದೆ ಎಂದು ಹೇಳುವ ಯಾವ ಪೋಸ್ಟಗಳೂ ಕಾಣಿಸುವುದಿಲ್ಲ ಹಾಗೂ ಭೂಮಿ ಚಪ್ಪಟೆಯಾಗಿದೆ ಎಂಬ ಅಭಿಪ್ರಾಯದಲ್ಲಿ ನಂಬಿಕೆಯಿಟ್ಟವರಿಗೆ ದಿನಂಪೂರ್ತಿ ಆ ಅಭಿಪ್ರಾಯವನ್ನು ಗಟ್ಟಿಗೊಳಿಸುವ ಪೋಸ್ಟ್‌ಗಳೇ ಕಾಣುತ್ತಿರುತ್ತವೆ.

…..It’s the technology’s ability to bring out the worst in society…..

ಸಮಾಜ, ದೇಶ ಹಾಗೂ ಇಡೀ ವಿಶ್ವವೇ ಧೃವೀಕರಣಗೊಳ್ಳುತ್ತಿರುವ ಸಮಯದಲ್ಲಿ ಈ ಸಾಮಾಜಿಕ ಜಾಲತಾಣಗಳ ಪಾತ್ರವೇನಿತ್ತು ಹಾಗೂ ಇನ್ನು ಮುಂದೆ ಯಾವ ಪಾತ್ರ ವಹಿಸಬಹುದು ಎಂಬುದನ್ನು ಊಹಿಸಿಕೊಳ್ಳಿ. ಹಾಗೂ ಈ ಸಾಮಾಜಿಕ ಜಾಲತಾಣಗಳು ಒಬ್ಬ ಸರ್ವಾಧಿಕಾರಿಯ ಕೈಗೆ ಸಿಕ್ಕರೆ?

ಮ್ಯಾನ್ಮಾರ್‌ನಲ್ಲಿ ರೋಹಿಂಗ್ಯ ಮುಸ್ಲಿಮರ ವಿರುದ್ಧ ದ್ವೇಷ ಹೆಚ್ಚಿಸುವಲ್ಲಿ ಈ ಸಾಮಾಜಿಕ ಜಾಲತಾಣಗಳ ಪಾತ್ರ ಪ್ರಬಲವಾಗಿದೆ ಎನ್ನಲಾಗಿದೆ. ಅದರೊಂದಿಗೆ ಬ್ರೆಜಿಲ್‌ನಲ್ಲಿ ಬೋಲ್ಸೆನಾರೋ ಎಂಬ ಧೂರ್ತ ಚುನಾವಣೆಯಲ್ಲಿ ಗೆಲ್ಲುವುದರಲ್ಲೂ ಇವುಗಳೇ ಪ್ರಮುಖ ಪಾತ್ರ ವಹಿಸಿರಬಹುದಾಗಿದೆ.

ನೆನಪಿಡಿ, ಸುಳ್ಳುಸುದ್ದಿಗಳು ಇತರ ಸುದ್ದಿಗಳಿಗಿಂತ ಆರು ಪಟ್ಟು ಹೆಚ್ಚು ಪ್ರಸಾರಗೊಳ್ಳುತ್ತವೆ. ಈ ಸುಳ್ಳುಸುದ್ದಿಗಳು ಹೆಚ್ಚು ಜಾಹೀರಾತು ಅಂದರೆ ಹೆಚ್ಚು ಹಣ ತಂದುಕೊಡುತ್ತವೆ.

