’ನಮ್ಮ ಪಂಜಾಬ್, ಹರಿಯಾಣದ ಅಭಿವೃದ್ಧಿ ಉತ್ತಮ ರಸ್ತೆಗಳು, ಎಪಿಎಂಸಿ ಮಂಡಿಗಳಿಂದ ಆಗಿದೆ. ನಾವು ಎಪಿಎಂಸಿಗೆ ಶೇಕಡಾ 8 ರಷ್ಟು ತೆರಿಗೆ ಪಾವತಿಸುತ್ತೇವೆ. ಇದರಿಂದಾಗಿ ನಮ್ಮ ಗ್ರಾಮದ ರಸ್ತೆಗಳೂ ಇಷ್ಟು ವಿಶಾಲವಾಗಿ, ಉತ್ತಮವಾಗಿವೆ. ಇಂತಹ ರಸ್ತೆಗಳನ್ನು ನೀವು ಬಿಹಾರ, ರಾಜಸ್ಥಾನಗಳಲ್ಲಿ ಕಾಣಲು ಸಾಧ್ಯವಿಲ್ಲ. ಈ ಕಾನೂನುಗಳು ಜಾರಿಗೆ ಬಂದಿದ್ದೇ ಆದರೆ, ಎಪಿಎಂಸಿ ಕೊನೆಗೊಳ್ಳುತ್ತವೆ. ಇದರ ಜೊತೆಗೆ ನಮ್ಮ ಗ್ರಾಮಗಳ ಅಭಿವೃದ್ಧಿಯೂ ಕೊನೆಗೊಳ್ಳುತ್ತದೆ”. ಹೀಗಾಗಿ ಈ ಕರಾಳ ಕಾನೂನುಗಳು ಕೃಷಿ ಕ್ಷೇತ್ರಕ್ಕೆ ಮಾತ್ರವಲ್ಲ ದೇಶದ ಅಭಿವೃದ್ಧಿಗೂ ಮಾರಕವಾಗಿವೆ” ಹೀಗೆ ಕೃಷಿ ಕಾನೂನುಗಳ ಬಗ್ಗೆ ಮಾತನಾಡುತ್ತಾ ಹೋಗಿದ್ದು ಪಂಜಾಬಿನ ಯುವಕ ಬಲ್ಜಿತ್ ಸಿಂಗ್.

24 ವರ್ಷದ ಯುವಕ ಬಲ್ಜಿತ್ ಸಿಂಗ್, ಪಂಜಾಬಿನ ಸಂಗ್ರೂರ್ ಜಿಲ್ಲೆಯ ರೋಜಾವ್ ಗ್ರಾಮದ ನಿವಾಸಿ. ಹರಿಯಾಣದ ಹಿಸಾರ್‌ ಗುರುಜಂಭೇಶ್ವರ ವಿಜ್ಞಾನ ಮತ್ತು ತಾಂತ್ರಿಕ ವಿಶ್ವವಿದ್ಯಾಲಯದಲ್ಲಿ ಎಂಎಸ್‌ಸಿ (ಭೌತಶಾಸ್ತ್ರ) ಅಧ್ಯಯನ ಮಾಡುತ್ತಿರುವ ಇವರು ನವೆಂಬರ್ 26 ರಿಂದ ಟಿಕ್ರಿ ಗಡಿಯಲ್ಲಿ ರೈತ ಹೋರಾಟದ ಭಾಗವಾಗಿದ್ದರು. 83 ದಿನಗಳ ಕಾಲ ಹೋರಾಟದ ಭಾಗವಾಗಿದ್ದ ಇವರಿಗೆ ಈಗ ಗ್ರಾಮದಲ್ಲಿ ಭರ್ಜರಿ ಸ್ವಾಗತ ನೀಡಲಾಗಿದೆ.

ಮುಂದಿನ ತಿಂಗಳು ಊರಿನ ಗ್ರಾಮ ಪಂಚಾಯಿತಿ ಚುನಾವಣೆ ನಡೆಯಲಿದ್ದು, ಇಷ್ಟು ದಿನಗಳ ಕಾಲ ರೈತ ಹೋರಾಟದಲ್ಲಿ ಭಾಗಿಯಾಗಿ ರೈತರ ಪರವಾಗಿದ್ದ ಬಲ್ಜಿತ್‌ ಸಿಂಗ್ ಅವರನ್ನು ಈಗಾಗಲೇ ಅವಿರೋಧವಾಗಿ ಗ್ರಾಮ ಪಂಚಾಯಿತಿಯ ಸರ್‌ಪಂಚ್ ಆಗಿ ಆಯ್ಕೆ ಮಾಡಲಾಗಿದೆ. ಚುನಾವಣೆಗೆ ಯಾರು ನಾಮಪತ್ರ ಸಲ್ಲಿಸದಿರುವಂತೆ ಗ್ರಾಮದಲ್ಲಿ ಹೇಳಲಾಗಿದ್ದು, ಊರಿನ ಮುಖಂಡರು ಇವರನ್ನು ಸರ್‌ಪಂಚ್ ಎಂದು ಘೋಷಿಸಿದ್ದಾರೆ.

