ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ಹಿಂದಿನ ಸರ್ಕಾರ ಜಾರಿ ಮಾಡಿದ್ದ ಯೋಜನೆಗಳು, ನಿರ್ಮಿಸಿದ ಮೈದಾನಗಳು, ಪ್ರಶಸ್ತಿಗಳು, ಸೇತುವೆಗಳು, ನಗರಗಳ ಹೆಸರು ಮರು ನಾಮಕರಣ ಮಾಡುವುದು ನಡೆಯುತ್ತಲೇ ಇದೆ.
ವಿಪಕ್ಷಗಳು, ದೇಶದ ನಾಗರಿಕರು ಈ ಬಗ್ಗೆ ಆಕ್ಷೇಪವೆತ್ತಿದರೂ ಕೂಡ, ಹೆಸರುಗಳ ಮರುನಾಮಕರಣವನ್ನು ಬಿಜೆಪಿ ಸರ್ಕಾರಗಳು ನಿಲ್ಲಿಸುತ್ತಿಲ್ಲ. ಇತ್ತಿಚೆಗಷ್ಟೇ ಮೋಟೆರಾ ಸ್ಟೇಡಿಯಂ ಹೆಸರನ್ನು ನರೇಂದ್ರ ಮೋದಿ ಸ್ಟೇಡಿಯಂ ಎಂದು, ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿಯ ಹೆಸರನ್ನು ಮೇಜರ್ ಧ್ಯಾನ್ ಚಂದ್ ಖೇಲ್ ರತ್ನ ಎಂದು ಬದಲಾಯಿಸಲಾಗಿದೆ.
ರಾಜ್ಯದಲ್ಲಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ತಂದ ಯೋಜನೆಗಳಲ್ಲಿ ಇಂದಿರಾ ಕ್ಯಾಂಟೀನ್ ಕೂಡ ಒಂದು. 5, 10 ರೂಪಾಯಿಗೆ ಊಟ ದೊರೆಯುವ ಸ್ಥಳವಾಗಿ ಇಂದಿಗೂ ಜನಪ್ರಿಯ ಯೋಜನೆಯಾಗಿ ರಾಜ್ಯದಲ್ಲಿ ಕಾರ್ಯನಿರ್ವಹಿಸುತ್ತಿದೆ. ಆದರೆ, ಬಿಜೆಪಿ ಆಡಳಿತದ ಸರ್ಕಾರ ಆಡಳಿತದ ಚುಕ್ಕಾಣಿ ಹಿಡಿದಾಗಿನಿಂದ ಇಂದಿರಾ ಕ್ಯಾಂಟೀನ್ ವಿವಾದದ ಹೆಸರಾಗಿದೆ.
ಇದನ್ನೂ ಓದಿ: ‘ಬಾರ್’ ಸಿಟಿ ರವಿಯ ಸಂಸ್ಕೃತಿ: ಸಿದ್ದರಾಮಯ್ಯ
ಈ ಹಿಂದೆ ಕ್ಯಾಂಟೀನ್ ಮುಚ್ಚುವ ನಿರ್ಧಾರಕ್ಕೆ ಬಂದಿದ್ದ ಬಿಜೆಪಿ ಸರ್ಕಾರ, ವಿಪಕ್ಷಗಳು ಮತ್ತು ಜನರ ವಿರೋಧಕ್ಕೆ ತಲೆಬಾಗಬೇಕಾಯಿತು. ಈಗ ಇದನ್ನೆ ಮುಂದುವರೆಸಿರುವ ಬಿಜೆಪಿ ಸರ್ಕಾರ ಇಂದಿರಾ ಕ್ಯಾಂಟೀನ್ ಹೆಸರು ಬದಲಾವಣೆ ಮಾಡುವ ಸೂಚನೆ ನೀಡಿದ್ದು, ರಾಜಕೀಯ ಪಕ್ಷಗಳ ಕೆಸರೆರಚಾಟಕ್ಕೆ ಕಾರಣವಾಗಿದೆ.
ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿಟಿ ರವಿ, ಇಂದಿರಾ ಕ್ಯಾಂಟೀನ್ ಹೆಸರನ್ನು ಅನ್ನಪೂರ್ಣೇಶ್ವರಿ ಕ್ಯಾಂಟೀನ್ ಎಂದು ಬದಲಿಸಿ ಎಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿಗೆ ಮನವಿ ಮಾಡಿದ್ದರು.
“ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿಯವರೆ, ಕರ್ನಾಟಕದಾದ್ಯಂತ ಇಂದಿರಾ ಕ್ಯಾಂಟೀನ್‌ಗಳನ್ನು ಆದಷ್ಟು ಬೇಗ “ಅನ್ನಪೂರ್ಣೇಶ್ವರಿ ಕ್ಯಾಂಟೀನ್” ಎಂದು ಮರುನಾಮಕರಣ ಮಾಡಿ. ಕನ್ನಡಿಗರು ಆಹಾರ ಸೇವಿಸುತ್ತಿರುವಾಗ ತುರ್ತು ಪರಿಸ್ಥಿತಿಯ ಕರಾಳ ದಿನಗಳನ್ನು ನೆನಪಿಸಿಕೊಳ್ಳುವುದು ಯಾಕೆ?” ಎಂದು ಪ್ರಶ್ನಿಸಿದ್ದರು.