ನಾನೂ ಈ ಸಾಮಾಜಿಕ ಜಾಲತಾಣಗಳನ್ನು ಬಳಸುವವನೇ. (ಈ ಚಿತ್ರ ನೋಡಿದ ನಂತರ ಬಹುತೇಕ ಆಪ್‌ಗಳ ನೋಟಿಫಿಕೇಷನ್ ನಿರ್ಭಂದಿಸಿದ್ದೇನೆ.) ನನ್ನ ಸಾಮಾಜಿಕ ಜಾಲತಾಣಗಳಲ್ಲೂ ಇದರ ಪರಿಣಾಮ ಕಾಣುತ್ತಿದ್ದೇನೆ. ಒಂದು ವಿಚಾರಧಾರೆಯ, ಸೈದ್ಧಾಂತಿಕ ನಿಲುವಿನ ಪರ ವಿರೋಧದಲ್ಲಿ ಇರುವವರ ಕಂದರ ಹೆಚ್ಚಾಗುತ್ತಲೇ ಇದೆ. ನಾವೆಲ್ಲ ಒಬ್ಬ ರಾಜಕಾರಣಿ ಇಷ್ಟೊಂದು ಮೂರ್ಖನಾಗಿದ್ದಾನೆ, ದುಷ್ಟನಾಗಿದ್ದಾನೆ, ಜನವಿರೋಧಿಯಾಗಿದ್ದಾನೆ ಎಂಬಿತ್ಯಾದಿ ಪ್ರಮಾಣಗಳು ನಮಗೆ ದಿನವಿಡೀ ಸಿಗುತ್ತಿದ್ದರೂ, ಅವನ ಜನಪ್ರಿಯತೆ ದಿನೇದಿನೇ ಹೆಚ್ಚುತ್ತಿರುವುದನ್ನು ಕಂಡು ದಂಗಾಗಿರುವುದನ್ನು ಕಂಡಿದ್ದೇನೆ. ಅದಕ್ಕೆ ಕಾರಣ ಸರಳವಾಗಿದೆ; ಆ ರಾಜಕಾರಿಣಿಯನ್ನು ಇಷ್ಟಪಡುವ ವ್ಯಕ್ತಿಗೆ ಅವನ ವಿರೋಧಿಗಳಿಗೆ ಕಾಣಸಿಗುವ ಯಾವುದೇ ಪೋಸ್ಟ್‌ಗಳು ಕಾಣಿಸುತ್ತಿಲ್ಲ. ಇದಕ್ಕಿಂತ ಇನ್ನೊಂದು ದುರದೃಷ್ಟಕರ ಬೆಳವಣಿಗೆಯನ್ನೂ ಕಂಡಿದ್ದೇನೆ. ಜನವಿರೋಧಿ, ಫ್ಯಾಸಿಸ್ಟ್ ಶಕ್ತಿಗಳು ಅಧಿಕಾರಕ್ಕೆ ಬಂದ ಸಮಯದಲ್ಲೂ, ನ್ಯಾಯಯುತ ಸಮಾಜವನ್ನು ಅಪೇಕ್ಷಿಸುವ, ಫ್ಯಾಸಿಸ್ಟ್ ವಿರೋಧಿಗಳಿಗೆ ತಮ್ಮ ಸೋಲಿನ ಅರಿವು ಆಗದೇ ಇರುವುದು. (sense of loss). ತಮ್ಮ ಸುತ್ತಲೆಲ್ಲಾ, ತಮ್ಮ ಅಭಿಪ್ರಾಯಗಳನ್ನು ಬೆಂಬಲಿಸುವ ವ್ಯಕ್ತಿಗಳೇ ಇರುವುದರಿಂದ ಹಾಗೂ ಈ ಸಾಮಾಜಿಕ ಜಾಲತಾಣಗಳು ಅವರ ನಿಲುವಿಗೆ ತಕ್ಕುದಾದ ಪೋಸ್ಟ್‌ಗಳನ್ನೇ ತೋರಿಸುತ್ತಿರುವುದರಿಂದ ಚುನಾವಣೆಯಲ್ಲಿ ಸೋತರೂ, ತಾವೇ ವಿಜಯಿ ಎಂಬ ಭಾವನೆಯಲ್ಲಿ ಇರುವ ಸಾಧ್ಯತೆ ಬಲವಾಗಿವೆ. ಅದರಿಂದ, ತಮ್ಮ ತಪ್ಪುಗಳನ್ನು ಅವಲೋಕಿಸುವ, ತಮ್ಮನ್ನು ತಾವು ಬದಲಿಸಿಕೊಳ್ಳುವ ಪ್ರಕ್ರಿಯೆಯನ್ನು ಅನಿರ್ದಿಷ್ಟವಾಗಿ ಮುಂದೂಡಲಾಗುತ್ತೆ.
ಹೀಗೆಯೇ ಮುಂದುವರೆದರೆ ಮುಂದೇನಾಗಬಹುದು?