ಇದನ್ನೂ ಓದಿ: ಟೀ ಮಾರುವವನಿಗೆ ಬಡವರ ನೋವಿನ ಅರಿವಿರುತ್ತೆ ಎಂಬ ಭ್ರಮೆಯಲ್ಲಿ ಮತ ನೀಡಿದ್ದೆವು!

ನಾನುಗೌರಿ.ಕಾಂ ಜೊತೆಗೆ ಮಾತನಾಡಿದ ಬಲ್ಜಿತ್ ಸಿಂಗ್, ’ಈ ಕೃಷಿ ಕಾನೂನುಗಳ ಬಗ್ಗೆ ನಮಗೆ ತಿಳಿದಿದೆ. ಇವುಗಳು ನಮ್ಮ ಜೀವನಮಟ್ಟ, ನಮ್ಮ ಗ್ರಾಮಗಳ ಅಭಿವೃದ್ಧಿಯನ್ನು ಬಲಿ ಪಡೆಯಲಿವೆ. ಈ ಕಾನೂನುಗಳ ಪ್ರಕಾರ ರೈತರು ನ್ಯಾಯಾಲಯದ ಮೊರೆ ಹೋಗುವಂತಿಲ್ಲ. ತಮ್ಮ ಜಿಲ್ಲೆಯ ಡಿಸಿ, ಎಸ್‌ಡಿಎಂ ಅಧಿಕಾರಿ ಬಳಿ ಹೋಗಬೇಕಾಗಿದೆ. ನೀವೇ ಯೋಚನೆ ಮಾಡಿ ಒಬ್ಬ ರೈತ, ಅಂಬಾನಿ, ಅದಾನಿಯಂತಹ ಕಾರ್ಪೋರೇಟ್ ಕಂಪನಿಗಳ ವಿರುದ್ಧ ಹೋರಾಡಲು ಸಾಧ್ಯವೇ..? ಈ ಅಧಿಕಾರಿಗಳು ಸಹ ಕಾರ್ಪೋರೇಟ್ ಕಂಪನಿಗಳ ವಿರುದ್ಧ ಮಾತನಾಡಲು ಸಾಧ್ಯವೆ..? ಕಂಪನಿಗಳು ತಮಗೆ ಬೇಕಾದವರನ್ನು ಅಧಿಕಾರಿಗಳನ್ನಾಗಿ ಮಾಡುವುದಿಲ್ಲವೇ…? ಎಂದು ಬಲ್ಜಿತ್ ಸಿಂಗ್ ಪ್ರಶ್ನಿಸುತ್ತಾರೆ.

’ಕಾಂಟ್ಯ್ರಾಕ್ಟ್ ಫಾರ್ಮಿಂಗ್ ಬಗ್ಗೆ ನೀವೇ ಹೇಳಿ, ಒಪ್ಪಂದ ಎಂಬುದು ಯಾವಾಗಲೂ ಇಬ್ಬರು ಸಮಾನರ ನಡುವೆ ನಡೆಯುವಂತಹದ್ದು. ಆದರೆ ನಮ್ಮ ಮತ್ತು ಕಾರ್ಪೊರೇಟ್‌ಗಳ ಮಧ್ಯೆ ಸಮಾನವಾದದ್ದು ಯಾವುದು ಇಲ್ಲ. ಒಪ್ಪಂದದ ಕೃಷಿ ಪ್ರಕಾರ ಕಂಪನಿಗಳೇ ರೈತರು ಏನು ಬೆಳೆಯಬೇಕೆಂದು ಹೇಳುತ್ತಾರೆ. ತಾವೇ ಬಿತ್ತನೆ ಬೀಜಗಳನ್ನು ನೀಡುತ್ತಾರೆ. ಅಲ್ಲಿ ನಾವು ನಮ್ಮ ಹೊಲದಲ್ಲೇ ಕೇವಲ ಕಾರ್ಮಿಕರಾಗಿ ಕೆಲಸ ಮಾಡಬೇಕಾಗುತ್ತದೆ’ ಎಂದು ತಿಳಿಸುತ್ತಾರೆ.

