ಮಿಸ್ ಇನ್ಫರ್ಮೇಶನ್, ಫೇಕ್ ನ್ಯೂಸ್, ಹೇಟ್ ಸ್ಪೀಚ್ ಇವೆಲ್ಲಾ ಸಾಮಾಜಿಕ ಮಾಧ್ಯಮಗಳ ಜೊತೆಗೆ ಹುಟ್ಟಿದವೇನೂ ಅಲ್ಲ. ಆದರೆ ಫೇಸ್ಬುಕ್, ಟ್ವಿಟ್ಟರ್, ವಾಟ್ಸ್‌ಆಪ್, ಇನ್ಸ್ಟಾಗ್ರಾಮ್ ಇತ್ಯಾದಿ ಸಾಮಾಜಿಕ ಮಾಧ್ಯಮಗಳ ಜೊತೆಗೆ ಇವುಗಳು ಹೆಚ್ಚು ಚರ್ಚೆ ಆಗುತ್ತಿರುವುದಕ್ಕೆ ಕಾರಣ ಇರದೇ ಇಲ್ಲ. ಕೆಲವು ದಶಕಗಳಿಂದ ಫ್ಯಾಕ್ಟ್‌ಗಳನ್ನು ತಿರುಚಿ ಸೃಷ್ಟಿಸುವ ಇಂತಹ ಸುದ್ದಿ-ಸಂಗತಿಗಳನ್ನು ಹರಡುವುದು ಇತ್ತು. ಕೆಲವು ದಿನಪತ್ರಿಕೆ, ಟಿವಿ, ಪುಸ್ತಕಗಳು ಈ ಕೆಲಸವನ್ನು ಮಾಡಿದವಾದರೂ, ರೀಚ್ ದೃಷ್ಟಿಯಿಂದಲಾಗಲೀ, ಹೆಚ್ಚು ಜನರನ್ನು ಸುಲಭವಾಗಿ ಮರುಳು ಮಾಡುವ ದೃಷ್ಟಿಯಿಂದಲಾಗಲೀ ದೊಡ್ಡ ಮಟ್ಟದ ಫಲ ಇನ್ನೂ ಸಿಕ್ಕಿರಲಿಲ್ಲ. ಆದರೆ ಇಂಟರ್ನೆಟ್ ಮತ್ತು ಕೃತಕ ಬುದ್ಧಿಮತ್ತೆ (ಆರ್ಟಿಫಿಶಿಯಲ್ ಇಂಟಲಿಜೆನ್ಸ್ – ಎಐ) ಎರಡನ್ನೂ ಸುಲಭವಾಗಿಸಿದೆಯಲ್ಲದೆ, ಯಾವುದೇ ಸಾಮಾಜಿಕ ಬದ್ಧತೆಯಿಲ್ಲದ ದೈತ್ಯ ಬಂಡವಾಳದಾರ ಮತ್ತು ಸರ್ವಾಧಿಕಾರಿ ಧೋರಣೆಯ ಸರ್ಕಾರಗಳನ್ನು ಅದು ಒಗ್ಗೂಡಿಸಿ, ಮತದಾರನನ್ನು ಮ್ಯಾನಿಪ್ಯುಲೇಟ್ ಮಾಡಬಹುದಾದ ದೈತ್ಯ ಯಂತ್ರವನ್ನು ಸೃಷ್ಟಿಸಿ ಮನುಕುಲ ಹಿಂದೆಂದೂ ಕಂಡಿರದ ಬಿಕ್ಕಟ್ಟನ್ನು ಸೃಷ್ಟಿಸಿದೆ.