ಸಿವಿಲ್ ವಾರ್ (ಅಂತರ್ಯುದ್ಧ) ಸ್ಥಿತಿಗೆ ತಲುಪಬಹುದು ಎಂದು ಕೆಲವರು ಹೇಳಿದರೆ, ಈ ಪ್ರಕ್ರಿಯೆ ಇಡೀ ನಾಗರಿಕತೆಯನ್ನು, ಪ್ರಜಾಪ್ರಭುತ್ವವನ್ನೂ ನಾಶಗೊಳಿಸಬಹುದು ಎಂದು ಕೆಲವರು ಹೇಳಿದ್ದಾರೆ. ಹೌದಾ? ಆ ಸ್ಥಿತಿಗೆ ನಿಜವಾಗಿಯೂ ತಲುಪಬಹುದಾ?

ಹೌದು ಮತ್ತು ಇಲ್ಲ. ಈಗಾಗಲೇ, ಒಂದು ವಿಚಾರಧಾರೆಯ ಎರಡೂ ಬದಿಯಲ್ಲಿ ಜನರು ಸಮನಾದ ಸಂಖ್ಯೆಯಲ್ಲಿ ಇದ್ದಲ್ಲಿ, ಖಂಡಿತವಾಗಿಯೂ ಆಗಬಹುದು. ಆದರೆ, ಒಂದು ವಿಚಾರಧಾರೆ ಅತ್ಯಂತ ಪ್ರಬಲವಾಗಿ, ಆ ವಿಚಾರಧಾರೆಯ ವಿರೋಧಿಗಳು ಅತ್ಯಂತ ಕಡಿಮೆ ಸಂಖ್ಯೆಯಲಿದ್ದರೆ?

ನಾಗರಿಕತೆ ಬದಲಾಗುತ್ತೆ, ಬಹುಸಂಖ್ಯಾತರ, ಬಲಿಷ್ಠರ ಮಾತಿಗೆ ಮಣಿಯಬೇಕಾಗುತ್ತೆ. ಇಂಗ್ಲಿಷಿನಲ್ಲಿ conforn ಎನ್ನುತ್ತಾರೆ. ಅನ್ಯಾಯಕ್ಕೆ ಒಳಗಾಗುವವರೇ, ತಮ್ಮ ಮೇಲೆ ಆಗುವ ಅನ್ಯಾಯವನ್ನು ಸಮರ್ಥಿಸಿಕೊಳ್ಳುವ ಸ್ಥಿತಿಗೆ ತಲುಪಬಹುದಾಗಿದೆ. ಹಾಗೂ ಈ ಅನ್ಯಾಯ, ದೌರ್ಜನ್ಯ ಸಾವಿರಾರು ವರ್ಷಗಳವರೆಗೆ ಅವ್ಯಾಹತವಾಗಿ ನಡೆಯುವ ಸಾಧ್ಯತೆಯಿದೆ. ಇದನ್ನು ಊಹಿಸುವುದು ಅಷ್ಟು ಕಷ್ಟವಲ್ಲ; ನಮ್ಮ ದೇಶದ ಜಾತಿ ಪದ್ಧತಿ ನೋಡಿ.

ಹಾಗಾದರೆ ಏನು ಮಾಡಬೇಕು?
ಹಲವಾರು ಉತ್ತರಗಳನ್ನು ನೀಡಲಾಗುತ್ತಿದೆ; ಒಂದು, ಸಾಮಾಜಿಕ ಜಾಲತಾಣಗಳಿಂದ ಹೊರಬರುವುದು. ಆದರೆ ಇದು ಸುಲಭಸಾಧ್ಯವಲ್ಲ. ಏಕೆಂದು ವಿವರಿಸುವ ಅಗತ್ಯವಿಲ್ಲ.

