ವಿವಾಹ ವಿಚಾರಕ್ಕೆ ಸಂಬಂಧಿಸಿದಂತೆ ಸುದ್ದಿಯಲ್ಲಿರುವ ತೃಣಮೂಲ ಸಂಸದೆ ನುಸ್ರತ್ ಜಹಾನ್ ಬುಧವಾರ ಹೇಳಿಕೆ ನೀಡಿದ್ದು, ನಿಖಿಲ್ ಜೈನ್ ಅವರೊಂದಿಗಿನ ಅವರ ವಿವಾಹವು ಎಂದಿಗೂ ಮಾನ್ಯವಾಗಿಲ್ಲ, ಹಾಗಾಗೀ ವಿಚ್ಛೇದನದ ಪ್ರಶ್ನೆ ಉದ್ಭವಿಸಲ್ಲ ಎಂದು ಹೇಳಿದ್ದಾರೆ.
ಭಾರತದಲ್ಲಿ ಅಂತರ್ ಧರ್ಮಿಯ ಮದುವೆಗೆ ವಿಶೇಷ ವಿವಾಹ ಕಾಯ್ದೆಯಡಿ ಮಾನ್ಯತೆಯ ಅಗತ್ಯವಿದೆ. ಆದರೆ ನಮ್ಮ ವಿವಾಹಕ್ಕೆ ಕಾನೂನುಬದ್ಧ ಮಾನ್ಯತೆ ಇಲ್ಲದ ಕಾರಣ ವಿಚ್ಛೇದನದ ಪ್ರಶ್ನೆಯೇ ಇಲ್ಲ. ನಾವು ಬಹಳ ಹಿಂದೆಯೇ ಬೇರೆಯಾಗಿದ್ದೇವೆ. ಆದರೆ ನನ್ನ ಖಾಸಗಿ ಜೀವನದ ವಿಚಾರವನ್ನು ನನ್ನಲ್ಲಿಯೇ ಇಟ್ಟುಕೊಳ್ಳುವ ಉದ್ದೇಶದಿಂದ ನಾನು ಅದರ ಬಗ್ಗೆ ಮಾತನಾಡಲಿಲ್ಲ” ಎಂದು ಸಂಸದೆ ನುಸ್ರತ್ ಹೇಳಿದ್ದಾರೆ.
ನಟಿ, ರಾಜಕಾರಣಿ ನುಸ್ರತ್ ಜಹಾನ್ ಅವರು 2019 ರ ಲೋಕಸಭಾ ಚುನಾವಣೆಯಲ್ಲಿ ಜಯಗಳಿಸಿದ ಬಳಿಕ 2019 ರಲ್ಲಿಯೇ ಟರ್ಕಿಯ ಉದ್ಯಮಿ ನಿಖಿಲ್ ಜೈನ್ ಅವರನ್ನು ವಿವಾಹವಾಗಿದ್ದರು. ಕೋಲ್ಕತ್ತಾದಲ್ಲೂ ಆರತಾಕ್ಷತೆ ಸಮಾರಂಭ ನಡೆದಿದ್ದು, ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಭಾಗವಹಿಸಿದ್ದರು. ಟರ್ಕಿಯ ಮದುವೆ ಕಾಯ್ದೆ ಪ್ರಕಾರ ವಿವಾಹ ಸಮಾರಂಭವನ್ನು ಮಾಡಲಾಗಿತ್ತು ಎಂದು ಸಂಸದೆ ಸ್ಪಷ್ಟಪಡಿಸಿದ್ದಾರೆ.