Request Chief Minister Sri @BSBommai to rename Indira Canteens across Karnataka as "Annapoorneshwari Canteen" at the earliest.
Don't see any reason why Kannadigas should be reminded of the dark days of Emergency while they are having food.
— C T Ravi ?? ಸಿ ಟಿ ರವಿ (@CTRavi_BJP) August 7, 2021
ಇದಕ್ಕೆ ಕಾಂಗ್ರೆಸ್ ನಾಯಕರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದರು. ಹೆಸರು ಮರುನಾಮಕರಣ ವಿಚಾರಕ್ಕೆ ಸಂಬಂಧಿಸಿದಂತೆ ನಾನುಗೌರಿ.ಕಾಂಗೆ ಪ್ರತಿಕ್ರಿಯೆ ನೀಡಿರುವ ಜನರ ಅಭಿಪ್ರಾಯಗಳಿ ಇಂತಿವೆ.
ಇದನ್ನೂ ಓದಿ: ಹೆಸರು ಬದಲಾವಣೆ ಮುಂದುವರೆಸಿದ ಬಿಜೆಪಿ: ಉತ್ತರ ಪ್ರದೇಶದ ಅಲಿಗಢ ಮರುನಾಮಕರಣಕ್ಕೆ ಪ್ರಸ್ತಾಪ
“ಬಡವರ ಹೊಟ್ಟೆ ತುಂಬಿಸುತ್ತಿರುವ ಇಂದಿರಾ ಕ್ಯಾಂಟೀನ್ ಹೆಸರು ಬದಲಿಸುವ ಅವಶ್ಯಕತೆ ಏನಿದೆ. ಮಾಡುವುದಾದರೇ ಅವರು ಬದಲಾಯಿಸಬೇಕು ಎನ್ನುವ ಹೆಸರಿನಲ್ಲಿ ಮತ್ತೆ 100 ಕ್ಯಾಂಟೀನ್ ಆರಂಭಿಸಲಿ. ಇದರಿಂದ ಜನರಿಗೆ ಉಪಕಾರ ಆಗುತ್ತದೆ. ಅದು ಬಿಟ್ಟು ಹೆಸರುಗಳನ್ನು ಬದಲಿಸೋದು ಯಾವ ಕಾರಣಕ್ಕೆ..? ಎಂದು ಪ್ರಶ್ನಿಸುತ್ತಾರೆ ಆಟೋ ಚಾಲಕ ಆನಂದ್.
ರಾಜಸ್ಥಾನದಿಂದ ಬಂದು ಬೆಂಗಳೂರಿನಲ್ಲಿ ಕಳೆದ 15 ವರ್ಷಗಳಿಂದ ವಾಸವಿರುವ ಬದ್ರಿಲಾಲ್ ಮೆಹ್ರಾ, “ಕಳೆದ ಮೂರು ವರ್ಷಗಳಿಂದ ಇಂದಿರಾ ಕ್ಯಾಂಟೀನ್ ಊಟ ಮಾಡುತ್ತಿದ್ದೇನೆ. ಈಗ ಹೆಸರು ಬದಲಾವಣೆ ವಿಚಾರ ಯಾಕೆ ಬಂದಿತೋ ಗೊತ್ತಿಲ್ಲ. ಒಳ್ಳೆ ಕೆಲಸ ಮಾಡಿದವರ ಹೆಸರು ಇಟ್ಟಿದ್ದಾರೆ. ಅದೇ ಇದ್ದರೇ ಒಳ್ಳೆಯದು. ಹೆಸರು ಬದಲಾವಣೆ ಮಾಡುವಂತಹದ್ದು ಏನಿದೆ. ಇದರಲ್ಲಿ ತೊಂದರೆ ಏನಿದೆ ನಮಗೂ ಇಂದಿರಾ ಕ್ಯಾಂಟೀನ್ ಎಂದೇ ಪರಿಚಿತ. ಹೆಸರು ಬದಲಾವಣೆ ಅವಶ್ಯತೆ ಇಲ್ಲ” ಎಂದು ಹೇಳಿದ್ದಾರೆ.