ಸಾಮಾಜಿಕ ಜಾಲತಾಣಗಳೇ ಈ ಪೆಡಂಭೂತವನ್ನು (frankeisntein) ಸೃಷ್ಟಿಸಿವೆ, ಅವುಗಳೇ ನಿಯಂತ್ರಣ ಮಾಡಬೇಕು. ಹಾಗೂ ನಿಯಂತ್ರಣ ಮಾಡುವಂತೆ ಕಾನೂನುಗಳನ್ನು ತರಬೇಕು. ಸಾಮಾಜಿಕ ಜಾಲತಾಣಗಳ ಜಗತ್ತು ನಾಗಾಲೋಟದಲ್ಲಿ ಬೆಳೆದಿದೆ, ಅದರೆ ಅದಕ್ಕೆ ತಕ್ಕುನಾಗಿ ಸೈಬರ್ ಕಾನೂನುಗಳು ಪರಿಷ್ಕೃತಗೊಂಡಿಲ್ಲ. ಅವುಗಳನ್ನು ನಿಯಂತ್ರಣಗೊಳಿಸುವಂತೆ ಕಾನೂನುಗಳನ್ನು ತರಬೇಕು. (ಇದೂ ಸುಲಭವಲ್ಲ, ಏಕೆಂದರೆ ಈ ದೈತ್ಯಗಾತ್ರದ ಕಂಪನಿಗಳ ಹಿತಾಸಕ್ತಿಗಳನ್ನು ಕಾಪಾಡಲೆಂದೆ ಕಾನೂನುಗಳನ್ನು ರಚಿಸಲಾಗುವ ಸಾಧ್ಯತೆಯಿದೆ.
ಆದರೂ, ಕೆಲ ವರ್ಷಗಳ ಹಿಂದೆ ಫೇಸ್‌ಬುಕ್ ಎಂಬ ದೈತ್ಯ ಕಂಪನಿಯು ಫ್ರೀ ಬೇಸಿಕ್ಸ್ ಎಂಬ ಹೆಸರಿನಲ್ಲಿ ಒಂದು ಧೂರ್ತ ಯೋಜನೆಯನ್ನು ಹಮ್ಮಿಕೊಂಡಿತ್ತು. ಆಗ ಹಲವಾರು ಆಕ್ಟಿವಿಸ್ಟ್‌ಗಳು ಇದರ ವಿರುದ್ಧ ಕ್ಯಾಂಪೇನ್ ಮಾಡಿದ್ದರ ಪರಿಣಾಮವಾಗಿ, ಆ ಯೋಜನೆಗೆ ಅವಕಾಶ ಕೊಡಲಿಲ್ಲ.) ಮೂರನೆಯದಾಗಿ, ಸಾಮಾಜಿಕ ಜಾಲತಾಣಗಳನ್ನು ಬಳಸುತ್ತಲೇ, ಅವುಗಳ ಕುತಂತ್ರವನ್ನು ಅರಿತು, ನಮ್ಮ strategy ಯನ್ನು ಬದಲಿಸವುದು. ಅದಕ್ಕೆ ಸೂಚಿಸಿದ ಒಂದು ದಾರಿ, ತಮ್ಮ ವಿಚಾರಧಾರೆಗೆ ಒಪ್ಪಿಗೆಯಿಲ್ಲದವರನ್ನು, ತಮ್ಮ ಸೈದ್ಧಾಂತಿಕ ವಿರೋಧಿಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹೆಚ್ಚೆಚ್ಚಾಗಿ ಸಂಪರ್ಕ ಸಾಧಿಸುವುದು. ಅದರಿಂದ ವಾಸ್ತವದಲ್ಲಿ ಇತರರೂ ಒಪ್ಪುವಂತಹ ತಿಳಿವಳಿಕೆಗೆ ಬರುವ ಸಾಧ್ಯತೆಯಿದೆ. ಇದೂ ಸುಲಭಸಾಧ್ಯವಲ್ಲ, ಆದರೆ ನಾವುಗಳು ಸುಲಭವಾಗಿ ಮಾಡಬಹುದಾದ ಒಂದು ಕೆಲಸ ಇದೊಂದೆ.

