ಉತ್ತರ ಪ್ರದೇಶ ಸರ್ಕಾರ ಕಳೆದ ನವರಾತ್ರಿಯಿಂದ ಮಹಿಳೆಯರಿಗಾಗಿ ಮಿಷನ್ ಶಕ್ತಿ ಅಭಿಯಾನವನ್ನು ನಡೆಸುತ್ತಿದೆ. ಮಹಿಳಾ ಸಬಲೀಕರಣಕ್ಕೆ ಸಹಾಯಕವಾಗಲಿದೆ ಎಂದು ಹೇಳುತ್ತ ಹಲವಾರು ಕಾರ್ಯಕ್ರಮಗಳನ್ನು ನಡೆಸುತ್ತಿದೆ. ಆದರೆ ಇತ್ತ ಆಡಳಿತರೂಢ ಬಿಜೆಪಿ ಶಾಸಕ ರಮೇಶ್ ದಿವಾಕರ್, ಮಹಿಳೆಯರ ಬಗ್ಗೆ ನಾಲಿಗೆ ಹರಿಯಬಿಟ್ಟಿದ್ದುಮ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಶಾಲಾ ಶುಲ್ಕ ಮನ್ನಾ ಮಾಡಿ ಎಂದು ಮನವಿ ಮಾಡಲು ಹೋಗಿದ್ದ ಮಹಿಳೆಯರ ಬಗ್ಗೆ ಬಿಜೆಪಿ ಶಾಸಕ ರಮೇಶ್ ದಿವಾಕರ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಮಾಧ್ಯಮ ವರದಿಗಳ ಪ್ರಕಾರ, ಕೆಲವು ಮಹಿಳೆಯರು ತಮ್ಮ ಮಕ್ಕಳ ಶುಲ್ಕವನ್ನು ಮನ್ನಾ ಮಾಡಲು ಶಾಸಕರ ಬಳಿಗೆ ಹೋಗಿದ್ದರು. ಆಗ “ನೀವು ಮಕ್ಕಳನ್ನು ಹೆರುತ್ತೀರಿ… ನಿಮ್ಮ ಮಕ್ಕಳ ಶುಲ್ಕವನ್ನು ಸರ್ಕಾರ ಭರಿಸಬೇಕೆ” ಎಂದು ಕೀಳುಮಟ್ಟದಲ್ಲಿ ಮಾತನಾಡಿದ್ದಾರೆ.
ಉತ್ತರ ಪ್ರದೇಶದ ಔರೈಯ ಎಂಬಲ್ಲಿ ಮಹಿಳೆಯರು ತಮ್ಮ ಮಕ್ಕಳ ಶಿಕ್ಷಣದ ಶುಲ್ಕ ಮನ್ನಾ ಮಾಡುವಂತೆ ತಮ್ಮ ಮನವಿಯನ್ನು ಬಿಜೆಪಿ ಶಾಸಕ ರಮೇಶ್ ದಿವಾಕರ್ ಅವರ ಮುಂದಿಡುತ್ತಾರೆ. ಈ ಸಂದರ್ಭದಲ್ಲಿ ತಮ್ಮ ಎಲ್ಲೆ ಮೀರಿ ಶಾಸಕರು ಮಹಿಳೆಯರ ಬಗ್ಗೆ ಮಾತನಾಡಿದ್ದಾರೆ.
ಇದನ್ನೂ ಓದಿ: “ಮಗಳು ಬೇರೊಬ್ಬರ ಸ್ವತ್ತು, ಕಳುಹಿಸಿ ಕೊಡಲಾಗುವುದು”: ವಿವಾದಾತ್ಮಕ ಟ್ವೀಟ್‌ಗೆ ಸ್ಪಷ್ಟನೆ ನೀಡಿದ ಸಚಿವ
ಶಾಸಕರು ಮತ್ತು ಮಹಿಳೆಯರ ನಡುವಿನ ಮಾತುಕತೆಯನ್ನು ಕೆಲವರು ವಿಡಿಯೋ ಚಿತ್ರಿಕರಣ ಮಾಡಿಕೊಂಡಿದ್ದು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ. ಈ ವಿಡಿಯೋ ವೈರಲ್ ಆದ ನಂತರ ಶಾಸಕರ ಹೇಳಿಕೆ ಜನರ ಗಮನಕ್ಕೆ ಬಂದಿದೆ. ಶಾಸಕ ರಮೇಶ್ ದಿವಾಕರ್ ವರ್ತನೆಗೆ ಜನರು ಆಕ್ರೋಶ ಹೊರಹಾಕಿದ್ದಾರೆ.
