ಕೊರೊನಾ ವ್ಯಾಕ್ಸಿನೇಷನ್ ಮೇಲಿನ ವಯಸ್ಸಿನ ನಿರ್ಬಂಧಗಳನ್ನು ತೆಗೆದುಹಾಕುವಂತೆ ಕೇಂದ್ರ ಸರ್ಕಾರವನ್ನು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಕೋರಿದ್ದಾರೆ. ಇನ್ನು ಕೇವಲ 7 ರಿಂದ 10 ದಿನಗಳವರೆಗೆ ಆಗುವಷ್ಟು ಲಸಿಕೆಗಳು ಮಾತ್ರ ಉಳಿದಿದ್ದು, ದೆಹಲಿಯಲ್ಲಿ ಪರಿಸ್ಥಿತಿ ಆತಂಕಕಾರಿಯಾಗಿದೆ ಎಂದು ಹೇಳಿದ್ದಾರೆ.
ಕೊರೊನಾ ಮೂರನೇ ಅಲೆಯಲ್ಲಿ ದೆಹಲಿ ಕಂಡದ್ದಕ್ಕಿಂತ ಈ ಬಾರಿಯ ನಾಲ್ಕನೇ ಅಲೆಯಲ್ಲಿ ಕೊರೊನಾ ಪ್ರಕರಣಗಳ ಉಲ್ಬಣವು “ಕೆಟ್ಟದಾಗಿದೆ” ಮತ್ತು ಇದು “ಹೆಚ್ಚು ಅಪಾಯಕಾರಿ” ಎಂದು ಕೇಂದ್ರ ಸರ್ಕಾರಕ್ಕೆ ತಿಳಿಸಿದ್ದಾರೆ.
ಸಾಂಕ್ರಾಮಿಕ ರೋಗವನ್ನು ನಿಭಾಯಿಸಲು ಪೂರ್ಣ ಲಾಕ್ ಡೌನ್ ಪರಿಹಾರವಲ್ಲ ಎಂದು ಮುಖ್ಯಮಂತ್ರಿ ಕೇಜ್ರಿವಾಲ್ ಹೇಳಿದ್ದರು, ಜೊತೆಗೆ ದೆಹಲಿಯಲ್ಲಿ ಹಲವಾರು ಹೊಸ ನಿರ್ಬಂಧಗಳನ್ನು ಘೋಷಿಸಿದ್ದರು. “ಕಳೆದ 24 ಗಂಟೆಗಳಲ್ಲಿ ದೆಹಲಿಯಲ್ಲಿ 10,000 ಕ್ಕೂ ಹೆಚ್ಚು ಕೊರೊನಾ ಪ್ರಕರಣಗಳು ವರದಿಯಾಗಿವೆ, ಇದು ಆತಂಕಕಾರಿ ಪರಿಸ್ಥಿತಿ” ಎಂದು ಆಮ್ ಆದ್ಮಿ ಪಕ್ಷದ ಮುಖಂಡ ತಿಳಿಸಿದ್ದಾರೆ.
ಇದನ್ನೂ ಓದಿ: ‘ಟಿಕಾ ಉತ್ಸವ’ ಕ್ಕೆ ನಾಲ್ಕು ವಿನಂತಿ ಎಂದ ಪ್ರಧಾನಿ; ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ
“ಕೊರೊನಾ ಲಸಿಕೆ ತೆಗೆದುಕೊಳ್ಳುವ ವಯಸ್ಸಿನ ನಿರ್ಬಂಧಗಳನ್ನು ತೆಗೆದುಹಾಕುವ ಬಗ್ಗೆ ನಾನು ಕೇಂದ್ರವನ್ನು ಹಲವು ಬಾರಿ ವಿನಂತಿಸಿದ್ದೇನೆ. ಜನರಿಗೆ ಲಸಿಕೆ ನೀಡಲು ಮನೆ-ಮನೆಗೆ ಅಭಿಯಾನ ನಡೆಸಲು ದೆಹಲಿ ಸರ್ಕಾರ ಸಿದ್ಧವಾಗಿದೆ. ದೆಹಲಿಯಲ್ಲಿ ಶೇಕಡಾ 65 ರಷ್ಟು ರೋಗಿಗಳು 45 ವರ್ಷಕ್ಕಿಂತ ಕಡಿಮೆ ವಯಸ್ಸಿನವರು ಎಂದು ಕೇಜ್ರಿವಾಲ್ ಹೇಳಿದ್ದಾರೆ.
“ನಾನು ಲಾಕ್‌ಡೌನ್ ಪರವಾಗಿಲ್ಲ, ಅದು ಪರಿಹಾರ ಎಂದು ನಂಬಬೇಡಿ. ರಾಜ್ಯದ ಆರೋಗ್ಯ ಸೌಲಭ್ಯಗಳು ಕುಸಿದಾಗ ಮಾತ್ರ ಲಾಕ್‌ಡೌನ್ ವಿಧಿಸಬೇಕಾಗುತ್ತದೆ. ನಮ್ಮ ಸರ್ಕಾರವು ಪ್ರಸ್ತುತ ಆಸ್ಪತ್ರೆಗಳ ನಿರ್ವಹಣೆಯತ್ತ ಗಮನ ಹರಿಸುತ್ತಿದೆ. ಜನರು ಖಾಸಗಿ ಆಸ್ಪತ್ರೆಗಳ ಬದಲು ಸರ್ಕಾರಿ ಆಸ್ಪತ್ರೆಗಳಿಗೆ ಹೋಗಿ. ಖಾಸಗಿ ಆಸ್ಪತ್ರೆಗಳ ಕಡೆಗೆ ಓಡಬೇಡಿ. ಅಲ್ಲಿ ಹಾಸಿಗೆಗಳು ಕಡಿಮೆ. ದಯವಿಟ್ಟು ಸರ್ಕಾರಿ ಆಸ್ಪತ್ರೆಗಳಿಗೆ ಹೋಗಿ” ಎಂದು ಮನವಿ ಮಾಡಿದ್ದಾರೆ.
ಆಮ್ ಆದ್ಮಿ ಪಕ್ಷದ ಮುಖಂಡ ರಾಘವ್ ಚಾಡ್ಡಾ ಲಸಿಕೆ ಸಾರ್ವತ್ರಿಕೀಕರಣ ಮತ್ತು ಲಸಿಕೆ ತುರ್ತು ಅವಶ್ಯಕತೆ ಕುರಿತು ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದಿದ್ದಾರೆ. “ಹಲವಾರು ರಾಜ್ಯಗಳಲ್ಲಿ ಲಸಿಕೆಗಳ ದಾಸ್ತಾನು ಮುಗಿದಿವೆ ಮತ್ತು ಉಳಿದ ರಾಜ್ಯಗಳಲ್ಲಿ ಕೇವಲ ಮೂರರಿಂದ ಐದು ದಿನಗಳವರೆಗೆ ಆಗುವಷ್ಟು ದಾಸ್ತಾನು ಮಾತ್ರ ಉಳಿದಿದೆ” ಎಂದು ಪತ್ರದಲ್ಲಿ ತಿಳಿಸಲಾಗಿದೆ.
ಇದನ್ನೂ ಓದಿ: ಬಿಜೆಪಿಗೂ, ಪ್ರಧಾನಿ ಮೋದಿಗೂ ಒಂದಷ್ಟು ಮಾನಸಿಕ ಚಿಕಿತ್ಸೆಯ ಅಗತ್ಯವಿದೆ: ಕಾಂಗ್ರೆಸ್ ತೀವ್ರ ವಾಗ್ದಾಳಿ


