Homeಮುಖಪುಟಆಸ್ಟ್ರೇಲಿಯಾದಲ್ಲಿ ಫೇಸ್‌ಬುಕ್ ಬ್ಯಾನ್! ಟೆಕ್ ದೈತ್ಯನ ಅಹಂಗೆ ಬಿದ್ದ ಪೆಟ್ಟು: ಎಸ್ ಕುಮಾರ್

ಆಸ್ಟ್ರೇಲಿಯಾದಲ್ಲಿ ಫೇಸ್‌ಬುಕ್ ಬ್ಯಾನ್! ಟೆಕ್ ದೈತ್ಯನ ಅಹಂಗೆ ಬಿದ್ದ ಪೆಟ್ಟು: ಎಸ್ ಕುಮಾರ್

- Advertisement -
- Advertisement -

ಆಸ್ಟ್ರೇಲಿಯಾ ತನ್ನ ಹೊಸ ಮಾಧ್ಯಮ ಕಾಯ್ದೆಯ ಮೂಲಕ ಸಾಮಾಜಿಕ ಜಾಲತಾಣವಾದ ಫೇಸ್‌ಬುಕ್ ಅನ್ನು ಹೊಣೆಗಾರನನ್ನಾಗಿ ಮಾಡುವ ಪ್ರಯತ್ನ ಮಾಡಿತ್ತು. ಆದರೆ ಅದಕ್ಕೆ ಫೇಸ್‌ಬುಕ್ ಸ್ಪಂದಿಸಿದ ರೀತಿ ಅಹಂಕಾರ, ಧಾರ್ಷ್ಟ್ರ್ಯದ ನಡೆಯಾಗಿತ್ತು. ಈ ಹಿನ್ನೆಲೆಯಲ್ಲಿ ಫೇಸ್‌ಬುಕ್ ಕುರಿತು ಹೊಸ ಚರ್ಚೆಗಳು ಆರಂಭವಾಗಿವೆ.

ಕಳೆದ ಮೂರ್ನಾಲ್ಕು ವರ್ಷಗಳಿಂದ ಫೇಸ್‌ಬುಕ್ ಮೇಲಿಂದ ಮೇಲಿಂದ ಮುಜುಗರ ಎದುರಿಸುತ್ತಲೇ ಇದೆ. ಸುಳ್ಳು ಸುದ್ದಿಗಳನ್ನು ತಡೆಯಲು ಆಗುವುದಿಲ್ಲ ಎಂದು ಅಸಹಾಯಕತೆ ಪ್ರದರ್ಶಿಸಿದ್ದು, ಬಳಕೆದಾರರ ವಿಶ್ವಾಸಾರ್ಹತೆ ಉಳಿಸಿಕೊಳ್ಳುವಲ್ಲಿ ಸೋತಿದ್ದು, ಯುರೋಪಿಯನ್ ಒಕ್ಕೂಟಕ್ಕೆ ಕೋಟ್ಯಂತರ ರೂ. ದಂಡ ತೆರುವಂತಾಗಿದ್ದು, ಚುನಾವಣೆಯಲ್ಲಿ ಪ್ರಭಾವ ಬೀರಿದ್ದು ಮತ್ತು ಮಾಹಿತಿ ಸೋರಿಕೆಯ ಹಿನ್ನೆಲೆಯಲ್ಲಿ ಅಮೆರಿಕದ ಕಾಂಗ್ರೆಸ್ ವಿಚಾರಣೆ ಎದುರಿಸಿದ್ದು, ಹೀಗೆ..

ಈಗ ಮತ್ತೆ ಅಂಥದ್ದೇ ಒಂದು ಸಂದರ್ಭವನ್ನು ಫೇಸ್‌ಬುಕ್ ಎದುರಿಸುತ್ತಿದೆ. ಆಸ್ಟ್ರೇಲಿಯಾ ಸರ್ಕಾರ ಕಳೆದ ಡಿಸೆಂಬರ್‌ನಲ್ಲಿ ಅಲ್ಲಿನ ಸಂಸತ್ತಿನಲ್ಲಿ ಹೊಸ ವಿಧೇಯಕವೊಂದನ್ನು ಮಂಡಿಸಿತು. ಅದರ ಪ್ರಕಾರ ತನ್ನ ದೇಶದ ಯಾವುದೇ ಸುದ್ದಿ ಸಂಸ್ಥೆಗಳ ಸುದ್ದಿಗಳನ್ನು ಯಾವುದೇ ರೀತಿಯಲ್ಲಿ ತನ್ನ ವೇದಿಕೆಯಲ್ಲಿ ಬಳಸಿಕೊಂಡರೆ, ಅದಕ್ಕೆ ಹಣ ಕೊಡಬೇಕು ಎಂಬುದು ಆ ವಿಧೇಯಕದ ತಿರುಳು.