ನೆಹರೂ ಬಗೆಗೆ ಸುಳ್ಳು ಸುಳ್ಳು ಸಂಗತಿ ತುಂಬಿ ಪುಸ್ತಕಗಳನ್ನು ಬರೆದು ಐದಾರು ಸಾವಿರ ಪ್ರತಿಗಳನ್ನು ಮಾರಿಕೊಂಡಾಗ ಮತ್ತು ತೀವ್ರ ಬಲಪಂಥೀಯ ರಾಜಕೀಯ ಪಕ್ಷಗಳು ದೊಡ್ಡ ಮಟ್ಟದ ಪತ್ರಿಕೆ, ಟಿವಿ ಚಾನೆಲ್‌ಗಳನ್ನು ಹುಟ್ಟುಹಾಕಿಯೋ ಅಥವಾ ಅವುಗಳನ್ನು ತೆಕ್ಕೆಗೆ ತೆಗೆದುಕೊಂಡು ತಮ್ಮ ಪ್ರೊಪಗಾಂಡಕ್ಕೆ ಬಳಸಿಕೊಂಡಾಗ, ಅದರ ಸೆನ್ಸೇಶನ್ ಜನರಿಗೆ ತಟ್ಟಿತ್ತಾದರೂ, ’ಇಂಡಿಯಾ ಶೈನಿಂಗ್ನಂತಹ ಬಂಡವಾಳ ವರ್ಗವನ್ನಷ್ಟೇ ಪ್ರತಿನಿಧಿಸಿದ್ದ ನಕಲಿ ಕ್ಯಾಂಪೇನ್‌ನನ್ನು ಮತದಾರ ತಿರಸ್ಕರಿಸಿದ್ದ. ಆದರೆ ಫೇಸ್ಬುಕ್, ಯುಟ್ಯೂಬ್, ವಾಟ್ಸ್‌ಆಪ್‌ಗಳ ಜನಪ್ರಿಯತೆ ಶಿಖರಪ್ರಾಯವಾದ ದಿನಗಳಲ್ಲಿ ಅಂತಹ ವಿವೇಕಕ್ಕೆ-ತಿಳಿವಿಗೆ ಅವಕಾಶ ಕ್ಷೀಣಿಸುತ್ತಾ ಹೋಯಿತು. ನಕಲಿ ’ಗುಜರಾತ್ ಮಾಡೆಲ್ ಸುಲಭವಾಗಿ ಬಹುಸಂಖ್ಯಾತ ಭಾರತೀಯರನ್ನು ಮರುಳುಮಾಡಿತು. ನೆಹರು ತಮ್ಮ ಕುಟುಂಬ ಸದಸ್ಯರೊಂದಿಗೆ ಇರುವ ಫೋಟೋಗಳನ್ನು ತಿರುಚಿ ಅವರನ್ನು ಸ್ತ್ರೀಲೋಲ ಎಂದು ಸುಳ್ಳು ಸುಳ್ಳೇ ಬೊಗಳೆಬಿಟ್ಟ ಸಾಮಾಜಿಕ ಮಾಧ್ಯಮದ ಪೋಸ್ಟ್‌ಗಳು ಯಾವ ಪುಸ್ತಕ ಅಥವಾ ಟಿವಿ ಚಾನೆಲ್‌ಗಳು ಮಾಡಲಾರದ ಪರಿಣಾಮ ಉಂಟುಮಾಡಿದವು. ಜನರ ದಾರಿ ತಪ್ಪಿಸಲು ಸಫಲವಾದವು. ಜನರ ಮೂಡ್ ಮತ್ತು ಪ್ರಿಫರೆನ್ಸ್‌ಗಳನ್ನು ಓದಬಹುದಾಗಿದ್ದ ರೊಬೋಟ್‌ಗಳು (ಎಐ) ಜನರಿಗೆ ಎಷ್ಟು ಪ್ರಮಾಣದಲ್ಲಿ, ಯಾವ ಸಮಯದಲ್ಲಿ, ಯಾವ ರೀತಿ ವಿಷ ತುಂಬಬಹುದು ಎಂಬ ಕಲೆಯನ್ನು ಕರಗತ ಮಾಡಿಕೊಂಡವು. ಜನರ ನಡುವೆ ದ್ವೇಷ ಭಾವನೆ ಮೂಡಿಸಿ, ಒಡಕುಗಳನ್ನು ಮೂಡಿಸಿ ಲಾಭ ಮಾಡಿಕೊಂಡು, ಬಿಲಿಯನ್‌ಗಳಿಗೆ ಲೆಕ್ಕವಿಲ್ಲದಷ್ಟು ಸಂಪಾದನೆ ಮಾಡಿದ ಟೆಕ್ ಸಂಸ್ಥೆಗಳು ಇಂದು ಅದನ್ನೇ ರಾಜಕೀಯ ಕ್ಷೇತ್ರಕ್ಕೂ ವಿಸ್ತರಿಸಿವೆ. ಜನರನ್ನು ಕಣ್ಗಾವಲಿನಲ್ಲಿ ಇರಿಸಿ ತನ್ನ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಕಾಯುತ್ತಿದ್ದ, ಮಾನವ ಹಕ್ಕುಗಳ ಬಗ್ಗೆ ಸ್ವಲ್ಪವೂ ಗೌರವ ತೋರದ ಸರ್ವಾಧಿಕಾರಿ ಧೋರಣೆಯ, ರಾಷ್ಟ್ರೀಯವಾದಿ ರಾಜಕೀಯ ನಾಯಕರು ಇವಕ್ಕೆ ಸಂಪನ್ಮೂಲ ಒದಗಿಸಲು ತುದಿಗಾಲಿನಲ್ಲಿ ನಿಂತಿದ್ದಾರೆ.