ಇದನ್ನೂ ಓದಿ: ಗೆದ್ದೇ ಮನೆಗೆ ತೆರಳುತ್ತೇವೆ, ಇಲ್ಲವೆಂದರೆ ತ್ರಿವರ್ಣ ಧ್ವಜದಲ್ಲಿ ನಮ್ಮ ಮೃತದೇಹ ಹೋಗಲಿವೆ!

’ಈ ಕಂಪನಿಗಳು ಹೇಗೆ ಕೆಲಸ ಮಾಡುತ್ತವೆ ಎಂದರೆ ಉದಾಹರಣೆಗೆ, ಅಮೆರಿಕಾದಲ್ಲಿ ಹಂದಿ ಮಾಂಸ ಹೆಚ್ಚು ಬಳಕೆಯಾಗುತ್ತದೆ. ಹಂದಿಗಳಿಗೆ ಆಹಾರವಾಗಿ ಸೋಯಾಬೀನ್ ನೀಡಲಾಗುತ್ತದೆ. ಸೋಯಾಬೀನ್‌ ಗಿಡದ ಬೇರುಗಳು ಭೂಮಿಯ ಆಳಕ್ಕೆ ಹೋಗುತ್ತವೆ. ಸತತವಾಗಿ 5 ವರ್ಷಗಳ ಕಾಳ ಸೋಯಾಬೀನ್ ಬೆಳೆದರೆ ಆ ಭೂಮಿ ಬಂಜರುಗೊಳ್ಳುತ್ತದೆ. ಇದೇ ರೀತಿಯಲ್ಲಿ ಒಪ್ಪಂದದ ಕೃಷಿಯಲ್ಲಿ ನಾವು ಕಂಪನಿಗಳು ಹೇಳಿದನ್ನು ಬೆಳೆಯಬೇಕಾಗುತ್ತದೆ. ನಮ್ಮ ಭೂಮಿಯ ಫಲವತ್ತತೆ ಹಾಳಾಗುತ್ತದೆ. ನಮ್ಮ ರೈತರಿಗೆ ಏನು ಬೆಳೆಯಬೇಕೆಂಬ ನಗ್ಗೆ ತಿಳುವಳಿಕೆ ಇದೆ. ಕಂಪನಿಗಳಿಗೆ ಹಣ, ಉತ್ಪಾದನೆ ಮಾತ್ರ ಬೇಕು. ಭೂಮಿಯ ಬಗ್ಗೆ ಯೋಚಿಸುವುದಿಲ್ಲ. ಹೀಗಾಗಿ ನಾವು ಈ ಕಾನೂನುಗಳನ್ನು ವಿರೋಧಿಸುತ್ತೇವೆ’ ಎಂದು ವಿಸ್ತಾರವಾಗಿ ತಿಳಿಸುತ್ತಾರೆ.

ಇದನ್ನೂ ಓದಿ: ಗ್ರೌಂಡ್ ರಿಪೋರ್ಟ್: ರೈತಹೋರಾಟದ ತವರು ಪಂಜಾಬ್‌ನಲ್ಲಿ ತೀವ್ರಗೊಳ್ಳುತ್ತಿರುವ ಚಳವಳಿ

“ಖಾಸಗಿ ಕ್ಷೇತ್ರಗಳು ಹೇಗೆ ಕಾರ್ಯನಿರ್ವಹಿಸುತ್ತವೆ ಎಂಬುದನ್ನು ಈಗಾಗಲೇ ನಾವು ಶಿಕ್ಷಣ ಕ್ಷೇತ್ರದಲ್ಲಿ ಅನುಭವಿಸಿದ್ದೆವೆ. ಸರ್ಕಾರಿ ಶಾಲಾ-ಕಾಲೇಜುಗಳ ಸ್ಥಿತಿಗತಿಗಳು ಹೇಗಾಗಿವೆ? ಸರ್ಕಾರಿ ಶಾಲೆಗಳು ಮುಚ್ಚಿಹೋಗುತ್ತಿರುವುದು, ಖಾಸಗಿ ಶಿಕ್ಷಣ ಕ್ಷೇತ್ರದ ಧನದಾಹ ನೋಡಿದ್ದೇವೆ. ಅಂದೇ ನಾವು ಎಚ್ಚೆತ್ತುಕೊಂಡಿದ್ದರೆ ಇಂದು ಸರ್ಕಾರಿ ಶಿಕ್ಷಣ ಕ್ಷೇತ್ರ ಹಾಳಾಗುತ್ತಿರಲಿಲ್ಲ. ಈಗ ಕೃಷಿ ಕ್ಷೇತ್ರವನ್ನು ಖಾಸಗಿಯವರಿಗೆ ಬಿಟ್ಟು ನಾವು ಮುಂದೆ ಮತ್ತಷ್ಟು ಹೀನಾಯ ಸ್ಥಿತಿಗೆ ತಲುಪಲು ಸಿದ್ಧರಿಲ್ಲ. ಹೀಗಾಗಿ ಈ ಹೋರಾಟ ನಡೆಸುತ್ತಿದ್ದೇವೆ. ಇದು ಕಾನೂನುಗಳು ರದ್ದಾಗುವವರೆಗೂ ನಡೆಯಲಿದೆ” ಎಂದು ವಿಶ್ವಾಸದಲ್ಲಿ ಮಾತನಾಡುತ್ತಾರೆ 24 ವರ್ಷದ ಬಲ್ಜಿತ್ ಸಿಂಗ್.

