ಲಾಕ್‌ಡೌನ್ ಅವಧಿಯಲ್ಲಿ (ಜೂನ್ ನಿಂದ ಅಕ್ಟೋಬರ್ ತಿಂಗಳ ನಡುವೆ) ಬಾಲ್ಯ ವಿವಾಹಗಳ ಸಂಖ್ಯೆ 33% ಗಿಂತ ಹೆಚ್ಚಾಗಿದೆ. ಅದರಲ್ಲೂ ಆಗಸ್ಟ್ ತಿಂಗಳಲ್ಲೇ 88% ಬಾಲ್ಯವಿವಾಹಗಳು ನಡೆದಿವೆ ಎಂದು ಆರ್‌ಟಿಐ ವರದಿ ಉಲ್ಲೇಖಿಸಿ ದಿ ವೈರ್‌ನ ವರದಿ ಮಾಡಿದೆ.
ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯಕ್ಕೆ ಮತ್ತು ಚೈಲ್ಡ್‌ಲೈನ್ ಇಂಡಿಯಾ ಫೌಂಡೇಶನ್‌ಗೆ (ಸಿಐಎಫ್) ಸಲ್ಲಿಸಿದ್ದ ಆರ್‌ಟಿಐ ಅರ್ಜಿಯಲ್ಲಿ ಲಾಕ್‌ಡೌನ್ ನಲ್ಲಿ ಬಾಲ್ಯವಿವಾಹಕ್ಕೆ ಒಳಗಾದವರ ಬಗ್ಗೆ ಮಾಹಿತಿ ದೊರೆತಿದೆ. ಆದರೂ ಕೂಡ, 2020 ರ ಸೆಪ್ಟೆಂಬರ್‌ನಲ್ಲಿ ನಡೆದ ಸಂಸತ್ತಿನ ಮಾನ್ಸೂನ್ ಅಧಿವೇಶನದಲ್ಲಿ, ರಾಜ್ಯಸಭಾ ಸಂಸದ ಅಮನ್ ಪಟ್ನಾಯಕ್ ಲಾಕ್‌ಡೌನ್ ಅವಧಿಯಲ್ಲಿ ಹೆಚ್ಚುತ್ತಿರುವ ಬಾಲ್ಯ ವಿವಾಹ ಪ್ರಕರಣಗಳ ಬಗ್ಗೆ ಸರ್ಕಾರಕ್ಕೆ ಪ್ರಶ್ನಿಸಿದ್ದರು.
ಇದಕ್ಕೆ ಪ್ರತಿಕ್ರಿಯೆಯಾಗಿ ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಸ್ಮೃತಿ ಇರಾನಿ, “ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ (ಎನ್‌ಸಿಆರ್‌ಬಿ) ಯಿಂದ ಪಡೆದ ಮಾಹಿತಿಯ ಪ್ರಕಾರ, ಲಾಕ್‌ಡೌನ್ ಅವಧಿಯಲ್ಲಿ ಹೆಚ್ಚುತ್ತಿರುವ ಬಾಲ್ಯ ವಿವಾಹ ಪ್ರಕರಣಗಳನ್ನು ಸೂಚಿಸಲು ಯಾವುದೇ ಮಾಹಿತಿಯಿಲ್ಲ” ಎಂದಿದ್ದರು.
ಇದನ್ನೂ ಓದಿ: ರೈತರ ಮೇಲೆ ರಸಗೊಬ್ಬರ ದರ ಹೆಚ್ಚಳದ ಬರೆ: ಸರ್ಕಾರದ ಕ್ರಮ ಖಂಡಿಸಿದ ಎಸ್‌ಕೆಎಂ
ಸಚಿವಾಲಯದ ಮುಂದೆ ಸಲ್ಲಿಸಿದ್ದ ಆರ್‌ಟಿಐ ಅರ್ಜಿಯಲ್ಲಿ ನಾಲ್ಕು ವಿಚಾರಗಳಿಗೆ ಸಂಬಂಧಿಸಿದಂತೆ ಉತ್ತರವನ್ನು ಬಯಸಿತ್ತು..
1. 2020 ರ ಏಪ್ರಿಲ್ 1 ರಿಂದ 2020 ರ ಅಕ್ಟೋಬರ್ 31 ರವರೆಗೆ ಪ್ರತಿ ತಿಂಗಳು ಬಾಲ್ಯವಿವಾಹದ ಘಟನೆಗಳ ಬಗ್ಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯವು ಸ್ವೀಕರಿಸುವ ರಾಜ್ಯವಾರು ದೂರುಗಳ ಮಾಹಿತಿ.
