’ಉದ್ಯೋಗಗಳು ಮತ್ತು ಶಿಕ್ಷಣದಲ್ಲಿ ಎಷ್ಟು ತಲೆಮಾರುಗಳವರೆಗೆ ಮೀಸಲಾತಿ ಮುಂದುವರಿಯುತ್ತದೆ..? ಎಂದು ಶುಕ್ರವಾರ ಸುಪ್ರೀಂಕೋರ್ಟ್ ಪ್ರಶ್ನಿಸಿದೆ. ಮರಾಠಾ ಕೋಟಾ ಪ್ರಕರಣದ ವಿಚಾರಣೆಯ ಸಮಯದಲ್ಲಿ ಈ ಬಗ್ಗೆ ಮಾತನಾಡಿರುವ ಸುಪ್ರೀಂ ಕೋರ್ಟ್, ಒಂದು ವೇಳೆ, ಒಟ್ಟಾರೆ 50 % ಮಿತಿಯನ್ನು ತೆಗೆದುಹಾಕಿದರೆ ಉದ್ಭವಿಸುವ “ಫಲಿತಾಂಶಿಕ ಅಸಮಾನತೆ”ಯ ಬಗ್ಗೆ ಕಳವಳ ವ್ಯಕ್ತಪಡಿಸಿದೆ.
ನ್ಯಾಯಮೂರ್ತಿ ಅಶೋಕ್ ಭೂಷಣ್ ನೇತೃತ್ವದ ಎಲ್.ನಾಗೇಶ್ವರ ರಾವ್, ಎಸ್ ಅಬ್ದುಲ್ ನಜೀರ್, ಹೇಮಂತ್ ಗುಪ್ತಾ ಮತ್ತು ಎಸ್ ರವೀಂದ್ರ ಭಟ್ ಅವರನ್ನು ಒಳಗೊಂಡ ನ್ಯಾಯಾಧೀಶರ ಸಂವಿಧಾನ ಪೀಠದ ಎದುರು ಮರಾಠಾ ಕೋಟ ಪ್ರಕರಣದ ವಿಚಾರಣೆ ನಡೆಯಿತು. ಮಹಾರಾಷ್ಟ್ರ ಸರ್ಕಾರದ ಪರ ಹಾಜರಾದ ಹಿರಿಯ ವಕೀಲ ಮುಕುಲ್ ರೋಹಟಗಿ, ಕೋಟಾಕ್ಕೆ ಮಿತಿ ಹಾಕುವ ಮಂಡಲ್ ತೀರ್ಪನ್ನು ಬದಲಾದ ಸಂದರ್ಭಗಳಲ್ಲಿ ಮರುಪರಿಶೀಲಿಸುವ ಅಗತ್ಯವಿದೆ ಎಂದು ಒತ್ತಿ ಹೇಳಿದ್ದಾರೆ
ಬದಲಾದ ಸನ್ನಿವೇಶಗಳನ್ನು ಗಮನದಲ್ಲಿಟ್ಟುಕೊಂಡು ಮೀಸಲಾತಿ ಕೋಟಾಗಳನ್ನು ಸರಿಪಡಿಸಲು ನ್ಯಾಯಾಲಯಗಳು ಅದನ್ನು ರಾಜ್ಯಗಳಿಗೆ ಬಿಡಬೇಕು ಎಂದರು. 1931 ರ ಜನಗಣತಿಯ ಮೇಲೆ ಮಂಡಲ್ ತೀರ್ಪನ್ನು ರೂಪಿಸಲಾಯಿತು ಎಂದು ಹಿರಿಯ ವಕೀಲ ಮುಕುಲ್ ರೋಹಟಗಿ ಹೇಳಿದ್ದಾರೆ.
ಇದನ್ನೂ ಓದಿ: ಮೋದಿ, ಅಮಿತ್ ಶಾ ಸೇರಿದಂತೆ ಬಿಜೆಪಿ ನಾಯಕರನ್ನು ‘ದುರ್ಯೋಧನ, ದುಶ್ಯಾಶನ’ ಎಂದ ಮಮತಾ
ಮರಾಠರಿಗೆ ಕೋಟಾ ನೀಡುವ ಮಹಾರಾಷ್ಟ್ರ ಕಾನೂನಿನ ಪರವಾಗಿ ವಾದಿಸಿದ ರೊಹಟಗಿ, ಇಂದ್ರಾ ಸಾಹ್ನಿ ಪ್ರಕರಣ ಎಂದೂ ಕರೆಯಲ್ಪಡುವ ಮಂಡಲ್ ತೀರ್ಪಿನ ವಿವಿಧ ಅಂಶಗಳನ್ನು ಉಲ್ಲೇಖಿಸಿದರು. ಆರ್ಥಿಕವಾಗಿ ದುರ್ಬಲ ವರ್ಗದ ಜನರಿಗೆ ಶೇಕಡಾ 10 ರಷ್ಟು ಕೋಟಾ ನೀಡುವ ಕೇಂದ್ರದ ನಿರ್ಧಾರವು ಶೇ. 50 ರಷ್ಟು ಮೀಸಲಾತಿ ಮಿತಿಯ ಉಲ್ಲಂಘನೆಯಾಗಿದೆ ಎಂದು ಹೇಳಿದರು.
