ಪಶ್ಚಿಮ ಬಂಗಾಳದ ಸೀತಾಲ್ಕುಚ್ಚಿ ಶೂಟೌಟ್ ಬಗ್ಗೆ ನಾಲ್ಕು ಜನರಿಗಲ್ಲ 8 ಜನರಿಗೆ ಗುಂಡು ಹಾರಿಸಬೇಕಿತ್ತು ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದ ಬಿಜೆಪಿ ಮುಖಂಡ ರಾಹುಲ್ ಸಿನ್ಹಾ ಅವರಿಗೆ ಪಶ್ಚಿಮ ಬಂಗಾಳದಲ್ಲಿ 48 ಗಂಟೆಗಳ ಕಾಲ ಪ್ರಚಾರ ಮಾಡದಂತೆ ಚುನಾವಣಾ ಆಯೋಗ ನಿರ್ಬಂಧ ಹೇರಿದೆ.
ಚುನಾವಣಾ ರ್‍ಯಾಲಿಗಳಲ್ಲಿ ಕೋಮುವಾದಿ ಟೀಕೆಗಳ ಬಗ್ಗೆ ಆರೋಪ ಎದುರಿಸುತ್ತಿರುವ ಬಿಜೆಪಿಯ ಮತ್ತೊಬ್ಬ ನಾಯಕ ಸುವೇಂದು ಅಧಿಕಾರಿ ಮೇಲೆ ಚುನಾವಣಾ ಆಯೋಗ ಯಾವುದೇ ಕ್ರಮ ಕೈಗೊಂಡಿಲ್ಲ.
ಕೂಚ್ ಬೆಹಾರ್‌ನ ಸೀತಾಲ್ಕುಚಿಯಲ್ಲಿ ಮತದಾನದ ಸಂದರ್ಭದಲ್ಲಿ ಗುಂಪೊಂದು ಮತಗಟ್ಟೆಯ ಮೇಲೆ ದಾಳಿ ಮಾಡಿತೆಂದು ಅರೆಸೇನಾ ಪಡೆಗಳು ನಡೆಸಿದ ಗೋಲಿಬಾರ್‌ನಲ್ಲಿ ನಾಲ್ವರು ಮೃತಪಟ್ಟಿದ್ದರು. ಈ ಕಾರ್ಯಾಚರಣೆ ಕುರಿತು ಪ್ರಚೋದನಾಕಾರಿ ಹೇಳಿಕೆ ನೀಡಿದ್ದಕ್ಕಾಗಿ ರಾಹುಲ್ ಸಿನ್ಹಾ ಮತ್ತು ಬಿಜೆಪಿಯ ಬಂಗಾಳ ಮುಖ್ಯಸ್ಥ ದಿಲೀಪ್ ಘೋಷ್ ವಿರುದ್ಧ ಕ್ರಮಕೈಗೊಳ್ಳಲು ತೃಣಮೂಲ ಕಾಂಗ್ರೆಸ್ ಕೋರಿತ್ತು. ಬಿಜೆಪಿ ನಾಯಕರು ಹಿಂಸಾಚಾರವನ್ನು ಪ್ರಚೋದಿಸುತ್ತಿದ್ದಾರೆ ಎಂದು ತೃಣಮೂಲ ಕಾಂಗ್ರೆಸ್ ಆರೋಪಿಸಿತ್ತು.
ಇದನ್ನೂ ಓದಿ: ಬಂಗಾಳ ಚುನಾವಣೆ: ಸೀತಾಲ್ಕುಚ್ಚಿ ಶೂಟೌಟ್ ಬಗ್ಗೆ ನಾಲಿಗೆ ಹರಿಬಿಟ್ಟ ಬಿಜೆಪಿ ನಾಯಕರು
ಹಬ್ರಾ ಕ್ಷೇತ್ರದ ಬಿಜೆಪಿಯ ಅಭ್ಯರ್ಥಿ ರಾಹುಲ್ ಸಿನ್ಹಾ ಚುನಾವಣಾ ಪ್ರಚಾರದಲ್ಲಿ, ಕೂಚ್ ಬೆಹಾರ್‌ನ ಸೀತಾಲ್ಕುಚ್ಚಿ ಗಲಭೆಯಲ್ಲಿ ನಾಲ್ಕು ಜನರನ್ನಲ್ಲ, ಎಂಟು ಜನರನ್ನು ಕೇಂದ್ರ ಪಡೆಗಳು ಗುಂಡಿಕ್ಕಿ ಕೊಂದಿರಬೇಕಿತ್ತು ಎಂದು ಹೇಳಿದ್ದರು.
ಗುರುವಾರ ಮಧ್ಯಾಹ್ನದವರೆಗೆ ಚುನಾವಣಾ ಪ್ರಚಾರ ನಡೆಸಲು ನಿಷೇಧ ಹೇರಿರುವ ಚುನಾವಣಾ ಆಯೋಗವು ಅವರ ಹೇಳಿಕೆಗಳನ್ನು ಬಲವಾಗಿ ಖಂಡಿಸಿದೆ. ಚುನಾವಣೆಯ ಸಮಯದಲ್ಲಿ “ಸಾರ್ವಜನಿಕ ಹೇಳಿಕೆಗಳನ್ನು ನೀಡುವಾಗ ಅಂತಹ ಹೇಳಿಕೆಗಳನ್ನು ಬಳಸದಂತೆ ಎಚ್ಚರಿಕೆ ವಹಿಸಬೇಕು” ಎಂದು ಕಟ್ಟುನಿಟ್ಟಾಗಿ ಎಚ್ಚರಿಸಿದೆ.