ಎಲ್ಲಕ್ಕಿಂತ ಹೆಚ್ಚಾಗಿ, ಈ ಸಾಮಾಜಿಕ ಜಾಲತಾಣಗಳಿಂದ ಆಗುತ್ತಿರುವ ಅಪಾಯಗಳನ್ನು ನಾವೆಲ್ಲ ಅರ್ಥ ಮಾಡಿಕೊಳ್ಳಬೇಕಿದೆ. ಮಾನವೀಯತೆಯ, ನ್ಯಾಯದ ಹೋರಾಟದಲ್ಲಿ ನಾವು ಸೋಲುತ್ತಿದ್ದೇವೆ ಎಂಬ ಸತ್ಯವನ್ನು ಅರಿಗಿಸಿಕೊಳ್ಳಬೇಕಿದೆ. ಆಗ, ಇನ್ನಷ್ಟು ದಾರಿಗಳು ಕಾಣಬಹುದು.

ಅಂದಹಾಗೆ, ನೆಟ್‌ಫ್ಲಿಕ್ಸ್‌ನಲ್ಲಿ ಪ್ರಸಾರಗೊಳ್ಳುತ್ತಿರುವ, ಜೆಫ್ ಒರ್‍ಲೋವ್‌ಸ್ಕಿ ನಿರ್ದೇಶಿಸಿದ ಈ ಚಿತ್ರ ’ದಿ ಸೋಷಲ್ ಡೈಲೆಮಾ’ ಅನ್ನು ಎಲ್ಲರೂ ನೋಡಲೇಬೇಕಿದೆ.

  • ರಾಜಶೇಖರ್ ಅಕ್ಕಿ

ಇದನ್ನೂ ಓದಿ: ’ಆಕ್ಟ್-1978’ ಚಿತ್ರ: ಸಾಮಾಜಿಕ ಜಾಗೃತಿ ಮೂಡಿಸುವ ಪೋಸ್ಟರ್‌ಗಳು ವೈರಲ್‌‌!

Donate

ನ್ಯಾಯದ ಜೊತೆಗಿರಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ

ಜನಪರ ಸ್ವತಂತ್ರ ಪತ್ರಿಕೋದ್ಯಮವೇ ನಮ್ಮ ಆಶಯ. ನಿಮ್ಮಗಳ ಬೆಂಬಲವೇ ನಮಗೆ ಬಲ. ನ್ಯಾಯದ ಜೊತೆಗಿರಲು ಬಯಸುವ, ಸತ್ಯಪಥವನ್ನು ತುಳಿಯಲು ಪ್ರೋತ್ಸಾಹಿಸುವವರು ಬೆಂಬಲಿಸಿ. ಈ ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿ ಪಾವತಿಸಬಹುದು.
ಧನ್ಯವಾದಗಳು

Independent journalism can’t be independent without your support, contribute by clicking below.

ಪ್ರತಿವಾರದ ವಿದ್ಯಮಾನಗಳ ವಿಶ್ಲೇಷಣೆಗಳು, ಅಂಕಣಗಳು ಹಾಗೂ ವಿಶೇಷ ಬರಹಗಳನ್ನು ಓದಲು ನ್ಯಾಯಪಥ ಪತ್ರಿಕೆಗೆ ಚಂದಾದಾರರಾಗಿ. ಚಂದಾ ಹಣವನ್ನು ಪಾವತಿಸಲು ಈ ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿ.
+ posts

LEAVE A REPLY

Please enter your comment!
Please enter your name here