“ನೀವು ಸೂಚಿಸುವಂತೆ ಮೀಸಲಾತಿಗೆ ಶೇ. 50ರ ಮಿತಿ ಇಲ್ಲದಿದ್ದರೆ, ಆಗ ಸಮಾನತೆಯ ಪರಿಕಲ್ಪನೆ ಏನು? ನಾವು ಅಂತಿಮವಾಗಿ ಅದನ್ನು ಎದುರಿಸಬೇಕಾಗುತ್ತದೆ. ಅದರ ಬಗ್ಗೆ ನಿಮ್ಮ ವಿಚಾರವೇನು? ಫಲಿತಾಂಶದ ಅಸಮಾನತೆಯ ಬಗ್ಗೆ ನಿಮ್ಮ ಅಭಿಪ್ರಾಯ ಏನು? ಎಷ್ಟು ತಲೆಮಾರಿನವರೆಗೆ ಅದನ್ನು ಮುಂದುವರೆಸುತ್ತೀರಿ? ಎಂದು ನ್ಯಾಯಪೀಠ ರೊಹಟಗಿ ಅವರನ್ನು ಪ್ರಶ್ನಿಸಿತು.
1931 ರ ಜನಗಣತಿಯ ಮೇರೆಗೆ ಮಂಡಲ್ ತೀರ್ಪನ್ನು ಈಗ ಮರುಪರಿಶೀಲಿಸಲು ಹಲವು ಕಾರಣಗಳಿವೆ . ಮೇಲಾಗಿ, ಈಗ ಜನಸಂಖ್ಯೆಯು ಅನೇಕ ಪಟ್ಟು ಹೆಚ್ಚಾಗಿದ್ದು, 135 ಕೋಟಿಗೆ ತಲುಪಿದೆ ಎಂದು ರೊಹಟಗಿ ವಾದ ಮಂಡಿಸಿದರು.
ಸ್ವಾತಂತ್ರ್ಯ ಬಂದು 70 ವರ್ಷಗಳು ಕಳೆದಿವೆ ಮತ್ತು ರಾಜ್ಯಗಳು ಹಲವು ಪ್ರಯೋಜನಕಾರಿ ಯೋಜನೆಗಳನ್ನು ನಡೆಸುತ್ತಿವೆ. ಈಗ “ಯಾವುದೇ ಅಭಿವೃದ್ಧಿ ನಡೆದಿಲ್ಲ, ಯಾವುದೇ ಹಿಂದುಳಿದ ಜಾತಿ ಮುಂದಯವರೆದಿಲ್ಲ ಎಂದು ನಾವು ಒಪ್ಪಿಕೊಳ್ಳಬಹುದೇ” ಎಂದು ನ್ಯಾಯಪೀಠ ಕೇಳಿತು.
ಮಂಡಲ್ ತೀರ್ಪನ್ನು ಪರಿಶೀಲಿಸುವ ಉದ್ದೇಶವೆಂದರೆ ಹಿಂದುಳಿದಿರುವಿಕೆಯಿಂದ ಹೊರಬಂದವರನ್ನು ಪಟ್ಟಿಯಿಂದ ಹೊರಗಿಡುವುದೇ ಆಗಿದೆ ಎಂದು ಪೀಠ ತಿಳಿಸಿತು.