ಅಮೆರಿಕದಲ್ಲಿ ಟ್ರಂಪ್, ಬ್ರೆಜಿಲ್‌ನಲ್ಲಿ ಬೋಲ್ಸನಾರೋ, ಭಾರತದಲ್ಲಿ ಎರಡು ಬಾರಿ ಆಯ್ಕೆಯಾದ ಬಿಜೆಪಿ ಮುಂದಾಳತ್ವದ ಎನ್‌ಡಿಎ ಸರ್ಕಾರ ಮತ್ತು ಪ್ರಧಾನಿ ಮೋದಿ, ಬ್ರಿಟನ್‌ನ ಬೋರಿಸ್ ಜಾನ್ಸನ್ ಆಯ್ಕೆ ಹೀಗೆ ಎಲ್ಲವೂ ಒಂದರ ಹಿಂದೆ ಘಟಿಸಿಹೋದವು. ಉಗ್ರ ರಾಷ್ಟ್ರೀಯತೆಗೆ ಮತ್ತು ಅದನ್ನು ಪ್ರತಿನಿಧಿಸುವ ಮುಖಂಡರ ರಾಜಕೀಯ ಬೆಳವಣಿಗೆಗೆ ಹಲವು ಹತ್ತು ರಾಜಕೀಯ – ಆರ್ಥಿಕ ಮತ್ತು ಸಾಮಾಜಿಕ ಸಂಗತಿಗಳ ಜೊತೆಗೆ ಈ ಆರ್ಟಿಫಿಶಿಯಲ್ ಇಂಟಲಿಜೆನ್ಸ್ ಅಲ್ಗಾರಿದಮ್‌ಗಳು ನೀಡಿದ ಕೊಡುಗೆಯ ಪಾತ್ರವೂ ನಿಧಾನಕ್ಕೆ ಹೊರಬರಲಾರಂಭಿಸಿತು. ಅಮೆರಿಕದಲ್ಲಿ 2016ರ ಚುನಾವಣೆಯಲ್ಲಿ ಮತದಾರರನ್ನು ಮ್ಯಾನಿಪ್ಯುಲೇಟ್ ಮಾಡಲಾಗಿದೆ ಎಂಬ ಕೇಂಬ್ರಿಜ್ ಅನಲಿಟಿಕಾ ಪ್ರಕರಣದಲ್ಲಿ ಹಲವು ಸಾಮಾಜಿಕ ಮಾಧ್ಯಮಗಳನ್ನು ನಡೆಸುತ್ತಿರುವ ದೈತ್ಯ ಸಂಸ್ಥೆಗಳನ್ನು ವಿಚಾರಣೆಗೆ ಒಳಪಡಿಸಲಾಯಿತು. ಇದು ಯಾವುದಕ್ಕೂ ಜಗ್ಗದೆ, ಕೆಲವೊಮ್ಮೆ ಮಾತ್ರ ಕೆಲವಷ್ಟೇ ಬದಲಾವಣೆಗಳಿಗೆ ಅವಕಾಶ ಮಾಡಿಕೊಟ್ಟು ತಮ್ಮ ನಾಗಾಲೋಟ ಮುಂದುವರೆಸಿದ ಇಂತಹ ಸಂಸ್ಥೆಗಳ ಕಾರ್ಯವೈಖರಿಯನ್ನು ಪಶ್ಚಿಮ ದೇಶಗಳ ಕೆಲವಾದರೂ ಮಾಧ್ಯಮಗಳು ಗಂಭೀರವಾಗಿ ಪರಿಗಣಿಸಿವೆ. ಅದರಲ್ಲಿಯೂ ಫೇಸ್ಬುಕ್‌ನಂತಹ ಸಂಸ್ಥೆಯ ಕಾರ್ಯ ಚಟುವಟಿಕೆಗಳನ್ನು ಕಟಕಟೆಯಲ್ಲಿ ನಿಲ್ಲಿಸಿ, ಜನರಿಗೆ ತಿಳಿವು ಮೂಡಿಸಲು ಪ್ರಯತ್ನಿಸಿ ಆ ಸಂಸ್ಥೆಗಳ ಮೇಲೆ ಒತ್ತಡ ತಂದಿವೆ. ಅವುಗಳ ಕಾರ್ಯಶೈಲಿಯನ್ನು ಬದಲಿಸಿಕೊಳ್ಳುವಂತೆ ಮಾಡಲು ಸ್ವಲ್ಪವಾದರೂ ಸಾಧ್ಯವಾಗಿದೆ.

ಕೆಲವೇ ದಿನಗಳ ಹಿಂದೆ ದೆಹಲಿ ಸರ್ಕಾರದ ’ದೆಹಲಿ ಲೆಜಿಸ್ಲೆಟಿವ್ ಅಸೆಂಬ್ಲಿಸ್ ಪೀಸ್ ಅಂಡ್ ಹಾರ್ಮೊನಿ’ ಎಂಬ ಸಂಸ್ಥೆ ಫೇಸ್ಬುಕ್‌ನ ಮಾಜಿ ಅಧಿಕಾರಿಯೊಬ್ಬರಾದ ಮಾರ್ಕ್ ಎಸ್ ಲೂಕಿ ಅವರನ್ನು ಸಂದರ್ಶಿಸಿ, ಫೇಸ್ಬುಕ್ ಹೇಗೆ ದ್ವೇಷಪೂರಿತ ಭಾಷಣಗಳನ್ನು ನಿಯಂತ್ರಿಸುವುದರಲ್ಲಿ ಸೋತಿದೆ ಮತ್ತು ಬಲಪಂಥೀಯ ಶಕ್ತಿಗಳನ್ನು ಪೋಷಿಸಿದೆ ಎಂಬ ಅಂಶವನ್ನು ಹೊರಹಾಕಿತು. ಇದು ಸಾರ್ವಜನಿಕವಾಗಿ ಅಂತಹ ಆಕ್ರೋಶವನ್ನೇನು ಹುಟ್ಟಿಸಿಲ್ಲ. ಕೆಲವು ಅಂತರ್ಜಾಲ ಮಾಧ್ಯಮಗಳು ಇದರ ಬಗ್ಗೆ ಸುದ್ದಿ ಮಾಡಿದ್ದು ಬಿಟ್ಟರೆ ದೊಡ್ಡ ಮಟ್ಟದ ಸಾರ್ವಜನಿಕ ಚರ್ಚೆಯನ್ನೂ ಅದು ಹುಟ್ಟುಹಾಕಲಿಲ್ಲ.