“ಇಂದಿರಾ ಕ್ಯಾಂಟೀನ್‌ಗಳಲ್ಲಿ ಕಾರ್ಯ ನಿರ್ವಹಿಸುವ ಸಿಬ್ಬಂದಿಗೆ ಮೂರು ತಿಂಗಳಿನಿಂದ ಸರಿಯಾಗಿ ವೇತನ ನೀಡಿಲ್ಲ. ಕೊರೊನಾ ಸಮಯದಲ್ಲಿ ಉಚಿತ ಆಹಾರ ವಿತರಣೆ ಮಾಡಿದ್ದೇವೆ. ಸರ್ಕಾರ ಅದರ ಹಣವನ್ನು ಇನ್ನು ನೀಡಿಲ್ಲ. ಕೆಲವೊಂದು ಕ್ಯಾಂಟೀನ್‌ಗಳ ಶೌಚಾಲಯಗಳು ಕಾರ್ಯನಿರ್ವಹಿಸುತ್ತಿಲ್ಲ. ಸ್ಮಾರ್ಟ್ ಸಿಟಿ ಎಂದು ಹೇಳಿ ಚೆನ್ನಾಗಿರುವ ಕ್ಯಾಂಟೀನ್‌ಗಳ ಬಳಿ ಗುಂಡಿಗಳನ್ನು ತೋಡಿ ಅವ್ಯವಸ್ಥೆ ಮಾಡಲಾಗಿದೆ. ಇಷ್ಟೆಲ್ಲಾ ಸಮಸ್ಯೆ ಇರುವಾಗ ಈ ಸರ್ಕಾರ ಹೆಸರು ಬದಲಾವಣೆ ಅನ್ನೋದನ್ನು ಮುಂದೆ ಮಾಡುತ್ತಿದೆ. ಮೊದಲು ಇರುವ ಸಮಸ್ಯೆ ಸರಿಪಡಿಸಲಿ. ಆಮೇಲೆ ಏನಾದರೂ ಮಾಡಿಕೊಳ್ಳಲಿ. ಕಳೆದ ಎರಡು ವರ್ಷಗಳಿಂದ ಕ್ಯಾಂಟೀನ್ ನಡೆಸುವುದು ತುಂಬಾ ಕಷ್ಟವಾಗಿದೆ. ಕ್ಯಾಂಟೀನ್ ಅನುದಾನವೆಲ್ಲ ಮಠಗಳಿಗೆ ಹೋಗುತ್ತಿದೆ. ಜನರಿಗೆ ಉಪಯೋಗವಿರುವ ಇಂತಹ ಯೋಜನೆ ಹಳ್ಳ ಹಿಡಿಯುವಂತಿದೆ ” ಎಂದು ಹೆಸರೆಳಲು ಇಚ್ಚಿಸದ ಇಂದಿರಾ ಕ್ಯಾಂಟೀನ್ ವ್ಯವಸ್ಥಾಪಕರೊಬ್ಬರು ನಾನುಗೌರಿ.ಕಾಂ ಬಳಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಒಟ್ಟಾರೆ, ಇಂದಿರಾ ಕ್ಯಾಂಟೀನ್ ಹೆಸರಲ್ಲಿ ರಾಜಕೀಯ ಮಾಡುವುದನ್ನು ಪಕ್ಷಗಳು ಬಿಟ್ಟು ಜನಪರ ಯೋಜನೆಗಳನ್ನು ಉಳಿಸಿಕೊಳ್ಳಲಿ. ಇನ್ನು ಹೆಸರು ಮರುನಾಮಕರಣ ಮಾಡುವುದಕ್ಕೆ ನೀಡುವ ಪ್ರಾಶಸ್ತ್ಯವನ್ನು ಮತ್ತಷ್ಟು ಜನಪರ ಯೋಜನೆಗಳು ಮತ್ತು ಕ್ಯಾಂಟೀನ್‌ಗಳ ನಿರ್ಮಾಣಕ್ಕೂ ಕೊಡಲಿ ಎಂಬುದೇ ನಮ್ಮ ಆಶಯ.
ಇದನ್ನೂ ಓದಿ: ರಾಜೀವ್ ಗಾಂಧಿ ಖೇಲ್ ರತ್ನ ಇನ್ನು ಮೇಜರ್ ಧ್ಯಾನ್ ಚಂದ್ ಖೇಲ್ ರತ್ನ: ಪ್ರಧಾನಿ



ಇಂದಿರ ಕ್ಯಾಟಿನ್ ಅನೋ ಹೆಸರು ಬೇಡ ಅನ್ನ ಪೂರ್ಣಿಶ್ವರಿ ಇವರಿಗೆ ಅನ್ನದ ಬೆಲೆ ಏನೂ ಅಂತ ಗೊತ್ತಿಲ್ಲ
ಡಾ. ಭೀಮರಾವ್ ಅಂಬೇಡ್ಕರ್ ರವರಿಗೆ ಅನ್ನದ ಬೆಲೆ ಏನು ಅಂತ ಗೊತ್ತಿದ್ದವರ ಹೆಸರು ಇಡುವುದು ಉತ್ತಮ ಹೆಸರು ಇಡುವುದಾದರೆ ಜೈ ಭೀಮ್ ಕ್ಯಾಂಟೀನ್ ಅಂತ ಹೆಸರು ಇಡುವುದು ಉತ್ತಮವಾಗಿರುತ್ತದೆ ……..ಜೈ ಭೀಮ್