ತನ್ನ ಓದುಗರಿಗೆ ಜಗತ್ತಿನ ಆಗುಹೋಗುಗಳನ್ನು ತಿಳಿಸುವ ಮೂಲಕ, ನಿರಂತರವಾಗಿ ಬಳಸುವಂತೆ ಮಾಡುವ ಗೂಗಲ್ ಆಗಲಿ, ಫೇಸ್‌ಬುಕ್ ಆಗಲಿ ಸುದ್ದಿಗಳನ್ನು ಬಳಸಿದಾಗ, ಆಯಾ ಸುದ್ದಿ ಸಂಸ್ಥೆಗೆ ಸೂಕ್ತವಾದ ನಿಗದಿತ ಮೊತ್ತವನ್ನು ಪಾವತಿಸಬೇಕೆಂದು ಸರ್ಕಾರ ಕಾನೂನು ಜಾರಿ ಮಾಡಿತು.

PC : 2GB, (ಸ್ಕಾಟ್ ಮಾರಿಸನ್)

ಮೊದಲು ಗೂಗಲ್ ಇದಕ್ಕೆ ಯುದ್ಧೋತ್ಸಾಹದಲ್ಲಿ ಪ್ರತಿರೋಧ ವ್ಯಕ್ತಪಡಿಸಿತು. ಗೂಗಲ್ ಸರ್ಚ್ ಸೇವೆಯನ್ನು ನಿಲ್ಲಿಸುವ ಬೆದರಿಕೆಯನ್ನೂ ಹಾಕಿತು. ಆದರೆ ನಂತರ ಕಾನೂನನ್ನು ಒಪ್ಪಿಕೊಂಡಿತು. ಆದರೆ ಫೇಸ್‌ಬುಕ್ ಈ ವಿಷಯದಲ್ಲಿ ತೆಗೆದುಕೊಂಡ ನಿರ್ಧಾರವೇ ಸಮಸ್ಯೆಯನ್ನು ಇನ್ನಷ್ಟು ಸಂಕೀರ್ಣವಾಗಿಸಿತು. ಫೇಸ್‌ಬುಕ್ ನಿಮ್ಮ ದೇಶದಲ್ಲಿ ಸುದ್ದಿಗಳನ್ನೇ ಪ್ರಕಟಿಸುವುದಿಲ್ಲ, ಇನ್ನು ಹಣಕೊಡುವ ಮಾತು ಎಲ್ಲಿಂದ ಬರುತ್ತದೆಂದು ಸಂಪೂರ್ಣವಾಗಿ ಆಸ್ಟ್ರೇಲಿಯಾದ ಎಲ್ಲ ಸುದ್ದಿ ತಾಣಗಳ ಮಾಹಿತಿಯನ್ನು ನಿರ್ಬಂಧಿಸಿತು. ಅಷ್ಟೇ ಅಲ್ಲ, ಕೆಲವು ಸರ್ಕಾರಿ ಹಾಗೂ ಆರೋಗ್ಯ ಸಂಬಂಧಿ ಪೇಜ್‌ಗಳನ್ನೂ ನಿರ್ಬಂಧಿಸಿತು. ಮುಕ್ತ ಇಂಟರ್ನೆಟ್ ಎಂಬ ಮೂಲ ಆಶಯಕ್ಕೆ ಧಕ್ಕೆ ಉಂಟುಮಾಡುವ ನಿರ್ಧಾರವಿದು ಎಂದು ಫೇಸ್‌ಬುಕ್ ಆಸ್ಟ್ರೇಲಿಯಾದ ಕಾನೂನನ್ನು ಜರೆಯಿತು.