ಆದರೆ ಪಶ್ಚಿಮ ದೇಶಗಳ ಕೆಲವು ಮಾಧ್ಯಮಗಳು ಫೇಸ್ಬುಕ್ ಹಾವಳಿಯನ್ನು ಬಹಳ ಗಂಭೀರವಾಗಿ ಪರಿಗಣಿಸಿವೆ. ಆಗಸ್ಟ್‌ನಲ್ಲಿ ವಾಲ್ ಸ್ಟ್ರೀಟ್ ಜರ್ನಲ್ ಮಾಡಿದ ಒಂದು ವರದಿ ಭಾರತದ ಮಾಧ್ಯಮಗಳಲ್ಲಿ ಅತಿಹೆಚ್ಚು ಚರ್ಚೆಗೆ ಗ್ರಾಸವಾಗಿತ್ತು. ತೆಲಂಗಾಣದ ಟಿ.ರಾಜಾಸಿಂಗ್ ಎನ್ನುವ ಬಿಜೆಪಿ ಶಾಸಕ ಮಾಡಿದ ದ್ವೇಷಪೂರಿತ ಭಾಷಣವನ್ನು ಫೇಸ್ಬುಕ್‌ನಿಂದ ತೆಗೆದು ಹಾಕುವ ಚರ್ಚೆ ಬಂದಾಗ, ಫೇಸ್ಬುಕ್‌ನಲ್ಲಿ ಸಾರ್ವಜನಿಕ ನೀತಿಸಂಹಿತೆ ವಿಭಾಗದ ಮುಖ್ಯಸ್ಥೆಯಾಗಿದ್ದ ಆಂಖಿ ದಾಸ್ ಎಂಬುವವರು ಮಧ್ಯಪ್ರವೇಶಿಸಿ ಅದಕ್ಕೆ ತಡೆಒಡ್ಡಿದ ಬಗ್ಗೆ, ದಾಸ್ ಅವರಿಗೆ ಸದ್ಯದ ಕೇಂದ್ರ ಸರ್ಕಾರದ ಹಲವು ಪ್ರಮುಖ ಮುಖಂಡರ ಜೊತೆಗೆ ಇರುವ ನಿಕಟ ಸಂಪರ್ಕದ ಬಗ್ಗೆ, ಅವರ ಬಲಪಂಥೀಯ ನಿಲುವಿನ ಬಗ್ಗೆ ಲೇಖನ ವಿಶದಪಡಿಸಿತ್ತಲ್ಲದೇ, ದೆಹಲಿ ಬಿಜೆಪಿ ಮುಖಂಡ ಕಪಿಲ್ ಮಿಶ್ರಾ, ಕರ್ನಾಟಕದ ಸಂಸದ ಅನಂತ್ ಕುಮಾರ ಹೆಗಡೆ ಇವರೆಲ್ಲರ ದ್ವೇಷಪೂರಿತ ಭಾಷಣ ಫೇಸ್ಬುಕ್‌ನಲ್ಲಿ ಪ್ರಚಾರ ಪಡೆಯುತ್ತಿದ್ದರೂ, ಇವರ ಪೇಜ್‌ಗಳನ್ನಾಗಲೀ, ಅಕೌಂಟ್‌ಗಳನ್ನಾಗಲೀ ನಿಯಂತ್ರಿಸದ, ನಿರ್ಬಂಧಿಸದ ನಡೆಯನ್ನು ಆ ವರದಿ ಪ್ರಶ್ನೆ ಮಾಡಿತ್ತು ಮತ್ತು ಫೇಸ್ಬುಕ್‌ನ ಪಕ್ಷಪಾತಿತನವನ್ನು ಬಯಲು ಮಾಡಿತ್ತು. ಈ ವಿವಾದದ ನಂತರ ಇತ್ತೀಚೆಗಷ್ಟೇ ಅಕ್ಟೋಬರ್‌ನಲ್ಲಿ ಆಂಖಿ ದಾಸ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.


ಇದರ ಹಿನ್ನೆಲೆಯಲ್ಲಿ ಈಗ ದೆಹಲಿ ಸರ್ಕಾರದ ಸಂಸ್ಥೆ ನಡೆಸಿದ ಸಂದರ್ಶನದಲ್ಲಿ ಮಾರ್ಕ್ ಲೂಕಿ ಅವರು ಫೇಸ್ಬುಕ್ ಸರಿಯಾಗಿ ನಿಯಂತ್ರಣ ಮಾಡಿದ್ದರೆ ದೆಹಲಿ ಗಲಭೆಗಳನ್ನು (ಸಿಎಎ-ಎನ್‌ಆರ್‌ಸಿ ವಿರೋಧಿಗಳ ಮೇಲೆ ನಡೆದ), ರೋಹಿಂಗ್ಯ ನರಮೇಧವನ್ನು, ಶ್ರೀಲಂಕಾದ ಕೋಮುಗಲಭೆಗಳನ್ನು ತಡೆಯಬಹುದಿತ್ತು ಎಂದು ಹೇಳಿರುವುದರ ಗಂಭೀರತೆಯ ಸುಳಿವು ಸಿಗುತ್ತದೆ.