ಸೀತಾಲ್ಕುಚ್ಚಿಯಲ್ಲಿನ ತುಂಟ ಹುಡುಗರು ಗುಂಡೇಟು ತಿಂದಿದ್ದಾರೆ. ಮುಂದಿನ ಹಂತದ ಮತದಾನದಲ್ಲಿ ಕಾನೂನನ್ನು ತಮ್ಮ ಕೈಗೆ ತೆಗೆದುಕೊಳ್ಳಲು ಪ್ರಯತ್ನಿಸಿದರೆ ಮತ್ತಷ್ಟು ಗುಂಡೇಟು ತಿನ್ನಬೇಕಾಗುತ್ತದೆ. ಕೂಚ್ ಬೆಹಾರ್‌ನ ಸೀತಾಲ್ಕುಚ್ಚಿ ತರಹದ ಹತ್ಯೆಗಳು ಸಂಭವಿಸಬಹುದು ಎಂದು ಪಶ್ಚಿಮ ಬಂಗಾಳ ಬಿಜೆಪಿ ಅಧ್ಯಕ್ಷ ದಿಲೀಪ್ ಘೋಷ್ ಬೆದರಿಕೆ ಹಾಕಿದ್ದರು. ಇವರಿಗೂ ಚುನಾವಣಾ ಆಯೋಗ ನೋಟಿಸ್ ನೀಡಿದ್ದು, ನಾಳೆ ವಿಚಾರಣೆ ನಡೆಯಲಿದೆ.
ಇದನ್ನೂ ಓದಿ: ಸುಗ್ರೀವಾಜ್ಞೆ ಹೊರಡಿಸುವಲ್ಲಿ ಯುಪಿಎಗಿಂತ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರವೇ ಮುಂದು!
ನಂದಿಗ್ರಾಮದಲ್ಲಿ ಮಮತಾ ಬ್ಯಾನರ್ಜಿ ವಿರುದ್ಧ ಬಿಜೆಪಿ ಅಭ್ಯರ್ಥಿಯಾಗಿರುವ ಮಾಜಿ ತೃಣಮೂಲ ನಾಯಕ ಸುವೇಂದು ಅಧಿಕಾರಿ ಮಮತಾ ಅವರನ್ನು “ಬೇಗಂ” ಎಂದು ಭಾಷಣದಲ್ಲಿ ಉಲ್ಲೇಖಿಸಿದ್ದರು. ಜೊತೆಗೆ ಅವರಿಗೆಗೆ ಮತ ಚಲಾಯಿಸುವುದು “ಮಿನಿ ಪಾಕಿಸ್ತಾನ”ಕ್ಕೆ ಮತ ಹಾಕಿದಂತೆ ಎಂದು ವಿವಾದಿತ ಹೇಳಿಕೆಯನ್ನು ನೀಡಿದ್ದರು. ಆದರೆ ಚುನಾವಣಾ ಆಯೋಗ ಸುವೇಮಧು ಅಧಿಕಾರಿಗೆ ಬರಿ ಎಚ್ಚರಿಕೆ ನೀಡಿದೆ.
ಕೇಂದ್ರ ಪಡೆಗಳ ವಿರುದ್ಧ ಮಾಡಿದ ಆರೋಪ ಹಾಗೂ ಅಲ್ಪಸಂಖ್ಯಾತ ಮತದಾರರು ತಮ್ಮ ಮತಗಳನ್ನು ವಿಂಗಡಿಸಲು ಅವಕಾಶ ನೀಡದಂತೆ ಮಾಡಿದ್ದ ಮನವಿಯು ನೀತಿ ಸಂಹಿತೆಯ ಉಲ್ಲಂಘನೆ ಎಂದು ಚುನಾವಣಾ ಆಯೋಗ ಮಮತಾ ಬ್ಯಾನರ್ಜಿ ಅವರಿಗೆ ಪ್ರಚಾರ ನಡೆಸದಂತೆ 24 ಗಂಟೆಗಳ ನಿಷೇಧ ಹೇರಿದೆ. ಇದನ್ನು ವಿರೋಧಿಸಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮಂಗಳವಾರ ಕೋಲ್ಕತ್ತಾದ ಗಾಂಧಿ ಪ್ರತಿಮೆಯ ಬಳಿ ಧರಣಿ ಕುಳಿತಿದ್ದಾರೆ.
ಇದನ್ನೂ ಓದಿ: ಚುನಾವಣಾ ಆಯೋಗದ ವಿರುದ್ಧ ಗಾಂಧಿ ಪ್ರತಿಮೆಯ ಬಳಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಧರಣಿ


