ಭಾರತದ ಕೈಗಾರಿಕೋದ್ಯಮಿ ಗೌತಮ್ ಅದಾನಿ ಅವರ ಸಂಪತ್ತು ಕಳೆದ ಒಂದ ವರ್ಷದಲ್ಲಿ ನಾಲ್ಕು ಪಟ್ಟು ಹೆಚ್ಚಿದ್ದು, ಏಷ್ಯಾದ ಶ್ರೀಮಂತರ ಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೆ ಏರಿದ್ದಾರೆ. ಕಳೆದ ವರ್ಷ ಅವರ ಸಂಪತ್ತು 1.40 ಲಕ್ಷ ಕೋಟಿ ರೂ. ಇತ್ತು. ಈ ವರ್ಷಕ್ಕೆ ಅದು 5.05 ಲಕ್ಷ ಕೋಟಿಗೆ ರೂ. ಹೆಚ್ಚಾಗಿದೆ ಎಂದು ಗುರುವಾರ ಬಿಡುಗಡೆಯಾದ ‘IIFL ವೆಲ್ತ್ ಹುರುನ್ ಇಂಡಿಯಾ ರಿಚ್- 2021’ ರ ಪಟ್ಟಿ ಹೇಳಿದೆ.
ಈ ಪಟ್ಟಿಯಲ್ಲಿ ರಿಲಯನ್ಸ್ ಇಂಡಸ್ಟ್ರೀಸ್ (RIL) ಅಧ್ಯಕ್ಷ ಮುಖೇಶ್ ಅಂಬಾನಿ ಅವರು ಸತತ ಹತ್ತು ವರ್ಷಗಳಲ್ಲೂ ಅಗ್ರ ಸ್ಥಾನ ಕಾಯ್ದಕೊಂಡಿದ್ದಾರೆ. ಕಳೆದ ಒಂದು ವರ್ಷದಲ್ಲಿ ಅವರು ಒಟ್ಟು 7.18 ಲಕ್ಷ ಕೋಟಿ ರೂ. ಆದಾಯ ಗಳಿಸಿಕೊಂಡಿದ್ದಾರೆ ಎಂದು ಪಟ್ಟಿ ಹೇಳಿದೆ.
ಇದನ್ನೂ ಓದಿ: ಅತಿ ಶ್ರೀಮಂತರ ಮೇಲೆ ತೆರಿಗೆ ವಿಧಿಸಿ, ಬಡಜನರಿಗೆ ಪರಿಹಾರ ಒದಗಿಸಿ: ರಾಜ್ಯಾದ್ಯಂತ ಜನಾಗ್ರಹ ಪ್ರತಿಭಟನೆ
ಅದಾನಿ ಅವರು ಈ ವರ್ಷ ಚೀನಾದ ಬಾಟಲ್ ವಾಟರ್ ಉತ್ಪಾದಕ ಜಾಂಗ್ ಶನ್ಶಾನ್ ಅವರನ್ನು ಹಿಂದಿಕ್ಕಿ ಏಷ್ಯಾದ ಎರಡನೇ ಶ್ರೀಮಂತರಾಗಿದ್ದಾರೆ. ಅದಾನಿಯ ಒಂದು ದಿನದ ಆದಾಯ 1,002 ಕೋಟಿಗೆ ಏರಿದೆ ಎಂದು ವರದಿ ತಿಳಿಸಿದೆ.
ಇದೇ ಮೊದಲ ಬಾರಿಗೆ ಅದಾನಿ ಸಹೋದರರು (ಗೌತಮ್ ಮತ್ತು ವಿನೋದ್ ಶಾಂತಿಲಾಲ್ ಅದಾನಿ) ಅಗ್ರ 10 ಶ್ರೀಮಂತರ ಪಟ್ಟಿಯಲ್ಲಿ ಕಾಣಿಸಿಕೊಂಡಿದ್ದಾರೆ. ವರದಿಯ ಪ್ರಕಾರ, ವಿನೋದ್ ಶಾಂತಿಲಾಲ್ ಅದಾನಿ ಅವರ ಸಂಪತ್ತು 1.31 ಲಕ್ಷ ಕೋಟಿಗೆ ಏರಿಕೆಯಾಗಿದ್ದು, ಅವರು ಪಟ್ಟಿಯ ಎಂಟನೇ ಸ್ಥಾನದಲ್ಲಿದ್ದಾರೆ.
ಹುರುನ್ ಇಂಡಿಯಾ ಶ್ರೀಮಂತ ಪಟ್ಟಿ-2021: ಈ ವರ್ಷ ಟಾಪ್ 10 ಶ್ರೀಮಂತ ಭಾರತೀಯರ ಪಟ್ಟಿ ಹೀಗಿದೆ
- ಮುಖೇಶ್ ಅಂಬಾನಿ (ರಿಲಯನ್ಸ್ ಇಂಡಸ್ಟ್ರೀಸ್): 7,18,000 ಕೋಟಿ ರೂ.
- ಗೌತಮ್ ಅದಾನಿ (ಅದಾನಿ ಗ್ರೂಪ್): 5,05,900 ಕೋಟಿ ರೂ.
- ಶಿವ್ ನಾಡಾರ್ (HCL): 2,36,600 ಕೋಟಿ ರೂ.
- ಎಸ್ಪಿ ಹಿಂದುಜಾ (ಹಿಂದುಜಾ ಗ್ರೂಪ್): 2,20,000 ಕೋಟಿ ರೂ.