ಇದೇ ಅಕ್ಟೋಬರ್‌ನಲ್ಲಿ ’ನ್ಯೂಯಾರ್ಕರ್ ಪತ್ರಿಕೆ ಫೇಸ್ಬುಕ್ ಸಂಸ್ಥೆ ಏಕೆ ತನ್ನ ವೇದಿಕೆಯಲ್ಲಿರವ ಹೇಟ್ ಕಂಟೆಂಟ್‌ಅನ್ನು ನಿಯಂತ್ರಿಸಲು ಪರಿಣಾಮಕಾರಿಯಾಗಿ ಕೆಲಸ ಮಾಡುವುದಿಲ್ಲ ಎಂಬುದರ ಬಗ್ಗೆ ವಿಸ್ತೃತ ವರದಿಯನ್ನು (ಎಕ್ಸ್ಪ್ಲಿಸಿಟ್ ಕಂಟೆಂಟ್ – ಫೇಸ್ಬುಕ್ ಇಸ್ ಫುಲ್ ಆಫ್ ಹೇಟ್ ಸ್ಪೀಚ್ ಅಂಡ್ ಫೇಕ್ ನ್ಯೂಸ್. ಡಸ್ ಇಟ್ ವಾಂಟ್ ಟು ಫಿಕ್ಸ್ ದ ಪ್ರಾಬ್ಲಮ್) ಪ್ರಕಟಿಸಿತ್ತು. ಫೇಸ್ಬುಕ್‌ನಲ್ಲಿ ಸದ್ಯಕ್ಕೆ ಸುಮಾರು ೧೫ ಸಾವಿರಕ್ಕೂ ಹೆಚ್ಚು ಜನ ಕಂಟೆಂಟ್ ಮಾಡರೇಟರ್‌ಗಳು ಕೆಲಸ ಮಾಡುತ್ತಿದ್ದಾರೆ. ಹಲವು ಬಾರಿ ಅದು ಕಮ್ಯುನಿಟಿ ಸ್ಟಾಂಡರ್ಡ್‌ಗಳನ್ನು ಬದಲಾಯಿಸುತ್ತಾ ಬಂದಿದೆ. ಯಾವುದಾದರು ಪೋಸ್ಟ್‌ನಲ್ಲಿ ದ್ವೇಷಪೂರಿತ ಅಂಶ ಅಥವಾ ನಕಲಿ ಅಂಶ ಮಾಡರೇಟರ್‌ಗಳ ಗಮನಕ್ಕೆ ಬಂದರೆ, ಸ್ಟಾಂಡರ್ಡ್‌ಗಳಿಗೆ ಅನುಸಾರವಾಗಿ ಅದನ್ನು ನಿಯಂತ್ರಿಸುವುದು ಅವರ ಕೆಲಸ. ಆದರೆ ಈ ಮಾಡರೇಟರ್‌ಗಳಿಗೆ ತರಬೇತಿ ಕೊಡುವುದರಿಂದ ಹಿಡಿದು, ಈ ಮಾಡರೇಟರ್‌ಗಳು ಕಂಡುಹಿಡಿದು ವರದಿ ಮಾಡುವ ಹಲವು ದ್ವೇಷಪೂರಿತ ಪೋಸ್ಟ್‌ಗಳನ್ನು ಉಳಿಸಿಕೊಳ್ಳುವ ಅವರ ಮೇಲಧಿಕಾರಿಗಳ (ಕ್ವಾಲಿಟಿ ಕಂಟ್ರೋಲರ್‌ಗಳ) ಚಾಲಾಕಿತನ, ಇನ್ನೂ ಕೆಲವೊಮ್ಮೆ ಅದಕ್ಕಾಗಿ ತನ್ನ ಕಮ್ಯುನಿಟಿ ಸ್ಟಾಂಡರ್ಡ್‌ಗಳನ್ನೇ ಬದಲಿಸಿರುವುದು – ಹೀಗೆ ಹಲವು ಉದಾಹರಣೆಗಳನ್ನು ವರದಿ ದಾಖಲಿಸಿದೆ.

ಒಂದು ಉದಾಹರಣೆ ನೀಡುವುದಾದರೆ, ಮಾಡರೇಟರ್‌ಗಳಿಗೆ ತರಬೇತಿ ನೀಡುವ ಒಂದು ಸಂದರ್ಭದಲ್ಲಿ, ತಾಯಿಯೊಬ್ಬಳು ತನ್ನ ಮಗಳನ್ನು ಬಾತ್‌ಟಬ್‌ನಲ್ಲಿ ಮುಳುಗಿಸುತ್ತಿರುವ ಚಿತ್ರ ತೋರಿಸಿ, ಅಡಿ ಶೀರ್ಷಿಕೆಯಲ್ಲಿ “ನಿಮ್ಮ ಮಗಳ ಮೊದಲ ಕ್ರಶ್ (ಪ್ರೀತಿಯ ಆಕರ್ಷಣೆ) ನೀಗ್ರೋ ಆಗಿದ್ದಲ್ಲಿ ಎಂಬ ಪೋಸ್ಟ್‌ಅನ್ನು ಏನು ಮಾಡಬೇಕು ಎಂಬ ಪ್ರಶ್ನೆ ಎದ್ದಾಗ, ನಿಯಂತ್ರಿಸುವ ಅಗತ್ಯ ಇಲ್ಲ, ಏಕೆಂದರೆ ಇದರಲ್ಲಿ ನೀಗ್ರೋ ಸಮುದಾಯದವರನ್ನು ಅವಮಾನಿಸಲಾಗುತ್ತಿಲ್ಲ ಎಂದು ತರಬೇತುದಾರ ಹೇಳಿದ್ದನ್ನು ಚಾನೆಲ್ ೪ ಪ್ರಸಾರ ಮಾಡಿದ ಮೇಲೆ, ಫೇಸ್ಬುಕ್ ಅದು ತರಬೇತುದಾರನ ತಪ್ಪು ಎಂದು ಒಪ್ಪಿಕೊಂಡಿತ್ತಂತೆ. ಹೀಗೆ ಸಾರ್ವಜನಿಕವಾಗಿ ಸಂಸ್ಥೆಯ ಹೆಸರು ಕೆಡುವಾಗ ಮಾತ್ರ ಫೇಸ್ಬುಕ್ ಸಂಸ್ಥೆ ಸ್ವಲ್ಪವಾದರೂ ವಿಚಲಿತಗೊಳ್ಳುತ್ತಿದ್ದುದು.

