ಮಹಾರಾಷ್ಟ್ರದ ಮುಂಬೈಯ ಉಲ್ಲಾಸನಗರದಲ್ಲಿ 15 ವರ್ಷದ ಬಾಲಕಿ ಮೇಲೆ ಅತ್ಯಾಚಾರ ನಡೆದಿದ್ದು, ಘಟನೆ ನಮ್ಮ ವ್ಯಾಪ್ತಿಯಲ್ಲಿ ಬರುವುದಿಲ್ಲ ಎಂದು ಎರಡು ಪೊಲೀಸ್ ಠಾಣೆಗಳು ದೂರು ದಾಖಲಿಸಲು ನಿರಾಕರಿಸಿರುವ ಘಟನೆ ನಡೆದಿದೆ.
ಶುಕ್ರವಾರ ರಾತ್ರಿ 15 ವರ್ಷದ ಬಾಲಕಿಯನ್ನು ಉಲ್ಲಾಸನಗರ ರೈಲ್ವೇ ನಿಲ್ದಾಣದ ಆವರಣದಲ್ಲಿ ರೈಲ್ವೆ ವಸತಿಗೃಹದಲ್ಲಿ ಅತ್ಯಾಚಾರ ಮಾಡಲಾಗಿದೆ ಎಂದು ರೈಲ್ವೆ ಪೊಲೀಸರು ತಿಳಿಸಿದ್ದಾರೆ.
“ಎರಡು ಪೊಲೀಸ್ ಠಾಣೆಗಳು ತಮ್ಮ ವ್ಯಾಪ್ತಿಯಲ್ಲಿ ಅಪರಾಧ ನಡೆಯಲಿಲ್ಲ ಎಂಬ ಕಾರಣಕ್ಕೆ ಬಾಲಕಿಯ ದೂರನ್ನು ದಾಖಲಿಸಲು ನಿರಾಕರಿಸಿವೆ. ಸಂತ್ರಸ್ತೆಯ ದೂರನ್ನು ಏಕೆ ದಾಖಲಿಸಿಲ್ಲ ಎಂಬುದನ್ನು ತನಿಖೆ ಮಾಡಲಾಗುವುದು” ಎಂದು ರೈಲ್ವೆ ಪೊಲೀಸ್ ಆಯುಕ್ತ ಕೈಸರ್ ಖಾಲಿದ್ ಹೇಳಿದ್ದಾರೆ.
ಸದ್ಯ ಐಪಿಸಿ ಸೆಕ್ಷನ್‌ಗಳು ಮತ್ತು ಪೋಕ್ಸೊ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ಆರೋಪಿಯನ್ನು ಬಂಧಿಸಲಾಗಿದೆ.
ಇದನ್ನೂ ಓದಿ: ಭೀಕರ ಅತ್ಯಾಚಾರಕ್ಕೆ ತುತ್ತಾಗಿದ್ದ ಮಹಿಳೆ ಸಾವು: ಆರೋಪಿ ಬಂಧನ
ಘಟನೆಯ ವಿವರ:
15 ವರ್ಷದ ಬಾಲಕಿ ಶಿರಡಿಯಿಂದ ಹಿಂದಿರುಗುತ್ತಿದ್ದರು. ಕಲ್ಯಾಣ್‌ನಿಂದ ಉಲ್ಲಾಸನಗರಕ್ಕೆ ಸ್ಥಳೀಯ ರೈಲನ್ನು ಹತ್ತಿ ರಾತ್ರಿ 9 ಗಂಟೆಗೆ ಬಂದಿದ್ದರು. ಅಲ್ಲಿ ಆಕೆ ತನ್ನ ಇಬ್ಬರು ಸ್ನೇಹಿತರನ್ನು ಭೇಟಿಯಾಗಿ ಮನೆಗೆ ತೆರಳುತ್ತಿದ್ದರು. ರೈಲ್ವೆ ನಿಲ್ದಾಣದ ಸ್ಕೈವಾಕ್‌ನಲ್ಲಿ ನಡೆಯುತ್ತಿದ್ದಾಗ ಆರೋಪಿ ಕೈಗೆ ಸಿಲುಕಿದ್ದಾರೆ.