2. 2019 ರ ಏಪ್ರಿಲ್ 1 ರಿಂದ 2019 ರ ಅಕ್ಟೋಬರ್ 31 ರವರೆಗೆ ಪ್ರತಿ ತಿಂಗಳು ಬಾಲ್ಯವಿವಾಹದ ಘಟನೆಗಳ ಬಗ್ಗೆ ಸಚಿವಾಲಯವು ಸ್ವೀಕರಿಸುವ ರಾಜ್ಯವಾರು ದೂರುಗಳ ಮಾಹಿತಿ.
3. ಬಾಲ್ಯ ವಿವಾಹಗಳ ಘಟನೆಗಳ ಬಗ್ಗೆ ಕೇಂದ್ರ ಸಚಿವೆ ಸ್ಮೃತಿ ಇರಾನಿಗೆ 2020 ರ ಏಪ್ರಿಲ್ 1 ರಿಂದ 2020 ರ ಸೆಪ್ಟೆಂಬರ್ 17 ರವರೆಗೆ ದೊರೆತಿರುವ ಮಾಹಿತಿ ಬಗ್ಗೆ ವಿವರಿಸಿ.
4. 2020 ರ ಏಪ್ರಿಲ್ 1 ರಿಂದ 2020 ರ ಸೆಪ್ಟೆಂಬರ್ 17 ರ ನಡುವಿನ ಬಾಲ್ಯ ವಿವಾಹಗಳ ಘಟನೆಗಳ ಬಗ್ಗೆ ಬಂದಿರುವ ಮಾಹಿತಿಯನ್ನು ರಾಜ್ಯಸಭಾದಲ್ಲಿ ಬಳಸದಿರುವ ಬಗ್ಗೆ ಮಾಹಿತಿ ಕೊರಲಾಗಿತ್ತು.
ಸಚಿವಾಲಯವು ಆರಂಭದಲ್ಲಿ ಈ ಪ್ರಶ್ನೆಗಳಿಗೆ “ಈ ವಿಭಾಗದಲ್ಲಿ ಲಭ್ಯವಿಲ್ಲ” ಎಂದು ಹೇಳಿ, ಮೊದಲ ಮೂರು ಪ್ರಶ್ನೆಗಳನ್ನು ಎನ್‌ಸಿಆರ್‌ಬಿಗೆ ವರ್ಗಾಯಿಸಿತು. ಕುತೂಹಲಕಾರಿಯಾಗಿ, ಮೂರನೆಯ ಪ್ರಶ್ನೆ ನಿರ್ದಿಷ್ಟವಾಗಿ ಇರಾನಿ ಮತ್ತು ಸಚಿವಾಲಯಕ್ಕೆ ಸಂಬಂಧಿಸಿದೆ, ಆದರೆ ಸಚಿವಾಲಯ ಅದನ್ನು ಎನ್‌ಸಿಆರ್‌ಬಿಗೆ ವರ್ಗಾಯಿಸಿತು. ನಾಲ್ಕನೆಯ ಪ್ರಶ್ನೆಗೆ, ಸಚಿವಾಲಯವು “ಮಕ್ಕಳ ಕಲ್ಯಾಣ ವಿಭಾಗಕ್ಕೆ ಸಂಬಂಧಿಸಿಲ್ಲ” ಎಂದು ಹೇಳಿದೆ.

ಮೇಲ್ಮನವಿಯ ಮೇರೆಗೆ, ಚೈಲ್ಡ್‌ಲೈನ್ ಇಂಡಿಯಾ ಫೌಂಡೇಶನ್‌ಗೆ (ಸಿಐಎಫ್) ಅರ್ಜಿ ಕಳುಹಿಸಲಾಗಿತ್ತು. ಇದು ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯದ ನೋಡಲ್ ಏಜೆನ್ಸಿಯಾಗಿದ್ದು, ದೇಶಾದ್ಯಂತ ಚಿಲ್ಡ್‌ಲೈನ್ 1098 ಸೇವೆಗಳನ್ನು ಸ್ಥಾಪಿಸುವುದು, ನಿರ್ವಹಿಸುವುದು ಮತ್ತು ಮೇಲ್ವಿಚಾರಣೆ ಮಾಡುವ ಜವಾಬ್ದಾರಿಯನ್ನು ಹೊಂದಿದೆ.
ಈ ಘಟಕವು, ಆರ್‌ಟಿಐಗೆ ಪ್ರತಿಕ್ರಿಯೆ ನೀಡಿದ್ದು, ಲಾಕ್‌ಡೌನ್ ತಿಂಗಳುಗಳಲ್ಲಿ ಬಾಲ್ಯ ವಿವಾಹ ಪ್ರಕರಣಗಳು ಹೆಚ್ಚಾಗಿ ವರದಿಯಾಗಿರುವುದನ್ನು ತಿಳಿಸಿದೆ.