ಮಾಧ್ಯಮಗಳು ಒಂದು ಕಡೆ ಹೀಗೆ ಒತ್ತಡ ಹಾಕುತ್ತಾ ಹೋದಂತೆ, ಫೇಸ್ಬುಕ್‌ನ ಕೆಲವು ನೌಕರರೇ ಸಂಸ್ಥೆಯ ನೀತಿಗಳ ಬಗ್ಗೆ ತಕರಾರು ತೆಗೆದ ಹಲವು ಉದಾಹರಣೆಗಳನ್ನು ನ್ಯೂಯಾರ್ಕರ್ ವರದಿ ಮಾಡಿದೆ. ಬ್ರೆಜಿಲ್ ಅಧ್ಯಕ್ಷ ಬೋಲ್ಸನಾರೋ ತನ್ನ ದೇಶದ ಮೂಲನಿವಾಸಿಗಳ ಬಗ್ಗೆ ಹೇಳುತ್ತ ’ಇಂಡಿಯನ್ಸ್ ಈಗ ನಮ್ಮಂತೆ ಮನುಷ್ಯರಾಗುತ್ತಿದ್ದಾರೆ (ದ ಇಂಡಿಯನ್ ಹ್ಯಾಸ್ ಚೇಂಜ್ಡ್. ಹಿ ಇಸ್ ಎವಾಲ್ವಿಂಗ್ ಅಂಡ್ ಬಿಕಮಿಂಗ್ ಮೋರ್ ಅಂಡ್ ಮೋರ್ ಎ ಹ್ಯೂಮನ್ ಬಿಯಿಂಗ್ ಲೈಕ್ ಅಸ್)’ ಎಂಬ ಭಾಷಣದ ತುಣುಕಿನ ಬಗ್ಗೆ ಸಂಸ್ಥೆಯ ಸೈಬರ್ ಸೆಕ್ಯುರಿಟಿ ಪರಿಣಿತ ಡೇವಿಡ್ ಥೀಲ್ ತಗಾದೆ ತೆಗೆದು ಗಮನಕ್ಕೆ ತಂದಾಗ, ಅದು ಮೂಲನಿವಾಸಿಗಳು ಮುಖ್ಯವಾಹಿನಿಯ ಜೊತೆಗೆ ಸೇರಿಕೊಳ್ಳುತ್ತಿರುವ ಬಗ್ಗೆ ಬ್ರೆಜಿಲ್ ಅಧ್ಯಕ್ಷ ಆಡಿರುವ ಮಾತು ಎಂಬ ಸಮರ್ಥನೆ ಬರುತ್ತದೆ. ’ಬಿಕಮಿಂಗ್ ಎಂಬ ಪದಕ್ಕೆ ಶಬ್ದಕೋಶದಲ್ಲಿರುವ ಅರ್ಥ ಎಳೆದು ತಂದು ದೊಡ್ಡ ವಾಗ್ವಾದ ನಡೆದು, ಕೊನೆಗೆ ಡೇವಿಡ್ ರಾಜೀನಾಮೆ ನೀಡುವ ಹಂತಕ್ಕೆ ಬಂದ ಮೇಲೆ ಫೇಸ್ಬುಕ್ ಆ ಪೋಸ್ಟ್‌ಅನ್ನು ಡಿಲೀಟ್ ಮಾಡುತ್ತದೆ. ಆದರೂ ಅವರು ಸಂಸ್ಥೆ ತೊರೆದು ಹೊರನಡೆಯುತ್ತಾರೆ.

ಎಷ್ಟೋ ಬಾರಿ ಪದಗಳ ಚಮತ್ಕಾರದಲ್ಲಿ ಅಡಗಿರುವ ಸಮಸ್ಯೆ ಮೇಲ್ನೋಟಕ್ಕೆ ಕಾಣದೆ ಹೋದರೂ, ಅದು ಸಾಂಸ್ಕೃತಿಕವಾಗಿ ಮೂಡಿಸಬಹುದಾದ ದ್ವೇಷವನ್ನು ನಿಯಂತ್ರಿಸುವ ಪ್ರಶ್ನೆಯನ್ನು ಕೂಡ ಆ ವರದಿ ಎತ್ತುತ್ತದೆ. ಇಲ್ಲಿಯದೇ ಒಂದು ಉದಾಹರಣೆ ತೆಗೆದುಕೊಳ್ಳಬಹುದಾದರೆ ಕೆಲವು ತಿಂಗಳುಗಳ ಹಿಂದೆ ಸಿಎಎ-ಎನ್‌ಆರ್‌ಸಿ ವಿರೋಧಿ ಪ್ರತಿಭಟನೆಗಳು ನಡೆಯುತ್ತಿರುವಾಗ ಬೆಂಗಳೂರು ದಕ್ಷಿಣ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ ’ಪಂಕ್ಚರ್ ಹಾಕುವ ಮತ್ತು ಎದೆ ಸೀಳಿದರೆ ಒಂದಕ್ಷರ ಬರದವರೆಲ್ಲ ಬಂದು ಪ್ರತಿಭಟಿಸುತ್ತಿದ್ದಾರೆ’ ಎಂಬ ಹೇಳಿಕೆ ನೀಡುತ್ತಾರೆ. ಪದಗಳನ್ನಷ್ಟೇ ಅವಲೋಕಿಸಿ ಹೊರಟರೆ ಆ ಹೇಳಿಕೆಯ ಕೋಮು ದ್ವೇಷ ಫೇಸ್ಬುಕ್ ಅಲ್ಗಾರದಮ್‌ಗೆ ಅರ್ಥವಾಗದೆ ಹೋಗಬಹುದು, ಅಲ್ಗಾರಿದಮ್‌ಗಳಿಗೆ ಇರಲಿ ಅಲ್ಲಿ ಕುಳಿತ ಕ್ವಾಲಿಟಿ ಕಂಟ್ರೋಲರ್‌ಗಳಿಗೆ ಅರ್ಥ ಮಾಡಿಸುವವರು ಯಾರು?