ಟೆಕ್ ಸಂಸ್ಥೆಗಳ ಈ ನಿರಂಕುಶ ಧೋರಣೆಯನ್ನು ಸಹಿಸಿಕೊಳ್ಳದ ಆಸ್ಟ್ರೇಲಿಯಾದ ಪ್ರಧಾನಿ ಸ್ಕಾಟ್ ಮಾರಿಸನ್ ಭಾರತದ ಪ್ರಧಾನಿ, ಕೆನಡಾ ಪ್ರಧಾನಿ ಸೇರಿದಂತೆ ವಿವಿಧ ದೇಶಗಳ ನಾಯಕರೊಂದಿಗೆ ಒಮ್ಮತ ರೂಪಿಸುವ ನಿಟ್ಟಿನಲ್ಲಿ ಮಾತುಕತೆ ನಡೆಸಿದರು. “ಅವರು ಜಗತ್ತನ್ನು ಬದಲಿಸುತ್ತಿರಬಹುದು. ಹಾಗಂತ ಅವರು ಜಗತ್ತನ್ನು ನಡೆಸಬೇಕೆಂದಲ್ಲ ಎಂದು ಮಾರಿಸನ್ ಈ ಖಾಸಗಿ ಸಂಸ್ಥೆಗಳ ಚೌಕಟ್ಟನ್ನು ನೆನಪಿಸುವ ಪ್ರಯತ್ನ ಮಾಡಿದರು.

ಸರ್ಕಾರದ ನಡೆಯನ್ನು ಪ್ರತಿಭಟಿಸುವ ಫೇಸ್‌ಬುಕ್‌ನ ಉದ್ದೇಶ, ಸಾರ್ವಜನಿಕ ವಲಯವನ್ನು ಒಡೆಯುವ ಮತ್ತು ಸೆನ್ಸಾರ್ ಮಾಡುವ ಅಹಂಕಾರದ ನಡೆ ಎಂಬ ಟೀಕೆ ತೀವ್ರವಾಗಿ ವ್ಯಕ್ತವಾಯಿತು. ಸಮುದಾಯದ ಮೌಲ್ಯಗಳಿಗೆ ಒತ್ತು ಕೊಡುತ್ತೇವೆ, ಮುಕ್ತ ಇಂಟರ್ನೆಟ್ ಆಶಯಕ್ಕೆ ಬದ್ಧರಾಗಿದ್ದೇವೆ ಎನ್ನುವ ಫೇಸ್‌ಬುಕ್ ಹೀಗೆ ಮಾಹಿತಿಯನ್ನು ನಿರ್ಬಂಧಿಸಿದ್ದು ಸುತಾರಾಂ ಸರಿಯಲ್ಲ ಎಂಬ ಗಂಭೀರವಾದ ಟೀಕೆಗಳು ಕೇಳಿಬಂದವು. ಕೋವಿಡ್ ಕುರಿತು ಸುಳ್ಳು ಸುದ್ದಿಗಳು ವ್ಯಾಪಕವಾಗಿರುವಾಗ, ರಾಜಕೀಯ ಪಟ್ಟಭದ್ರ್ರಹಿತಾಸಕ್ತಿಗಳು ಇಂತಹ ಸುದ್ದಿ ನಿರ್ವಾತವನ್ನು ತಮ್ಮ ದುರುದ್ದೇಶಗಳಿಗೆ ಬಳಸಿಕೊಳ್ಳಬಹುದು ಎಂಬ ಕನಿಷ್ಠ ವಿವೇಚನೆಯನ್ನು ಬಳಸದೆ ಫೇಸ್‌ಬುಕ್ ಸ್ವಪ್ರತಿಷ್ಠೆಯಿಂದ ನಡೆದುಕೊಂಡಿದ್ದು ನಿಜಕ್ಕೂ ಆಘಾತಕಾರಿ ನಡೆಯೇ.

ಯಾರನ್ನು ಕೇಳಬೇಕು? ಯಾರಿಗೆ ಹೇಳಬೇಕು?

