ಪಾಕಿಸ್ತಾನದ ಖೈಬರ್ ಪಾಖ್ತುನ್‌ಟ್ವಾ ಪ್ರಾಂತ್ಯದಲ್ಲಿ ಮೂಲಭೂತವಾದಿ ಪಕ್ಷದ ಸದಸ್ಯರ ನೇತೃತ್ವದಲ್ಲಿ ಜನಸಮೂಹವೊಂದು ಹಿಂದೂ ದೇವಾಲಯವನ್ನು ಧ್ವಂಸಗೊಳಿಸಿ, ಬೆಂಕಿ ಹಚ್ಚಿತ್ತು. ಈ ಪ್ರಕರಣದಲ್ಲಿ ಭಾಗಿಯಾಗಿರುವ ಆರೋಪದಲ್ಲಿ ಪಾಕಿಸ್ತಾನ ಪೊಲೀಸರು ಮತ್ತೆ 10 ಜನರನ್ನು ಬಂಧಿಸಿದ್ದಾರೆ.
ಈ 10 ಮಂದಿಯ ಬಂಧನದೊಂದಿಗೆ ಪ್ರಕರಣದಲ್ಲಿ ಬಂಧಿತ ಆರೋಪಿಗಳ ಸಂಖ್ಯೆ 55 ಕ್ಕೆ ಏರಿದೆ. ಕಳೆದ ಬುಧವಾರ ಖೈಬರ್ ಪಾಖ್ತುನ್‌ಟ್ವಾದ ಕರಕ್ ಜಿಲ್ಲೆಯ ಟೆರ್ರಿ ಗ್ರಾಮದಲ್ಲಿರುವ ದೇವಾಲಯವನ್ನು ಧ್ವಂಸಗೊಳಿಸಿದ ನಂತರ ಪೊಲೀಸರು ಪ್ರಕರಣದಲ್ಲಿ 350 ಕ್ಕೂ ಹೆಚ್ಚು ಜನರ ಮೇಲೆ ಎಫ್‌ಐಆರ್ ದಾಖಲಿಸಿದ್ದಾರೆ.
ಟೆರ್ರಿ ಗ್ರಾಮದಲ್ಲಿರುವ ದೇವಾಲಯದ ವಿಸ್ತರಣೆ ನಡೆಯುತ್ತಿರುವುದನ್ನು ವಿರೋಧಿಸಿ ಈ ಕೃತ್ಯ ಎಸಗಲಾಗಿದೆ ಎಂದು ತಿಳಿದುಬಂದಿದೆ. ಎಫ್‌ಐಆರ್‌ನಲ್ಲಿ ಹೆಸರಿಸಲಾದ ಇತರ ಆರೋಪಿಗಳನ್ನು ಬಂಧಿಸಲು ಪೊಲೀಸರು ಶೋಧ ನಡೆಸುತ್ತಿದ್ದಾರೆ.
ಇದನ್ನೂ ಓದಿ: ಮಧ್ಯ ಪ್ರದೇಶ: ಮಸೀದಿ ಮೇಲೆ ಕೇಸರಿ ಧ್ವಜ ನೆಟ್ಟು ಹಿಂಸಾಚಾರ ನಡೆಸಿದ ಸಂಘ ಪರಿವಾರದ ಬೆಂಬಲಿಗರು
ಹಿಂದೂ ಧಾರ್ಮಿಕ ಮುಖಂಡರ ಸಮಾಧಿ ಹೊಂದಿರುವ ದಶಕಗಳಷ್ಟು ಹಳೆಯದಾದ ಈ ದೇವಾಲಯವು ತನ್ನ ಕಟ್ಟಡವನ್ನು ನವೀಕರಿಸಲು ಸ್ಥಳೀಯ ಅಧಿಕಾರಿಗಳಿಂದ ಅನುಮತಿ ಪಡೆದಿತ್ತು. ಇದರಿಂದ ಕ್ರೋಧಗೊಂಡ ಜನಸಮೂಹ ದಾಳಿ ನಡೆಸಿದೆ.
ಕೆಲವು ಸ್ಥಳೀಯ ಮೌಲ್ವಿಗಳು ಮತ್ತು ಜಾಮಿಯತ್ ಉಲೆಮಾ-ಇ-ಇಸ್ಲಾಂ ಪಕ್ಷದ (ಫಜಲ್ ಉರ್ ರೆಹಮಾನ್ ಗುಂಪು) ಬೆಂಬಲಿಗರ ನೇತೃತ್ವದಲ್ಲಿ ಜನಸಮೂಹವು ಹೊಸದಾಗಿ ನಿರ್ಮಿಸಿದ ದೇವಾಲಯದ ಕಟ್ಟಡವನ್ನು ನೆಲಸಮಗೊಳಿಸಿದೆ.
