ಬಡತನದ ಬೆಂಕಿಯಲ್ಲಿ ಬೆಂದು ಚಿನ್ನವಾಗಿ ಹೊರಹೊಮ್ಮಿದ ದಿಟ್ಟೆ ಈ ಬಾರಿಯ ಮಿಸ್ ಇಂಡಿಯಾ 2020 ರ ರನ್ನರ್ ಅಪ್ ಮಾನ್ಯಾ ಸಿಂಗ್. ಹೌದು, ಸಾಧಿಸುವ ಛಲವಿದ್ದರೇ, ಕಂಡ ಕನಸುಗಳನ್ನು ನನಸು ಮಾಡಿಕೊಳ್ಳುವ ಧೃಡ ಇಚ್ಛೆ ಇದ್ದಲ್ಲಿ ಅದು ಸಾಧ್ಯ ಎಂಬುದಕ್ಕೆ ಉದಾಹರಣೆಯಾಗಿ ನಿಂತಿದ್ದಾರೆ ಈಕೆ.
ಮಿಸ್ ಇಂಡಿಯಾ 2020 ರ ಕಿರೀಟ ಪಡೆದ 23 ವರ್ಷದ ತೆಲಂಗಾಣದ ಮಾನಸಾ ವಾರಣಾಸಿ ಅವರಿಗಿಂತ ಹೆಚ್ಚು ಸುದ್ದಿಯಾಗಿದ್ದು, ರನ್ನರ್ ಅಪ್ ಆದ 19 ವರ್ಷದ ಉತ್ತರ ಪ್ರದೇಶದ ಮಾನ್ಯಾ ಸಿಂಗ್.
ಖುಷಿ ನಗರದ ಆಟೋ ಡ್ರೈವರ್ ಓಂಪ್ರಕಾಶ್ ಸಿಂಗ್ ಮತ್ತು ಮನೋರಮಾ ಸಿಂಗ್ ಮಗಳಾಗಿದ್ದ ಮಾನ್ಯಾ ಸಿಂಗ್, ತೀವ್ರ ಬಡತನದಲ್ಲಿ ಬೆಳೆದವರು. ಆಟೋ ಓಡಿಸಿ ಬರುತ್ತಿದ್ದ ಹಣವೇ ಇವರ ಕುಟುಂಬದ ಆದಾಯವಾಗಿತ್ತು. ಇಂತಹ ಕುಟುಂಬದಲ್ಲಿ ಬೆಳೆದ ಮಾನ್ಯಾ ತನ್ನ ಕನಸುಗಳನ್ನು ಕಟ್ಟಿಕೊಂಡು ರೈಲು ಹತ್ತಿದ್ದು ಕನಸಿನ ನಗರ ಮುಂಬೈಗೆ.
ಇದನ್ನೂ ಓದಿ: ರೈತ ಹೋರಾಟ: 24 ವರ್ಷದ ಯುವಕ ಬಲ್ಜಿತ್ ಸಿಂಗ್ ಅವಿರೋಧವಾಗಿ ಸರ್‌ಪಂಚ್ ಆದ ಕಥೆ
“ನಾನು ನಿಲ್ದಾಣದಿಂದ ಹೊರನಡೆದಾಗ, ನಾನು ನೋಡಿದ ಮೊದಲ ಸ್ಥಳ ಪಿಜ್ಜಾ ಹಟ್. ನಾನು ಅಲ್ಲಿ ಅರೆಕಾಲಿಕ ಉದ್ಯೋಗ ಮತ್ತು ತಾತ್ಕಾಲಿಕ ಉಳಿದುಕೊಳ್ಳುವ ಅವಕಾಶ ಪಡೆದುಕೊಂಡೆ. ಎರಡು ದಿನಗಳ ನಂತರ, ನಾನು ನನ್ನ ತಂದೆಗೆ ಕರೆ ಮಾಡಿದಾಗ, ಅವರು ಅಳತೊಡಗಿದರು. ಆದರೆ ನಾನು ಇದೆ ನನ್ನ ಸ್ಥಳ ಎಂದು ಧೈರ್ಯ ತುಂಬಿದೆ. ಮರುದಿನವೇ ನನ್ನ ತಂದೆ ತಾಯಿ ಮುಂಬೈಗೆ ಬಂದು ನಿನ್ನ ಕನಸಿಗೆ ನಾನು ಬೆಂಬಲವಾಗಿ ನಿಲ್ಲುತ್ತೇವೆ ಎಂದರು” ಎಂದು ಖಾಸಗಿ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ಮಾನ್ಯಾ ತಿಳಿಸಿದ್ದಾರೆ.
“ನನ್ನ ತಂದೆ ಜೀವನ ಸಾಗಿಸಲು ಆಟೋ ಓಡಿಸಿದರು. ಆದರೂ ನನ್ನನ್ನು ಉತ್ತಮ ಶಾಲೆಗೆ ಕಳುಹಿಸಿದರು. ಜೊತೆಗೆ, ನಾನು ಅರೆಕಾಲಿಕ ಉದ್ಯೋಗಗಳನ್ನು ಮಾಡಿದ್ದೇನೆ” ಎನ್ನುತ್ತಾರೆ ಮಾನ್ಯಾ.
![]()
ಮಾನ್ಯಾ ಹೇಳುವಂತೆ, ಆಕೆ ತನ್ನ ಪದವಿ ದಿನಗಳಲ್ಲಿ, ಹತ್ತಾರು ಸ್ಪರ್ಧೆಗಳಿಗೆ ಆಡಿಷನ್ ಮಾಡಿದ್ದಳು, ಆದರೆ ಅವರು “ಶಕಲ್ ಅಚಿ ನಹಿ ಹೈ” (ನಿಮ್ಮ ಮುಖ ಚೆನ್ನಾಗಿ ಕಾಣುತ್ತಿಲ್ಲ) ಅಥವಾ “ನಿಮಗೆ ಇಂಗ್ಲಿಷ್ ಕೂಡ ತಿಳಿದಿಲ್ಲ” ಎಂದು ವಾಪಸ್ ಕಳಿಸುತ್ತಿದ್ದರಂತೆ.