ಇಂಟರ್‌ನೆಟ್ ಮತ್ತು ಸಾಮಾಜಿಕ ಜಾಲತಾಣಗಳು ಮುಕ್ತವಾಗಿ ಲಭ್ಯವಾದ ಮೇಲೆ ಸಾಂಪ್ರದಾಯಿಕ ಸುದ್ದಿ ಸಂಸ್ಥೆಗಳು ಅಸ್ತಿತ್ವಕ್ಕೆ ಸಂಘರ್ಷ ನಡೆಸುವಂತಾಗಿವೆ. ಪತ್ರಿಕೆಗಳು ಇನ್ನೇನು ಕೆಲವೇ ದಿನಗಳಲ್ಲಿ ಇಲ್ಲವಾಗಬಹುದು ಎಂಬಷ್ಟು ಸಂಕಟದಲ್ಲಿವೆ. ಸುದ್ದಿವಾಹಿನಿಗಳು ಕೂಡ ಸಾಮಾಜಿಕ ಜಾಲತಾಣಗಳ ವೇಗದ ಮುಂದೆ ಮಂಕಾಗಿವೆ. ವೃತ್ತಿಪರತೆ, ನೈತಿಕ ಚೌಕಟ್ಟುಗಳಲ್ಲಿ ದುಡಿಯುವ ಈ ಕ್ಷೇತ್ರ ವಾಣಿಜ್ಯೋದ್ದೇಶವೊಂದನ್ನೇ ಗುರಿಯಾಗಿಸಿಕೊಂಡಿರುವ ಟೆಕ್ ದೈತ್ಯ ಮಾರುಕಟ್ಟೆ ತಂತ್ರಗಳ ಎದುರು ಯುದ್ಧಕ್ಕೆ ನಿಲ್ಲುವುದಾದರೂ ಹೇಗೆ? ಸಣ್ಣ ಪತ್ರಿಕೆಯಿಂದ ಹಿಡಿದು ಎಲ್ಲ ರೀತಿಯ ಸುದ್ದಿ ಸಂಸ್ಥೆಗಳ ಸುದ್ದಿ, ವರದಿ, ವಿಶ್ಲೇಷಣೆಗಳನ್ನು ತಮ್ಮ ಜಾಲದಲ್ಲಿ ಹಂಚಿಕೊಂಡು, ಅದರ ಮೂಲಕ ಹಣ ಗಳಿಸುತ್ತವೆ ಈ ಟೆಕ್ ಕಂಪನಿಗಳು. ಆದರೆ ಇದರ ಎಷ್ಟು ಪಾಲು ಆಯಾ ಸುದ್ದಿ ಸಂಸ್ಥೆಗಳಿಗೆ ದೊರಕುತ್ತದೆ? ಇಲ್ಲವೇ ಇಲ್ಲ ಎನ್ನುವಷ್ಟು ನಗಣ್ಯ.

ಇಲ್ಲಿಯೇ ನೆನಪಿಸುವುದಕ್ಕೆ ಬಯಸುತ್ತೇನೆ, ಜೋ ಬೈಡನ್ ಪ್ರಮಾಣ ಸ್ವೀಕರಿಸುವುದಕ್ಕೂ ಮುನ್ನ ಶ್ವೇತಭವನದ ಮೇಲೆ ನಡೆದ ದಾಳಿಯಲ್ಲಿ ಫೇಸ್‌ಬುಕ್ ಪಾತ್ರ ಏನು ಎಂಬುದನ್ನು ಕೆಲವೇ ದಿನಗಳ ಹಿಂದೆ ಗಮನಿಸಿದ್ದೇವೆ. ಭಾರತದಲ್ಲಿ ದ್ವೇಷ ಹರಡುವ ನಿರ್ದಿಷ್ಟ ಪೋಸ್ಟ್‌ಗಳು ಯಾವುದೇ ವಿಮರ್ಶೆಗೆ ಒಳಗಾಗದೆ ಮುಕ್ತವಾಗಿರುವುದು, ಸರ್ಕಾರಿ ವಿರೋಧಿ ಪೋಸ್ಟ್‌ಗಳು ಸೆನ್ಸಾರ್ ಆಗುವ ಬಗ್ಗೆ ಟೀಕೆ ವ್ಯಕ್ತವಾಗಿದ್ದನ್ನೂ ಕೇಳಿದ್ದೇವೆ.