ಚೈಲ್ಡ್‌ಲೈನ್ 1098 ಒದಗಿಸಿದ ಮಾಹಿತಿಯ ಆಧಾರದ ಮೇಲೆ 5,584 ಬಾಲ್ಯ ವಿವಾಹಗಳನ್ನು ನಿಲ್ಲಿಸಲು ಸಚಿವಾಲಯ ಮಧ್ಯಪ್ರವೇಶಿಸಿದೆ ಎಂದು ಜೂನ್ 2020ರಲ್ಲಿ ಎಎನ್‌ಐ, ಟೈಮ್ಸ್ ಆಫ್ ಇಂಡಿಯಾ ಮತ್ತು ಇತರ ಮಾಧ್ಯಮಗಳು ವರದಿ ಮಾಡಿದ್ದವು.
18,200 ಕ್ಕೂ ಹೆಚ್ಚು ಕರೆಗಳಿಗೆ ಪ್ರತಿಕ್ರಿಯೆಯಾಗಿ, 898 ಬಾಲ್ಯ ವಿವಾಹಗಳನ್ನು ಸಚಿವಾಲಯ ತಡೆದಿದೆ ಎಂಬುದರ ಬಗ್ಗೆ ಸಚಿವೆ ಸ್ಮೃತಿ ಇರಾನಿ ಸ್ವತಃ ಏಪ್ರಿಲ್‌ನಲ್ಲಿ ಟ್ವೀಟ್ ಮಾಡಿದ್ದರು.
Childline 1098 – @MinistryWCD’s emergency helpline for children prevented 898 child marriages during lockdown & made necessary interventions in response to over 18,200 calls.
If you know of any child in distress, please reach out to us on Childline 1098. pic.twitter.com/TWu2DdIqmV
— Smriti Z Irani (@smritiirani) April 29, 2020
ಆದರೆ, ಕುತೂಹಲಕಾರಿ ಸಂಗತಿಯೆಂದರೆ, ಸಂಸತ್ತಿನಲ್ಲಿ ಬಾಲ್ಯ ವಿವಾಹಗಳ ಬಗ್ಗೆ ಕೇಳಲಾದ ಪ್ರಶ್ನೆಗೆ ಸಚಿವಾಲಯವು “ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ (ಎನ್‌ಸಿಆರ್‌ಬಿ) ಯಿಂದ ಪಡೆದ ಮಾಹಿತಿಯ ಪ್ರಕಾರ, ಲಾಕ್‌ಡೌನ್ ಅವಧಿಯಲ್ಲಿ ಹೆಚ್ಚುತ್ತಿರುವ ಬಾಲ್ಯ ವಿವಾಹ ಪ್ರಕರಣಗಳನ್ನು ಸೂಚಿಸಲು ಯಾವುದೇ ಮಾಹಿತಿಯಿಲ್ಲ” ಎಂದು ಉತ್ತರಿಸಿದೆ. ಜೊತೆಗೆ ಆರ್‌ಟಿಐ ಪ್ರಶ್ನೆಗೂ ನೀಡಿರಯವ ಪ್ರತಿಕ್ರಿಯೆಯೆಂದರೆ, ಲಾಕ್‌ಡೌನ್ ಅವಧಿಯಲ್ಲಿ ಸಂಗ್ರಹಿಸಿದ ಡೇಟಾವನ್ನು ಎನ್‌ಸಿಆರ್‌ಬಿ ಹೊಂದಿಲ್ಲ ಮತ್ತು ಅದು ಲಭ್ಯವಿಲ್ಲ ಎಂಬುದಾಗಿದೆ.
ಇತ್ತೀಚೆಗೆ ಪ್ರಕಟವಾದ ಎನ್‌ಎಫ್‌ಎಚ್‌ಎಸ್ (ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ) ಫ್ಯಾಕ್ಟ್‌ಶೀಟ್ ದೇಶದ ವಿವಿಧ ಭಾಗಗಳಲ್ಲಿ ಬಾಲ್ಯವಿವಾಹಗಳು ಹೆಚ್ಚರುವ ಪ್ರಮಾಣವನ್ನು ತೋರಿಸುತ್ತದೆ. ಕೆಲವು ರಾಜ್ಯಗಳಲ್ಲಿ, ಸ್ತ್ರೀ ಜನಸಂಖ್ಯೆಯ 40% ಕ್ಕಿಂತ ಹೆಚ್ಚು ಜನರು 18 ವರ್ಷ ತುಂಬುವ ಮೊದಲೇ ಬಾಲ್ಯವಿವಾಹಕ್ಕೆ ಒಳಗಾಗಿದ್ದಾರೆ ಎಂದು ವರದಿಯಲ್ಲಿ ಹೇಳಲಾಗಿದೆ.
ಇದನ್ನೂ ಓದಿ: ಕೊರೊನಾ ಅಲ್ಲ ಅದಕ್ಕಿಂತ ದೊಡ್ಡದು ಬಂದರೂ ರೈತ ಹೋರಾಟ ನಿಲ್ಲದು- ರಾಕೇಶ್ ಟಿಕಾಯತ್


