ಉತ್ತರ ಪ್ರದೇಶದ ಬಲರಾಂಪುರದಲ್ಲಿ ನಡೆದಿದ್ದ 35 ವರ್ಷದ ಪತ್ರಕರ್ತ ಮತ್ತು ಆತನ ಸ್ನೇಹಿತನ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರನ್ನು ಬಂಧಿಸಲಾಗಿದೆ ಎಂದು ಬಲರಾಂಪುರ ಪೊಲೀಸರು ತಿಳಿಸಿದ್ದಾರೆ.
ಪತ್ರಕರ್ತ ರಾಕೇಶ್ ಸಿಂಗ್ ಮತ್ತು ಅವರ ಸ್ನೇಹಿತ ಪಿಂಟು ಸಾಹು ಅವರನ್ನು ಬಹದ್ದೂರ್‌ಪುರ ಕ್ರಾಸಿಂಗ್ ಬಳಿ ಕೊಲೆ ಮಾಡಲಾಗಿತ್ತು. ಆರೋಪಿಗಳಾದ ಲಲಿತ್ ಮಿಶ್ರಾ, ಕೇಶವಾನಂದ್ ಮಿಶ್ರಾ ಅಲಿಯಾಸ್ ರಿಂಕು ಮತ್ತು ಅಕ್ರಮ್ ಅಲಿ ಅವರನ್ನು ಬಂಧಿಸಲಾಗಿದೆ. ಈ ಮೂವರು ತಮ್ಮ ಅಪರಾಧವನ್ನು ಒಪ್ಪಿಕೊಂಡಿದ್ದಾರೆ ಎಂದು ಬಲರಾಂಪುರದ ಪೊಲೀಸ್ ವರಿಷ್ಠಾಧಿಕಾರಿ ದೇವರಂಜನ್ ವರ್ಮಾ ತಿಳಿಸಿದ್ದಾರೆ.
ಆರೋಪಿ ಕೇಶವಾನಂದ್ ಮಿಶ್ರಾ ಅವರ ತಾಯಿ ಹಳ್ಳಿಯ ಮುಖ್ಯಸ್ಥರಾಗಿದ್ದು, ಹಳ್ಳಿಯ ಹಣವನ್ನು ಅಕ್ರಮವಾಗಿ ಬಳಸುತ್ತಿರುವುದನ್ನು ಪತ್ರಕರ್ತ ರಾಕೇಶ್ ಸಿಂಗ್ ಬಹಿರಂಗಪಡಿಸಿದ್ದಾರೆ ಎಂದು ದೇವರಂಜನ್ ವರ್ಮಾ ಹೇಳಿದ್ದಾರೆ.
ಈ ಘಟನೆಯಿಂದ ದ್ವೇಷ ಸಾಧಿಸುತ್ತಿದ್ದ ಆರೋಪಿಗಳು, ಮಾತುಕತೆಯ ನೆಪದಲ್ಲಿ ಪತ್ರಕರ್ತರ ಮನೆಗೆ ಹೋಗಿದ್ದಾರೆ. ನಂತರ ಆರೋಪಿಗಳು ರಾಕೇಶ್ ಸಿಂಗ್ ಮತ್ತು ಅವರ ಸ್ನೇಹಿತ ಪಿಂಟು ಸಾಹುರನ್ನು ಮದ್ಯ ಸೇವಿಸುವಂತೆ ಮಾಡಿ, ತದನಂತರ ಹತ್ಯೆ ಮಾಡಿದ್ದಾರೆ ಎಂದು ಎಸ್‌ಪಿ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ಕೃಷಿ ಕಾಯ್ದೆ ರದ್ದುಗೊಳಿಸದಿದ್ದರೆ ಎನ್‌ಡಿಎ ತೊರೆಯುತ್ತೇವೆ: ಅಮಿತ್ ಶಾಗೆ ಪತ್ರ ಬರೆದ ಬಿಜೆಪಿಯ ಮತ್ತೊಂದು…
ಹತ್ಯೆ ಮಾಡಿದ ನಂತರ ಮನೆಯನ್ನು ಸುಟ್ಟುಹಾಕಲು ಆಲ್ಕೋಹಾಲ್ ಆಧಾರಿತ ಸ್ಯಾನಿಟೈಸರ್ ಅನ್ನು ಬಳಸಲಾಗಿದ್ದು, ಇದರಿಂದಾಗಿ ಕೊಲೆ ಆಕಸ್ಮಿಕ ಅಪಘಾತದಂತೆ ಕಾಣುತ್ತದೆ ಎಂದು ಆರೋಪಿಗಳು ಯೋಜನೆ ಹಾಕಿಕೊಂಡಿದ್ದು.
“ರಾಸಾಯನಿಕ ಬಳಸಿ ಮನೆ ಸುಡಲು, ಲಲಿತ್ ಮಿಶ್ರಾ ಮತ್ತು ಕೇಶವಾನಂದ್ ಮಿಶ್ರಾ ಈ ರೀತಿಯ ಘಟನೆಗಳನ್ನು ನಿರ್ವಹಿಸುವಲ್ಲಿ ಪರಿಣತರಾಗಿರುವ ಅಕ್ರಮ್ ಅಲಿ ಸಹಾಯ ಪಡೆದಿದ್ದರು” ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
ಬಲರಾಂಪುರ ಜಿಲ್ಲಾಡಳಿತ ಪತ್ರಕರ್ತನ ಪತ್ನಿಗೆ ಪರಿಹಾರವಾಗಿ 5 ಲಕ್ಷ ರೂಪಾಯಿಯ ಚೆಕ್ ಹಸ್ತಾಂತರಿಸಿತ್ತು. ಚೆಕ್ ಅನ್ನು ಸಂತ್ರಸ್ತ ಕುಟುಂಬಕ್ಕೆ ಶಾಸಕ ಪಾಲ್ತುರಾಮ್ ನೀಡಿದ್ದಾರೆ ಎಂದು ಪೊಲೀಸರು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಪತ್ರಕರ್ತ ರಾಕೇಶ್ ಸಿಂಗ್ ಪತ್ನಿ ವಿಶಾ ಸಿಂಗ್ ಅವರಿಗೆ ಉದ್ಯೋಗ ನೀಡುವುದಾಗಿ ಬಲರಾಂಪುರ್ ಚಿನಿ ಮಿಲ್ಸ್‌ನ ಆಡಳಿತವು ಜಿಲ್ಲಾಡಳಿತಕ್ಕೆ ಭರವಸೆ ನೀಡಿದೆ. ಜೊತೆಗೆ ಹೆಣ್ಣುಮಕ್ಕಳಿಗೆ ಉಚಿತ ಶಿಕ್ಷಣ ನೀಡುವುದಾಗಿ ಆಡಳಿತ ಹೇಳಿದೆ.