ಇನ್ನೊಂದು ವಿಷಯ, ಜನರು ಏನನ್ನು ಓದಬೇಕು ಎಂದು ನಿರ್ಧರಿಸುವ ನಿಯಂತ್ರಣವನ್ನು ತಮ್ಮದಾಗಿಸಿಕೊಂಡಿರುವ ಈ ಸಂಸ್ಥೆಗಳು ಒಂದು ಅಪಾಯಕಾರಿ ಶಕ್ತಿಯಾಗಿರುವ ನಿದರ್ಶನಗಳನ್ನೂ ನೋಡಿದ್ದೇವೆ. ಈ ಹಿನ್ನೆಲೆಯಲ್ಲಿ ಫೇಸ್‌ಬುಕ್ ನಡೆ ಕೇವಲ ಆಸ್ಟ್ರೇಲಿಯಾಕ್ಕೆ ಮಾತ್ರ ಸೀಮಿತವಾಗಿ ನೋಡಬೇಕಾಗಿಲ್ಲ. ಆಸ್ಟ್ರೇಲಿಯಾ ಸರ್ಕಾರ ಫೇಸ್‌ಬುಕ್ ಮತ್ತು ಅಂತಹದ್ದೇ ಇತರೆ ಸಂಸ್ಥೆಗಳನ್ನು ಸಾಮಾಜಿಕ ಹೊಣೆಗಾರಿಕೆಯ ಚೌಕಟ್ಟಿಗೆ ತಂದು ನಿಲ್ಲಿಸುವ ನಿಟ್ಟಿನಲ್ಲಿ ಕಾನೂನು ತರುತ್ತಿರುವುದು ನಿಜಕ್ಕೂ ಸ್ವಾಗತಾರ್ಹ.

ಆಸ್ಟ್ರೇಲಿಯಾದಲ್ಲಿ ಹದಿನೇಳು ಲಕ್ಷ ಬಳಕೆದಾರರನ್ನು ಹೊಂದಿರುವ ಫೇಸ್‌ಬುಕ್ ಆನ್‌ಲೈನ್ ಮೂಲಕ 23%ರಷ್ಟು ಆದಾಯವನ್ನು ಗಳಿಸುತ್ತಿದೆ ಎಂದು ಆಸ್ಟ್ರೇಲಿಯಾದ ಸಂಸದ ಜೋಷ್ ಫ್ರೀಡೆನ್‌ಬರ್ಗ್ ವರದಿ ಹೇಳುತ್ತಾರೆ.

ಗೂಗಲ್ ಆಸ್ಟ್ರೇಲಿಯಾದ ಈ ಹೊಸ ಕಾನೂನನ್ನು ಸಂಪೂರ್ಣ ವಿರೋಧಿಸದೆ ತಕರಾರಿನ ದನಿಯಲ್ಲಿ ಒಂದು ವಿಡಿಯೋ ಬಿಡುಗಡೆ ಮಾಡಿದೆ. ಅದರಲ್ಲಿ ಒಂದು ಉದಾಹರಣೆಯನ್ನು ನೀಡುವ ಮೂಲಕ ಆಸ್ಟ್ರೇಲಿಯಾ ಹಣ ಪಾವತಿಸಿ ಎಂದು ಕೇಳುತ್ತಿರುವುದು ನ್ಯಾಯವೆ ಎಂದು ಕೇಳುತ್ತದೆ: ’ಒಂದು ವೇಳೆ ನಿಮ್ಮ ಸ್ನೇಹಿತ ಹತ್ತಿರದ ಒಂದೊಳ್ಳೆಯ ಕಾಫಿ ಶಾಪ್ ಸೂಚಿಸು ಎಂದಾಗ.. ನೀವು ಒಂದೆರಡು ಕಾಫಿ ಶಾಪ್‌ಗಳ ಹೆಸರು ಹೇಳುತ್ತೀರಿ. ನಿಮ್ಮ ಸ್ನೇಹಿತ ಹೋಗಿ ಕಾಫಿ ಸವಿಯುತ್ತಾನೆ. ಆದರೆ ಅದರ ಬಿಲ್ ನಿಮಗೆ ಬಂದರೆ ಹೇಗಿರುತ್ತದೆ?’ ಎಂದು ಈ ವಿಡಿಯೋ ಪ್ರಶ್ನೆಯನ್ನು ಎತ್ತುತ್ತದೆ.