ಇಂತಹ ಬೆಟ್ಟದಂತಹ ಸಮಸ್ಯೆಯನ್ನು ಹೊದ್ದ ಸಾಮಾಜಿಕ ಮಾಧ್ಯಮ ತಲೆನೋವಾಗಿ ಪರಿಣಮಿಸಿರುವಾಗ, ಪಶ್ಚಿಮ ದೇಶಗಳಲ್ಲಿ ನಾಗರಿಕ ಸಮಾಜ ಒಂದು ಮಟ್ಟಕ್ಕಾದರೂ ಎಚ್ಚೆತ್ತಿದೆ. ಅಲ್ಲಿ ನಡೆದಿರುವ ಸಾಮಾಜಿಕ ಜಾಗೃತಿಗೆ ಸ್ವಲ್ಪವಾದರೂ ಬೆದರಿರುವ ಫೇಸ್ಬುಕ್ ಸುಮಾರು 300 ವೈಟ್ ಸುಪ್ರಿಮೆಸ್ಟ್, ರೇಸಿಸ್ಟ್ ಗುಂಪುಗಳನ್ನು ತೆಗೆದು ಹಾಕಿದೆಯಂತೆ. ಅದರಲ್ಲಿ ಪ್ರಮುಖವಾದದ್ದು ಡೆಮಾಕ್ರಟ್ ಪಕ್ಷದ ಮುಖಂಡರ ಬಗ್ಗೆ ಸುಳ್ಳು ಸುಳ್ಳೇ ಕಪೋಲಕಲ್ಪಿತ ಸುದ್ದಿಗಳನ್ನು ಸೃಷ್ಟಿಸಿ ಹರಡುತ್ತಿದ್ದ ಕ್ಯುಏನನ್ (QAnon) ಎಂಬ ಗುಂಪನ್ನು ಫೇಸ್ಬುಕ್ ನಿಷೇಧಿಸಿದೆ. ಇಂತಹ ಬದಲಾವಣೆಗೆ ಸಾಕ್ಷಿಯಾಗಿ ಅಲ್ಲಿ ಅಧ್ಯಕ್ಷೀಯ ಚುನಾವಣೆಯಲ್ಲಿ ಮರು ಆಯ್ಕೆಯಾಗಲು ಟ್ರಂಪ್ ಸೋತಿದ್ದಾರೆ. ಬ್ರಿಟನ್‌ನಲ್ಲಿ ಬ್ರಿಟನ್‌ಫಸ್ಟ್ ಎಂಬ ಬಿಳಿಯ ಜನಾಂಗೀಯವಾದಿ ಗುಂಪಿನ ಪೇಜನ್ನು ಕೂಡ ಹಲವು ಪ್ರತಿರೋಧಗಳ ನಂತರ ಪೇಸ್ಬುಕ್ ನಿಷೇಧಿಸಿದೆ.

ಆದರೆ ಭಾರತದಲ್ಲಿ ಈ ರೀತಿಯ ಒತ್ತಡವನ್ನು ಫೇಸ್ಬುಕ್ ಸಂಸ್ಥೆಯ ಮೇಲೆ ಮೂಡಿಸಲು ಇಲ್ಲಿಯವರೆಗೂ ಸಾಧ್ಯವಾಗಿಲ್ಲ. ಪೋಸ್ಟ್‌ಕಾರ್ಡ್‌ನಂತಹ ಪೇಜ್‌ಗಳು ಎಗ್ಗಿಲ್ಲದೆ ಮುಂದುವರೆದಿವೆ. ಬಿಹಾರದ ಚುನಾವಣೆಯ ಸಮಯದಲ್ಲಿ ಸಿಪಿಐ-ಎಂಎಲ್ ಅಭ್ಯರ್ಥಿಯ ಫೋಟೋ ಒಂದನ್ನು ಹಂಚಿಕೊಂಡು, ಆತ ಬಿಹಾರದಲ್ಲಿ ಬಾಂಬ್ ಸ್ಫೋಟ ನಡೆಸಿದ್ದವನು ಈಗ ಕಾಂಗ್ರೆಸ್ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸುತ್ತಿದ್ದಾರೆ ಎಂಬ ಸುಳ್ಳು ಮಾಹಿತಿಯೊಂದಿಗೆ ವ್ಯಾಪಕವಾಗಿ ಹಂಚಿಕೊಂಡ ಪೇಜ್‌ಗಳು ರಾರಾಜಿಸಿದವು. ಬಿಹಾರದ ಚುನಾವಣೆಯ ಫಲಿತಾಂಶದಲ್ಲಿ ಇಂತಹ ಅಪಪ್ರಚಾರಗಳು ಕೆಲಸ ಮಾಡಿರಬಹುದಲ್ಲವೇ?

