ಸಾರ್ವತ್ರಿಕ ಚುನಾವಣೆಗೆ ಮುಂಚಿತವಾಗಿ ಮತದಾರರಿಗೆ ಮತ ಹಾಕುವಂತೆ ಲಂಚ ನೀಡಿದ ಆರೋಪದ ಮೇಲೆ ಮೊದಲ ಬಾರಿಗೆ ಲೋಕಸಭಾ ಸಂಸದರೊಬ್ಬರಿಗೆ ಶಿಕ್ಷೆಯಾಗಿದೆ. ಮೆಹಬೂಬಾದ್ ಕ್ಷೇತ್ರವನ್ನು ಪ್ರತಿನಿಧಿಸುವ ತೆಲಂಗಾಣ ರಾಷ್ಟ್ರ ಸಮಿತಿಯ (ಟಿಆರ್‌ಎಸ್) ಸಂಸದೆ ಕವಿತಾ ಮಾಲೋತ್‌ಗೆ ವಿಶೇಷ ನ್ಯಾಯಾಲಯವು ಆರು ತಿಂಗಳ ಜೈಲು ಶಿಕ್ಷೆ ಮತ್ತು 10,000 ರೂಪಾಯಿ ದಂಡ ವಿಧಿಸಿದೆ.
ಸಂಸದೆ ಕವಿತಾ ಮಾಲೋತ್ ಜೊತೆಗೆ ಮತ್ತು ಅವರ ಸಹಾಯಕ ಶೌಕತ್ ಅಲಿ ಅವರಿಗೂ ಶಿಕ್ಷೆ ವಿಧಿಸಿದ್ದು, ಇಬ್ಬರಿಗೂ ಜಾಮೀನು ನೀಡಲಾಗಿದೆ. ಉನ್ನತ ನ್ಯಾಯಾಲಯಕ್ಕೆ ಮೇಲ್ಮನವಿ ಸಲ್ಲಿಸಲು ಆರೋಪಿಗಳಿಗೆ ಜಾಮೀನು ನೀಡಲಾಗಿದೆ. ತಮ್ಮ ಶಿಕ್ಷೆಯ ವಿರುದ್ದ ಕವಿತಾ ಅವರು ತೆಲಂಗಾಣ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಲಿದ್ದಾರೆ ಎಂದು ತಿಳಿದು ಬಂದಿದೆ.
ಸಂಸದೆ ಕವಿತಾ ಮಾಲೋತ್ ಅವರ ಸಹಾಯಕ ಶೌಕತ್ ಅಲಿ ಅವರು 2019ರ ಲೋಸಭಾ ಚುನಾವಣಾ ವೇಳೆಯಲ್ಲಿ ಮತದಾರರಿಗೆ 500 ರೂಪಾಯಿ ಲಂಚ ನೀಡುತ್ತಿದ್ದ ವೇಳೆ ಬುರ್ಗಂಪಹಾದ್ ಪೊಲೀಸ್ ಠಾಣೆಯ ಪೊಲೀಸರು ಬಂಧಿಸಿದ್ದರು.
ಇದನ್ನೂ ಓದಿ: ಕೊರೊನಾ ಭೀತಿ ಸೃಷ್ಟಿಸಿದ ಆರೋಪ: ಟಿವಿ ಪ್ಯಾನಲಿಸ್ಟ್ ವಿರುದ್ಧ ದೂರ ದಾಖಲಿಸಿದ ತೆಲಂಗಾಣ ಸರ್ಕಾರ
ಕವಿತಾ ಮಾಲೋತ್ ಅವರ ಸಹಾಯಕ ಶೌಕತ್ ಅಲಿಯನ್ನು ರೆಡ್‌ಹ್ಯಾಂಡ್ ಆಗಿ ಸೆರೆಹಿಡಿದ ಬುರ್ಗಂಪಹಾದ್ ಪೊಲೀಸರು, ಲಂಚ ಪ್ರಕರಣದಲ್ಲಿ ಅಲಿಯನ್ನು ಮೊದಲ ಆರೋಪಿ ಎಂದೂ, ಕವಿತಾ ಅವರನ್ನು ಎರಡನೇ ಆರೋಪಿ ಎಂದು ಪ್ರಕರಣ ದಾಖಲಿಸಿದ್ದರು. ಪೊಲೀಸರ ವಿಚಾರಣೆ ವೇಳೆ ಅಲಿ ಕೂಡ ಈ ಅಪರಾಧವನ್ನು ಒಪ್ಪಿಕೊಂಡಿದ್ದಾರೆ ಮತ್ತು ಕವಿತಾ ತನಗೆ ನೀಡಿದ್ದ ಹಣವನ್ನು ವಿತರಿಸಿದ್ದಾಗಿ ಹೇಳಿಕೊಂಡಿದ್ದಾರೆ.
ಈ ಹಿಂದೆಯೂ ವಿಶೇಷ ಸೆಷನ್ಸ್ ನ್ಯಾಯಾಲಯ ಅಪರಾಧ ಎಸಗಿದ ಸಂಸದರಿಗೆ ಶಿಕ್ಷೆ ವಿಧಿಸಿತ್ತು. ಈ ಹಿಂದೆ ಬಿಜೆಪಿ ಶಾಸಕ ರಾಜ ಸಿಂಗ್ ಮತ್ತು ಟಿಆರ್‌ಎಸ್ ಶಾಸಕ ದಾನಮ್ ನಾಗೇಂದರ್ ಅವರಿಗೆ ಜೈಲು ಶಿಕ್ಷೆ ವಿಧಿಸಲಾಗಿತ್ತು.
ಶಾಸಕರ ಮೇಲೆ ತ್ವರಿತ ವಿಚಾರಣೆ ನಡೆಸಲು ಸುಪ್ರೀಂ ಕೋರ್ಟ್ ಆದೇಶವನ್ನು ಅನುಸರಿಸಿ 2018 ರ ಮಾರ್ಚ್‌ನಲ್ಲಿ ವಿಶೇಷ ಸೆಷನ್ಸ್ ನ್ಯಾಯಾಲಯವನ್ನು ಸ್ಥಾಪಿಸಲಾಗಿತ್ತು. ಬೊಲಾರಮ್ ಪೊಲೀಸ್ ಠಾಣೆಯಲ್ಲಿ ಪೊಲೀಸ್ ಅಧಿಕಾರಿಯ ಮೇಲೆ ಹಲ್ಲೆ ನಡೆಸಿದ್ದಕ್ಕಾಗಿ ರಾಜಾ ಸಿಂಗ್ ವಿರುದ್ಧ ಪ್ರಕರಣ ದಾಖಲಾಗಿದ್ದರೆ, ಬಂಜಾರ ಹಿಲ್ಸ್ ಪೊಲೀಸ್ ಠಾಣೆಯಲ್ಲಿ ಸರ್ಕಾರಿ ಅಧಿಕಾರಿಯೊಬ್ಬರ ಮೇಲೆ ಹಲ್ಲೆ ನಡೆಸಿದ್ದ ಪ್ರಕರಣದಲ್ಲಿ ದಾನಮ್ ನಾಗೇಂದರ್ ಅವರಿಗೆ ಶಿಕ್ಷೆ ವಿಧಿಸಲಾಗಿತ್ತು.
ಇದನ್ನೂ ಓದಿ: ತೆಲಂಗಾಣ: 40,000 ಕೋಟಿ ಸಾಲವಿದ್ದರೂ ಅಧಿಕಾರಿಗಳಿಗೆ ಐಷಾರಾಮಿ ಕಾರು ನೀಡಿದ ಸರ್ಕಾರ


