ಚಿಕ್ಕಬಳ್ಳಾಪುರದಲ್ಲಿ ಭೀಕರ ಅಪಘಾತ; ಮೃತರ ಸಂಖ್ಯೆ 8ಕ್ಕೆ ಏರಿಕೆ

ಚಿಕ್ಕಬಳ್ಳಾಪುರದ ಚಿಂತಾಮಣಿ ಬಳಿಯ ಮರಿನಾಯಕನಹಳ್ಳಿ ಗೇಟ್ ಬಳಿ ಲಾರಿ ಮತ್ತು ಜೀಪ್ ನಡುವೆ ನಡೆದಿದ್ದ ಭೀಕರ ಅಪಘಾತದಲ್ಲಿ ಮೃತರ ಸಂಖ್ಯೆ 8ಕ್ಕೆ ಏರಿಕೆಯಾಗಿದೆ. ಭಾನುವಾರ ಮಧ್ಯಾಹ್ನದ ಸುಮಾರಿಗೆ ಈ ಅವಗಢ ಸಂಭವಿಸಿತ್ತು.

ಸಿಮೆಂಟ್ ಲಾರಿ ಮತ್ತು ಜೀಪು ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ 8 ಮಂದಿ ಸಾವನ್ನಪ್ಪಿದ್ದು, 9 ಮಂದಿ ಗಂಭೀರವಾಗಿ ಗಾಯಗೊಂಡಿದ್ದರು. ಗಾಯಾಳುಗಳನ್ನು ಚಿಂತಾಮಣಿ ಸಾರ್ವಜನಿಕ ಆಸ್ಪತ್ರೆ, ಬೆಂಗಳೂರು ಮತ್ತು ಕೋಲಾರದ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ. ಜೀಪ್‌ನಲ್ಲಿ 17 ಮಂದಿ ಪ್ರಯಾಣಿಸುತ್ತಿದ್ದರು ಎನ್ನಲಾಗಿದೆ.

ದುರಂತದಲ್ಲಿ 6 ಮಂದಿ ಸ್ಥಳದಲ್ಲಿಯೇ ಸಾವನ್ನಪ್ಪಿದ್ದರು. ಇಬ್ಬರು ಆಸ್ಪತ್ರೆಗೆ ದಾಖಲಿಸುವಾಗ, ಚಿಕಿತ್ಸೆಗೆ ಸ್ಪಂದಿಸದೇ ಸಾವನ್ನಪ್ಪಿದ್ದಾರೆ. ಚಿಂತಾಮಣಿ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: ಅಧಿಕಾರ ದುರ್ಬಳಕೆಯಿಂದ ಬಿಜೆಪಿಗೆ ಗೆಲುವು: ಡಿ.ಕೆ.ಶಿವಕುಮಾರ್ ಆರೋಪ

ದುರ್ಘಟನೆಯಲ್ಲಿ ಮೃತಪಟ್ಟವರನ್ನು ಜೀಪ್ ಚಾಲಕ ಮತ್ತು ಮಾಲೀಕ ರಮೇಶ್ (45), ಕಿತ್ತಗನೂರು ಗ್ರಾಮದ ಮುನಿಕೃಷ್ಣಪ್ಪ(49), ರಾಜಪ್ಪ(66), ಚಿಂತಾಮಣಿ ನಗರದ ಸೊಣ್ಣಶೆಟ್ಟಿಗಳ್ಳಿಯ ನಾರಾಯಣಸ್ವಾಮಿ (55), ಗೋಪಲ್ಲಿಯ ಮುನಿರತ್ನಮ್ಮ (49), ಆಂಧ್ರ ಮೂಲದ ನಾರನ್ನಗಾರಪಲ್ಲಿ ಗ್ರಾಮದ  ವೆಂಕಟಲಕ್ಷ್ಮಮ್ಮ (59), ಶ್ರೀನಿವಾಸಪುರ ಮೂಲದ ದಂಪತಿ ನಿಖಿಲ್ (20) ಹಾಗೂ ಮೋನಿಕಾ (28) ಎಂದು ಗುರುತಿಸಲಾಗಿದೆ.

ಈ ಭೀಕರ ಅಪಘಾತದ ಬೆನ್ನಲ್ಲೇ ಆರ್‌ಟಿಒ ಅಧಿಕಾರಿಗಳು ಮತ್ತು ಪೊಲೀಸರ ನಿರ್ಲಕ್ಷ್ಯದ ಬಗ್ಗೆ ಆರೋಪಗಳು ಕೇಳಿ ಬಂದಿವೆ. ಜೊತೆಗೆ ಸರಿಯಾದ ಬಸ್ ವ್ಯವಸ್ಥೆ ಇಲ್ಲದೇ ಜನ ಹೀಗೆ 7 ರಿಂದ 8 ಮಂದಿ ಪ್ರಯಾಣಿಸಬೇಕಾದ ವಾಹನಗಳಲ್ಲಿ 17- 20 ಮಂದಿಯನ್ನು ತುಂಬಿಸಲಾಗುತ್ತಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ಇನ್ನು ವೈಟ್ ಪ್ಲೇಟ್ ನಂಬರ್‌ ಇರುವ ವಾಹನವನ್ನು ಬಾಡಿಗೆ ವಾಹನವಾಗಿ ಬಳಸಿರುವುದರ ಬಗ್ಗೆಯೂ ತನಿಖೆಯಾಗಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದು, ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಘಟನೆ ನಂತರ ಲಾರಿ ಚಾಲಕ ಪರಾರಿಯಾಗಿದ್ದಾರೆ.


ಇದನ್ನೂ ಓದಿ: ದಲಿತ ವಿದ್ಯಾರ್ಥಿನಿಯರ ಮೇಲಿನ ದೌರ್ಜನ್ಯ ಖಂಡಿಸಿ ಸೆಪ್ಟೆಂಬರ್‌ 13 ರಂದು ‘ಚಲೋ ಶ್ರೀನಿವಾಸಪುರ’ ಆಂದೋಲನ

LEAVE A REPLY

Please enter your comment!
Please enter your name here