ಇದನ್ನೂ ಓದಿ: ಜೀನ್ಸ್ ಪ್ಯಾಂಟ್ ವಿವಾದ: ಸಾಂಸ್ಕೃತಿಕ ಪರಂಪರೆ ಉಳಿಸುವುದು ಮಹಿಳೆಯರ ಜವಾಬ್ದಾರಿ ಎಂದ ಉತ್ತರಾಖಂಡ ಸಿಎಂ…
“ಹೌದು, ನಾವು ಮುಂದೆ ಸಾಗಿದ್ದೇವೆ. ಅಂದರೆ ಹಿಂದುಳಿದ ವರ್ಗಗಳು ಶೇಕಡಾ 50 ರಿಂದ 20 ಕ್ಕೆ ಇಳಿದಿವೆ ಎಂದರ್ಥವಲ್ಲ. ಈ ದೇಶದಲ್ಲಿ ಇನ್ನೂ ಹಸಿವಿನಿಂದ ಸಾಯುವವರಿದ್ದಾರೆ. ಇಂದ್ರ ಸಾಹ್ನಿ ತೀರ್ಪು ಸಂಪೂರ್ಣವಾಗಿ ತಪ್ಪು, ಅದನ್ನು ಕಸದ ಬುಟ್ಟಿಗೆ ಹಾಕಿ ಎಂದು ಹೇಳಲು ನಾನು ಪ್ರಯತ್ನಿಸುತ್ತಿಲ್ಲ. 30 ವರ್ಷಗಳು ಕಳೆದಿವೆ, ಕಾನೂನು ಬದಲಾಗಿದೆ, ಜನಸಂಖ್ಯೆ ಬೆಳೆದಿದೆ, ಹಿಂದುಳಿದ ವ್ಯಕ್ತಿಗಳೂ ಹೆಚ್ಚಿರಬಹುದು ಎಂದು ನಾನು ಸಮಸ್ಯೆಗಳನ್ನು ಎತ್ತುತ್ತಿದ್ದೇನೆ ಎಂದು ರೊಹಟಗಿ ಹೇಳಿದ್ದಾರೆ.
ಅವರು ಸಂವಿಧಾನದಲ್ಲಿ ಮಾಡಿದ ತಿದ್ದುಪಡಿಗಳನ್ನು ಉಲ್ಲೇಖಿಸಿದರು ಮತ್ತು ದೇಶವು ತನ್ನ ಹಿಂದುಳಿದ ವರ್ಗಗಳಿಗೆ ಅಗತ್ಯವಿರುವ “ವಿಮೋಚನೆಯ ಸಮೀಪ ಎಲ್ಲಿಯೂ” ತಲುಪಿಲ್ಲ ಎಂಬುದಕ್ಕೆ ಈ ತಿದ್ದುಪಡಿಗಳು ಸೂಚಕಗಳಾಗಿವೆ ಎಂದು ಹೇಳಿದರು.
ಹಲವಾರು ರಾಜ್ಯಗಳಲ್ಲಿ ಮೀಸಲಾತಿ ಶೇಕಡಾ 50 ಕ್ಕಿಂತ ಹೆಚ್ಚಿರುವಾಗ ಮತ್ತು ಈ ಪರಿಸ್ಥಿತಿಯಲ್ಲಿ, ಇದು ಬರ್ನಿಂಗ್ ಇಶ್ಯೂ ಅಲ್ಲ ಮತ್ತು 30 ವರ್ಷಗಳ ನಂತರ ಒಂದು ಮರುಪರಿಶೀಲನೆ ಅಗತ್ಯವಿಲ್ಲ ಎಂದು ಹೇಳಲಾಗುವುದಿಲ್ಲ ಎಂದು ಅವರು ಹೇಳಿದರು. ಪ್ರಕರಣದ ವಾದಗಳು ಅಪೂರ್ಣವಾಗಿದ್ದು, ಸೋಮವಾರ ಪುನರಾರಂಭಗೊಳ್ಳಲಿವೆ.
ಬಾಂಬೆ ಹೈಕೋರ್ಟ್ ತೀರ್ಪನ್ನು ಪ್ರಶ್ನಿಸಿದ ಹಲವು ಪ್ರಕರಣಗಳ ವಿಚಾರಣೆಯನ್ನು ಉನ್ನತ ನ್ಯಾಯಾಲಯ ನಡೆಸುತ್ತಿದೆ, ಮಹಾರಾಷ್ಟ್ರದಲ್ಲಿ ಪ್ರವೇಶಾತಿಗಳು ಮತ್ತು ಸರ್ಕಾರಿ ಉದ್ಯೋಗಗಳಲ್ಲಿ ಮರಾಠರಿಗೆ ಕೋಟಾ ನೀಡುವುದನ್ನು ಬಾಂಬೇ ಹೈಕೋರ್ಟ್ ಎತ್ತಿಹಿಡಿದಿದೆ.
ಇದನ್ನೂ ಓದಿ: 86 ಮೇಯರ್/ಅಧ್ಯಕ್ಷ ಸ್ಥಾನಗಳಲ್ಲಿ 52 ಹುದ್ದೆಗಳನ್ನು ಮಹಿಳೆಯರಿಗೆ ಮೀಸಲಿಟ್ಟ ‘ಜಗನ್’ ಸರ್ಕಾರ!