ಆರೋಪಿ ತನ್ನ ಬಳಿ ಇದ್ದ ಸುತ್ತಿಗೆಯಿಂದ ಬಾಲಕಿಯ ಸ್ನೇಹಿತರನ್ನು ಹೆದರಿಸಿ, ಆಕೆಯನ್ನು ಅಪಹರಿಸಿ ಸ್ಕೈವಾಕ್ ನಿಂದ ಸುಮಾರು 50 ಮೀ ದೂರದಲ್ಲಿರುವ ನಿರ್ಜನ ರೈಲ್ವೆ ವಸತಿಗೃಹಕ್ಕೆ ಕರೆದೊಯ್ದಿದ್ದಾನೆ. ಅಲ್ಲಿ ಆರೋಪಿಯು ಬಾಲಕಿಯ ಮೇಲೆ ಅತ್ಯಾಚಾರ ಎಸಗಿ, ಹಲ್ಲೆ ನಡೆಸಿದ್ದಾರೆ.
ರಾತ್ರಿಯಿಡೀ ಬಂಧನದಲ್ಲಿದ್ದ ಬಾಲಕಿ ಬೆಳಿಗ್ಗೆ ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದು, ದಾರಿಹೋಕರ ಫೋನ್ ಪಡೆದು, ಸ್ನೇಹಿತನಿಗೆ ಕರೆ ಮಾಡಿದ್ದಾರೆ. ಹತ್ತಿರದ ಪೊಲೀಸ್ ಠಾಣೆಗೆ ಹೋಗುವಂತೆ ಸ್ನೇಹಿತ ಸಲಹೆ ನೀಡಿದ್ದಾರೆ. ಆದರೆ 2 ಪೊಲೀಸ್ ಠಾಣೆಗಳಿಗೆ ಹೋದರು, ಘಟನೆ ನಮ್ಮ ವ್ಯಾಪ್ತಿಗೆ ಬರುವುದಿಲ್ಲ ಎಂದು ದೂರು ದಾಖಲಿಸಿಕೊಂಡಿಲ್ಲ ಎಂದು ರೈಲ್ವೇ ಪೊಲೀಸ್ ಆಯುಕ್ತರು ಮಾಹಿತಿ ನೀಡಿದ್ದಾರೆ.
“ನಾವು ಸಂತ್ರಸ್ತೆಗೆ ವೈದ್ಯಕೀಯ ಪರೀಕ್ಷೆಯನ್ನು ನಡೆಸಿದ್ದೇವೆ. ವಿಧಿವಿಜ್ಞಾನ ತಂಡವು ಘಟನಾ ಸ್ಥಳವನ್ನು ಪರಿಶೀಲಿಸಿದೆ. ತನಿಖೆ ನಡೆಯುತ್ತಿದೆ. ಆರೋಪಿಯ ಹಿನ್ನೆಲೆ ಪರಿಶೀಲನೆ ನಡೆಸಿದ್ದೇವೆ. ಆತನ ವಿರುದ್ಧ ಕಳ್ಳತನದಂತಹ ಅಪರಾಧಗಳಿಗಾಗಿ ಥಾಣೆ ನಗರದಲ್ಲಿ ಅನೇಕ ಪ್ರಕರಣಗಳು ದಾಖಲಾಗಿವೆ” ರೈಲ್ವೆ ಪೊಲೀಸ್ ಆಯುಕ್ತ ಕೈಸರ್ ಖಾಲಿದ್ ಹೇಳಿದ್ದಾರೆ.
ಮೊನ್ನೆಯಷ್ಟೇ ಮುಂಬೈನ ಸಕಿನಾಕಾದಲ್ಲಿ ಅತ್ಯಾಚಾರಕ್ಕೊಳಕ್ಕಾಗಿ ಭೀಕರವಾಗಿ ಗಾಯಗೊಂಡಿದ್ದ ಮಹಿಳೆ ಸಾವನ್ನಪ್ಪಿದ್ದು, ಘಟನೆ ನಡೆದ ಕೆಲವೇ ಗಂಟೆಗಳಲ್ಲಿ ಆರೋಪಿ ಮೋಹನ್ ಚೌಹಾಣ್ ಎಂಬಾತನನ್ನು ಪೊಲೀಸರು ಬಂಧಿಸಿದ್ದರು.
ಇದನ್ನೂ ಓದಿ: ವೈವಾಹಿಕ ಅತ್ಯಾಚಾರ ಅಪರಾಧವಲ್ಲ ತೀರ್ಪು; ಛತ್ತೀಸಗಡ ಹೈಕೋರ್ಟ್ ನ್ಯಾಯಾಂಗ ಸಮಾನತೆಯನ್ನು ಅರ್ಥಮಾಡಿಕೊಂಡಿದ್ದು ಇಷ್ಟೆಯೇ?