ಇಷ್ಟಕ್ಕೆ ಸುಮ್ಮನಾಗದ ಶಾಸಕ ರಮೇಶ್ ದಿವಾಕರ್ ಮಹಿಳೆಯರಿಗೆ ಬಿಟ್ಟಿ ಸಲಹೆಗಳನ್ನು ನೀಡಿದ್ದಾರೆ. ಮಕ್ಕಳನ್ನು ಖಾಸಗಿ ಶಾಲೆಗಳಿಂದ ಬಿಡಿಸಿ ಸರ್ಕಾರಿ ಶಾಲೆಗಳಿಗೆ ಕಳುಹಿಸಲು ತಿಳಿಸಿದ್ದಾರೆ. ಸರ್ಕಾರಿ ಶಾಲೆಗಳಲ್ಲಿ ಉಚಿತ ಶಿಕ್ಷಣ ದೊರೆಯುತ್ತದೆ ಅಲ್ಲಿಗೆ ಕಳುಹಿಸಿ ಎಂದಿದ್ದಾರೆ.
ಮಹಿಳೆಯರು ಕೂಡ ನಾವು ನಿಮಗೆ ಮತ ನೀಡಿ ಆಯ್ಕೆ ಮಾಡಿದ್ದೇವೆ. ನಿಮ್ಮ ಮಾತುಗಳು ಸರಿಯಾಗಿಲ್ಲ ಎಂದು ಶಾಸಕರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಸರ್ಕಾರಿ ಶಾಲೆಗಳನ್ನು ಮೊದಲು ಚೆನ್ನಾಗಿ ಮಾಡಿ, ನಂತರ ನಮಗೆ ಸಲಹೆ ನೀಡಿ ಎಂದು ಆಗ್ರಹಿಸಿದ್ದಾರೆ. ಸದ್ಯಕ್ಕೆ ಈ ಬಗ್ಗೆ ಶಾಸಕರು ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಆದರೆ ಸಾಮಾಜಿಕ ಜಾಲತಾಣಗಳಲ್ಲಿ ಅವರ ಈ ವಿಡಿಯೋ ವೈರಲ್ ಆಗುತ್ತಿದೆ.
ಉತ್ತರ ಪ್ರದೇಶದ ಸರ್ಕಾರಿ ಶಾಲೆಗಳ ಬಗ್ಗೆ ಕಳೆದ ಡಿಸೆಂಬರ್ ತಿಂಗಳಲ್ಲಿ ಆಮ್ ಆದ್ಮಿ ಪಾರ್ಟಿ #SelfieWithSarkaariSchool ಅಭಿಯಾನ ಆರಂಭಿಸಿ, ಉತ್ತರ ಪ್ರದೇಶದ ಶಾಲೆಗಳ ಚಿತ್ರಣವನ್ನು ಬಯಲಿಗೆಳೆದಿತ್ತು. ಉತ್ತರ ಪ್ರದೇಶದ ಪಾಳುಬಿದ್ದ ಶಾಲೆಗಳು, ದನದ ಕೊಟ್ಟಿಗೆಗಳಾಗಿರುವ ಶಾಲೆಗಳು, ಸ್ವಚ್ಛತೆ ಮಾಯವಾಗಿರುವ, ಸುಣ್ಣ-ಬಣ್ಣ ಕಾಣದೇ ಅದೇಷ್ಟೋ ವರ್ಷಗಳಾಗಿರುವ ಶಾಲೆಗಳ ಚಿತ್ರಗಳನ್ನು ಈ ಅಭಿಯಾನದಲ್ಲಿ ಹಂಚಿಕೊಳ್ಳಲಾಗಿತ್ತು.
ಇದನ್ನೂ ಓದಿ: ಗುಜರಾತ್ ಮಾಡೆಲ್: ತೀವ್ರ ಅಪೌಷ್ಟಿಕತೆಯಿಂದ ಬಳಲುತ್ತಿರುವ ಮಕ್ಕಳು & ಕೊಬ್ಬುತ್ತಿರುವ ಉದ್ಯಮಿಗಳು!