’ಊರಿನಲ್ಲಿ ಈಗ ಗೋಧಿ ಕೂಡ ಕಟಾವಿಗೆ ಬರುತ್ತಿದೆ. ಕೆಲಸಗಳು ಹೆಚ್ಚಿರುವುದರಿಂದ ಇಲ್ಲಿಯೂ ಜನರ ಅವಶ್ಯಕತೆ ಇದೆ. ಹಾಗೆಂದು ಪ್ರತಿಭಟನಾ ಸ್ಥಳದಲ್ಲಿ ಜನ ಕಡಿಮೆಯಾಗುವಂತಿಲ್ಲ. ಅದು ಕೂಡ ನಮ್ಮ ಜೀವನದ ಅಂಗವಾಗಿದೆ. ಹೀಗಾಗಿ ಊರಿನಲ್ಲಿ ವಾರಕ್ಕೆ 5 ಮಂದಿಯ ತಂಡ ಗಡಿ ಭಾಗಗಳಿಗೆ ಹೋಗಲಿದೆ. ಮಿಕ್ಕವರು ಊರಿನಲ್ಲಿ ಹೊಲದ ಕೆಲಸ ಮಾಡಲಿದ್ದಾರೆ. ಹೋಗದವರಿಗೆ ದಂಡ ವಿಧಿಸುವ ನಿರ್ಣಯ ಮಾಡಲಾಗಿದೆ. ಹೋಗಲು ಆಗದವರು ತಮ್ಮ ಬದಲಿಗೆ ಮತ್ತೊಬ್ಬರನ್ನು ಕಳುಹಿಸಲು ತಿಳಿಸಲಾಗಿದೆ’ ಎಂದರು.

ಇದನ್ನೂ ಓದಿ: ಗೆಲ್ಲುವವರೆಗೂ ನಾವು ಇಲ್ಲಿಂದ ಕದಲುವುದಿಲ್ಲ: ಸಿಂಘು ಗಡಿಯಲ್ಲಿ ಗುರ್ತೇಜ್ ಸಿಂಗ್ ಗುಡುಗು

’ಈಗಾಗಲೇ ಚಳಿ ಕಡಿಮೆಯಾಗುತ್ತಿದ್ದು, ಬಿಸಿಲು ಹೆಚ್ಚಾಗುತ್ತಿದೆ. ಹೀಗಾಗಿ ಎಸಿ, ಕೂಲರ್‌ಗಳ ಅವಶ್ಯಕತೆ ಇದೆ. ಊರಿನಿಂದ ಹೋಗುವ ನಮಗೆ ಮೂಲಸೌಲಭ್ಯಗಳ ಅವಶ್ಯಕತೆ ಇದೆ. ಹೀಗಾಗಿ ಊರಿನಲ್ಲಿ ಹಣ ಸಂಗ್ರಹಿಸುತ್ತಿದ್ದೇವೆ. ಒಂದು ಎಕರೆಗೆ 100 ರೂಪಾಯಿಯಂತೆ ಸಂಗ್ರಹಿಸಲಾಗುತ್ತಿದೆ. ಕನಿಷ್ಟ ಒಂದು ಲಕ್ಷ ನಮ್ಮ ಖರ್ಚಿಗೆ ತೆಗೆದುಕೊಂಡು ಹೋಗಬೇಕು’ ಎನ್ನುತ್ತಾರೆ.

