ನೆಹರು-ಗಾಂಧಿ ಕುಟುಂಬದ ಮೇಲೆ ಅವಹೇಳನಕಾರಿ ವಿಡಿಯೋ ಸೃಷ್ಟಿಸಿ ಸಾಮಾಜಿಕ ಜಾಲತಾಣದಲ್ಲಿ ಪ್ರಸಾರ ಮಾಡಿದ ಆರೋಪದ ಮೇಲೆ ಮಹಾರಾಷ್ಟ್ರದ ಪುಣೆ ನಗರದ ಸೈಬರ್ ಪೊಲೀಸರು ಬಾಲಿವುಡ್ ನಟಿ ಪಾಯಲ್ ರೋಹ್ಟಗಿ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ ಎಂದು ಅಧಿಕಾರಿಯೊಬ್ಬರು ಬುಧವಾರ ತಿಳಿಸಿದ್ದಾರೆ.
ಸ್ಥಳೀಯ ಕಾಂಗ್ರೆಸ್ ಮುಖಂಡರೊಬ್ಬರು ನೀಡಿದ ದೂರಿನ ಆಧಾರದ ಮೇಲೆ, ಸೈಬರ್ ಪೊಲೀಸರು ಮಂಗಳವಾರ ಭಾರತೀಯ ದಂಡ ಸಂಹಿತೆಯ ಎರಡು ಗುಂಪುಗಳ ನಡುವೆ ದ್ವೇಷ ಉತ್ತೇಜಿಸುವುದು (ಸೆಕ್ಷನ್ 153 ), ಮಾನನಷ್ಟಕ್ಕೆ ಶಿಕ್ಷೆ (ಸೆಕ್ಷನ್ 500) ಮತ್ತು ಸಾರ್ವಜನಿಕ ಕಿಡಿಗೇಡಿತನದ ಹೇಳಿಕೆ (ಸೆಕ್ಷನ್ 505 (2)) ಅಡಿಯಲ್ಲಿ ಪ್ರಕರಣಗಳನ್ನು ದಾಖಲಿಸಿದ್ದಾರೆ.
ಇದನ್ನೂ ಓದಿ: ಗ್ಯಾಂಗ್ ರೇಪ್: ಮಹಿಳೆಯರ ಮೇಲಿನ ಅಪರಾಧಗಳಿಗೆ ಕುರುಡಾಗದಿರಿ, ದನಿ ಎತ್ತಿ- ನಟಿ ರಮ್ಯಾ ಆಕ್ರೋಶ
ದೂರಿನ ಪ್ರಕಾರ, ನಟಿ ಪಾಯಲ್ ರೋಹ್ಟಗಿ, ಅಪರಿಚಿತ ವ್ಯಕ್ತಿಯೊಂದಿಗೆ ಸೇರಿ ಮಹಾತ್ಮ ಗಾಂಧಿ, ಮಾಜಿ ಪ್ರಧಾನಿಗಳಾದ ಜವಾಹರಲಾಲ್ ನೆಹರು, ಇಂದಿರಾ ಗಾಂಧಿ, ರಾಜೀವ್ ಗಾಂಧಿ ಮತ್ತು ಗಾಂಧಿ ಕುಟುಂಬದ ಇತರ ಸದಸ್ಯರ ಬಗ್ಗೆ ಅವಹೇಳನಕಾರಿ ವೀಡಿಯೊವನ್ನು ರಚಿಸಿದ್ದಾರೆ. ಜೊತೆಗೆ ಆ ವಿಡಿಯೊವನ್ನು ಸಾಮಾಜಿಕ ಮಾಧ್ಯಮದಲ್ಲಿ ಪ್ರಸಾರ ಮಾಡಿದ್ದಾರೆ ಎಂದು ಹೇಳಲಾಗಿದೆ.
ಕಾಂಗ್ರೆಸ್ ನಾಯಕಿ ಸಂಗೀತಾ ತಿವಾರಿ ಮತ್ತು ಪಕ್ಷದ ಪುಣೆ ನಗರ ಘಟಕದ ಪದಾಧಿಕಾರಿಗಳು ನಟಿ ಪಾಯಲ್ ರೋಹ್ಟಗಿ ವಿರುದ್ಧ ಪ್ರಕರಣ ದಾಖಲಿಸುವಂತೆ ಪೊಲೀಸರನ್ನು ಸಂಪರ್ಕಿಸಿದ್ದರು.
ಪುಣೆ ನಗರ ಕಾಂಗ್ರೆಸ್ ವಕ್ತಾರ ರಮೇಶ್ ಅಯ್ಯರ್ ಮಾತನಾಡಿ, “ಪಾಯಲ್ ರೋಹ್ಟಗಿ ಅವರು ಪದೇ ಪದೇ ನೆಹರು-ಗಾಂಧಿ ಕುಟುಂಬದ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ್ದಾರೆ. ಅಂತಹ ಒಂದು ಪೋಸ್ಟ್ ಇತ್ತೀಚೆಗೆ ಮಾಡಲಾಗಿದೆ. ಆದ್ದರಿಂದ ನಾನು, ರಮೇಶ್ ಬಾಗ್ವೆ, ಮೋಹನ್ ಜೋಶಿ, ದತ್ತ ಬಹಿರತ್, ಸಂಗೀತಾ ತಿವಾರಿ ಸೇರಿದಂತೆ ಪುಣೆ ನಗರ ಕಾಂಗ್ರೆಸ್ ಸಮಿತಿಯ ಪದಾಧಿಕಾರಿಗಳು ಸೈಬರ್ ಅಪರಾಧ ವಿಭಾಗದ ಹಿರಿಯ ಪೊಲೀಸ್ ಅಧಿಕಾರಿಗಳನ್ನು ಭೇಟಿಯಾಗಿದ್ದೆವು. ಈ ಪ್ರಕರಣದಲ್ಲಿ ಔಪಚಾರಿಕ ದೂರನ್ನು ಸಂಗೀತ ತಿವಾರಿ ಸಲ್ಲಿಸಿದ್ದಾರೆ. ಪೊಲೀಸರು ಅದರ ಮೇಲೆ ಕ್ರಮ ಕೈಗೊಂಡಿದ್ದಾರೆ ಮತ್ತು ಶಿವಾಜಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ” ಎಂದಿದ್ದಾರೆ.
ಇದನ್ನೂ ಓದಿ: ಭಾರತದ ವಿವಿಧ ಭಾಷೆಗಳ ಇತ್ತೀಚಿನ ಸಿನಿಮಾಗಳಲ್ಲಿ ದಲಿತ ಕಥನಗಳು: ಭಾಗ-2