“ಪ್ರತಿ ಬಾರಿ ನಾನು ಸೋತಾಗ ಅಂದುಕೊಳ್ಳುತ್ತಿದ್ದು, ಇನ್ನೆರಡು ಹೆಜ್ಜೆ ಮುಂದಕ್ಕೆ, ಮತ್ತೆರಡು ಹೆಜ್ಜೆ ಮುಂದಕ್ಕೆ ಎಂಬ ಮಾತುಗಳನ್ನು. ಇದು ನನ್ನನ್ನು ಇಲ್ಲಿಗೆ ತಂದಿರಿಸಿದೆ” ಎಂದು ಹೇಳುತ್ತಾರೆ ಮಾನ್ಯಾ ಸಿಂಗ್.
ಇದನ್ನೂ ಓದಿ: ಟೀ ಮಾರುವವನಿಗೆ ಬಡವರ ನೋವಿನ ಅರಿವಿರುತ್ತೆ ಎಂಬ ಭ್ರಮೆಯಲ್ಲಿ ಮತ ನೀಡಿದ್ದೆವು!
View this post on Instagram
“ನನ್ನ ಕಾಲೇಜು ಶುಲ್ಕವನ್ನು ಪಾವತಿಸಲು ಅಪ್ಪ ನಮ್ಮ ಆಭರಣಗಳನ್ನು ಅಡಮಾನ ಇಟ್ಟಿದ್ದರು. ಸ್ಫರ್ಧೆಗಳಿಗಾಗಿ ಬಟ್ಟೆಗಳನ್ನು ಖರೀದಿಸಲು ನನಗೆ ಹಣದ ಅಗತ್ಯವಿದ್ದರಿಂದ ನಾನು ಪಿಜ್ಜಾ ಹಟ್‌ನಲ್ಲಿ ನೆಲವನ್ನು ಒರೆಸುವ ಕೆಲಸ ಮಾಡಿದ್ದೇನೆ. ಅಲ್ಲಿ ಜನ ಇಂಗ್ಲಿಷ್ ಮಾತಾಡುವುದನ್ನು, ಕಾಲೇಜಿನಲ್ಲಿ ಸ್ನೇಹಿತರು ಹೇಗೆ ಮಾತನಾಡುತ್ತಾರೆ ಎಂಬುದನ್ನು ಹೆಚ್ಚು ಗಮನಿಸುತ್ತಿದೆ”. ನನ್ನ ತಂದೆ ಆಟೋ ಚಾಲಕರು ಎಂದು ನನ್ನ ವಿಡಿಯೋಗಳಲ್ಲಿ ಹೇಳಿದಾಗ ಜನ ಪ್ರಚಾರಕ್ಕಾಗಿ ಎಂದುಕೊಂಡರು. ಆದರೆ ನನಗೆ ನನ್ನ ಮೂಲದ ಬಗ್ಗೆ, ನನ್ನ ತಂದೆಯ ಬಗ್ಗೆ ಹೆಮ್ಮೆಯಿದೆ ಎನ್ನುತ್ತಾರೆ ಈಕೆ.

ರನ್ನರ್ ಅಪ್ ಆಗಿ ಸನ್ಮಾನ ಸಮಾರಂಭಕ್ಕೆ ಬರಲು ಈಕೆ ಬಳಸಿದ್ದು ತಮ್ಮ ಮನೆಗೆ ಬೆಂಬಲವಾಗಿ ನಿಂತಿದ್ದ ಅಪ್ಪನ ಆಟೋರಿಕ್ಷಾವನ್ನು.
ಬಡತನ ಎಂದು ಕೈಕಟ್ಟಿ ಕುಳಿತ್ತಿದ್ದರೆ ತನ್ನ ಕನಸು ನನಸಾಗುತ್ತಿರಲಿಲ್ಲ ಎನ್ನುತ್ತಾರೆ ಮಾನ್ಯ. ಇಷ್ಟು ದಿನ ತನಗೆ ಬೆಂಬಲವಾಗಿ ನಿಂತ ತಂದೆ ತಾಯಿಗೆ ಮನೆ ಖರೀದಿಸಿಕೊಡುವ ಮೂಲಕ ನಾನು ಅವರಿಗೆ ಸಹಾಯ ಮಾಡಲು ಆರಂಭಿಸುವೆ. ನನ್ನ ತಂದೆ ನನ್ನಲ್ಲಿ ವಿಶ್ವಾಸವಿರಿಸಿದ್ದರು ಹಾಗಾಗಿ ಇಂದು ಆಟೋ ಚಾಲಕನ ಮಗಳು ತಲೆ ಮೇಲೆ ಕಿರೀಟ ಧರಿಸಿದ್ದಾಳೆ. ಎಂದು ಹೆಮ್ಮೆಯಿಂದ ಹೇಳುತ್ತಾರೆ ಮಾನ್ಯ.
ಇದನ್ನೂ ಓದಿ: ಗೆಲ್ಲುವವರೆಗೂ ನಾವು ಇಲ್ಲಿಂದ ಕದಲುವುದಿಲ್ಲ: ಸಿಂಘು ಗಡಿಯಲ್ಲಿ ಗುರ್ತೇಜ್ ಸಿಂಗ್ ಗುಡುಗು