ಏಳು ಜನರ ಬಲ್ಜಿತ್ ಸಿಂಗ್ ಕುಟುಂಬದಲ್ಲಿ ಕೃಷಿ ಪ್ರಮುಖ ಕೆಲಸವಾಗಿದೆ. ಮೂವರು ಸಹೋದರಿಯರ ಮದುವೆಯಾಗಿದ್ದು, ಅಣ್ಣ ಮಹಿಂದ್ರಾ ಕಂಪನಿಯಲ್ಲಿ ಕೆಲಸ ಮಾಡುತ್ತಾರೆ. ತಂದೆ-ತಾಯಿ ಕೃಷಿ ಕೆಲಸವನ್ನು ಮಾಡುತ್ತಾರೆ. ಗೋದಿ ಮತ್ತು ಭತ್ತದ ಜೊತೆಗೆ ತರಕಾರಿಯನ್ನು ಬೆಳೆಯುತ್ತಾರೆ.

ರೈತ ಹೋರಾಟ 88 ದಿನಗಳತ್ತ ಸಾಗುತ್ತಿದೆ. ಇತ್ತ ಪಂಜಾಬ್ ಮತ್ತು ಹರಿಯಾಣದಲ್ಲಿ ಗೋಧಿ ಬೆಳೆದಿರುವ ರೈತರು ತಮ್ಮ ಹೊಲಗಳ ಕಡೆಗೂ ಗಮನ ನೀಡಬೇಕಾಗಿದೆ. ಕೃಷಿ ಕಾನೂನುಗಳನ್ನು ರದ್ದುಗೊಳಿಸಬೇಕೆಂಬ ನಿಲುವು ಬದಲಾಗುವುದಿಲ್ಲ. ಎಲ್ಲವೂ ನಮಗೆ ಮುಖ್ಯ, ಹಾಗಾಗಿ ಸಿದ್ಧತೆ ಮಾಡಿಕೊಳ್ಳುತ್ತಿದ್ದೇವೆ. ಈಗ ಸರ್‌ಪಂಚ್ ಆಗಿ ಆಯ್ಕೆ ಮಾಡಿದ್ದಾರೆ. ಜವಾಬ್ದಾರಿ ಕೂಡ ಹೆಚ್ಚಾಗಿದೆ. ನನ್ನ ಮೇಲೆ ಗ್ರಾಮದವರು ಇಟ್ಟ ನಂಬಿಕೆ ಉಳಿಸಿಕೊಳ್ಳಬೇಕಿದೆ. ಆದಷ್ಟು ಬೇಗ ಮತ್ತೆ ಹೋರಾಟದ ಕಣಗಳಿಗೆ ತೆರಳುತ್ತೇನೆ ಎನ್ನುತ್ತಾರೆ ಯುವಕ ಬಲ್ಜಿತ್ ಸಿಂಗ್.


ಇದನ್ನೂ ಓದಿ: 3 ತಿಂಗಳಿನಿಂದ ಒಂದು ದಿನವೂ ರಜೆಯಿಲ್ಲ: ಪ್ರತಿದಿನವೂ ರೈತ ಹೋರಾಟದ ಕ್ಷಣ ಕ್ಷಣದ ಮಾಹಿತಿ ನೀಡುತ್ತಿರುವ ಯುವಕ!

Donate

ನ್ಯಾಯದ ಜೊತೆಗಿರಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ

ಜನಪರ ಸ್ವತಂತ್ರ ಪತ್ರಿಕೋದ್ಯಮವೇ ನಮ್ಮ ಆಶಯ. ನಿಮ್ಮಗಳ ಬೆಂಬಲವೇ ನಮಗೆ ಬಲ. ನ್ಯಾಯದ ಜೊತೆಗಿರಲು ಬಯಸುವ, ಸತ್ಯಪಥವನ್ನು ತುಳಿಯಲು ಪ್ರೋತ್ಸಾಹಿಸುವವರು ಬೆಂಬಲಿಸಿ. ಈ ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿ ಪಾವತಿಸಬಹುದು.
ಧನ್ಯವಾದಗಳು

Independent journalism can’t be independent without your support, contribute by clicking below.

ಪ್ರತಿವಾರದ ವಿದ್ಯಮಾನಗಳ ವಿಶ್ಲೇಷಣೆಗಳು, ಅಂಕಣಗಳು ಹಾಗೂ ವಿಶೇಷ ಬರಹಗಳನ್ನು ಓದಲು ನ್ಯಾಯಪಥ ಪತ್ರಿಕೆಗೆ ಚಂದಾದಾರರಾಗಿ. ಚಂದಾ ಹಣವನ್ನು ಪಾವತಿಸಲು ಈ ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿ.
+ posts

LEAVE A REPLY

Please enter your comment!
Please enter your name here