ದೇವಾಲಯದ ಮೇಲಿನ ದಾಳಿಯನ್ನು ಮಾನವ ಹಕ್ಕುಗಳ ಕಾರ್ಯಕರ್ತರು ಮತ್ತು ಅಲ್ಪಸಂಖ್ಯಾತ ಹಿಂದೂ ಸಮುದಾಯದ ಮುಖಂಡರು ತೀವ್ರವಾಗಿ ಖಂಡಿಸಿದ್ದಾರೆ. ಭಾರತ ಕೂಡ ಪ್ರತಿಭಟನೆ ಮೂಲಕ ಪಾಕಿಸ್ತಾನಕ್ಕೆ ಎಚ್ಚರಿಕೆ ನೀಡಿದ್ದು, ಘಟನೆಗೆ ಕಾರಣರಾದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದೆ.
ಇದನ್ನೂ ಓದಿ: ಲವ್ ಜಿಹಾದ್ ಎಂಬ ಕಪೋಲಕಲ್ಪಿತ: ಮತಾಂತರ ವಿರೋಧ ಕಾಯ್ದೆಯ ಅವಾಂತರ..
ಜನವರಿ 5 ರಂದು ಸ್ಥಳೀಯ ಅಧಿಕಾರಿಗಳಿಗೆ ನ್ಯಾಯಾಲಯಕ್ಕೆ ಹಾಜರಾಗುವಂತೆ ಪಾಕಿಸ್ತಾನದ ಸುಪ್ರೀಂ ಕೋರ್ಟ್ ಆದೇಶಿಸಿದೆ. ಜನವರಿ 4 ರೊಳಗೆ ವರದಿಯನ್ನು ಸಲ್ಲಿಸುವಂತೆ ಮುಖ್ಯ ನ್ಯಾಯಮೂರ್ತಿ ಅಹ್ಮದ್ ಅವರು ಅಲ್ಪಸಂಖ್ಯಾತರ ಹಕ್ಕುಗಳ ಆಯೋಗದ ಅಧ್ಯಕ್ಷರು, ಪೊಲೀಸ್ ಮುಖ್ಯಸ್ಥರು ಮತ್ತು ಪ್ರಾಂತ್ಯದ ಮುಖ್ಯ ಕಾರ್ಯದರ್ಶಿಗೆ ನಿರ್ದೇಶನ ನೀಡಿದ್ದಾರೆ.
ಸರ್ಕಾರವು ಹಾನಿಗೊಳಗಾದ ದೇವಾಲಯ ಮತ್ತು ಸಮಾಧಿಯನ್ನು ಆದಷ್ಟು ಕಡಿಮೆ ಸಮಯದಲ್ಲಿ ಪುನರ್ ನಿರ್ಮಿಸುವುದಾಗಿ ಭರವಸೆ ನೀಡುತ್ತೇವೆ. ಪ್ರಾಂತ್ಯದಲ್ಲಿ ಧಾರ್ಮಿಕ ಸಹಿಷ್ಣುತೆಯನ್ನು ಕಾಪಾಡಲಾಗುವುದು ಎಂದು ಖೈಬರ್ ಪಾಖ್ತುನ್‌ಟ್ವಾ ಮುಖ್ಯಮಂತ್ರಿ ಮಹಮೂದ್ ಖಾನ್ ಹೇಳಿದ್ದಾರೆ.
ಹಿಂದೂ ದೇವಾಲಯವನ್ನು ಧ್ವಂಸಗೊಳಿಸಿದ ಬಗ್ಗೆ ಭಾರತದ ಪ್ರತಿಭಟನೆ “ಸಂಪೂರ್ಣವಾಗಿ ಅನಗತ್ಯ” ಎಂದು ಪಾಕಿಸ್ತಾನದ ವಿದೇಶಾಂಗ ಕಚೇರಿ ಶನಿವಾರ ಹೇಳಿದೆ.
ಇದನ್ನೂ ಓದಿ: ಫ್ಲ್ಯಾಟ್ ವಿಚಾರದಲ್ಲಿ ಕಂಗನಾ ರಾಣಾವತ್ ನಿಯಮ ಉಲ್ಲಂಘಿಸಿದ್ದಾರೆ: ಮುಂಬೈ ಸಿವಿಲ್ ಕೋರ್ಟ್