ಆದರೆ ಹಾಗೆ ಯಾರೇ ಕಾಫಿ ಶಾಪ್ ಕುರಿತು ಕೇಳಿದಾಗ ನಿಮ್ಮದೇ ಕಾಫಿ ಶಾಪ್ ಹೆಸರು ಹೇಳುತ್ತೇನೆ ಎಂದು ಅವರಿಂದ ಹಣ ಪಡೆದುಕೊಳ್ಳುತ್ತಿರುವುದಾದರೆ, ಅದರಲ್ಲಿ ಪಾಲು ಕೇಳುವುದರಲ್ಲಿ ತಪ್ಪೇನಿದೆ ಎಂಬುದು ಇನ್ನೊಂದು ವಾದ!

ಗೂಗಲ್ ಈ ಎಲ್ಲ ಸಾಧ್ಯತೆಗಳನ್ನು ಹರಿದು ತನ್ನದೇ ಷರತ್ತುಗಳೊಂದಿಗೆ ಆಸ್ಟ್ರೇಲಿಯಾ ಕಾನೂನನ್ನು ಒಪ್ಪಿಕೊಂಡಿದೆ. ಆದರೆ ವಿರೋಧ ಕಟ್ಟಿಕೊಂಡಿರುವುದು ಫೇಸ್‌ಬುಕ್. ಸುದ್ದಿಗಳನ್ನು ನಿರ್ಬಂಧಿಸುವ ಮೂಲಕ ಸರ್ಕಾರದ ಮೇಲೆ ಒತ್ತಡ ತಂದು ಕಾನೂನಿನಲ್ಲಿ ರಿಯಾಯಿತಿ ಪಡೆದುಕೊಳ್ಳುವ ಪ್ರಯತ್ನ ಫೇಸ್‌ಬುಕ್ ಮಾಡಿದಂತಿದೆ. ಆದರೆ ಕೇವಲ 4% ಸುದ್ದಿಗಳನ್ನು ಹಂಚಿಕೊಳ್ಳುವ ಈ ಜಾಲದ ಹೊರತಾಗಿಯೂ ಹಲವು ಅವಕಾಶ ಮತ್ತು ಸಾಧ್ಯತೆಗಳು ಇವೆ. ಫೇಸ್‌ಬುಕ್ ಈ ಮೊಂಡು ಹಾಗೂ ಅಹಂಕಾರದ ನಡೆಯಿಂದಾಗಿ ಅಂತಹ ಅವಕಾಶಗಳಿಗೆ ಇನ್ನಷ್ಟು ಪುಷ್ಟಿಯೂ ಸಿಗಬಹುದು.

ಪತ್ರಿಕೋದ್ಯಮ ಈ ಟೆಕ್ ಸಂಸ್ಥೆಗಳ ಆದ್ಯತೆ ಅಲ್ಲವೇ ಅಲ್ಲ. ಪತ್ರಿಕೋದ್ಯಮ ಸಾರ್ವಜನಿಕ ಬದ್ಧತೆ. ಈ ಬದ್ಧತೆ ಟೆಕ್ ಕಂಪನಿಗಳ ಪಾಲಿಗೆ ಕೇವಲ ಸಿಎಸ್‌ಆರ್ ಚಟುವಟಿಕೆ. ಉಳಿದದ್ದು ಕುತ್ತಿಗೆ ಕುಯ್ಯುವ ಸ್ಪರ್ಧೆ. ಹಾಗಾಗಿ ಫೇಸ್‌ಬುಕ್‌ನಂತಹ ಟೆಕ್ ಸಂಸ್ಥೆಗಳ ನಿಯಂತ್ರಣದ ವಿಷಯದಲ್ಲಿ ಆಸ್ಟ್ರೇಲಿಯಾದ ನಡೆಯನ್ನು ಇನ್ನು ಕೆಲವು ದೇಶಗಳನ್ನು ಅನುಸರಿಸಬಹುದು. ಟೆಕ್ ದೈತ್ಯರ ಏಕಾಧಿಪತ್ಯವನ್ನು ನಿಯಂತ್ರಿಸಲು ಸಾಧ್ಯವೇ ಇಲ್ಲವೆಂಬಷ್ಟು ಬಲಿಷ್ಠವಾಗಿ ಅವು ಬೆಳೆದುನಿಂತಿದೆ. ಆದರೆ ಈ ಸಂಸ್ಥೆಗಳನ್ನು ಬದ್ಧತೆ ಮತ್ತು ನೈತಿಕ ಚೌಕಟ್ಟಿಗೆ ತಂದು ನಿಲ್ಲಿಸುವ ಪ್ರಯತ್ನದಲ್ಲೇ ಅವರನ್ನು ನಡುಬಗ್ಗಿಸುವಂತೆ ಮಾಡಲು ಸಾಧ್ಯವಿರುವಂತೆ ಕಾಣುತ್ತದೆ.