- ಲಕ್ಷ್ಮಿ ಮಿತ್ತಲ್ (ಆರ್ಸೆಲರ್ ಮಿತ್ತಲ್): 1,74,400 ಕೋಟಿ ರೂ.
- ಸೈರಸ್ ಪೂನವಲ್ಲ (ಸೀರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ): 1,63,700 ಕೋಟಿ ರೂ.
- ರಾಧಕಿಶನ್ ದಮಾನಿ (ಅವೆನ್ಯೂ ಸೂಪರ್ಮಾರ್ಟ್ಸ್): 1,54,300 ಕೋಟಿ ರೂ.
- ವಿನೋದ್ ಶಾಂತಿಲಾಲ್ ಅದಾನಿ (ಅದಾನಿ ಗ್ರೂಪ್): 1,31,600 ಕೋಟಿ ರೂ.
- ಕುಮಾರ್ ಮಂಗಳಂ ಬಿರ್ಲಾ (ಆದಿತ್ಯ ಬಿರ್ಲಾ): 1,22,200 ಕೋಟಿ ರೂ.
- ಜೈ ಚೌಧರಿ (Zscaler): 1,21,600 ಕೋಟಿ ರೂ.
ಇದನ್ನೂ ಓದಿ: ಅತಿ ಶ್ರೀಮಂತರ ಮೇಲೆ ’ಕೋವಿಡ್ ತೆರಿಗೆ’ ವಿಧಿಸಲೇಬೇಕಿದೆ: ವಿಕಾಸ್ ಮೌರ್ಯ
ಈ ಬಗ್ಗೆ ಪ್ರತಿಕ್ರಿಯಿಸಿರುವ ಭಾರತೀಯ ಕಮ್ಯುನಿಷ್ಟ್ ಪಕ್ಷ(ಮಾರ್ಕ್ಸ್‌ವಾದಿ)ದ ಪಾಲಿಟ್‌ಬ್ಯೂರೋ ಸದಸ್ಯ ಸೀತಾರಾಮ್ ಯೆಚೂರಿ, “ನಿರುದ್ಯೋಗವು ಹೆಚ್ಚಾದಂತೆ, ಹಸಿವಿನ ಮಟ್ಟವು ಹೆಚ್ಚಾಗುತ್ತಿದೆ. ಬಡತನ ಮತ್ತು ಏರುತ್ತಿರುವ ಹಣದುಬ್ಬರವು ಜನರ ಜೀವನವನ್ನು ನಾಶಪಡಿಸುತ್ತಿದೆ. ಆದರೆ ಶ್ರೀಮಂತರು ಮಾತ್ರ ಇನ್ನೂ ಹೆಚ್ಚು ಶ್ರೀಮಂತರಾಗುತ್ತಿದ್ದಾರೆ. ಈ ಸಮಯದಲ್ಲಿ ಜನರ ಕಲ್ಯಾಣಕ್ಕಾಗಿ ಸಂಪನ್ಮೂಲಗಳನ್ನು ಹೆಚ್ಚು ಮಾಡುವುದಕ್ಕಾಗಿ ಅತಿ ಶ್ರೀಮಂತರಿಗೆ ಹೆಚ್ಚು ತೆರಿಗೆ(ಸೂಪರ್ ರಿಚ್ ಟ್ಯಾಕ್ಸ್)ಯನ್ನು ಹಾಕುವ ಬಗ್ಗೆ ಗಂಭೀರವಾಗಿ ಪರಿಗಣಿಸಬೇಕು” ಎಂದು ಹೇಳಿದ್ದಾರೆ.
As unemployment soars, hunger levels grow, poverty & galloping inflation destroy people’s lives the rich become richer.
Must seriously consider a super rich tax to raise resources for people’s welfare. pic.twitter.com/79IQwdGBQC— Sitaram Yechury (@SitaramYechury) October 1, 2021
ವರದಿ ಬಿಡುಗಡೆಯಾಗುತ್ತಿದ್ದಂತೆ ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ ವ್ಯಕ್ತವಾಗಿದೆ. “ಉದ್ಯೋಗ ನಷ್ಟ ಮತ್ತು ಬೆಲೆ ಏರಿಕೆಯಿಂದ ಸಾಮಾನ್ಯ ಜನರ ಆದಾಯ ಕುಸಿದಿದೆ. ಆದರೆ, ದೇಶದ ಉದ್ಯಮಪತಿಗಳ ಸಂಪತ್ತು ಹೆಚ್ಚಾಗುತ್ತಿದೆ. ದೇಶದಲ್ಲಿ ಆಡಳಿತ ನಡೆಸುತ್ತಿರುವ ಸರ್ಕಾರ ಶ್ರೀಮಂತರ ಪರವಾಗಿ ರೂಪಿಸುತ್ತಿರುವ ನೀತಿಗಳೇ ಕಾರಣ” ಎಂದು ಹಲವಾರು ಜನರು ಅಭಿಪ್ರಾಯ ಪಟ್ಟಿದ್ದಾರೆ.
ಇದನ್ನೂ ಓದಿ: ಬಿಲಿಯನೇರ್ ಬೂಮ್: ಶ್ರೀಮಂತರ ಜೇಬುಗಳನ್ನು ಸೇರಿದ ಕೋವಿಡ್ ಕ್ಯಾಷ್!