ಇದನ್ನೂ ಓದಿ: ಮರಳುಗಾಡಿನಲ್ಲಿ ಬಾಯಾರಿಕೆಗೆ ಬಲಿಯಾದ 5 ವರ್ಷದ ಬಾಲಕಿ
2021 ರ ಬಂಗಾಳ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿದ್ದ ನಟ, ರಾಜಕಾರಣಿ ಯಶ್ ದಾಸ್‌ಗುಪ್ತಾ ಅವರೊಂದಿಗೆ ನುಸ್ರತ್ ಡೇಟಿಂಗ್ ಮಾಡುತ್ತಿದ್ದಾರೆ ಎಂದು ವದಂತಿಗಳು ಹಬ್ಬಿದ್ದವು. ಕೆಲವು ದಿನಗಳ ಹಿಂದೆ ನುಸ್ರತ್, ಯಶ್ ದಾಸ್‌ಗುಪ್ತಾ ಅವರ ಮಗುವಿನ ತಾಯಿಯಾಗುತ್ತಿದ್ದಾರೆ ಎಂಬ ಊಹಾಪೋಹಗಳು ಹೆಚ್ಚಾದ ಹಿನ್ನೆಲೆ, ಬರಹಗಾರ್ತಿ ತಸ್ಲೀಮಾ ನಸ್ರೀನ್ ಈ ವದಂತಿಗಳು ನಿಜವಾಗಿದ್ದರೆ, ನುಸ್ರತ್ ನಿಖಿಲ್‌ನಿಂದ ವಿಚ್ಛೇದನ ಪಡೆಯಬೇಕು ಎಂದು ಹೇಳಿದ್ದರು.
ಸದ್ಯ ತನ್ನ ವಿವಾಹದ ಕುರಿತು ಸ್ಪಷ್ಟನೆ ನೀಡಿರುವ ಸಂಸದೆ ನುಸ್ರತ್, “ನನ್ನ ವೈಯಕ್ತಿಕ ಜೀವನದ ಬಗ್ಗೆ ಅಥವಾ ನನಗೆ ಸಂಬಂಧವಿಲ್ಲದ ಯಾರ ಬಗ್ಗೆಯೂ ನಾನು ಎಂದಿಗೂ ಮಾತನಾಡುವುದಿಲ್ಲ. ಹೀಗಾಗಿ, ತಮ್ಮನ್ನು ತಾವು ಸಾಮಾನ್ಯ ಜನರು ಎಂದು ಕರೆದುಕೊಳ್ಳುವವರು ಅವರಿಗೆ ಸಂಬಂಧವಿಲ್ಲದ ಯಾವುದರ ಬಗ್ಗೆಯೂ ಮಾತನಾಡಬಾರದು” ಎಂದು ನುಸ್ರತ್ ಹೇಳಿದ್ದಾರೆ.
ನಿಖಿಲ್ ಜೈನ್ ಕೋಲ್ಕತಾ ಮೂಲದ ಉದ್ಯಮಿಯಾಗಿದ್ದು, ಮದುವೆಗೂ ಒಂದು ವರ್ಷದ ಮೊದಲು ಇಬ್ಬರು ಭೇಟಿಯಾಗಿದ್ದರು. ಇತ್ತೀಚೆಗೆ, ನುಸ್ರತ್ ಗರ್ಭಧಾರಣೆಯ ವದಂತಿಗಳು ಹರಡುತ್ತಿದ್ದಂತೆ, ಕೆಲವು ಸುದ್ದಿ ವಾಹಿನಿಗಳು ನಿಖಿಲ್ ಅವರನ್ನು ಸಂಪರ್ಕಿಸಿದ್ದು, ಹಲವು ತಿಂಗಳುಗಳಿಂದ ಪರಸ್ಪರ ಸಂಪರ್ಕದಲ್ಲಿಲ್ಲದ ಕಾರಣ ನುಸ್ರತ್ ಅವರ ಗರ್ಭಧಾರಣೆಯ ಬಗ್ಗೆ ನನಗೆ ತಿಳಿದಿಲ್ಲ ಎಂದು ಪ್ರತಿಕ್ರಿಯಿಸಿದ್ದಾರೆ.
ಇದನ್ನೂ ಓದಿ: ರೈತ ಹೋರಾಟ ತೀವ್ರಗೊಳಿಸಲು ನಿರ್ಧಾರ: ಮಮತಾ ಬ್ಯಾನರ್ಜಿ ಭೇಟಿಯಾಗಲಿರುವ ರಾಕೇಶ್ ಟಿಕಾಯತ್