ಅತಿಯಾದ ಅಧಿಕಾರ ಅಥವಾ ಶಕ್ತಿಯೊಂದಿಗೆ ಅಷ್ಟೇ ದೊಡ್ಡ ಪ್ರಮಾಣದ ಜವಾಬ್ದಾರಿ ಬರುತ್ತದೆ ಎಂಬ ಮಾತೊಂದಿದೆ. ತಂತ್ರಜ್ಞಾನ, ಜಾಲ ಮತ್ತು ಸಂಪನ್ಮೂಲಗಳ ಮೂಲಕ ಶಕ್ತಿಶಾಲಿಯೂ, ಪ್ರಭಾವಶಾಲಿಯಾಗಿಯೂ ಬೆಳೆದಿರುವ ಈ ಸಂಸ್ಥೆಗಳು ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕಾದ್ದು ಹೊಣೆಗಾರಿಕೆ. ಆದರೆ ಇವುಗಳು ರಾಜಕೀಯ ಶಕ್ತಿಗಳ ಅಸ್ತ್ರವಾಗಿಯೂ ಮತ್ತು ಮಾರುಕಟ್ಟೆಯ ತಂತ್ರವಾಗಿಯೂ ಉಳಿದುಕೊಂಡಿರುವುದು, ನಿಜಕ್ಕೂ ಸಮಾಜಕ್ಕೆ ಯಾವುದೇ ಒಳಿತುಂಟು ಮಾಡುವಂಥದ್ದಲ್ಲ.

ಗೂಗಲ್ ಅಥವಾ ಫೇಸ್‌ಬುಕ್‌ಗಳ ಸುದ್ದಿ ಮೂಲಗಳು ಯಾಕಾಗಬೇಕು? ಹತ್ತಾರು ನ್ಯೂಸ್ ಅಗ್ರಿಗೇಟರ್‌ಗಳು ಹೆಚ್ಚು ಸಮರ್ಥವಾಗಿ, ಪಾರದರ್ಶಕವಾಗಿ ಕಾರ್ಯನಿರ್ವಹಿಸುತ್ತಿವೆ. ಇವುಗಳತ್ತ ಜನ ವಾಲುವಂತಾದರೆ, ದೈತ್ಯ ಟೆಕ್ ಕಂಪನಿಗಳ ಅಹಂಕಾರವನ್ನು ಸ್ವಲ್ಪ ಅಲುಗಾಡಿಸಬಹುದು.


ಇದನ್ನೂ ಓದಿ: ಸುದ್ದಿಗಳಿಗೆ ಹಣ ಪಾವತಿಸಲಿರುವ ಗೂಗಲ್, ಫೇಸ್‌ಬುಕ್: ಮಹತ್ವದ ಶಾಸನ ಅಂಗೀಕರಿಸಿದ ಆಸ್ಟ್ರೇಲಿಯಾ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣ: ಅಪಹರಣಕ್ಕೊಳಗಾಗಿದ್ದ ಸಂತ್ರಸ್ತೆಯ ರಕ್ಷಣೆ

0
ಅಪಹರಣಕ್ಕೊಳಗಾಗಿದ್ದ ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತೆ, ಶಾಸಕ ಹೆಚ್‌.ಡಿ ರೇವಣ್ಣ ಅವರ ಮನೆ ಕೆಲಸದ ಮಹಿಳೆಯನ್ನು ವಿಶೇಷ ತನಿಖಾ ತಂಡ (ಎಸ್‌ಐಟಿ)ದ ಅಧಿಕಾರಿಗಳು ಇಂದು (ಮೇ 4) ರಕ್ಷಣೆ ಮಾಡಿದ್ದಾರೆ. ಪ್ರಜ್ವಲ್...