ಸ್ಯಾಂಡಲ್‌ವುಡ್ ನಟ ದರ್ಶನ್ ತೂಗುದೀಪ ಹೆಸರಿನಲ್ಲಿ ವ್ಯಕ್ತಿಯನ್ನು ಮೋಸಗೊಳಿಸಲು ಯತ್ನಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಉಂಟಾಗಿದ್ದ ವಿವಾದಕ್ಕೆ ತೆರೆ ಬಿದ್ದಿದೆ ಎಂದು ನಟ ಹೇಳಿದ್ದಾರೆ. ನಟನ ಹೆಸರು ಬಳಸಿಕೊಂಡು 25 ಕೋಟಿ ವಂಚನೆಗೆ ಯತ್ನಿಸಿದ ಘಟನೆ ಹಲವು ಬೆಳವಣಿಗೆಗೆ ಕಾರಣವಾಗಿತ್ತು.
ನಟ ದರ್ಶನ್ ಮತ್ತು ನಿರ್ಮಾಪಕ ಉಮಾಪತಿ ನಡುವೆ ಒಡಕಿಗೆ ಕಾರಣವಾಗಬಹುದು ಎನ್ನಲಾಗುತ್ತಿತ್ತು. ಇದಕ್ಕೆ ನಿರ್ಮಾಪಕ ಉಮಾಪತಿ ಕೂಡ ಸ್ಪಷ್ಟನೆ ನೀಡಿದ್ದರು. ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿರುವ ದರ್ಶನ್, ’ಪ್ರಕರಣವನ್ನು ಇಲ್ಲಿಗೆ ಬಿಟ್ಟುಬಿಡಿ, ನಾವು ಮಾತನಾಡಿಕೊಳ್ಳುತ್ತೇವೆ, ನಿರ್ಮಾಪಕ ಉಮಾಪತಿಯವರು ತಪ್ಪು ಮಾಡಿದ್ದಾರೆ ಎಂದು ನಾನು ಈಗಲೂ ಹೇಳುವುದಿಲ್ಲ, ಅವರು ನಿರ್ಮಾಪಕರು, ಯಾವತ್ತಿದ್ದರೂ ನಿರ್ಮಾಪಕರೇ, ಇದರಲ್ಲಿ ಅವರ ಕೈವಾಡ ಇಲ್ಲ. ಅವರನ್ನು ಬಿಟ್ಟುಕೊಡುವುದಿಲ್ಲ’ ಎಂದು ಹೇಳಿದ್ದಾರೆ.
ನಿರ್ಮಾಪಕ ಉಮಾಪತಿ ಕೂಡ, ’ದರ್ಶನ್ ಅವರು ನನಗೆ ಮುಖ್ಯ. ನನ್ನ ಹಾಗೂ ದರ್ಶನ್ ಅವರ ನಡುವಿನ ಸ್ನೇಹ ಇನ್ನೂ ಚೆನ್ನಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದ ಸತ್ಯಾಂಶ ಪೊಲೀಸ್ ತನಿಖೆಯಿಂದ ಹೊರ ಬೀಳಲಿದೆ ಎಂದಿದ್ದರು.
ಇದನ್ನೂ ಓದಿ: ಸಿನಿಮಾಟೋಗ್ರಾಫ್ ಕಾಯ್ದೆಯ ತಿದ್ದುಪಡಿ; ಸಿನಿಮಾ ತಯಾರಕರ ಮೇಲೆ ತೂಗಲಿರುವ ಹೊಸ ಕತ್ತಿ
ಬ್ಯಾಂಕಿನಲ್ಲಿ 25 ಕೋಟಿ ರೂ.ಗಳ ಸಾಲಕ್ಕೆ ಅರ್ಜಿ ಸಲ್ಲಿಸಿದ್ದ ಹರ್ಷ್ ಮೆಲಾಂಟ ಎಂಬುವವರನ್ನು ಆರೋಪಿ ಅರುಣಕುಮಾರಿ ಬ್ಲ್ಯಾಕ್ ಮೇಲ್ ಮಾಡುತ್ತಿದ್ದರು ಎಂದು ಆರೋಪಿಸಲಾಗಿದೆ. ತನ್ನನ್ನು ಬ್ಯಾಂಕ್ ಮ್ಯಾನೇಜರ್ ಎಂದು ಪರಿಚಯಿಸಿಕೊಂಡಿದ್ದ ಆಕೆ, ಮೆಲಂಟಾ ಅವರನ್ನು ಸಂಪರ್ಕಿಸಿ, ನಟ ದರ್ಶನಗೆ ಸಂಬಂಧಿಸಿದ ನಕಲಿ ದಾಖಲೆಗಳನ್ನು ಒದಗಿಸಿದ್ದಿರಿ ಎಂದು ಆರೋಪಿಸಿ ಬ್ಲ್ಯಾಕ್ ಮೇಲ್ ಮಾಡಿದ್ದರು ಎನ್ನಲಾಗಿದೆ.
ವಿಷಯ ಹೊರಗೆ ಬಾರದಂತೆ ನೋಡಿಕೊಳ್ಳಲು ತನಗೆ 25 ಲಕ್ಷ ರೂಪಾಯಿ ನೀಡುವಂತೆ ಬೇಡಿಕೆ ಇಟ್ಟಿದ್ದರು. ಈ ಈ ಮಹಿಳೆ ನಕಲಿ ಎಂಬುದು ಹರ್ಷ ಅವರಿಗೆ ಗೊತ್ತಾಗಿ, ಅವರು ತಕ್ಷಣ ಜುಲೈ 3 ನೇ ತಾರೀಕು ಮೈಸೂರು ನಗರದ ಹೆಬ್ಬಾಳ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪೊಲೀಸರು ದೂರು ಆಧರಿಸಿ, ಅರುಣಕುಮಾರಿ ಯನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.
ಈ ಪ್ರಕರಣದಲ್ಲಿ ರಾಬರ್ಟ್ ಚಿತ್ರದ ನಿರ್ಮಾಪಕ ಉಮಾಪತಿ ಅವರ ಹೆಸರು ತಳುಕು ಹಾಕಿಕೊಂಡು ವಿವಾದ ಸೃಷ್ಟಿಯಾಗಿತ್ತು. ಎಲ್ಲರ ಕಣ್ಣು ಉಮಾಪತಿ ಕಡೆಗೆ ತಿರುಗಿತ್ತು. ಈಗ ನಟ ಮತ್ತು ನಿರ್ಮಾಕಪ ಈ ವಿವಾದಕ್ಕೆ ತೆರೆ ಎಳೆದಿದ್ದಾರೆ.
ಇದನ್ನೂ ಓದಿ: ನಟ ದರ್ಶನ್ ಹೆಸರಿನಲ್ಲಿ ವಂಚನೆ ಪ್ರಕರಣ: ಮಹಿಳೆಯನ್ನು ಬಂಧಿಸಿದ ಪೊಲೀಸರು