ಇಂತಹ ಪೇಜ್‌ಗಳು ಯಾವುದೇ ಅಡೆತಡೆ ಇಲ್ಲದೆ ಒಂದು ಕಡೆ ಮುಂದುವರೆದಿದ್ದರೆ ಮತ್ತೊಂದು ಕಡೆ ಪ್ರಗತಿಪರ-ಜನಪರ ಪತ್ರಿಕೋದ್ಯಮ ನಡೆಸುತ್ತಿರುವ ನಾನುಗೌರಿ, ವಾರ್ತಾಭಾರತಿ, ಮಾಲ್ಗುಡಿ ಎಕ್ಸ್‌ಪ್ರೆಸ್ ಮಾಧ್ಯಮ ಸಂಸ್ಥೆಗಳಂತಹ ಪೇಜ್‌ಗಳನ್ನ ಫೇಸ್ಬುಕ್ ಆಗಾಗ ಬ್ಲಾಕ್ ಮಾಡಿದ್ದಿದೆ. ಆದರೆ ನೆಹರು – ಅಂಬೇಡ್ಕರ್‌ರಂತಹ ಧೀಮಂತ ರಾಜಕೀಯ ನಾಯಕರ ಬಗ್ಗೆ ಸುಳ್ಳು ಬರೆದು ಜನರ ನಡುವೆ ಒಡಕು ಮೂಡಿಸುವ ಪೋಸ್ಟ್‌ಗಳಿಗೂ ಅಡ್ಡಿಯೇನಿಲ್ಲ. ಹೀಗೆ ಯಾವುದೇ ಸಾರ್ವಜನಿಕ ನೀತಿಯ ಅಡೆತಡೆ ಇಲ್ಲದೆ ಫೇಸ್ಬುಕ್‌ನಲ್ಲಿರುವ ಫೇಕ್ ಕಂಟೆಂಟ್ ನಿಯಂತ್ರಣಕ್ಕೆ ಆ ಸಂಸ್ಥೆ ಮಾಡುತ್ತಿರುವ ಕೆಲಸದ ಬಗ್ಗೆ ಪಾರದರ್ಶಕ ಮಾಹಿತಿ ಕೂಡ ಇಲ್ಲ. ಆಳುತ್ತಿರುವ ಸರ್ಕಾರಕ್ಕೆ ಅದು ಬೇಕಾಗಿಯೂ ಇಲ್ಲ. ಇಂತಹ ಸಂದರ್ಭದಲ್ಲಿ ಸಾರ್ವಜನಿಕರು, ಮಾಧ್ಯಮಗಳು ಎಚ್ಚರಿಕೆಯಿಂದ ಕೆಲಸ ಮಾಡದೆ ಅನ್ಯ ಮಾರ್ಗವಿಲ್ಲ.

ಕೊನೆಯ ಮಾತು: ಇದು ಕೇವಲ ಒಂದು ಸಾಮಾಜಿಕ ಮಾಧ್ಯಮದ ಸಮಸ್ಯೆಯಾಗಿ ಮಾತ್ರ ಉಳಿದಿಲ್ಲ. ಇಡೀ ಇಂಟರ್‌ನೆಟ್ ವಿನ್ಯಾಸದ ಪ್ರಶ್ನೆಯಾಗಿ ತಲೆದೋರಿದೆ. ಜಗತ್ತಿಗೆ ವಿಷವನ್ನು ಉಣಬಡಿಸುತ್ತಿರುವ, ದ್ವೇಷವನ್ನು ಹರಡುತ್ತಿರುವ ಈ ಇಡೀ ಡಿಸೈನ್ ಬಗ್ಗೆ ಇಂದು ತಲೆಕೆಡಿಸಿಕೊಳ್ಳಬೇಕಿದೆ. ಹಾರ್ವರ್ಡ್ ವಿಶ್ವವಿದ್ಯಾಲಯದ, ’ದ ಏಜ್ ಆಫ್ ಸರ್ವೆಲೆನ್ಸ್ ಕ್ಯಾಪಿಟಲಿಸಂ’ ಲೇಖಕಿ ಶೋಶನಾ ಜುಬಾಫ್ ಅವರು ಹೇಳುವಂತೆ, ಸ್ಲೇವ್ ಮಾರಾಟ, ಆರ್ಗನ್ಸ್ ಮಾರಾಟಕ್ಕೆ ನಿಷೇಧ ಹೇರಿದಂತೆ, ಈ ಸಾಮಾಜಿಕ ಮಾಧ್ಯಮ ಸಂಸ್ಥೆಗಳನ್ನು ನಡೆಸುತ್ತಿರುವ ಈ ದೈತ್ಯ ಇಂಟರ್ನೆಟ್ ಸಂಸ್ಥೆಗಳ ಮೇಲೂ ನಿಷೇಧ ಹೇರಬೇಕು ಎಂಬ ಮಾತುಗಳು ಮೊದಲು ಕೇಳಿದಾಗ ಸಾಧ್ಯವೇ ಎನಿಸಿದರೂ ಇದರ ಬಗ್ಗೆ ಹೋರಾಟಗಾರರು, ಸರ್ಕಾರಗಳು ಗಂಭೀರವಾಗಿ ಚಿಂತಿಸಬೇಕಿದೆ.

ಸಂಬಂಧಿಸಿದ ವಿಡಿಯೋ ನೋಡಿ..

ಗುರುಪ್ರಸಾದ್ ಡಿ ಎನ್

ಕಾರ್ಯನಿರ್ವಾಹಕ ಸಂಪಾದಕ

Donate

ನ್ಯಾಯದ ಜೊತೆಗಿರಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ

ಜನಪರ ಸ್ವತಂತ್ರ ಪತ್ರಿಕೋದ್ಯಮವೇ ನಮ್ಮ ಆಶಯ. ನಿಮ್ಮಗಳ ಬೆಂಬಲವೇ ನಮಗೆ ಬಲ. ನ್ಯಾಯದ ಜೊತೆಗಿರಲು ಬಯಸುವ, ಸತ್ಯಪಥವನ್ನು ತುಳಿಯಲು ಪ್ರೋತ್ಸಾಹಿಸುವವರು ಬೆಂಬಲಿಸಿ. ಈ ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿ ಪಾವತಿಸಬಹುದು.
ಧನ್ಯವಾದಗಳು

Independent journalism can’t be independent without your support, contribute by clicking below.

ಪ್ರತಿವಾರದ ವಿದ್ಯಮಾನಗಳ ವಿಶ್ಲೇಷಣೆಗಳು, ಅಂಕಣಗಳು ಹಾಗೂ ವಿಶೇಷ ಬರಹಗಳನ್ನು ಓದಲು ನ್ಯಾಯಪಥ ಪತ್ರಿಕೆಗೆ ಚಂದಾದಾರರಾಗಿ. ಚಂದಾ ಹಣವನ್ನು ಪಾವತಿಸಲು ಈ ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿ.
+ posts

LEAVE A REPLY

Please enter your comment!
Please enter your name here